8 ವರ್ಷದ ಬಾಲಕನ ಆಧಾರ್ ಕಾರ್ಡ್​ನಲ್ಲಿ ದಾಖಲೆ ಎಲ್ಲವೂ ಸರಿಯಾಗಿದೆ; ಆದರೆ….

Adhar Card
Published on

ಮಹಾರಾಷ್ಟ್ರ: ದೇಶದ ಪ್ರತಿಯೊಬ್ಬ ನಾಗರೀಕ ಆಧಾರ್ ಕಾರ್ಡ್ ಪಡೆದುಕೊಳ್ಳುವುದು ಕಡ್ಡಾಯ. ಹೀಗಾಗಿ ಎಲ್ಲರೂ ಗುರುತಿನ ಕಾರ್ಡ್ ಮಾಡಿಸಿಕೊಳ್ಳುತ್ತಿರುತ್ತಾರೆ. ಈ ಸಂದರ್ಭದಲ್ಲಿ ಕಣ್ತಪ್ಪಿನಿಂದ ಕೆಲವೊಂದು ದೋಷಗಳು ಉಂಟಾಗಿ, ಆಧಾರ್ ಕಾರ್ಡ್​ನಲ್ಲಿ ತಪ್ಪಾದ ಮಾಹಿತಿ ದಾಖಲಾಗಿರುವ ಘಟನೆಗಳು ಈ ಹಿಂದೆ ಸಾಕಷ್ಟು ಬಾರಿ ನಡೆದಿವೆ. ಬಳಿಕ ಆಗಿರುವ ಸಮಸ್ಯೆಯನ್ನು ಸರಿಪಡಿಸಲು ಹೆಣಗಾಡಬೇಕಾದ ಪರಿಸ್ಥಿತಿ ಬಂದೊದಗುತ್ತದೆ.

ಇದೀಗ ಮಹಾರಾಷ್ಟ್ರದ ಚಂದ್ರಾಪುರದಲ್ಲಿ 8 ವರ್ಷದ ಬಾಲಕನೊಬ್ಬನ ಆಧಾರ್ ಕಾರ್ಡ್​ನಲ್ಲಿ ಎಡವಟ್ಟಾಗಿದೆ. ಹೆಸರು, ವಿಳಾಸ ಎಲ್ಲವೂ ಸರಿಯಾಗಿ ದಾಖಲಾಗಿ ಕಾರ್ಡ್ ಕೈ ಸೇರಿದೆ. ಆದರೆ ಫೋಟೋದಲ್ಲಿ ವ್ಯತ್ಯಾಸವಾಗಿದ್ದು, ಅದನ್ನು ಸರಿ ಪಡಿಸಲು ಬಾಲಕನ ತಾಯಿ ಇದೀಗ ಕಚೇರಿಯಿಂದ ಕಚೇರಿಗೆ ಅಲೆದು ಸುಸ್ತಾಗಿದ್ದಾರೆ.

ಹೌದು, ಆಧಾರ್ ಕಾರ್ಡ್​ನಲ್ಲಿ ಬಾಲಕ ಜಿಗಲ್ ಜೀವನ್ ಸಾವ್ಸಕಡೆ ಫೋಟೋ ಬದಲಿಗೆ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ಫೋಟೋ ಅಚ್ಚೊತ್ತಿದೆ. ಚಿಮೂರ್ ತಾಲೂಕಿನ ಶಂಕರಪುರದ ಶಿಬಿರವೊಂದರಲ್ಲಿ ತಾಯಿ ಮಗನ ಆಧಾರ್ ಕಾರ್ಡ್ ಮಾಡಿಸಿಕೊಂಡಿದ್ದರು. ಆಶ್ಚರ್ಯವೆಂದರೆ ದೇವೇಂದ್ರ ಫಡ್ನವೀಸ್ ಅವರ ಭಾವಚಿತ್ರ ಇರುವ ಆಧಾರ್ ಕಾರ್ಡ್​ನ್ನೇ ಎಲ್ಲಾ ಸರ್ಕಾರಿ ದಾಖಲೆಗಳಿಗೆ ಈವರೆಗೆ ಬಳಸಿಕೊಂಡಿದ್ದಾರೆ.

ಬಾಲಕ ಜಿಗಲ್ ಜೀವನ್ ಸಾವ್ಸಕಡೆ ಹುಟ್ಟಿದ ಒಂದು ವರ್ಷದ ನಂತರ ಆಧಾರ್ ಕಾರ್ಡ್ ಮಾಡಿಸಿಕೊಳ್ಳಲಾಗಿದ್ದು, ಮಗುವಿನ ಫೋಟೋ ಬದಲು ದೇವೇಂದ್ರ ಫಡ್ನವೀಸ್ ಫೋಟೋ ಪ್ರಿಂಟ್ ಆಗಿದೆ. ಸದ್ಯ ತಾಯಿ ಆಧಾರ್ ಕಾರ್ಡ್ ನವೀಕರಿಸಲು ಓಡುತ್ತಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net