

ಚಾಮರಾಜನಗರ: ಮಹಿಳೆಯೊಬ್ಬರು ಮದುವೆಗೆ ಹೋಗಲು ಬ್ಯಾಗ್‌ನಲ್ಲಿ ಕೊಂಡೊಯ್ಯುತ್ತಿದ್ದ ಚಿನ್ನಾಭರಣ ಕದ್ದಿದ್ದ ಕಳ್ಳಿಯನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಬಿ.ಟಿ.ಕವಿತಾ ತಿಳಿಸಿದರು.
ನಗರದ ಪಟ್ಟಣ ಪೊಲೀಸ್ ಠಾಣೆಯಲ್ಲಿ ಬುಧವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಟ್ಟಣದ ನಿವಾಸಿ ಪುಷ್ಪಲತಾ ಅವರ ಚಿನ್ನಾಭರಣ ಕದ್ದಿದ್ದ ತಮಿಳುನಾಡು ಮೂಲದ ಆರೋಪಿ ಲಕ್ಷ್ಮೀ ಮಧುರೈ(45) ಅನ್ನು ಬಂಧಿಸಲಾಗಿದೆ ಎಂದು ಹೇಳಿದರು.
ಪುಷ್ಪಲತಾ ಸತ್ಯಮಂಗಲದಲ್ಲಿ ನಡೆಯುತ್ತಿದ್ದ ಮದುವೆಗೆ ತೆರಳಲು ತಮ್ಮ ಚಿನ್ನಾಭರಣಗಳನ್ನು ವ್ಯಾನಿಟಿ ಬ್ಯಾಗಿನಲ್ಲಿ ಇಟ್ಟುಕೊಂಡು ಹೋಗಿದ್ದರು. ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಬಸ್ ಹತ್ತುವಾಗ ಬ್ಯಾಗ್ ಜಿಪ್ ತೆಗೆದು ಅದರಲ್ಲಿದ್ದ 540 ಗ್ರಾಂ ಚಿನ್ನಾಭರಣ ಕಳ್ಳತನವಾಗಿತ್ತು ಎಂದರು.
ಈ ಸಂಬಂಧ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪುಷ್ಪಲತಾ ದೂರು ನೀಡಿದ್ದರು. ತನಿಖೆ ಆರಂಭಿಸಿದ ಪೊಲೀಸರು ಬಸ್ ನಿಲ್ದಾಣದ ಬಳಿ ಅಳವಡಿಸಿದ್ದ ಸಿಸಿಟಿವಿ ಕ್ಯಾಮರಾ ದೃಶ್ಯಾವಳಿ ಮತ್ತು ಆಟೋದಲ್ಲಿ ಆರೋಪಿ ತೆರಳಿದ್ದ ಮಾಹಿತಿ ಆಧರಿಸಿ ಲಕ್ಷ್ಮೀಯನ್ನು ಪುಣಜನೂರು ಬಳಿಯ ಕುಂಬಾರಗುಂಡಿಯಲ್ಲಿ ಬಂಧಿಸಲಾಗಿದೆ. ಈ ವೇಳೆ 432 ಗ್ರಾಂ ಚಿನ್ನಾಭರಣವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.
ಆರೋಪಿಯನ್ನು ಡಿವೈಎಸ್ಪಿ ಲಕ್ಷ್ಮಯ್ಯ ಮಾರ್ಗದರ್ಶದಲ್ಲಿ ಪಟ್ಟಣ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಎ.ಕೆ.ರಾಜೇಶ್, ಕ್ರೈಂ ಪಿಎಸ್‌ಐ ಸಿದ್ದರಾಜು, ಕ್ರೈಂ ಸಿಬ್ಬಂದಿ ಲೋಕೇಶ್, ಕೃಷ್ಣಮೂರ್ತಿ, ಮೋಹನ್‌ಕುಮಾರ್, ಮಹದೇವ, ನಿಂಗರಾಜು, ರಾಜೇಶ್ವರಿ, ಹೇಮಾ, ಅವರ ಕರ್ತವ್ಯವನ್ನು ಶ್ಲಾಸಿ ಅಭಿನಂದಿಸಿದರು.