

ವಿಜಯವಾಣಿ ವಿಶೇಷ ಹಾವೇರಿ
ಕಳೆದ ಶುಕ್ರವಾರ ರಾತ್ರಿ ಸುರಿದ ಭಾರಿ ಮಳೆಗೆ ತಾಲೂಕಿನ ಕನಕಾಪುರದ ಬಳಿ ತುಂಗಾ ಮೇಲ್ದಂಡೆ ಕಾಲುವೆ (ಯುಟಿಪಿ) ಒಡೆದು ಸಾವಿರಾರು ಎಕರೆ ಜಮೀನಿಗೆ ನೀರು ನುಗ್ಗಿತ್ತು. ಮತ್ತಷ್ಟು ಹಾನಿ ತಪ್ಪಿಸಲೆಂದು ನೀರಾವರಿ ಇಲಾಖೆ ಅಧಿಕಾರಿ, ಸಿಬ್ಬಂದಿ ಕಾಲುವೆಗೆ ಅಡ್ಡಲಾಗಿ ಮಣ್ಣು ಹಾಕಿ ಹಳ್ಳದ ಕಡೆಗೆ ನೀರು ಹರಿಸಿದ್ದಾರೆ. ಆದರೂ ಶೇ.20ರಷ್ಟು ನೀರು ಹೊಲದತ್ತ ಸಾಗಿದ್ದು, ಶಾಶ್ವತ ಪರಿಹಾರಕ್ಕೆ ರೈತರು ಆಗ್ರಹಿಸಿದ್ದಾರೆ.
ಕಾಗಿನೆಲೆ ಹಳ್ಳ, ಹಿರೇಲಿಂಗದಹಳ್ಳಿ ಹಳ್ಳ, ಹೊಂಬರಡಿ ಹಳ್ಳ, ಹಿಪ್ಪಿ ಹಳ್ಳದಿಂದ ಯುಟಿಪಿ ಕಾಲುವೆ ಮೂಲಕ ಹೆಗ್ಗೇರಿ ಕೆರೆಗೆ ನೀರು ಹರಿದು ಬಂದಿತ್ತು. ಶುಕ್ರವಾರ ರಾತ್ರಿ 78 ಮಿಮೀ ಮಳೆ ಸುರಿದಿತ್ತು. ಕಾರಣ ಅಪಾರ ಪ್ರಮಾಣದ ನೀರು ಹರಿದು ಬಂದು ಕನಕಾಪುರದ ಬಳಿ ಸುಮಾರು 30 ಅಡಿ ಕಾಲುವೆ ಒಡೆದು ಸಾವಿರಾರು ಎಕರೆ ಹೊಲಗಳಿಗೆ ನೀರು ನುಗ್ಗಿತ್ತು. ಇದರಿಂದ ರೈತರು ಆತಂಕಗೊಂಡಿದ್ದಾರೆ. ಫಸಲು ನೀರು ಪಾಲಾಗಿದ್ದನ್ನು ಕಂಡು ಪರಿಹಾರಕ್ಕಾಗಿ ಜಿಲ್ಲಾಡಳಿತಕ್ಕೆ ಆಗ್ರಹಿಸಿದ್ದಾರೆ.
ಸೋಮವಾರ ಕನಕಾಪುರದ ಬಳಿ ನೀರಾವರಿ ಇಲಾಖೆಯಿಂದ ಯುಟಿಪಿ ಕಾಲುವೆಗೆ ಅಡ್ಡಲಾಗಿ ಮಣ್ಣು ಹಾಕಿ ಕಾಲುವೆ ನೀರನ್ನು ಹಳ್ಳದತ್ತ ತಿರುವು ನೀಡಲಾಗಿದೆ. ಆದರೂ ಸ್ವಲ್ಪ ಪ್ರಮಾಣದ ನೀರು ಹರಿಯುತ್ತಲೇ ಇದೆ. ಮತ್ತೆ ಜೋರಾದ ಮಳೆ ಆದರೆ, ಹೊಲಗಳಿಗೆ ನೀರು ನುಗ್ಗುವ ಆತಂಕ ರೈತರಲ್ಲಿದೆ. ಹಾಗಾಗಿ, ಇದಕ್ಕೆ ಶಾಶ್ವತ ಪರಿಹಾರ ಒದಗಿಸುವಂತೆ ಹಾಗೂ ತಪ್ಪಿತಸ್ಥ ಅಧಿಕಾರಿಗಳ ಅಮಾನತು ಮಾಡುವಂತೆ ಉತ್ತರ ಕರ್ನಾಟಕ ರೈತ ಸಂಘದ ಜಿಲ್ಲಾಧ್ಯಕ್ಷ ಫಕ್ಕೀರಗೌಡ ಗಾಜಿಗೌಡ್ರ ‘ವಿಜಯವಾಣಿ’ ಮೂಲಕ ಆಗ್ರಹಿಸಿದ್ದಾರೆ.