

ಬೆಂಗಳೂರು: ಅವನಲ್ಲಿ.. ಇವಳಿಲ್ಲಿ.. ಎಂಬಂತೆ ಇಬ್ಬರು ಪ್ರೇಮಿಗಳು ಒಬ್ಬರ ಹಿಂದೊಬ್ಬರಂತೆ ಆತ್ಮಹತ್ಯೆ ಮಾಡಿಕೊಂಡಿದ್ದು, ಸಾವಿನ ಬಳಿಕ ಇಬ್ಬರೂ ಪ್ರೇಮಿಗಳು ಎಂಬುದು ಜಗಜ್ಜಾಹೀರಾಗಿದೆ. ಬೆಂಗಳೂರಿನ ಬೆಳ್ಳಂದೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.
ಬೆಳ್ಳಂದೂರು ಕೋಡಿ ಬಳಿ ಪಶ್ಟಿಮ ಬಂಗಾಳ ಮೂಲದ ಪ್ರೇಮಿಗಳಿಬ್ಬರು ಪ್ರತ್ಯೇಕವಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬಿಪೇಂದ್ರ ಕುಮಾರ್ (22) ಮತ್ತು ಆತನ ಪ್ರೇಯಸಿ ಧಾರಾ (21) ಆತ್ಮಹತ್ಯೆ ಮಾಡಿಕೊಂಡವರು. ಪಶ್ಚಿಮ ಬಂಗಾಳದ ಕೋಲ್ಕತ ಮೂಲದ ಇವರಿಬ್ಬರು ಒಂದೇ ಗ್ರಾಮದವರಾಗಿದ್ದು, ಪರಸ್ಪರ ಪ್ರೀತಿಸುತ್ತಿದ್ದರು.
ಕೆಲ ವರ್ಷಗಳ ಹಿಂದೆ ಬೆಂಗಳೂರಿಗೆ ಬಂದಿದ್ದ ಇಬ್ಬರು ಬೆಳ್ಳಂದೂರು ಬಳಿ ಪ್ರತ್ಯೇಕವಾಗಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಧಾರಾ, ಸಹೋದರಿ ಜತೆ ವಾಸವಾಗಿದ್ದರೆ, ಬಿಪೇಂದ್ರ ಕುಮಾರ್ ಪರಿಚಯಸ್ಥರ ಜತೆ ವಾಸವಾಗಿದ್ದ. ಬಿಪೇಂದ್ರ ಕುಮಾರ್ ಗಾರೆ ಕೆಲಸ ಮಾಡುತ್ತಿದ್ದರೆ, ಧಾರಾ ಹೌಸ್‌ಕೀಪಿಂಗ್ ಕೆಲಸ ಮಾಡುತ್ತಿದ್ದಳು. ಬೆಂಗಳೂರಿನಲ್ಲೂ ಇಬ್ಬರ ಪ್ರೀತಿ ಮುಂದುವರಿದಿತ್ತು.
ಈ ಮಧ್ಯೆ ಧಾರಾಗೆ ಆಕೆಯ ಮನೆಯಲ್ಲಿ ಬೇರೆ ಯುವಕನ ಜತೆ ಮದುವೆ ನಿಶ್ಚಯಿಸಿದ್ದರು. ಈ ವಿಚಾರ ತಿಳಿದ ಬಿಪೇಂದ್ರ ಕುಮಾರ್ ಗುರುವಾರ ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪ್ರಿಯಕರನ ಸಾವಿನ ವಿಚಾರ ತಿಳಿದ ಧಾರಾ, ಶುಕ್ರವಾರ ಮಧ್ಯಾಹ್ನ ತಾನು ಕೆಲಸ ಮಾಡುತ್ತಿದ್ದ ಕಟ್ಟಡದ ಟೆರೇಸ್ ಮೇಲಿಂದ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಆರಂಭದಲ್ಲಿ ಇಬ್ಬರೂ ಪ್ರೇಮಿಗಳೆಂಬುದು ತಿಳಿದಿರಲಿಲ್ಲ. ಬಳಿಕ ಧಾರಾಳ ಮೊಬೈಲ್ಫೋನ್ ವಶಕ್ಕೆ ಪಡೆದುಕೊಂಡು ಪರಿಶೀಲಿಸಿದಾಗ, ಬಿಪೇಂದ್ರ ಮತ್ತು ಧಾರಾ ಒಟ್ಟಿಗೆ ಫೋಟೋ ತೆಗೆಸಿಕೊಂಡಿರುವುದು ಪತ್ತೆಯಾಗಿದ್ದು, ಪ್ರೇಮಿಗಳು ಎಂಬುದು ತಿಳಿಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬೆಳ್ಳಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.