ಕೋವಿಡ್ ಪ್ರಕರಣ ಹೆಚ್ಚಳ; JN.1 ರೂಪಾಂತರದ ಪ್ರಕರಣ ಪತ್ತೆ: ಜಾಗರೂಕತೆ ವಹಿಸಲು ರಾಜ್ಯಗಳಿಗೆ ಕೇಂದ್ರದ ಸಲಹೆ

kovid
Published on

ನವದೆಹಲಿ: ಕೋವಿಡ್-19 ಪ್ರಕರಣಗಳಲ್ಲಿ ಇತ್ತೀಚಿನ ಏರಿಕೆ ಮತ್ತು ಭಾರತದಲ್ಲಿ JN.1 ರೂಪಾಂತರದ ಮೊದಲ ಪ್ರಕರಣ ಪತ್ತೆಯಾದ ಹಿನ್ನೆಲೆಯಲ್ಲಿ ನಿರಂತರ  ಜಾಗರೂಕತೆ ವಹಿಸಲು ಕೇಂದ್ರ ಸರ್ಕಾರವು ಸೋಮವಾರ ರಾಜ್ಯಗಳಿಗೆ ಸಲಹೆ ನೀಡಿದೆ.

ಕೇರಳದಲ್ಲಿ ಕೋವಿಡ್​ ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳ ಕಂಡುಬಂದಿದ್ದರಿಂದ ಹಾಗೂ ನೆರೆಯ ಕರ್ನಾಟಕದಲ್ಲಿಯೂ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ರಾಜ್ಯಗಳಿಗೆ ಈ ಸಲಹೆ ನೀಡಿದೆ.

ಕೋವಿಡ್ ಪರಿಸ್ಥಿತಿಯ ಬಗ್ಗೆ ನಿರಂತರ ನಿಗಾ ವಹಿಸಲು ಮತ್ತು ಜಿಲ್ಲಾವಾರು SARI (severe acute respiratory infections ತೀವ್ರವಾದ ಉಸಿರಾಟದ ಸೋಂಕುಗಳು) ಮತ್ತು ILI (ಇನ್​ಫ್ಲುಯೆಂಜಾ ಲೈಕ್​ ಇಲ್​ನೆಸ್- ಇನ್​ಫ್ಲುಯೆಂಜಾ ರೀತಿಯ ಅನಾರೋಗ್ಯ) ಪ್ರಕರಣಗಳನ್ನು ನಿಯಮಿತವಾಗಿ ವರದಿ ಮಾಡಿ ಮೇಲ್ವಿಚಾರಣೆ ಮಾಡಲು ಕೂಡ ಕೇಂದ್ರ ಸರ್ಕಾರವು ರಾಜ್ಯಗಳಿಗೆ ಸೂಚಿಸಿದೆ.

ಹೆಚ್ಚಿನ ಸಂಖ್ಯೆಯ ಆರ್‌ಟಿ-ಪಿಸಿಆರ್ ಪರೀಕ್ಷೆ ಸೇರಿಂದತೆ ಸಾಕಷ್ಟು ಪರೀಕ್ಷೆಗಳನ್ನು ಖಚಿತಪಡಿಸಿಕೊಳ್ಳಲು ರಾಜ್ಯಗಳಿಗೆ ಸಲಹೆ ನೀಡಲಾಗಿದೆ.

ಕೋವಿಡ್ ಪ್ರಕರಣಗಳ ಸಂಖ್ಯೆ 1828ಕ್ಕೆ ಏರಿಕೆ:

ಸೋಮವಾರ ನವೀಕರಿಸಲಾದ ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿಅಂಶಗಳ ಪ್ರಕಾರ, ಭಾರತದಲ್ಲಿ 260 ಹೊಸ ಕೋವಿಡ್ ವೈರಸ್ ಸೋಂಕುಗಳು ದಾಖಲಾಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 1,828ಕ್ಕೆ ಏರಿದೆ.

ಸೋಮವಾರ ಬೆಳಗ್ಗೆ 8 ಗಂಟೆಗೆ ನವೀಕರಿಸಿದ ಮಾಹಿತಿ ಪ್ರಕಾರ, ದೇಶದಲ್ಲಿ ಕೋವಿಡ್ ಸಾವಿನ ಸಂಖ್ಯೆ 5,33,317ಕ್ಕೆ ದಾಖಲಾಗಿದ್ದು, ಒಟ್ಟಾರೆ ಪ್ರಕರಣಗಳ ಸಂಖ್ಯೆ 4.50 ಕೋಟಿ ದಾಟಿದೆ (4,50,05,076).

ಆರೋಗ್ಯ ಸಚಿವಾಲಯದ ವೆಬ್‌ಸೈಟ್ ಪ್ರಕಾರ, ಕಾಯಿಲೆಯಿಂದ ಚೇತರಿಸಿಕೊಂಡ ಜನರ ಸಂಖ್ಯೆ 4,44,69,931 ಕ್ಕೆ ಏರಿದ್ದು, ರಾಷ್ಟ್ರೀಯ ಚೇತರಿಕೆಯ ಪ್ರಮಾಣವು 98.81 ಪ್ರತಿಶತದಷ್ಟಿದೆ. ಸಾವಿನ ಪ್ರಮಾಣವು ಶೇಕಡಾ 1.19 ರಷ್ಟಿದೆ.

ಸಚಿವಾಲಯದ ವೆಬ್‌ಸೈಟ್ ಪ್ರಕಾರ, ದೇಶದಲ್ಲಿ ಇದುವರೆಗೆ 220.67 ಕೋಟಿ ಡೋಸ್ ಕೋವಿಡ್ ಲಸಿಕೆಗಳನ್ನು ನೀಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net