

ಕೋಲಾರ: ಗಂಡ ಹೆಂಡತಿಯ ನಡುವಿನ ಜಗಳಕ್ಕೆ ಇಲ್ಲಿ ಎರಡು ವರ್ಷದ ಮಗುವೇ ಬಲಿಯಾಗಿದೆ. ಹೆಂಡತಿ ಮೇಲಿನ ಸಿಟ್ಟಿನಿಂದ ಗಂಡ ಮಗುವಿನ ಕುತ್ತಿಗೆ ಹಿಸುಕಿ ಕೊಲೆ ಮಾಡಿದ್ದಾನೆ. ಕೋಲಾರ ಜಿಲ್ಲೆಯಲ್ಲಿ ಈ ವಿಕೃತ ಘಟನೆ ನಡೆದಿದೆ.
ಕೋಲಾರ ಜಿಲ್ಲೆಯ ಮುಳಬಾಗಲು ತಾಲೂಕಿನ ಕೆ.ಬಿ.ಕೊತ್ತೂರು ಗ್ರಾಮದಲ್ಲಿ ಈ ಪ್ರಕರಣ ನಡೆದಿದೆ. ಕೊತ್ತೂರು ಗ್ರಾಮದ 33 ವರ್ಷದ ಗಂಗಾಧರ್ ತನ್ನ 2 ವರ್ಷದ ಮಗಳನ್ನೇ ಕೊಂದಿದ್ದಾನೆ. ಈ ಕುರಿತು ತಾಯಿ ರೇಣುಕಾ ಪೊಲೀಸರಿಗೆ ದೂರು ನೀಡಿದ್ದಾರೆ.
ಗಂಗಾಧರ್ ಮತ್ತು ರೇಣುಕಾ ಮಧ್ಯೆ ಆಗಾಗ ಜಗಳವಾಗುತ್ತಿತ್ತು. ಪದೇಪದೆ ನಡೆಯುತ್ತಿದ್ದ ಜಗಳದಿಂದ ಬೇಸತ್ತಿದ್ದ ಗಂಗಾಧರ್, ಹೆಂಡತಿ ಮೇಲಿನ ಸಿಟ್ಟಿನಿಂದ ಪುತ್ರಿ ರಮ್ಯಳನ್ನು ಕೊಲೆ ಮಾಡಿದ್ದಾನೆ. ನಂಗಲಿ ಪೊಲೀಸ್ ಠಾಣೆಗೆ ರೇಣುಕಾ ದೂರು ನೀಡಿದ್ದು, ಸ್ಥಳಕ್ಕೆ ಕೋಲಾರ ಎಸ್ಪಿ ನಾರಾಯಣ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಂಗಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.