

ಜೈಪುರ: ಕಣ್ಣಿನ ಪೊರೆ ಚಿಕಿತ್ಸೆಗೆ ಒಳಗಾದ ಜನರು ತಮ್ಮ ದೃಷ್ಠಿಯನ್ನು ಕಳೆದುಕೊಂಡಿರುವ ಎಂದು ಆರೋಪಿಸಲಾದ ಘಟನೆ ರಾಜಸ್ತಾನದ ಜೈಪುರದಲ್ಲಿ ನಡೆದಿದೆ.
ಇದನ್ನೂ ಓದಿ: ದರೋಡೆಗೆ ಬಂದು ಲಕ್ಷಾಂತರ ನಗದು, ಚಿನ್ನದ ಜತೆ ಫ್ರಿಡ್ಜ್ನಲ್ಲಿದ್ದ ಟೊಮ್ಯಾಟೋವನ್ನು ಎಗರಿಸಿದ ಖದೀಮರು
ರಾಜಸ್ಥಾನದ ಅತಿದೊಡ್ಡ ಸರ್ಕಾರಿ ಆಸ್ಪತ್ರೆಯಾದ ಸವಾಯಿ ಮಾನ್ ಸಿಂಗ್ (ಎಸ್‌ಎಂಎಸ್) ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದ್ದು, ಸಂತ್ರಸ್ತ ರೋಗಿಗಳನ್ನು ಕಳೆದ ತಿಂಗಳು ಎಸ್ ಎಂಎಸ್ ಆಸ್ಪತ್ರೆಗೆ ದಾಖಲಿಸಿ ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸೆ ಮಾಡಲಾಗಿತ್ತು. ಆದರೆ ಶಸ್ತ್ರಚಿಕಿತ್ಸೆಯ ನಂತರ ಸುಮಾರು 18 ಜನರು ತಮ್ಮ ಒಂದು ಕಣ್ಣಿನ ದೃಷ್ಠಿ ಕಳೆದುಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.
ಅಶೋಕ್ ಗೆಹ್ಲೋಟ್ ನೇತೃತ್ವದ ರಾಜಸ್ಥಾನ ಸರ್ಕಾರದ ಪಿಇಟಿ ಯೋಜನೆಗಳಲ್ಲಿ ಒಂದಾದ ಚಿರಂಜೀವಿ ಆರೋಗ್ಯ ಯೋಜನೆಯಡಿಯಲ್ಲಿ ಈ ಹೆಚ್ಚಿನ ಶಸ್ತ್ರ ಚಿಕಿತ್ಸೆಗಳನ್ನು ಮಾಡಲಾಗಿದ್ದು, ಕಲವು ರೋಗಿಗಳು ತೀವ್ರವಾದ ಕಣ್ಣಿನ ನೋವಿನ ಬಗ್ಗೆ ದೂರು ನೀಡಿದ ನಂತರ ಅವರನ್ನು ಮತ್ತೆ ಶಸ್ತ್ರಚಿಕಿತ್ಸೆಗೆ ಒಳಪಡಿಸಲಾಯಿತು. ಹೀಗೆ ಮಾಡಿದರೂ ಸಹ ರೋಗಿಗಳು ಕಳೆದುಕೊಂಡ ದೃಷ್ಠಿಯನ್ನು ಮರಳಿ ಪಡೆಯಲು ವಿಫಲರಾಗಿದ್ದಾರೆ ಎಂದು ಹೇಳಲಾಗಿದೆ.
ಇದನ್ನೂ ಓದಿ: ಮಾವು ತಿಂದ ಬಳಿಕ ಯುವತಿ ಸಾವು: ಕುಟುಂಬಸ್ಥರ ಹೇಳಿಕೆ ದಾಖಲಿಸಿಕೊಂಡು ತನಿಖೆಗೆ ಮುಂದಾದ ಪೊಲೀಸ್..!
ಸಂತ್ರಸ್ತೆ ರೋಗಿಯಾದ ಚಂದಾ ದೇವಿಯು ಈ ಕುರಿತು ಮಾತನಾಡಿದ್ದು, ತನಗೆ ಒಂದು ಕಣ್ಣಿನಿಂದ ನೋಡಲು ಆಗುತ್ತಿಲ್ಲ. ಕಣ್ಣಲ್ಲಿ ನೋವು ಕಾಣಿಸಿಕೊಂಡು ನೀರು ಬರುತ್ತಿದೆ. ವೈದ್ಯರು ಸೋಂಕು ಇದೆ ಎಂದು ಹೇಳಿದ್ದು, ನಿಧಾನವಾಗಿ ಕಣ್ಣು ಸರಿಹೋಗುತ್ತದೆ ಎಂದು ಭರವಸೆ ನೀಡಿದ್ಧಾರೆ ಎಂದು ಹೇಳಿದ್ದಾಳೆ.
ಆದರೆ ಈ ಆರೋಪವನ್ನು ಆಸ್ಪತ್ರೆಯ ಅಧಿಕಾರಿಗಳು ನಿರಾಕರಿಸಿದ್ದು, ವೈದ್ಯರ ಕಡೆಯಿಂದ ಯಾವುದೇ ಲೋಪವಾಗಿಲ್ಲ. ಇದೀಗ ಮೈಕ್ರೋಬಯಾಲಜಿ ತನಿಖೆ ನಡೆಯುತ್ತಿದೆ. ಆ ಬಳಿಕ ಎಲ್ಲವೂ ಗೊತ್ತಾಗಲಿದೆ ಎಂದು ಎಸ್‌ಎಂಎಸ್ ಆಸ್ಪತ್ರೆಯ ನೇತ್ರಶಾಸ್ತ್ರ ವಿಭಾಗದ ಎಚ್‌ಒಡಿ ಡಾ.ಪಂಕಜ್ ಶರ್ಮಾ ಹೇಳಿದ್ದಾರೆ.(ಏಜೆನ್ಸೀಸ್)