ಡೇಟಿಂಗ್ ಮಾಡಬೇಕೆಂದಿದ್ದ ಅಕೌಂಟೆಂಟ್​ಗೆ 2.83 ಲಕ್ಷ ರೂ. ಪಂಗನಾಮ ಹಾಕಿದ್ಲು ನಗ್ನವಾಗಿ ವಿಡಿಯೋ ಕಾಲ್ ಮಾಡಿದ್ದ ಹುಡುಗಿ!

Video Call
Published on

ಬೆಂಗಳೂರು: ಡೇಟಿಂಗ್ ಆ್ಯಪ್ ಡೌನ್‌ಲೋಡ್ ಮಾಡಿಕೊಂಡು ಯುವತಿ ಸನಿಹಕ್ಕಾಗಿ ಹುಡುಗಾಟ ನಡೆಸುತ್ತಿದ್ದ ಅಕೌಂಟೆಂಟ್​ಗೆ ವಿಡಿಯೋ ಕಾಲ್ ಮಾಡಿ 2.83 ಲಕ್ಷ ರೂ. ಸೈಬರ್ ಕಳ್ಳರು ಸುಲಿಗೆ ಮಾಡಿದ್ದಾರೆ.

ಇಂದಿರಾನಗರದ 38 ವರ್ಷದ ಅಕೌಂಟೆಂಟ್ ವಂಚನೆಗೆ ಒಳಗಾದವ. ಈತ ಕೊಟ್ಟಿರುವ ದೂರಿನ ಮೇರೆಗೆ ಅಪರಿಚಿತ ವ್ಯಕ್ತಿಯ ಮೇಲೆ ಎಫ್​​ಐಆರ್ ದಾಖಲಿಸಿ ಪೂರ್ವ ಸಿಇಎನ್ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಡೇಟಿಂಗ್ ಆ್ಯಪ್ ಮೂಲಕ ಪರಿಚಯ

ಯುವತಿ ಜತೆಗೆ ಏಕಾಂತ ಕ್ಷಣಗಳನ್ನು ಕಳೆಯುವ ಉದ್ದೇಶಕ್ಕೆ ಡೇಟಿಂಗ್ ಆ್ಯಪ್ ಡೌನ್‌ಲೋಡ್ ಮಾಡಿಕೊಂಡ ಅಕೌಂಟೆಂಟ್​ ಗೆಳತಿಗಾಗಿ ಹುಡುಕಾಟ ನಡೆಸುತ್ತಿದ್ದ. ಮೇ 2ರಂದು ಅಪರಿಚಿತ ಮೊಬೈಲ್ ನಂಬರ್‌ನಿಂದ ಯುವತಿಯೊಬ್ಬಳು ಕರೆ ಮಾಡಿ, ಮೆಹಕ್ ಜೈನ್ ಎಂದು ಪರಿಚಯ ಮಾಡಿಕೊಂಡು ಡೇಟಿಂಗ್ ಕುರಿತು ಮಾತನಾಡಿದ್ದಳು.

ನಗ್ನ ಫೋಟೋ ವೈರಲ್ ಮಾಡುತ್ತೇನೆ ಎಂದು ಬೆದರಿಕೆ!

ಸಲುಗೆಯಿಂದ ಮಾತು ಶುರು ಮಾಡಿದ ಅಪರಿಚಿತ ಯುವತಿ, ವಾಟ್ಸ್‌ಆ್ಯಪ್‌ನಲ್ಲಿ ವಿಡಿಯೋ ಕಾಲ್ ಮಾಡುವಂತೆ ತಿಳಿಸಿದ್ದಾಳೆ. ದೂರುದಾರ, ವಿಡಿಯೋ ಕಾಲ್ ಮಾಡಿದಾಗ ಆಕೆ ನಗ್ನ ಫೋಟೋ ತೋರಿ, ನೀನು ನಗ್ನವಾಗುವಂತೆ ಒತ್ತಾಯಿಸಿದ್ದಾಳೆ. ಆಗ ಅಕೌಂಟೆಂಟ್ ನಗ್ನವಾಗಿ ವಿಡಿಯೋ ಕಾಲ್ ಮಾಡಿದಾಗ ಫೋಟೋ ಮತ್ತು ವಿಡಿಯೋ ಮಾಡಿಕೊಂಡಿದ್ದಾಳೆ. ಸ್ವಲ್ಪ ಹೊತ್ತಿಗೆ ಕರೆ ಮಾಡಿ ನೀನು ನನ್ನ ಜತೆಗೆ ನಗ್ನವಾಗಿ ವಿಡಿಯೋ ಕಾಲ್ ಮಾಡಿ ಅಶ್ಲೀಲವಾಗಿ ವರ್ತಿಸಿದ್ದೀಯ. ಈ ವಿಡಿಯೋ ಮತ್ತು ಫೋಟೋಗಳನ್ನು ಜಾಲತಾಣದಲ್ಲಿ ವೈರಲ್ ಮಾಡುತ್ತೇನೆ ಎಂದು ಬೆದರಿಸಿದ್ದಾಳೆ.

ಒಂದು ವೇಳೆ ನಗ್ನವಾಗಿರುವ ಫೋಟೊ, ವಿಡಿಯೋ ವೈರಲ್ ಮಾಡಬಾರದು ಎಂದರೇ ಹಣ ನೀಡುವಂತೆ ಬೆದರಿಸಿ, ಬ್ಯಾಂಕ್ ಖಾತೆಗೆ ಜಮೆ ಮಾಡಿಸಿಕೊಂಡಿದ್ದಾಳೆ. ಇದೇ ರೀತಿ ಬೆದರಿಸಿ ಬರೋಬ್ಬರಿ 2.83 ಲಕ್ಷ ರೂಪಾಯಿಯನ್ನು ಜಮೆ ಮಾಡಿಸಿಕೊಂಡು ಮತ್ತೆ ಮತ್ತೆ ಹಣ ಕೇಳಿದ್ದಾಳೆ. ಈ ವೇಳೆ ಅನುಮಾನ ಬಂದು ಅಕೌಂಟೆಂಟ್ ಪೊಲೀಸ್ ಠಾಣೆಗೆ ಬಂದು ದೂರು ಸಲ್ಲಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net