

ಬೆಂಗಳೂರಿನ ಶಾಂತಿನಗರ ವಿಧಾನಸಭಾ ಕ್ಷೇತ್ರದ ಶಾಂತಲಾ ನಗರ ವಾರ್ಡಿನ ಕಾಂಗ್ರೆಸ್ ಪಕ್ಷದ ಮಾಜಿ ಬಿಬಿಎಂಪಿ ಸದಸ್ಯೆ ತಾಜ್ ಸಲಾಂ ಔಟರ್ ಬ್ರಿಡ್ಜ್ ಶನಿವಾರ ತಮ್ಮ ನೂರಾರು ಬೆಂಬಲಿಗರೊಂದಿಗೆ ಆಮ್ ಆದ್ಮಿ ಪಕ್ಷಕ್ಕೆ ಸೇರ್ಪಡೆಗೊಂಡರು.
ಶಾಂತಲಾನಗರದಲ್ಲಿ ನಡೆದ ಸೇರ್ಪಡೆ ಸಮಾರಂಭದಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಡಾ. ಮುಖ್ಯಮಂತ್ರಿ ಚಂದ್ರು, ರಾಷ್ಟ್ರೀಯ ಜಂಟಿ ಕಾರ್ಯದರ್ಶಿ ಪೃಥ್ವಿ ರೆಡ್ಡಿ, ರಾಜ್ಯ ಸಂಘಟನಾ ಕಾರ್ಯದರ್ಶಿ ಮೋಹನ್ ದಾಸರಿ , ಬೆಂಗಳೂರು ನಗರ ಅಧ್ಯಕ್ಷ ಡಾ. ಸತೀಶ್ ಕುಮಾರ್ , ಬೆಂಗಳೂರು ಮಾಧ್ಯಮ ಉಸ್ತುವಾರಿ ಅನಿಲ್ ನಾಚಪ್ಪ ಸೇರಿದಂತೆ ಪಕ್ಷದ ಅನೇಕ ಮುಖಂಡರುಗಳ ಸಮ್ಮುಖದಲ್ಲಿ ಅಧಿಕೃತವಾಗಿ ತಾಜ್ ಸಲಾಂ ಪಕ್ಷಕ್ಕೆ ಸೇರ್ಪಡೆಗೊಂಡರು.
ಈ ವೇಳೆ ಮುಖ್ಯಮಂತ್ರಿ ಚಂದ್ರು ಮಾತನಾಡಿ ಎಎಪಿ ಪಕ್ಷವು ಬೆಂಗಳೂರಿನ ಅನೇಕ ವಾರ್ಡ್ಗಳಲ್ಲಿ ಈಗಾಗಲೇ ಸಕ್ರಿಯವಾಗಿ ಜನತೆಯ ಸಮಸ್ಯೆಗಳ ಬಗ್ಗೆ ಕಾರ್ಯನಿರ್ವಹಿಸುತ್ತಿದ್ದು ವಾರ್ಡ್ ಸಮಿತಿಗಳು ಮಾಡಬೇಕಾಗಿದ್ದಂತಹ ಸಮಗ್ರ ಕೆಲಸಗಳೆಲ್ಲವನ್ನು ಪಕ್ಷದ ಕಾರ್ಯಕರ್ತರಗಳು ಮಾಡುತ್ತಿದ್ದಾರೆ. ಆಳುವ ಪಕ್ಷಗಳು ಬೆಂಗಳೂರಿನ ಅಭಿವೃದ್ಧಿಯ ಹೆಸರಿನಲ್ಲಿ ಸಾವಿರಾರು ಕೋಟಿ ರೂಪಾಯಿಗಳನ್ನು ಕೊಳ್ಳೆ ಹೊಡೆಯಲು ನಾಲ್ಕು ವರ್ಷಗಳಿಂದ ಬಿಬಿಎಂಪಿ ಚುನಾವಣೆಯನ್ನು ನಡೆಸದೆ ಬೆಂಗಳೂರಿಗರ ಆಕ್ರೋಶಕ್ಕೆ ಗುರಿಯಾಗಿದ್ದಾರೆ. ಮುಂಬರುವ ಬಿಬಿಎಂಪಿ ಚುನಾವಣೆಯಲ್ಲಿ ಪಕ್ಷವು ಐತಿಹಾಸಿಕ ದಾಖಲೆಯನ್ನು ಬರೆಯಲಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಸರ್ವಧರ್ಮಗಳ ಸಮ್ಮಿಲನ ಕಾರ್ಯಕ್ರಮವನ್ನು ಸಹ ಆಯೋಜಿಸಲಾಗಿತ್ತು. ಸ್ಥಳೀಯ ಮುಖಂಡ ಅನಿಲ್ ನಾಚಪ್ಪ ಹಾಗೂ ಸ್ಥಳೀಯ ಮುಖಂಡರುಗಳ ನೇತೃತ್ವದಲ್ಲಿ ನೂರಾರು ಜನರಿಗೆ ಅನ್ನದಾನ ಕಾರ್ಯಕ್ರಮವನ್ನು ಏರ್ಪಡಿಸಿದ್ದರು.