ನವದೆಹಲಿ: ಭಾರತದ ಹೆಸರಾಂತ ಕೈಗಾರಿಕೋದ್ಯಮಿ, ಲೋಕೋಪಕಾರಿ ಮತ್ತು ಶ್ವಾನ ಪ್ರೇಮಿ ರತನ್ ಟಾಟಾ (86) ಅವರು ಅ.09ರ ತಡರಾತ್ರಿ ವಯೋಸಹಜ ಖಾಯಿಲೆಯಿಂದ ಕೊನೆಯುಸಿರೆಳೆದರು. ದೇಶದ ಉದ್ಯಮ ಜಗತ್ತಿಗೆ ಹೊಸ ರೂಪ ತಂದುಕೊಟ್ಟ ಟಾಟಾ (Ratan Tata) ಅವರು ಇನ್ನಿಲ್ಲ ಎಂಬ ಸುದ್ದಿ ತಿಳಿಯುತ್ತಿದ್ದಂತೆ ಭಾರತೀಯರು ಭಾರೀ ಆಘಾತಕ್ಕೊಳಗಾದರು. ಉದ್ಯಮ ಲೋಕದ ಅದ್ಭುತ ಶಕ್ತಿ ಇನ್ಮುಂದೆ ನಮಗೆ ಕಾಣಿಸುವುದಿಲ್ಲ ಎಂಬ ಕೊರಗು ಸದ್ಯ ಪ್ರತಿಯೊಬ್ಬರಲ್ಲೂ ಕಾಡುತ್ತಿದೆ ಎಂಬುದು ಅಕ್ಷರಶಃ ಸತ್ಯ. ಮರೆಯಲಾಗದ ಮಾಣಿಕ್ಯನಾಗಿ ಇಹಲೋಕ ತ್ಯಜಿಸಿರುವ ರತನ್ ಟಾಟಾ ಅವರು 140 ಕೋಟಿ ಭಾರತೀಯರಿಗೆ ಬಿಟ್ಟುಹೋದ ನೆನಪುಗಳು ಅಪಾರ, ಅಗಾಧ. ರತನ್ ಟಾಟಾ ಅವರಲ್ಲಿ ಮಾನವೀಯತೆ ಗುಣವೇ ಏಕೆ ಹೆಚ್ಚು ಸೆಳೆಯುತ್ತಿತ್ತು ಎಂಬುದಕ್ಕೆ ಇದೇ ಒಂದೊಳ್ಳೆ ಉದಾಹರಣೆ ಎಂದು ಟಾಟಾ ಸನ್ಸ್ ಅಧ್ಯಕ್ಷರಾದ ಎನ್. ಚಂದ್ರಶೇಖರನ್ ತಮ್ಮ ಮನದಾಳದ (Memorable Moments) ಮಾತನ್ನು ಭಾರತೀಯ ಜನರೊಂದಿಗೆ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ಕಪ್ಪತಗುಡ್ಡದ ಬಂಗಾರ ಕೊಳ್ಳದಲ್ಲಿ ನಂದಿಮುಖಿಯಾಗಿ ಹರಿಯುತ್ತಿದೆ ಬಂಗಾರ ತೀರ್ಥ
ರತನ್ ಟಾಟಾ ಅವರ ಜೀವನ ಮತ್ತು ಪರಂಪರೆಯ ಬಗ್ಗೆ ಒಂದಷ್ಟು ವಿಚಾರಗಳನ್ನು ಮನದಾಳದಿಂದ ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಹಂಚಿಕೊಂಡಿರುವ ಟಾಟಾ ಸನ್ಸ್ ಅಧ್ಯಕ್ಷ ಎನ್. ಚಂದ್ರಶೇಖರನ್, “ಟಾಟಾರನ್ನು ಭೇಟಿಯಾದ ಪ್ರತಿಯೊಬ್ಬ ವ್ಯಕ್ತಿಯೂ ಅವರ ಮಾನವೀಯತೆ, ಕನಸುಗಳ ಬಗ್ಗೆ ಒಂದಲ್ಲ ಒಂದು ಕಥೆಯನ್ನು ತಮ್ಮೊಂದಿಗೆ ಉಳಿಸಿಕೊಂಡಿರುತ್ತಾರೆ. ನಿಜವಾಗಿಯೂ ಅವರಂತಹ ಒಬ್ಬ ವ್ಯಕ್ತಿ ಯಾರೂ ಇರಲಿಲ್ಲ” ಎಂದು ಹೇಳುತ ಈ ಒಂದು ಘಟನೆಯನ್ನು ನೆನಪಿಸಿಕೊಂಡು ಭಾವುಕರಾಗಿದ್ದಾರೆ.
ಶ್ವಾನಗಳ ಪಾಡು?
“ಹೀಗೆ ಒಂದು ದಿನ ಟಾಟಾ ಅವರೊಂದಿಗೆ ಸಂಸ್ಥೆಯ ಐತಿಹಾಸಿಕ ಹೆಡ್‌ಕ್ವಾರ್ಟರ್ಸ್ ಬಾಂಬೆ ಹೌಸ್‌ನ ನವೀಕರಣದ ಬಗ್ಗೆ ಒಂದು ಸಂಭಾಷಣೆ ನಡೆಸಿದೆ. ನವೀಕರಣ ಯೋಜನೆಗಳ ಕುರಿತು ನಾನು ಅವರನ್ನು ಸಂಪರ್ಕಿಸಿದಾಗ, ಆಗ ಅವರು ಮೊದಲು ಕಾಳಜಿ ವಹಿಸಿದ್ದು, ಅಲ್ಲಿನ ಬೀದಿ ನಾಯಿಗಳ ಜೀವನ ಹಾಗೂ ವಾಸ್ತವ್ಯದ ಬಗ್ಗೆ. ಈ ವಿಷಯಕ್ಕೆ ಸಂಬಂಧಿಸಿದಂತೆ ನನ್ನನ್ನು ವೈಯಕ್ತಿಕವಾಗಿ ಕರೆದು ಮಾತನಾಡಿಸಿದ ಟಾಟಾ, ನಿಮ್ಮ ಬಳಿ ಒಂದು ವಿಚಾರ ಕೇಳಬಹುದಾ ಚಂದ್ರಶೇಖರ್” ಎಂದು ಕೇಳಿದರು.
ಮಾನವೀಯ ವ್ಯಕ್ತಿ
“ಇದಕ್ಕೆ ನಾನು ಹೇಳಿ ಅಂದಾಗ ಅವರು, ‘ರಿನೋವೇಟ್’ ಎಂದರೆ ಜಾಗ ಖಾಲಿ ಮಾಡಬೇಕು ಎಂದು ಹೇಳ್ತಿದ್ದೀರಾ ಅಲ್ವಾ? ಹೀಗೆ ಮಾಡಿದ್ರೆ ಇಲ್ಲಿರುವ ಶ್ವಾನಗಳು ಎಲ್ಲಿಗೆ ಹೋಗುತ್ತವೆ? ಎಂದು ಕೇಳಿದರು. ತಕ್ಷಣವೇ ನಾನು, ಅವುಗಳಿಗೆ ಪ್ರತ್ಯೇಕ ಮನೆ ವ್ಯವಸ್ಥೆ ಮಾಡುತ್ತೇನೆ ಎಂದು ಭರವಸೆ ನೀಡಿದೆ. ಈ ಮಾತು ಕೇಳ್ತಿದ್ದಂತೆ ಅವರಲ್ಲಿ ಒಂದು ಮಂದಹಾಸ ಮೂಡಿತು. ಅದು ಇಂದಿಗೂ ಮರೆಯಲಾಗದು. ಬಾಂಬೆ ಹೌಸ್‌ನ ನವೀಕರಣ ಸಂಪೂರ್ಣವಾಗಿ ಮುಕ್ತಾಯಗೊಂಡಾಗ ರತನ್ ಟಾಟಾ ಅವರು ಸ್ಥಳಕ್ಕೆ ಆಗಮಿಸಿದರು. ಈ ವೇಳೆ ಅವರು ಮೊದಲು ನೋಡಲು ಹೋಗಿದ್ದು, ಶ್ವಾನಗಳಿಗೆ ಕಟ್ಟಿಕೊಡಲಾದ ಕೆನಲ್. ಅದನ್ನು ನೋಡ್ತಿದ್ದಂತೆ ಅವರಲ್ಲಿ ಮೂಡಿದ ಸಂತಸ ಬೆಲೆ ಕಟ್ಟಲಾಗದು. ಆ ನಗುವೇ ನಾವು ಮಾಡಿದ ಕೆಲಸ ಎಷ್ಟು ಸರಿಯಿದೆ ಎಂಬುದನ್ನು ಒತ್ತಿ ಹೇಳಿತು ಎಂದು ಚಂದ್ರಶೇಖರನ್, ರತನ್ ಟಾಟಾ ಅವರೊಂದಿಗೆ ಕಳೆದ ಅಮೋಘ ಕ್ಷಣವನ್ನು ಇಲ್ಲಿ ನೆನಪಿಸಿಕೊಂಡಿದ್ದಾರೆ,(ಏಜೆನ್ಸೀಸ್).
ವರ್ಕ್ಔಟ್ ಆಗಿಲ್ಲ ಅಂದ್ರೆ…! ಉದ್ಯೋಗಿ ಕೊಟ್ಟ ರಾಜೀನಾಮೆ ಪತ್ರದಲ್ಲಿ ಅಡಗಿತ್ತು ಅಚ್ಚರಿ ಸಂಗತಿ | Resign Letter