ಮಂಡ್ಯ: ನಾಗಮಂಗಲದಲ್ಲಿ ಗಣಪತಿ ಮೆರವಣಿಗೆ ವೇಳೆ ಉಂಟಾಗಿದ್ದ ಕೋಮು ಸಂಣಘರ್ಷ ರಾಜಕೀಯ ಸಂಘರ್ಷಕ್ಕೆ ನಾಂದಿ ಹಾಡಿದ್ದು, ಬಿಜೆಪಿ-ಜೆಡಿಎಸ್ ನಾಯಕರು ಜಂಟಿಯಾಗಿ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ. ಕೋಮು ಗಲಭೆಯಿಂದ ನಲುಗಿದ್ದ ನಾಗಮಂಗಲ ಸಹಜ ಸ್ಥಿತಿಗೆ ಮರಳುತ್ತಿದ್ದು, ತಾಲ್ಲೂಕಿನಾದ್ಯಂತ ನಿಷೇಧಾಜ್ಞೆ ಹೇರಿ ಶಾಲಾ, ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಇತ್ತ ಕೋಮು ಗಲಭೆಗೆ ತುತ್ತಾಗಿ ಕುಟುಂಬವೊಂದು ಬೀದಿಗೆ ಬಿದ್ದಿದ್ದು, ಕಿಡಿಗೇಡಿಗಳ ಕೃತ್ಯದಿಂದ ದಿಕ್ಕು ತೋಚದ ಸ್ಥಿತಿಯಲ್ಲಿದೆ.
ಗಣೇಶನ ಮೆರವಣಿಗೆ ವೇಳೆ ಉಂಟಾದ ಕೋಮು ಸಂಘರ್ಷದ ವೇಳೆ ಕಿಡಿಗೇಡಿಗಳು ಗುಂಪೊಂದು ಬಟ್ಟೆ ಅಂಗಡಿಗೆ ಬೆಂಕಿ ಇಟ್ಟಿದ್ದು, ಸುಮಾರು 1.5 ಕೋಟಿ ರೂ. ಮೌಲ್ಯದ ವಸ್ತುಗಳು ಬೆಂಕಿಗಾಹುತಿಯಾಗಿದೆ. ಬಟ್ಟೆ ಉದ್ಯಮದಿಂದಲೇ ಜೀವನ ಕಟ್ಟಿಕೊಂಡಿದ್ದ ಭೀಮರಾಜ್ ಕುಟುಂಬ ಬೀದಿಗೆ ಬಿದ್ದಿದ್ದು, ದಿಕ್ಕು ತೋಚದ ಸ್ಥಿತಿಯಲ್ಲಿದೆ.
ಇದನ್ನೂ ಓದಿ: 4,4,6,6,6,4 ಟ್ರಾವಿಸ್ ಹೆಡ್ ಬಿರುಸಿನ ಆಟಕ್ಕೆ ಬೆಚ್ಚಿದ ಆಂಗ್ಲರು; ಇಲ್ಲಿದೆ ನೋಡಿ ವೈರಲ್ ವಿಡಿಯೋ
ಈ ಕುರಿತು ಮಾತನಾಡಿರುವ ಸಂತ್ರಸ್ತೆ ಭೀಮರಾಜ್, ನನಗೆ ರಾತ್ರಿ ಪರಿಚಯಸ್ಥರು ಕರೆ ಮಾಡಿ ನಿಮ್ಮ ಬಟ್ಟೆ ಅಂಗಡಿಗೆ ಯಾರೋ ಬೆಂಕಿ ಹಚ್ಚಿದ್ದಾರೆ ಎಂದು ತಿಳಿಸಿದರು. ಕೂಡಲೇ ನಾನು ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ ಅಗ್ನಿಶಾಮಕ ಇಲಾಖೆಯ ಅಧಿಕಾರಿಗಳು ಬೆಂಕಿ ನಂದಿಸಲು ಬಂದಿದ್ದರು. ಆದರೆ, ಅಲ್ಲಿ 200ಕ್ಕೂ ಅಧಿಕ ಜನರಿದ್ದ ಗುಂಪೊಂದು ಕೈಯಲ್ಲಿ ಮಾರಕಾಸ್ತ್ರ, ಬಾಟಲಿಗಳನ್ನು ಹಿಡಿದು ನಮ್ಮ ಮೇಲೆ ಅಟ್ಯಾಕ್ ಮಾಡಿದ್ರು.
ಅವರುಗಳನ್ನು ನೋಡಿ ಪೊಲೀಸರೇ ಹೆದರಿ ಓಡೋದಕ್ಕೆ ಶುರು ಮಾಡಿದ್ರು. ನಾನು ಪ್ರಾಣ ಉಳಿಸಿಕೊಂಡ್ರೆ ಸಾಕು ಅಂತ ಓಡಲು ಶುರು ಮಾಡಿದೆ. ಈಗ ನಾವು ಸಂಪೂರ್ಣ ಬೀದಿಗೆ ಬಂದಿದ್ದೇವೆ. ನಮ್ಮ ಪರಿಸ್ಥಿತಿ 20 ವರ್ಷ ಹಿಂದಕ್ಕೆ ಹೋಗಿದೆ. ನಮ್ಮ ಬಟ್ಟೆ ಅಂಗಡಿಯಲ್ಲಿ ಏಳು ಮಂದಿ ಕೆಲಸ ಮಾಡುತ್ತಿದ್ದರು. ಈಗ ನಾನೇ ಇನ್ನೊಬ್ಬರ ಬಳಿ ಕೆಲಸ ಮಾಡುವ ಸ್ಥಿತಿ ಬಂದಿದೆ ಎಂದು ಗಲಭೆ ಸಂತ್ರಸ್ತೆ ಭೀಮರಾಜ್ ಹೇಳಿದ್ದಾರೆ.