ಬೆಂಗಳೂರು: ಮಂಡ್ಯ ಜಿಲ್ಲೆ ನಾಗಮಂಗಲ ತಾಲ್ಲೂಕಿನಲ್ಲಿ ಬುಧವಾರ (ಸೆಪ್ಟೆಂಬರ್ 11) ರಾತ್ರಿ ಗಣಪತಿ ಮೆರವಣಿಗೆ ವೇಳೆ ಸಂಭವಿಸಿದ ಕೋಮು ಗಲಭೆ ವಿಚಾರವಾಗಿ ಗೃಹಸಚಿವ ಪರಮೇಶ್ವರ್ ಪ್ರತಿಕ್ರಿಯಿಸಿದ್ದು, ಇದೊಂದು ಆಕಸ್ಮಿಕ ಘಟನೆ, ಕೋಮು ಗಲಭೆಯಾಗಿಲ್ಲ ಎಂದು ಹೇಳಿದ್ದಾರೆ. ಣೇಶ ಮೂರ್ತಿ ಮೆರವಣಿಗೆ ವೇಳೆ ಕಲ್ಲು ತೂರಾಟ ಆಗಿದೆ. ಅದು ಕೋಮು ಗಲಭೆ ಅಲ್ಲ, ಆಕಸ್ಮಿಕವಾಗಿ ನಡೆದಿರುವ ಘಟನೆ. ಒಬ್ಬರಿಗೊಬ್ಬರು ಘರ್ಷಣೆ ಮಾಡಿಕೊಂಡಿದ್ದಾರೆ ಎಂದು ಹೇಳಿದ್ದಾರೆ.
ಗಲಾಟೆ ವೇಳೆ ಬೈಕ್ಗಳು, ಅಂಗಡಿಗೆ ಬೆಂಕಿ ಹಾಕಿದ್ದಾರೆ. ಗಣೇಶ ವಿಸರ್ಜನೆ ವೇಳೆ ಯಾರೋ ಕಲ್ಲು ತೂರಾಟ ಮಾಡಿದ್ದಾರೆ. ಅದಕ್ಕೆ ಈ ಕಡೆಯಿಂದಲೂ ಕಲ್ಲು ತೂರಾಟ ಮಾಡಿದ್ದಾರೆ. ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಆಗಿಲ್ಲ. ಸದ್ಯ ಸ್ಥಳದಲ್ಲಿ ಹೆಚ್ಚುವರಿ ಪೊಲೀಸರ ನಿಯೋಜನೆ ಮಾಡಲಾಗಿದೆ. ನಾಗಮಂಗಲ ಘಟನೆ ಸಂಬಂಧ ಸುಮಾರು 52 ಜನರನ್ನು ಬಂಧಿಸಲಾಗಿದೆ. ಕಲ್ಲು ತೂರಾಟ ವೇಳೆ ಒಬ್ಬ ಎಎಸ್ಐಗೂ ಗಾಯವಾಗಿದೆ. ಈ ವಿಚಾರದಲ್ಲಿ ಯಾರೂ ರಾಜಕೀಯ ಮಾಡಬಾರದು ಎಂದು ವಿನಂತಿಸಿದ್ದಾರೆ.
ಜಿಲ್ಲಾ ಪೊಲೀಸ್ ಅಧೀಕ್ಷಕರು, ಐಜಿಪಿ, ಕೆಎಸ್‌ಆರ್‌ಪಿ ತುಕಡಿ ಸ್ಥಳದಲ್ಲಿದೆ. ಕಾನೂನು ಸುವ್ಯವಸ್ಥೆ ಎಡಿಜಿಪಿ ಅವರನ್ನು ಸ್ಥಳಕ್ಕೆ ಕಳುಹಿಸಿಕೊಟ್ಟಿದ್ದೇನೆ. ಘರ್ಷಣೆ ಮಾಡಿಕೊಂಡಿದ್ದಾರೆ, ಈ ಘಟನೆಯನ್ನು ಕೋಮು ಗಲಭೆ ಅಂತ ಹೇಳಲಾಗುವುದಿಲ್ಲ. ಇದನ್ನು ಹೆಚ್ಚು ಬೆಳೆಯಲು ಬಿಡುವುದಿಲ್ಲ, ಪೊಲೀಸರು ಬಿಟ್ಟಿಲ್ಲ. ಹೆಚ್ಚು ಪ್ರಚಾರ ನೀಡುವುದು ಬೇಡ. ಘಟನೆಯಲ್ಲಿ ಹೆಚ್ಚು ಜನರಿಗೆ ಗಾಯಗಳಾಗಿಲ್ಲ.
ಇದನ್ನೂ ಓದಿ: ಜುಲಾನಾ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ ವಿನೇಶ್; ಬಳಿಕ ಹೇಳಿದ್ದಿಷ್ಟು
ಗಲಭೆಗೆ ಸಂಬಂಧಿಸಿದಂತೆ ಎರಡು ಗುಂಪಿನ ಒಟ್ಟು 52 ಜನರನ್ನು ಬಂಧಿಸಲಾಗಿದೆ. ಘಟನೆಗೆ ಸಂಬಂಧಿಸಿದ ದೃಶ್ಯಗಳು ಕ್ಯಾಮೆರಾದಲ್ಲಿ ಸೆರೆಯಾಗಿವೆ. ಅದನ್ನು ಆಧರಿಸಿ ಯಾರೆಲ್ಲ ಕಲ್ಲು ತೂರಿದ್ದಾರೆ, ಬೆಂಕಿ ಹಾಕಿದ್ದಾರೆ ಅವರೆಲ್ಲರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇವೆ. ಪೊಲೀಸರಿಗು ಕಲ್ಲು ಏಟು ಬಿದ್ದಿದ್ದು, ಓರ್ವ ಏಸ್ಐ ಗಾಯಗೊಂಡಿದ್ದಾರೆ. ಇದರಲ್ಲಿ ರಾಜಕೀಯ ಪ್ರಚೋದನೆ ರೀತಿ ಕಾಣುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಇದರಲ್ಲಿ ರಾಜಕೀಯ ಮಾಡುವುದು ಬೇಡ. ಪೊಲೀಸರಿಗೆ ಬಿಟ್ಟರೆ ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳುತ್ತಾರೆ. ಕಾನೂನು ಸಲಹೆ ಕೊಡುವುದಾದರೆ ಸ್ವಾಗತ ಮಾಡುತ್ತೇನೆ. ಘಟನೆಯಲ್ಲಿ ಯಾರೆಲ್ಲ ಭಾಗಿಯಾಗಿದ್ದಾರೆ ಎಂಬುದರ ಕುರಿತು ಅಧಿಕಾರಿಗಳಿಂದ ಹೆಚ್ಚಿನ ಮಾಹಿತಿ ಪಡೆಯುತ್ತೇನೆ ಎಂದು ಗೃಹಸಚಿವ ಡಾ.ಜಿ. ಪರಮೇಶ್ವರ್ ಹೇಳಿದ್ದಾರೆ.