

ಮೈಸೂರು: ಕಾಂಗ್ರೆಸ್ನ ಐದು ಗ್ಯಾರಂಟಿಗಳ ಪೈಕಿ ಒಂದಾಗಿರುವ ಮಹಿಳೆಯರಿಗೆ ಉಚಿತ ಪ್ರಯಾಣ ಅವಕಾಶ ಕಲ್ಪಿಸುವ 'ಶಕ್ತಿ ಯೋಜನೆ' ಜಾರಿಗೆ ಬಂದು ಒಂದು ವಾರ ಕಳೆಯುವಷ್ಟರಲ್ಲಿ ನಾನಾ ಅವಾಂತರಗಳು ನಡೆದುಹೋಗಿವೆ.
ಈಗಾಗಲೇ ಬಸ್ನಲ್ಲಿ ಮಹಿಳೆಯರು ಉಚಿತ ಪ್ರಯಾಣಕ್ಕಾಗಿ ಧಾವಿಸುತ್ತಿದ್ದು, ನಿರ್ವಾಹಕರು ಉಳಿದವರಿಗೆ ಟಿಕೆಟ್ ನೀಡಲಿಕ್ಕೂ ಪರದಾಡಬೇಕಾದಂಥ ಘಟನೆಗಳೂ ಜರುಗಿವೆ. ಪುರುಷರು ಟಿಕೆಟ್ಗೆ ದುಡ್ಡು ಕೊಟ್ಟೂ ನಿಂತುಕೊಂಡೇ ಪ್ರಯಾಣಿಸಬೇಕಾದ ಪರಿಸ್ಥಿತಿ, ಉಚಿತವಾಗಿ ಪ್ರಯಾಣಿಸುವ ಮಹಿಳೆಯರಿಂದ ಸೀಟ್ಗಾಗಿ ಕಿತ್ತಾಟ ಮುಂತಾದವು ಕೂಡ ನಡೆದಿವೆ.
ಇದೀಗ ಉಚಿತ ಪ್ರಯಾಣದ ಶಕ್ತಿ ಯೋಜನೆಯ ಪ್ರಯೋಜನ ಪಡೆಯಲು ಮಹಿಳೆಯರು ಪ್ರಯೋಗಿಸಿದ ಶಕ್ತಿಗೆ ಬಸ್ ಡೋರ್ ಕಿತ್ತು ಹೋದ ಪ್ರಕರಣವೂ ನಡೆದಿದೆ. ಕೊಳ್ಳೇಗಾಲ ಬಸ್ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ವಾರಾಂತ್ಯ ಹಾಗೂ ಮಣ್ಣೆತ್ತಿನ ಅಮಾವಾಸ್ಯೆ ಹಿನ್ನೆಲೆಯಲ್ಲಿ ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳುವ ಮಹಿಳೆಯರು ತೋರಿದ ಶಕ್ತಿಗೆ ಬಸ್ವೊಂದರ ಬಾಗಿಲು ಕಳಚಿ ಹೋಗಿದೆ.