

ಬೆಂಗಳೂರು: ಕೆಲ ವರ್ಷಗಳ ಹಿಂದೆ ಅಪರಿಚಿತ ಹುಡುಗ - ಹುಡುಗಿ ಸಾರ್ವಜನಿಕವಾಗಿ ಕಾಣಿಸಿಕೊಂಡರೆ ಅಥವಾ ಮಾತನಾಡಿದರೆ ತಪ್ಪು ಎಂಬ ಮನಸ್ಥಿತಿ/ಕಲ್ಪನೆ ಇತ್ತು. ಆದರೆ ಈಗ ಕಾಲ ಬದಲಾಗಿದೆ. ಆಧುನಿಕತೆಯ ಸೋಗಿನಲ್ಲಿ ಸಿಲುಕಿ, ಡೇಟಿಂಗ್ ಹೆಸರಿನಲ್ಲಿ ಕೆಲ ಯುವಕ-ಯುವತಿಯರು ಎಲ್ಲೆಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ನಗರದ ಕೆಲ ಜನರಿಗೆ ಇದು ಮಾಮೂಲು ಎಂಬಂತಾಗಿದೆ.
ಇದನ್ನೇ ಬಂಡವಾಳ ಮಾಡಿಕೊಂಡಿರುವ ಸಾಕಷ್ಟು ಕಂಪೆನಿಗಳು ಯುವ ಸಮೂಹವನ್ನು ಡೇಟಿಂಗ್ ಜಾಲದಲ್ಲಿ ಸಿಕ್ಕಿ ಹಾಕಿಕೊಳ್ಳುವಂತೆ ಮಾಡುತ್ತಿವೆ. ಇದಕ್ಕೆ ಈ ಹಿಂದೆ ಸಾಕಷ್ಟು ಸಾಕ್ಷಿಗಳೂ ಲಭ್ಯವಾಗಿವೆ. ಡೇಟಿಂಗ್ ಆ್ಯಪ್ಗಳ ಮೂಲಕ ಅಪರಿಚಿತ ಯುವಕ-ಯುವತಿಯರು ಪರಿಚಿತರಾಗುತ್ತಿದ್ದಾರೆ. ಇದೀಗ ರಾಜ್ಯ ರಾಜಧಾನಿ ಬೆಂಗಳೂರಿಗೆ ಸ್ಪೀಡ್ ಡೇಟಿಂಗ್ ಕಾಲಿಟ್ಟಿದೆ!
ಪ್ರಸ್ತುತ ಮುಂದುವರಿದ ನಗರ ಪ್ರದೇಶಗಳಲ್ಲಿ ಸ್ಪೀಡ್ ಡೇಟಿಂಗ್ ಎಂಬುದು ಬಹು ಜನಪ್ರಿಯವಾಗಿದೆ. ಇದೊಂದು ಬಹಿರಂಗ ಕಾರ್ಯಕ್ರಮವಾಗಿದ್ದು, ಯುವಕ-ಯುವತಿಯರಿಗೆ ಪರಸ್ಪರ ಭೇಟಿಯಾಗಿ ಪರಿಚಿತರಾಗುವ ಅವಕಾಶ ಕಲ್ಪಿಸಿಕೊಡುತ್ತದೆ. ಹಲವಾರು ಕಂಪೆನಿಗಳು ಪ್ರಮುಖ ನಗರಗಳ ರೆಸ್ಟೋರೆಂಟ್, ಕೆಫೆ, ಬಾರ್, ಉದ್ಯಾನವನಗಳಂತಹ ಸ್ಥಳಗಳಲ್ಲಿ ಸ್ಪೀಡ್ ಡೇಟಿಂಗ್ ಈವೆಂಟ್‌ಗಳನ್ನು ಆಯೋಜಿಸುತ್ತಿವೆ.
ಹೆಸರು ನೋಂದಾಯಿಸಿಕೊಂಡ ಯುವಕ-ಯುವತಿಯರಿಗೆ ಅಭಿರುಚಿ ಮತ್ತು ವ್ಯಕ್ತಿತ್ವಕ್ಕೆ ಹೊಂದಿಕೊಳ್ಳುವಂತಹ ವ್ಯಕ್ತಿಗಳನ್ನು ಆರಿಸಿಕೊಳ್ಳುವ ಅವಕಾಶವನ್ನು ಸ್ಪೀಡ್ ಡೇಟಿಂಗ್ ಮಾಡಿಕೊಡುತ್ತದೆ. ಕೆಲವು ಬಾರಿ ಆನ್‌ಲೈನ್‌ನಲ್ಲೂ ಈವೆಂಟ್ ಆಯೋಜಿಸಲಾಗಿರುತ್ತದೆ. ಇದೀಗ ಈ ಈವೆಂಟ್ ಬೆಂಗಳೂರಿನಲ್ಲೂ ಆಯೋಜನೆಗೊಂಡಿದ್ದು, ಸಾಕಷ್ಟು ಚರ್ಚೆಯಾಗುತ್ತಿದೆ.
ಹೆಚ್ಚು ಸಮಯ ಕಾಯದೆ ಯುವಕ-ಯುವತಿಯನ್ನು ಆಯ್ಕೆ ಮಾಡಿಕೊಂಡು ಬೇಗನೇ ಡೇಟಿಂಗ್ ಶುರು ಮಾಡುವುದೇ ಫಾಸ್ಟ್ ಡೇಟಿಂಗ್ ಕಲ್ಪನೆ. ಬೆಂಗಳೂರಿನಲ್ಲಿ ಆಯೋಜನೆಯಾಗಿರುವ ಈವೆಂಟ್ ಕುರಿತ ಜಾಹೀರಾತಿನ ಇನ್ಸ್ಟಾಗ್ರಾಂ ಪೋಸ್ಟ್ ವೈರಲ್ ಆಗಿದೆ.
ಫಾಸ್ಟ್ ಡೇಟಿಂಗ್ನಲ್ಲಿ ಭಾಗವಹಿಸಲು ಯುವಕ-ಯುವತಿಯರಿಗೆ ನಿರ್ಧರಿಸಲಾಗಿರುವ ಟಿಕೆಟ್ ದರದ ಕಾರಣಕ್ಕೆ ಸಾಕಷ್ಟು ಚರ್ಚೆಯಾಗುತ್ತಿದೆ. ಈ ಈವೆಂಟ್‌ನಲ್ಲಿ ಪಾಲ್ಗೊಳ್ಳಲು ಯುವಕರಿಗೆ 1499 ರೂ. ನಿಗದಿಯಾಗಿದ್ದರೆ, ಯುವತಿಯರಿಗೆ ಕೇವಲ 99 ರೂ. ಬುಕ್ ಮೈ ಶೋ ಮೂಲಕ ಟಿಕೆಟ್‌ಗಳನ್ನು ಖರೀದಿಸಬಹುದು ಎಂದು ಜಾಹೀರಾತಿನಲ್ಲಿ ತಿಳಿಸಲಾಗಿದೆ. ಇದರ ಬಗ್ಗೆ ಜಾಲತಾಣಗಳಲ್ಲಿ ಪರ ವಿರೋಧ ಚರ್ಚೆ ನಡೆಯುತ್ತಿದೆ.