ಭಾರತೀಯ ಷೇರು ಮಾರುಕಟ್ಟೆಗೆ 2023 ಐತಿಹಾಸಿಕ ವರ್ಷ: ಬಿಎಸ್​ಇ, ನಿಫ್ಟಿ ಸೂಚ್ಯಂಕದ ಪ್ರಮುಖ ಷೇರುಗಳು ಗಳಿಸಿದ್ದೆಷ್ಟು?

share
Published on

ಮುಂಬೈ: ಭಾರತೀಯ ಷೇರು ಮಾರುಕಟ್ಟೆಯಲ್ಲಿ 2023ನೇ ಸಾಲು ಅಸಾಧಾರಣ ಅಧ್ಯಾಯವಾಗಿ ಹೊರಹೊಮ್ಮಿದೆ. ಷೇರು ಸೂಚ್ಯಂಕವು ಉತ್ತುಂಗ ತಲುಪಿದ ದಾಖಲೆಯ ಮೇಲೆ ದಾಖಲೆಗಳನ್ನು ಬರೆಯಲಾಗಿದೆ. ಮಿಡ್​ ಮತ್ತು ಸ್ಮಾಲ್​ ಕ್ಯಾಪ್ ಸ್ಟಾಕ್‌ಗಳಲ್ಲಿ ಅಗಾಧ ಏರಿಕೆ ಕಂಡಿದೆ.

ಸಂಭಾವ್ಯ ಜಾಗತಿಕ ಆರ್ಥಿಕ ಹಿಂಜರಿತ ಮತ್ತು ಪ್ರಮುಖ ಕೇಂದ್ರ ಬ್ಯಾಂಕ್‌ಗಳಿಂದ ಬಡ್ಡಿ ದರ ಏರಿಕೆಯ ಭಯದ ನಡುವೆಯೇ 2023ನೇ ವರ್ಷವು ಭಾರತೀಯ ಷೇರು ಮಾರುಕಟ್ಟೆಯಲ್ಲಿ ಕುಸಿತದೊಂದಿಗೆ ಶುರುವಾಯಿತು. ನಿಫ್ಟಿ 50 ಮತ್ತು ಬಿಎಸ್​ಇ S&P ಸೂಚ್ಯಂಕಗಳೆರಡೂ ವರ್ಷದ ಮೊದಲ ಮೂರು ತಿಂಗಳಲ್ಲಿ ಕ್ರಮವಾಗಿ ಶೇಕಡಾ 4.12% ಮತ್ತು ಶೇಕಡಾ 3.03% ಕುಸಿತ ಅನುಭವಿಸಿದವು.

ಆದರೂದೃಢವಾದ ವಿದೇಶಿ ಬಂಡವಾಳ ಹೂಡಿಕೆದಾರರ (ಎಫ್‌ಪಿಐ) ಒಳಹರಿವು, ಭಾರತೀಯ ರಿಸರ್ವ್ ಬ್ಯಾಂಕ್‌ನಿಂದ ಬಡ್ಡಿ ದರ ಹೆಚ್ಚಳಕ್ಕೆ ವಿರಾಮ ಮತ್ತು ಕಚ್ಚಾ ತೈಲ ಬೆಲೆಯಲ್ಲಿ ತೀವ್ರ ಕುಸಿತದಿಂದಾಗಿ ಸೂಚ್ಯಂಕಗಳು ಏಪ್ರಿಲ್‌ನಲ್ಲಿ ತ್ವರಿತವಾಗಿ ಚೇತರಿಸಿಕೊಂಡವು. ಸೂಚ್ಯಂಕಗಳು ಮುಂದಿನ ಎರಡು ತಿಂಗಳ ಕಾಲ ಇದೇ ಆವೇಗವನ್ನು ಮುಂದುವರಿಸಿದವು. ಹೀಗಾಗಿ, 2003 ಮೊದಲಾರ್ಧದಲ್ಲಿ ಸೂಚ್ಯಂಕ ಶೇಕಡಾ 6ರಷ್ಟು ಏರಿಕೆ ಕಂಡಿತು.

ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಭಾರತದ 7.6% ಆರ್ಥಿಕ ಬೆಳವಣಿಗೆ ದಾಖಲಿಸಿದ್ದು, ಐದು ಪ್ರಮುಖ ರಾಜ್ಯಗಳ ಚುನಾವಣೆಗಳಲ್ಲಿ ಮೂರರಲ್ಲಿ ಬಿಜೆಪಿಯ ನಿರ್ಣಾಯಕ ಗೆಲುವು ಮತ್ತು ಬಲವಾದ ವಿದೇಶಿ ಹೂಡಿಕೆದಾರರಿಂದಾಗಿ ನವೆಂಬರ್ ಮತ್ತು ಡಿಸೆಂಬರ್‌ನಲ್ಲಿ ಮಾರುಕಟ್ಟೆಯು ಭಾರಿ ಏರಿಕೆಗೆ ಸಾಕ್ಷಿಯಾಯಿತು.

ಇದಲ್ಲದೆ, 2024ರಲ್ಲಿ ಅಮೆರಿಕ ಫೆಡರಲ್ ರಿಸರ್ವ್ ಸಂಭಾವ್ಯ ದರ ಕಡಿತದ ಇತ್ತೀಚಿನ ಸೂಚನೆಗಳು ಮತ್ತು ಕೈಗಾರಿಕಾ ಉತ್ಪಾದನೆಯ ಸೂಚ್ಯಂಕವು (ಐಐಪಿ) ಅಕ್ಟೋಬರ್‌ನಲ್ಲಿ 16-ತಿಂಗಳ ಗರಿಷ್ಠ ಮಟ್ಟಕ್ಕೆ ಏರಿಕೆಯಾಗಿದೆ, ಜೊತೆಗೆ ಭಾರತದ ಜಿಡಿಪಿ ಮುನ್ಸೂಚನೆಯ ಕುರಿತು ಆರ್‌ಬಿಐ ಸಕಾರಾತ್ಮಕ ಹೇಳಿಕೆಗಳನ್ನು ಕೂಡ ನೀಡಿದೆ. ಏ ಈ ಎಲ್ಲ ಸಕಾರಾತ್ಮಕ ಸಂಗತಿಗಳು ಹೂಡಿಕೆದಾರರ ಭಾವನೆಗೆ ಕೊಡುಗೆ ನೀಡಿವೆ.

ನವೆಂಬರ್ ಮತ್ತು ಡಿಸೆಂಬರ್ ಮೊದಲ ವಾರದಲ್ಲಿ ಸೂಚ್ಯಂಕವು ಪರಾಕಾಷ್ಠೆ ತಲುಪಿ, ಡಿಸೆಂಬರ್ 06 ರಂದು ಮೊದಲ ಬಾರಿಗೆ 4 ಲಕ್ಷ ಕೋಟಿ ಡಾಲರ್​ಗಳ ಬಂಡವಾಳೀಕರಣವನ್ನು ಬಿಎಸ್​ಇ ತಲುಪಿ ಇತಿಹಾಸ ರಚನೆಯಾಯಿತು.

ನಿಫ್ಟಿ 50 ಕೂಡ 2023 ರಲ್ಲಿ ಗಮನಾರ್ಹ ಮೈಲಿಗಲ್ಲುಗಳನ್ನು ಸಾಧಿಸಿತು, ಜೂನ್‌ನಲ್ಲಿ 19,000 ಮಟ್ಟವನ್ನು ಭೇದಿಸಿ ಸೆಪ್ಟೆಂಬರ್‌ನಲ್ಲಿ 20,000 ಮಟ್ಟನ್ನು ತಲುಪಿತು. ಡಿಸೆಂಬರ್ 08 ರಂದು, ಇದು 21,000 ಗಡಿ ದಾಟಿತು,. ಮುಂದಿನ ಐದು ವಹಿವಾಟು ಅವಧಿಗಳಲ್ಲಿ 21,492 ಅಂಕಗಳ ದಾಖಲೆಯ ಗರಿಷ್ಠ ಮಟ್ಟವನ್ನು ತಲುಪಿತು.

ಅಂತೆಯೇ, S&P BSE ಸೂಚ್ಯಂಕ ಕೂಡ ಈ ವರ್ಷ ಅಭೂತಪೂರ್ವ ಎತ್ತರವನ್ನು ಏರಿತು, ಜೂನ್‌ನಲ್ಲಿ 64,000 ಗಡಿಯನ್ನು ಮೀರಿತು, ಜುಲೈನಲ್ಲಿ 67,000 ಮಟ್ಟವನ್ನು ತಲುಪಿತು. ನವೆಂಬರ್ ಮತ್ತು ಡಿಸೆಂಬರ್‌ನಲ್ಲಿ, ಸೂಚ್ಯಂಕವು 7,731 ಅಂಕಗಳ ಗಣನೀಯ ಜಿಗಿತವನ್ನು ಕಂಡಿತು, ಈ ಮೂಲಕ ಸೂಚ್ಯಂಕವು 71,605 ಅಂಕಗಳನ್ನು ತಲುಪಿ ದಾಖಲೆ ಸೃಷ್ಟಿಯಾಯಿತು.

ಒಟ್ಟಾರೆಯಾಗಿ, ಪ್ರಸಕ್ತ ವರ್ಷದಲ್ಲಿ ನಿಫ್ಟಿ 50 ಮತ್ತು ಎಸ್ & ಪಿ ಬಿಎಸ್ಇ ಸೂಚ್ಯಂಕಗಳು ಕ್ರಮವಾಗಿ ಶೇಕಡಾ 18.30 ಮತ್ತು ಶೇಕಡಾ 17.22ರಷ್ಟು ಏರಿಕೆ ಕಂಡಿವೆ. ಅಂದರೆ, ಈ ವರ್ಷದಲ್ಲಿ ನಿಫ್ಟಿಯಲ್ಲಿ ಪಟ್ಟಿ ಮಾಡಲಾದ ಪ್ರಮುಖ 50 ಕಂಪನಿಗಳ ಷೇರುಗಳು ಗಳಿಸಿದ ಸರಾಸರಿ ಲಾಭ ಶೇಕಡಾ 18.30 ಹಾಗೂ ಬಿಎಸ್ಇಯಲ್ಲಿ ಪಟ್ಟಿ ಮಾಡಲಾದ 30 ಪ್ರಮುಖ ಕಂಪನಿಗಳ ಸರಾಸರಿ ಲಾಭ ಶೇಕಡಾ 17.22.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net