ತನಗಿಂತ 22 ವರ್ಷ ಹಿರಿಯ ನಟನೊಂದಿಗೆ ಡೇಟಿಂಗ್​: ಕಿಸ್ಸಿಂಗ್​ ಫೋಟೋ ಬಗ್ಗೆ ನಟಿ ಯಶಿಕಾ ಸ್ಪಷ್ಟನೆ

Yashika Anand
Published on

ಚೆನ್ನೈ: ಕಾಲಿವುಡ್​ನ “ಇರುಟ್ಟು ಅರಯಿಲ್ ಮುರಟ್ಟು ಕುತ್ತು” ಹೆಸರಿನ ವಯಸ್ಕರ ಕಾಮಿಡಿ ಚಿತ್ರ ಹಾಗೂ ಬಿಗ್​ಬಾಸ್​ ಶೋ ಮೂಲಕ ಖ್ಯಾತಿ ಪಡೆದಿರುವ ನಟಿ ಯಶಿಕಾ ಆನಂದ್, 2021ರ ಜುಲೈ ತಿಂಗಳಲ್ಲಿ ಸಂಭವಿಸಿದ ಭೀಕರ ಕಾರು ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಸುಮಾರು ಅರ್ಧ ವರ್ಷಗಳ ಕಾಲ ಆಸ್ಪತ್ರೆಯಲ್ಲಿದ್ದು ಚೇತರಿಸಿಕೊಂಡು ಸಂಪೂರ್ಣ ಸಹಜ ಜೀವನಕ್ಕೆ ಮರಳಿದರು. ಸಾವಿನ ಹೊಸ್ತಿಲಿಗೆ ಹೋಗಿ ಅದೃಷ್ಟವಶಾತ್​ ಬದುಕಿ ಬಂದಿರುವ ಯಶಿಕಾ, ಹಿಂದಿನ ನೋವೆಲ್ಲ ಮರೆತು ಮತ್ತೆ ಗ್ಲಾಮರ್​ ಲೋಕದ ಕ್ಷಣಗಳನ್ನು ಸವಿಯುತ್ತಿದ್ದಾರೆ. ಇದೀಗ ಯಶಿಕಾ ಕುರಿತಾದ ಮತ್ತೊಂದು ಬ್ರೇಕಿಂಗ್​ ಸುದ್ದಿ ಹೊರಬಿದ್ದಿದೆ.

ವದಂತಿಗೆ ಪುಷ್ಠಿ ನೀಡಿದ ಫೋಟೋಗಳು

ಯಶಿಕಾ ಅವರು ಕಾಲಿವುಡ್​ ಮಾಜಿ ನಟಿ ಶಾಲಿನಿ ಹಾಗೂ ಬೇಬಿ ಶ್ಯಾಮಿಲಿ ಎಂದೇ ಕನ್ನಡಿಗರಿಗೆ ಚಿರಪರಿಚಿತರಾದ ಶ್ಯಾಮಿಲಿ ಅವರ ಸಹೋದರ ಹಾಗೂ​ ಸೂಪರ್​​​​ಸ್ಟಾರ್​ ಅಜಿತ್​ಕುಮಾರ್​ ಅವರ ಬಾಮೈದ ರಿಚರ್ಡ್​ ರಿಷಿ ಅವರ ಪ್ರೀತಿಯ ಬಲೆಯಲ್ಲಿ ಬಿದ್ದಿದ್ದಾರೆ ಎನ್ನಲಾಗುತ್ತಿದೆ. ಇಬ್ಬರು ಡೇಟಿಂಗ್​ ಮಾಡುತ್ತಿದ್ದಾರೆ ಎಂಬ ಚರ್ಚೆ ಕಾಲಿವುಡ್​ ಗಲ್ಲಿ ಗಲ್ಲಿಯಲ್ಲಿ ನಡೆಯುತ್ತಿದೆ. ರಿಚರ್ಡ್​ ರಿಷಿ ಅವರು ಇನ್​ಸ್ಟಾಗ್ರಾಂನಲ್ಲಿ ಶೇರ್​ ಮಾಡಿಕೊಂಡಿರುವ ಫೋಟೋಗಳು ಕೂಡ ವದಂತಿಗೆ ಪುಷ್ಠಿ ನೀಡುತ್ತಿವೆ. ಆದರೆ, ಯಶಿಕಾ ಈ ವದಂತಿಗೆ ಸ್ಪಷ್ಟನೆಯನ್ನೂ ನೀಡಿದ್ದಾರೆ.

ಯಶಿಕಾಗಿಂತ 22 ವರ್ಷ ಹಿರಿಯ

ಯಶಿಕಾ ಆನಂದ್​, ರಿಚರ್ಡ್ ರಿಷಿಗೆ ಚುಂಬಿಸುತ್ತಿರುವ ಫೋಟೋ ಈ ವದಂತಿಗೆ ಮುಖ್ಯ ಕಾರಣವಾಗಿದೆ. ಇಬ್ಬರು ಕಾರಿನಲ್ಲಿ ಒಟ್ಟಿಗೆ ಪ್ರಯಾಣ ಬೆಳೆಸುತ್ತಿರುವ ಫೋಟೋಗಳು ಕೂಡ ಜಾಲತಾಣದಲ್ಲಿ ವೈರಲ್​ ಆಗಿದೆ. ಹೀಗಾಗಿ ಇಬ್ಬರ ನಡುವೆ ಏನೋ ನಡೆಯುತ್ತಿದೆ ಎಂಬ ಗುಸು ಗುಸು ಕೇಳಿಬರುತ್ತಿದೆ. ಅಂದಹಾಗೆ ರಿಚರ್ಡ್​ ರಿಷಿ ಅವರು ಯಶಿಕಾಗಿಂತ 22 ವರ್ಷ ದೊಡ್ಡವರು. ಯಶಿಕಾಗೆ ಈಗ 23 ವರ್ಷ ಮತ್ತು ರಿಚರ್ಡ್​ಗೆ 45 ವರ್ಷ ವಯಸ್ಸಾಗಿದೆ.

ಯಶಿಕಾ ಸ್ಪಷ್ಟನೆ

ಇತ್ತ ಡೇಟಿಂಗ್​ ವದಂತಿ ಹರಡುತ್ತಿದ್ದಂತೆ ಯಶಿಕಾ ಆನಂದ್​ ಸ್ಪಷ್ಟನೆ ನೀಡಿದ್ದಾರೆ. ರಿಚಾರ್ಡ್​ ಅವರೊಂದಿಗಿನ ಫೋಟೋಗಳು ಮುಂಬರುವ ಹೊಸ ಸಿನಿಮಾಕ್ಕೆ ಸಂಬಂಧಿಸಿದ್ದಾಗಿವೆ. ಮಾಧ್ಯಮಗಳಲ್ಲಿ ಬರುತ್ತಿರುವ ಸುದ್ದಿ ನಿಜವಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ವಿನಯ್ ಭಾರದ್ವಾಜ್ ನಿರ್ದೇಶನದ ಮುಂಬರುವ ತಮಿಳು ಚಿತ್ರ 'ಸಿಲಾ ನೋಡಿಗಲ್' ನಲ್ಲಿ ಯಶಿಕಾ ಆನಂದ್ ಮತ್ತು ರಿಚರ್ಡ್ ರಿಷಿ ಕಾಣಿಸಿಕೊಳ್ಳಲಿದ್ದಾರೆ.

ಸಿನಿಮಾ ವಿಚಾರಕ್ಕೆ ಬರುವುದಾದರೆ, ರಿಚರ್ಡ್ ರಿಷಿ ಅಂಜೈಲ್ ಚಿತ್ರದಲ್ಲಿ ಬಾಲ ಕಲಾವಿದನಾಗಿ ತಮ್ಮ ನಟನಾ ವೃತ್ತಿಯನ್ನು ಪ್ರಾರಂಭಿಸಿದರು ಮತ್ತು 2002 ರಲ್ಲಿ ಕಾದಲ್ ವೈರಸ್ ಚಿತ್ರದ ಮೂಲಕ ನಾಯಕ ನಟನಾಗಿ ಪದಾರ್ಪಣೆ ಮಾಡಿದರು. ತ್ರೇಲಪತಿ ಮತ್ತು ಕೂತ್ತು ಅವರ ಎರಡು ಗಮನಾರ್ಹ ಚಿತ್ರಗಳು. ಕ್ರಿವಾಲಂ, ಯುಕಾ, ಕಮಾನಿ, ಬೆನ್ ಸಿಂಗಂ, ನೆರೆತಿರ್, ತಾನಾತು ಯಾರೋ ಮತ್ತು ಚಂದೋಲಾ ಸೇರಿದಂತೆ ಅನೇಕ ಚಿತ್ರಗಳಲ್ಲಿ ನಟಿಸಿದ್ದಾರೆ. ಆದರೆ, ಅವರಿಗೆ ಹೇಳಿಕೊಳ್ಳುವಷ್ಟು ಯಶಸ್ಸನ್ನು ಸಾಧಿಸಲಿಲ್ಲ.

ಇನ್ನು ಯಶಿಕಾ ಆನಂದ್​ ಅವರು ಕಾಲಿವುಡ್​ನ “ಇರುಟ್ಟು ಅರಯಿಲ್ ಮುರಟ್ಟು ಕುತ್ತು” ಹೆಸರಿನ ವಯಸ್ಕರ ಕಾಮಿಡಿ ಚಿತ್ರ ಹಾಗೂ ಬಿಗ್​ಬಾಸ್​ ಶೋ ಮೂಲಕ ಖ್ಯಾತಿ ಪಡೆದಿದ್ದಾರೆ. 2021ರ ಜುಲೈ ತಿಂಗಳಲ್ಲಿ ಸಂಭವಿಸಿದ ಭೀಕರ ಕಾರು ಅಪಘಾತದ ಬಳಿಕ ಯಶಿಕಾ ಸಿಕ್ಕಾಪಟ್ಟೆ ಸುದ್ದಿಯಾದರು. ಇದೀಗ ಸಾಲು ಸಾಲು ಸಿನಿಮಾಗಳಲ್ಲಿ ಯಶಿಕಾ ಬಿಜಿಯಾಗಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net