500 ಕೋಟಿ ರೂ. ಮೊಬೈಲ್ ಆ್ಯಪ್ ಹಗರಣ: ವಿಚಾರಣೆಗೆ ಹಾಜರಾದ ರಿಯಾ, ಭಾರತಿ ಸಿಂಗ್ ಮತ್ತು ಎಲ್ವಿಶ್ ಯಾದವ್

mobile app scam
Published on

ನವದೆಹಲಿ: 500 ಕೋಟಿ ರೂ. ಹೂಡಿಕೆ ಹಗರಣದ (500 cr Mobile App Scam) ಭಾಗವಾಗಿರುವ ಹೈಬಾಕ್ಸ್ ಮೊಬೈಲ್ ಅಪ್ಲಿಕೇಶನ್‌ಗೆ ಸಂಬಂಧಿಸಿದಂತೆ ಇದೀಗ ಬಾಲಿವುಡ್​ ನಟಿ ರಿಯಾ ಚಕ್ರವರ್ತಿ, ಹಾಸ್ಯನಟಿ ಭಾರತಿ ಸಿಂಗ್ ಮತ್ತು ಯೂಟ್ಯೂಬರ್ ಆದ ಎಲ್ವಿಶ್ ಯಾದವ್​ರನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. 1-5% ದೈನಂದಿನ ಆದಾಯ ಭರವಸೆ ನೀಡಿದ ಈ ಅಪ್ಲಿಕೇಶನ್, ಮೂವರು ಜನಪ್ರಿಯ ಸ್ಟಾರ್​ಗಳ ಮುಖವನ್ನು ತನ್ನ ಬ್ರ್ಯಾಂಡ್​ನಲ್ಲಿ ಹೊಂದಿತ್ತು. ಇದೆಲ್ಲವನ್ನು ಕಂಡು ಆಕರ್ಷಿತರಾದ 30,000ಕ್ಕೂ ಅಧಿಕ ಹೂಡಿಕೆದಾರರು ಫೆಬ್ರವರಿ 2024ರಿಂದ ಜೂನ್​ವರೆಗೆ ಆರಂಭಿಕ ಆದಾಯವನ್ನು ಸ್ವೀಕರಿಸಿದರು. ಆದ್ರೆ, ನಂತರದಲ್ಲಿ ಯಾವುದೇ ರಿಟರ್ನ್ಸ್​ ಪಡೆದುಕೊಂಡಿಲ್ಲ. ಸದ್ಯ ಈ ಹಗರಣದ ಪ್ರಕರಣದಲ್ಲಿ ದೆಹಲಿ ಪೊಲೀಸರು 500ಕ್ಕೂ ಹೆಚ್ಚು ದೂರುಗಳನ್ನು ಸ್ವೀಕರಿಸಿದ್ದು, ಪೊಲೀಸರು ಈಗಾಗಲೇ ಪ್ರಮುಖ ಶಂಕಿತ ವ್ಯಕ್ತಿ ಚೆನ್ನೈ ಮೂಲದ ಶಿವರಾಮ್ (30) ಎಂಬಾತನನ್ನು ಬಂಧನಕ್ಕೆ ಒಳಪಡಿಸಿ, ವಿಚಾರಣೆ ಕೈಗೊಂಡಿದ್ದಾರೆ.

ಮೂವರಿಗೆ ನೋಟಿಸ್​ ನೀಡಿದ್ದ ಪೊಲೀಸರು

ಪ್ರಸ್ತುತ ಹೈಬಾಕ್ಸ್​ ಮೊಬೈಲ್​ ಆ್ಯಪ್ (HiBox App Scam)​ 500 ಕೋಟಿ ರೂ. ಹೂಡಿಕೆ ಹಗರಣದಲ್ಲಿ ನಟಿ ರಿಯಾ ಚಕ್ರವರ್ತಿ, ಹಾಸ್ಯನಟಿ ಭಾರತಿ ಸಿಂಗ್ ಮತ್ತು ಯೂಟ್ಯೂಬರ್ ಆದ ಎಲ್ವಿಶ್ ಯಾದವ್​ಗೆ ವಿಚಾರಣೆ ನೋಟಿಸ್​ ನೀಡಿದ್ದ ಪೊಲೀಸರು, ಇಂದು ಮೂವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ.

ಯಾವ ಸೆಲೆಬ್ರಿಟಿಗಳ ಮೇಲೆ ದೂರು ದಾಖಲಾಗಿದೆ?

ಬಾಲಿವುಡ್​ ನಟಿ ರಿಯಾ ಚಕ್ರವರ್ತಿ, ಭಾರತಿ ಸಿಂಗ್​, ಯೂಟ್ಯೂಬರ್‌ ಎಲ್ವಿಶ್​ ಯಾದವ್​, ಸೌರವ್ ಜೋಶಿ, ಅಭಿಷೇಕ್ ಮಲ್ಹಾನ್, ಪುರವ್ ಝಾ, ಹರ್ಷ್ ಲಿಂಬಾಚಿಯಾ, ಲಕ್ಷಯ್ ಚೌಧರಿ, ಆದರ್ಶ್ ಸಿಂಗ್, ಅಮಿತ್ ಮತ್ತು ದಿಲ್ರಾಜ್ ಸಿಂಗ್ ರಾವತ್​ ವಿರುದ್ಧ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗಿದೆ. ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಈ ಆ್ಯಪ್ ಅನ್ನು ಪ್ರಚಾರ ಮಾಡಿದವರಲ್ಲಿ ಈ ಮೇಲ್ಕಂಡ ಸೆಲೆಬ್ರಿಟಿಗಳು ಸೇರಿದ್ದಾರೆ ಎಂದು ವರದಿ ಉಲ್ಲೇಖಿಸಿದೆ.

ಏನಿದು ಹೈಬಾಕ್ಸ್​ ಹಗರಣ?

HiBox ಅಪ್ಲಿಕೇಶನ್ ಅನ್ನು ಫೆಬ್ರವರಿ 2024ರಲ್ಲಿ ಪ್ರಾರಂಭಿಸಲಾಯಿತು. ಸ್ಟಾರ್​​ ಸೆಲೆಬ್ರಿಟಿಗಳೇ ಈ ಆ್ಯಪ್​ನ ಮುಖವಾಣಿಯಾದ ಕಾರಣ 30,000ಕ್ಕೂ ಅಧಿಕ ಜನರು ಇಲ್ಲಿ ತಮ್ಮ ಹಣವನ್ನು ಹೂಡಿಕೆ ಮಾಡಿದ್ದರು. ಮೊದಲ ಐದು ತಿಂಗಳು ಹೂಡಿಕೆದಾರರಿಗೆ ರಿಟರ್ನ್ಸ್​ ನೀಡಿದ ಆ್ಯಪ್,​ ಜೂನ್​ನಿಂದ ರಿಟರ್ನ್ಸ್​ ಕೊಡುವಲ್ಲಿ ವಿಫಲವಾಯಿತು. ತಾಂತ್ರಿಕ ದೋಷಗಳು, ಜಿಎಸ್​ಟಿ, ಕಾನೂನು ಇತ್ಯಾದಿ ಸಮಸ್ಯೆಗಳಿಂದ ನಿಮಗೆ ಪಾವತಿ ಮಾಡಲು ಸಾಧ್ಯವಾಗ್ತಿಲ್ಲ ಎಂದು ಕಾರಣ ನೀಡಿದ್ದ ಆ್ಯಪ್​, ತನ್ನ ತಪ್ಪನ್ನು ಮರೆಮಾಚಿತ್ತು ಎಂದು ವರದಿಯಾಗಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net