

ಅಮೆರಿಕ: ದರೋಡೆಕೋರರು ನಿಮ್ಮೆಲ್ಲಾ ಹಣವನ್ನು ದೋಚಿ, ಡೇಟಿಂಗ್ ಮಾಡೋಣವೇ ಎಂದು ಕೇಳಿದರೆ ಹೇಗೆನಿಸಬಹುದು?! ಹೌದು… ಈ ರೀತಿಯ ವಿಚಿತ್ರ ಪರಿಸ್ಥಿತಿಯನ್ನು ಯುವತಿಯೊಬ್ಬಳು ಎದುರಿಸಿದ ಘಟನೆ ಬೆಳಕಿಗೆ ಬಂದಿದೆ.
ಅಮೆರಿಕದ ಇಂಡಿಯಾನಪೊಲಿಸ್ ಎಂಬಲ್ಲಿ ದರೋಡೆಕೋರನೊಬ್ಬ ಯುವತಿಯನ್ನು ದೋಚಿ ತನ್ನ ಫೇಸ್ಬುಕ್ ಫ್ರೆಂಡ್ ರಿಕ್ವೆಸ್ಟ್ಅನ್ನು ಒಪ್ಪಿಕೊಳ್ಳುವಂತೆ ಒತ್ತಾಯಿಸಿದ್ದಾನೆ. ನಂತರ ಯುವತಿಯನ್ನು ಡೇಟಿಂಗ್ ಮಾಡಲು ಹೋಗೋಣ್ವಾ ಎಂದು ಕೇಳಿದ್ದಾನಂತೆ!
ಈ ರೀತಿ ಮಾಡಿದವನನ್ನು ಡೇಮಿಯೆನ್ ಬಾಯ್ಸ್ ಎಂದು ಗುರುತಿಸಲಾಗಿದ್ದು ಆತ ಬಂಧನದ ನಂತರ ‘ಆ ಯುವತಿ ದರೋಡೆ ಮಾಡಲು ಮನಸ್ಸು ಬಾರದಷ್ಟು ಸುಂದರವಾಗಿದ್ದಳು ಎಂದಿದ್ದಾನೆ! ಅಷ್ಟೇ ಅಲ್ಲದೇ ಆತ ಕದ್ದ ಸ್ವತ್ತನ್ನು ಹಿಂತಿರುಗಿಸುವುದಾಗಿಯೂ ಹೇಳಿದ್ದಾನೆ.
ಮೇ 8ರಂದು ಯುವತಿ ತನ್ನ ಮನೆಯ ಹೊರಗಡೆ ಇದ್ದ ಅಂಚೆಪೆಟ್ಟಿಗೆಯನ್ನು ಪರಿಶೀಲಿಸುತ್ತಿದ್ದಾಗ ಈ ಘಟನೆ ನಡೆದಿದೆ. ದರೋಡೆಕೋರ ಡೇಮಿಯನ್, ಯುವತಿ ಬಳಿಗೆ ಬಂದು ಬಂದೂಕನ್ನು ತೋರಿಸಿ ಎಲ್ಲಾ ಹಣವನ್ನು ಕೊಡುವಂತೆ ಒತ್ತಾಯಿಸಿದ್ದ. ಅವನು ಅಲ್ಲಿಗೇ ನಿಲ್ಲದೇ ಆ ಯುವತಿ ತನ್ನ ಫೇಸ್ಬುಕ್ ಸ್ನೇಹಿತಳಾಗಬೇಕೆಂದು ಒತ್ತಾಯಿಸಿದನು. ನಂತರ ಆತ ಯುವತಿಯ ಸೌಂದರ್ಯವನ್ನು ಹೊಗಳಿ ಸಂದೇಶಗಳನ್ನು ಕಳುಹಿಸಿದ್ದು ಕೂಲ್ ಆಗಿರಲು ವಿನಂತಿಸಿದ್ದಾನೆ.
ನ್ಯೂಯಾರ್ಕ್ ಪೋಸ್ಟ್ ವರದಿಯ ಪ್ರಕಾರ, ಯುವತಿ. "ಏನು ನಡೆಯುತ್ತಿದೆ ಗೊತ್ತಾಗುವ ಮುನ್ನವೇ ನನಗೆ ಆತ ತನ್ನ ಜೇಬಿನಿಂದ ಬಂದೂಕನ್ನು ತೆಗೆದು ತೋರಿಸಿದ್ದ. ಡೇಮಿಯನ್ ‘ನನ್ನನ್ನು ನಿಮ್ಮ ಮನೆಯೊಳಗೆ ಬರಲು ಬಿಡಿ’ ಎಂದು ಹೇಳಿದ್ದ. ಆದರೆ ನಾನು ಹಾಗೆ ಮಾಡಲಿಲ್ಲ" ಎಂದು ಹೇಳಿದ್ದಾಳೆ.
ಅವಳು ಅವನನ್ನು ಒಳಗೆ ಬಿಡಲು ನಿರಾಕರಿಸಿದರೂ, ಯುವತಿ ಸರಿಸುಮಾರು 100 ಡಾಲರ್ ಹಣವನ್ನು ಆ ವ್ಯಕ್ತಿಗೆ ನೀಡಿದ್ದಾಳೆ. ಆದರೆ ಅಷ್ಟಕ್ಕೆ ತೃಪ್ತನಾಗದ ಡೇಮಿಯನ್, ಗನ್ ತೋರಿಸಿ ಫೇಸ್ಬುಕ್ ಫ್ರೆಂಡ್ ಆಗುವಂತೆ ಒತ್ತಾಯಿಸಿದ್ದಾನೆ. ಆ ಕ್ಷಣದಲ್ಲಿ, ಅಂಬರ್ ತನಗೆ ಅದೊಂದೇ ದಾರಿ ಎಂದು ಭಾವಿಸಿದಳು. ಹಾಗೇ ಮಾಡಿದಳು ಕೂಡ.
ನಂತರ ನಡೆದದ್ದು ಮಾತ್ರ ವಿಚಿತ್ರ ಘಟನೆ! ಯುವತಿಗೆ ಆರೋಪಿ ಡೇಮಿಯನ್ ಮನವೊಲಿಸುವ ಸಂದೇಶಗಳನ್ನು ಕಳಿಸಿದ್ದು, ಆಕೆ ತೀರಾ ಸುಂದರವಾಗಿರುವ ಕಾರಂ ತಾನು ಕದ್ದ ಹಣವನ್ನು ಮರುಪಾವತಿ ಮಾಡುವುದಾಗಿ ಹೇಳಿಕೊಂಡನು. ಅವಳು ಸ್ವೀಕರಿಸಿದ ಒಂದು ಸಂದೇಶ ಹೀಗಿತ್ತು, "ನೋಡಿ, ನಾನು ನಿಮಗೆ ಮರುಪಾವತಿಸುತ್ತೇನೆ ಎಂದು ನಿಮಗೆ ತಿಳಿದಿದೆ. ಯಾರನ್ನಾದರೂ ಭೇಟಿಯಾಗಲು ಇದು ಉತ್ತಮ ಮಾರ್ಗವಾಗಿದೆ, ಆದರೆ ನೀವು ದರೋಡೆ ಮಾಡಲು ತುಂಬಾ ಸುಂದರವಾಗಿದ್ದೀರಿ" ಎಂದಿದ್ದಾನೆ. ಆದರೆ ಆರೋಪಿ ಡೇಮಿಯನ್ ಇನ್ನೂ ಹೊರಗೆ ಓಡಾಡುತ್ತಿದ್ದಾನೋ ಅಥವಾ ಬಂಧಿಸಲ್ಪಟ್ಟಿದ್ದಾನೋ ಎಂಬುವುದು ಇನ್ನೂ ತಿಳಿದು ಬಂದಿಲ್ಲ. (ಏಜೆನ್ಸೀಸ್)