

ಲಾಹೋರ್: ಪಾಕಿಸ್ತಾನ ಕ್ರಿಕೆಟ್ನಲ್ಲಿ (Pakistan Cricket) ಸದ್ಯ ಯಾವುದು ಸರಿಯಿಲ್ಲ ಅನ್ನೋದು ಕೆಲವು ತಿಂಗಳಿನಿಂದ ಒಂದಲ್ಲ ಒಂದು ಸುದ್ದಿಯಿಂದ ಮತ್ತಷ್ಟು ಸ್ಪಷ್ಟವಾಗುತ್ತಿದೆ. ಬಾಬರ್ ಆಜಂ ನಾಯಕತ್ವದಲ್ಲಿ ಹೀನಾಯ ಸೋಲು ಕಂಡಿರುವ ಪಾಕ್ ತಂಡ, ಇದೀಗ ಕೇವಲ ಟಿ20 ಮಾತ್ರವಲ್ಲದೇ ಏಕದಿನ, ಟೆಸ್ಟ್ ಫಾರ್ಮೆಟ್ಗಳನ್ನು ವಶಪಡಿಸಿಕೊಳ್ಳುವಲ್ಲಿ ವಿಫಲವಾಗಿದೆ. ಸದ್ಯ ಈ ಎಲ್ಲಾ ವಿಷಯಗಳಿಂದ ತತ್ತರಿಸಿರುವ ಪಾಕಿಸ್ತಾನ ಕ್ರಿಕೆಟ್ ಬೋರ್ಡ್ (Pakistan Cricket Board), ಇತ್ತೀಚೆಗಷ್ಟೇ ಆಯ್ಕೆಗಾರ ಸ್ಥಾನಕ್ಕೆ ಮಾಜಿ ಹಿರಿಯ ಕ್ರಿಕೆಟಿಗ ಮೊಹಮ್ಮದ್ ಯೂಸಫ್ ನೀಡಿದ ರಾಜೀನಾಮೆಯಿಂದ ಸಂಪೂರ್ಣವಾಗಿ ಕುಸಿದು ಹೋಗಿದೆ. ಇದೆಲ್ಲದರ ಮಧ್ಯೆ ಪಾಕಿಸ್ತಾನ ಕ್ರಿಕೆಟ್ನ ದಿಗ್ಗಜ ಆಟಗಾರ ಜಹೀರ್ ಅಬ್ಬಾಸ್ (Legend Cricketer) ನೀಡಿರುವ ಹೇಳಿಕೆಗಳು ಇದೀಗ ಜಾಲತಾಣಗಳಲ್ಲಿ ದೊಡ್ಡ ಸಂಚಲವನ್ನೇ ಹುಟ್ಟುಹಾಕಿದೆ.
ಇತ್ತೀಚೆಗೆ ಬಹಿ ಅಜ್ಮಾನ್ ಪ್ಯಾಲೇಸ್ ಹೋಟೆಲ್‌ನಲ್ಲಿ ನಡೆದ 'ಕ್ರಿಕೆಟ್ ಪ್ರಿಡಿಕ್ಟಾ ಕಾನ್ಕ್ಲೇವ್' ಕಾರ್ಯಕ್ರಮದಲ್ಲಿ ಮಾತನಾಡಿದ 'ಏಷ್ಯನ್ ಬ್ರಾಡ್ಮನ್' ಎಂದೇ ಪ್ರಖ್ಯಾತಿ ಪಡೆದುಕೊಂಡಿರುವ ಜಹೀರ್ ಅಬ್ಬಾಸ್, "ಪಾಕಿಸ್ತಾನದಲ್ಲಿ ಅತೀ ಹೆಚ್ಚಾಗಿ ಟಿ20 ಪಂದ್ಯಗಳನ್ನು ಆಡಲಾಗುತ್ತಿದೆ. ಆದ್ರೆ, ನಮ್ಮ ಆಟಗಾರರು ಮಾತ್ರ ಕ್ರಿಕೆಟ್ನ ಮೌಲ್ಯವನ್ನೇ ಮರೆತು, ಹಣದ ಹಿಂದೆ ಓಡಲು ಪ್ರಾರಂಭಿಸಿದ್ದಾರೆ. ಇದೇ ಕಾರಣಗಳಿಂದ ಅವರು ಯಾವುದೇ ಸರಣಿಯಲ್ಲಿ ಉತ್ತಮವಾಗಿ ಆಡುತ್ತಿಲ್ಲ. ಪಂದ್ಯಗಳನ್ನು ವಶಪಡಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ" ಎಂದು ಹೇಳಿದ್ದಾರೆ.
"ಕ್ರಿಕೆಟ್ ಲೋಕದಲ್ಲಿ ಹಣದ ಮಳೆ ಹೆಚ್ಚಾಗಿದೆ. ಆರ್ಥಿಕ ಬಲ ನೋಡುವ ಸಲುವಾಗಿ ಆಟಗಾರರು ದುಡ್ಡಿನ ಮೇಲೆ ಮೋಹ ಹೆಚ್ಚಿಸಿಕೊಂಡಿದ್ದಾರೆ. ಇದೇ ಕಾರಣದಿಂದ ಆಟದ ಮೇಲಿರಬೇಕಾದ ಗಮನ ಬೇರೆಡೆಗೆ ಸಾಗುತ್ತಿದೆ. ನಮ್ಮ ಕಾಲಘಟ್ಟದಲ್ಲಿ ಪಾಕಿಸ್ತಾನ ಕ್ರಿಕೆಟ್ ಅನ್ನು ನಾವು ಉತ್ತುಂಗಕ್ಕೆ ಕೊಂಡೊಯ್ದಿದ್ದೆವು. ಇಡೀ ಜಗತ್ತೇ ಅಂದು ಪಾಕ್ ಕ್ರಿಕೆಟ್ನ ಮೆಚ್ಚಿಕೊಂಡಿತ್ತು. ಆದ್ರೆ, ಇಂದು ಅದ್ಯಾವುದು ಸಹ ಉಳಿದಿಲ್ಲ" ಎಂದು ಪಿಸಿಬಿ ಮತ್ತು ಪಾಕಿಸ್ತಾನ ಕ್ರಿಕೆಟಿಗರ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ,(ಏಜೆನ್ಸೀಸ್).