'ಪೊಂಗಲ್​'ಗೆ 2,500 ರೂ. ಕೊಡ್ತಾರಂತೆ ಸಿಎಂ; ಪಡೆಯಲು ಪಡಿತರ ಚೀಟಿ ಇದ್ರಾಯ್ತು...

Untitled-1
Published on

ಚೆನ್ನೈ: 'ಪೊಂಗಲ್'​ಗೆ 2,500 ರೂ. ಕ್ಯಾಷ್​.. ಜೊತೆಗೆ ಒಂದು ಕೆ.ಜಿ. ಅಕ್ಕಿ, ಸಕ್ಕರೆ ಮತ್ತು ಒಂದಿಡೀ ಕಬ್ಬು. ಇವಿಷ್ಟನ್ನೂ ಕೊಡುವುದಾಗಿ ಮುಖ್ಯಮಂತ್ರಿ ಭರವಸೆ ಕೊಟ್ಟಿದ್ದಾರೆ. ಅಷ್ಟಕ್ಕೂ ಮುಂದಿನ ಚುನಾವಣೆಯನ್ನು ದೃಷ್ಟಿಯಲ್ಲಿ ಇಟ್ಟುಕೊಂಡೇ ಇವೆಲ್ಲ ಭರವಸೆಯನ್ನು ನೀಡಿದ್ದಾರೆ ಎನ್ನಲಾಗಿದೆ.

ಹಾಗಾದರೆ ಇವನ್ನೆಲ್ಲ ಎಲ್ಲರಿಗೂ ಕೊಟ್ಟು ಬಿಡುತ್ತಾರಾ ಎಂದು ಕೇಳಿದರೆ, ಉತ್ತರ 'ಇಲ್ಲ' ಎಂಬುದೇ ಆಗಿರುತ್ತದೆ. ಏಕೆಂದರೆ ಇವೆಲ್ಲ ಸೌಲಭ್ಯ ಪಡೆಯಲು ಪಡಿತರ ಚೀಟಿ ಇದ್ದವರು ಮಾತ್ರ ಫಲಾನುಭವಿಗಳಾಗಿರುತ್ತಾರೆ. ಪಡಿತರ ಚೀಟಿ ಇದ್ದು ಅಕ್ಕಿ ಪಡೆಯಲು ಅರ್ಹರಾಗಿರುವವರೆಲ್ಲ ಈ ಸೌಲಭ್ಯ ಪಡೆಯಬಹುದು ಎಂಬುದಾಗಿ ಮುಖ್ಯಮಂತ್ರಿಯವರು ಭರವಸೆ ನೀಡಿದ್ದಾರೆ.

ಅಂದಹಾಗೆ ಇಂಥದ್ದೊಂದು ಭರವಸೆ ನೀಡಿರುವುದು ತಮಿಳುನಾಡು ಮುಖ್ಯಮಂತ್ರಿ ಕೆ. ಪಳನಿಸ್ವಾಮಿ. ತಮಿಳುನಾಡಿನಲ್ಲಿ ಪೊಂಗಲ್ ಎಂದರೆ ಹಬ್ಬದ ಪ್ರಯುಕ್ತ 2021ರ ಜ. 4ರಿಂದಲೇ ಈ ನಗದು ಕೊಡುವ ಯೋಜನೆ ಜಾರಿಗೆ ಬರಲಿದ್ದು, ಪಡಿತರ ಚೀಟಿ ಅಕ್ಕಿ ಪಡೆಯಲು ಅರ್ಹರಿರುವ ಎಲ್ಲ ಸಾರ್ವಜನಿಕರೂ ಈ ಪ್ರಯೋಜನ ಪಡೆಯಬಹುದು ಎಂದು ಅವರು ಹೇಳಿದ್ದಾರೆ. ಇದರಿಂದ ಪಡಿತರ ಚೀಟಿ ಹೊಂದಿರುವ, ರಾಜ್ಯದ 2.6 ಕೋಟಿ ಮಂದಿಗೆ ತಲಾ 2,500 ರೂ. ಸಿಗಲಿದೆ ಎಂದಿದ್ದಾರೆ.

ತಮಿಳರಿಗೆ ಜ. 14ರ ಪೊಂಗಲ್ ಹಬ್ಬ ಅತಿ ಪ್ರಮುಖವಾದುದು. ಕಳೆದ ವರ್ಷ ಈ ಹಬ್ಬದಂದು 1 ಸಾವಿರ ರೂ. ನಗದು ನೀಡಲಾಗಿತ್ತು. ಈ ಸಲ ಒಂದೂವರೆ ಸಾವಿರ ರೂ. ಹೆಚ್ಚಿಸಲಾಗಿದ್ದು, ಒಟ್ಟು 2,500 ರೂ. ನೀಡಲಿದ್ದೇವೆ. ಜತೆಗೆ ಒಂದು ಕೆ.ಜಿ. ಅಕ್ಕಿ, ಸಕ್ಕರೆ ಹಾಗೂ ಒಂದಿಡೀ ಕಬ್ಬನ್ನು ಕೂಡ ಕೊಡಲಾಗುವುದು ಎಂದು ಅವರು ಹೇಳಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net