ಹೆಂಡ್ತಿ ಆ್ಯಪ್ ಡೌನ್​ಲೋಡ್ ಮಾಡೋದು ತಡವಾಯ್ತೆಂದು ಸಿಟ್ಟಾದ ಗಂಡ; ಸಮಾಧಾನಿಸಲು ಬಂದ ಮಗನ ಎದೆಗೆ ಚೂರಿ ಇರಿತ!

Stab
Published on

ನವದೆಹಲಿ: ಇಂದು ಅಪ್ಪನ ದಿನ.. ಆದರೆ ಇಂದೇ ವ್ಯಕ್ತಿಯೊಬ್ಬ ತಂದೆಯಿಂದ ಚೂರಿ ಇರಿತಕ್ಕೆ ಒಳಗಾಗಿದ್ದಾನೆ. ಅಪ್ಪನನ್ನು ಸಮಾಧಾನ ಪಡಿಸಲು ಹೋದ ಮಗ ಚಾಕು ಇರಿತಕ್ಕೆ ಒಳಗಾಗಿ ಆಸ್ಪತ್ರೆಗೆ ಸೇರುವಂತಾಗಿದ್ದು, ಅಪ್ಪನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಅಶೋಕ್ ಸಿಂಗ್ ಎಂಬಾತನೇ ಆರೋಪಿ. ಈತ ಮಗ ಆದಿತ್ಯನಿಗೆ ಚೂರಿಯಿಂದ ಇರಿದಿದ್ದಾನೆ. 64 ವರ್ಷದ ಅಶೋಕ್ ಸಿಂಗ್​ ಇಂಜಿನಿಯರ್ಸ್ ಇಂಡಿಯಾ ಲಿಮಿಟೆಡ್​​ನಲ್ಲಿ ಇಂಜಿನಿಯರ್ ಆಗಿದ್ದು, 23 ವರ್ಷದ ಮಗ ಕಂಪ್ಯೂಟರ್ ಸೈನ್ಸ್ ಇಂಜಿನಿಯರ್ ಆಗಿದ್ದು, ಗುರುಗ್ರಾಮದಲ್ಲಿ ಉದ್ಯೋಗದಲ್ಲಿದ್ದಾನೆ.

ಅಶೋಕ್ ಗುರುಗ್ರಾಮದಲ್ಲಿ ಫ್ಲ್ಯಾಟ್ ಖರೀದಿಸಿದ್ದು, ಅದಕ್ಕಾಗಿ ಹಣ ಪಾವತಿ ಮಾಡಲು ತನ್ನ ಮೊಬೈಲ್​ಫೋನ್​ನಲ್ಲಿ ಆ್ಯಪ್​ ಡೌನ್​ಲೋಡ್ ಮಾಡಲು ಪತ್ನಿ ಮಂಜುಗೆ ಹೇಳಿದ್ದ. ಆದರೆ ಸಂಬಂಧಿತ ಆ್ಯಪ್ ಡೌನ್​ಲೋಡ್ ಮಾಡಲು ಪತ್ನಿ ತಡ ಮಾಡಿದ್ದಕ್ಕೆ ಅಶೋಕ್ ಕೋಪಗೊಂಡಿದ್ದ. ಅಮ್ಮನ ಮೇಲೆ ಅಪ್ಪ ಸಿಟ್ಟಾಗಿದ್ದಕ್ಕೆ ಮಗ ಸಮಾಧಾನ ಪಡಿಸಲು ಬಂದಾಗ ಆತ ಮಗನಿಗೇ ಚೂರಿಯಿಂದ ಇರಿದಿದ್ದಾನೆ.

ಮಗನ ಎದೆಯ ಭಾಗದಲ್ಲಿ ಎರಡು ಕಡೆ ಇರಿಯಲಾಗಿದ್ದು, ಆತನನ್ನು ಲಾಲ್​ ಬಹದ್ದೂರ್ ಶಾಸ್ತ್ರಿ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗಿದೆ. ತಂದೆಯ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ದೆಹಲಿ ಪೊಲೀಸರು ಆತನನ್ನು ಬಂಧಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net