ಮಲತಂದೆಯಿಂದ ಮಗನ ಮೇಲೆ ಚಾಕುವಿನಿಂದ ನಿರಂತರ ದಾಳಿ: ಕಾರಣ ಕೇಳಿದ್ರೆ ಶಾಕ್​ ಆಗ್ತೀರಾ!

China 1
Published on

ಬೀಜಿಂಗ್​: ಕ್ಷುಲ್ಲಕ ಕಾರಣವೊಂದಕ್ಕೆ ಶುರುವಾದ ಮಾತಿನ ಚಕಮಕಿ ವಿಕೋಪಕ್ಕೆ ತಿರುಗಿ 65 ವರ್ಷದ ವ್ಯಕ್ತಿಯೊಬ್ಬ ತನ್ನ ಮಲಮಗನಿಗೆ ಅನೇಕ ಬಾರಿ ಚಾಕುವಿನಿಂದ ಇರಿದು ಗಂಭೀರವಾಗಿ ಗಾಯಗೊಳಿಸಿದ ಘಟನೆ ಚೀನಾದಲ್ಲಿ ನಡೆದಿದೆ.

ಸಂತ್ರಸ್ತನ ಹೆಸರು ಅಪರಿಚತವಾಗಿಯೇ ಉಳಿದಿದೆ. ಶೌಚಗೃಹದಲ್ಲಿ ನಿತ್ಯಕರ್ಮ ಮುಗಿಸಿದ ಬಳಿಕ ಸರಿಯಾಗಿ ನೀರು ಹಾಕದ ಮಲಮಗನ ದುರಾಭ್ಯಾಸವನ್ನು ಪ್ರಶ್ನಿಸಿದಾಗ ಇಬ್ಬರ ನಡುವೆ ವಾಗ್ವಾದ ಶುರುವಾಗಿದೆ. ಈ ವೇಳೆ ನಿನ್ನ ತಾಯಿಗೆ 20ಕ್ಕೂ ಅಧಿಕ ವ್ಯಕ್ತಿಯ ಜತೆ ಸಂಬಂಧವಿತ್ತು ಎಂದು ಮಲಮಗನನ್ನು ಕೆಣಕಿದ್ದಾನೆ. ಬಳಿಕ ಇಬ್ಬರ ನಡುವಿನ ಮಾತಿನ ಚಕಮಕಿ ವಿಕೋಪಕ್ಕೆ ತಿರುಗಿ ಮಲತಂದೆ ಚಾಕುವಿನಿಂದ ಮಗನಿಗೆ ಸಾಕಷ್ಟು ಬಾರಿ ಇರಿದಿದ್ದಾನೆ.

ಮಗನಿಗೆ ಮುಖ ಹಾಗೂ ಬಲಭಾಗದ ಕಿವಿಯು 15 ಸೆಂಟಿಮೀಟರಿನಷ್ಟು ಸೀಳಿದೆ. ಅಲ್ಲದೆ, ತನ್ನನ್ನು ತಾನು ರಕ್ಷಿಸಿಕೊಳ್ಳುವ ಪ್ರಯತ್ನದಲ್ಲಿ ಆತನ ಕೈಗಳಿಗೂ ಗಾಯವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾನೆ. ಸದ್ಯ ಮಲತಂದೆಯನ್ನು ಪೊಲೀಸರು ಬಂಧಿಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಅಂದಹಾಗೆ ಈ ಘಟನೆ ಮೇ 1ರಂದು ನೈರುತ್ಯ ಚೀನಾದ ಚಾಂಗ್ಕಿಂಗ್ ನಗರದಲ್ಲಿ ನಡೆದಿದೆ. ಈ ಬಗ್ಗೆ ಮಾತನಾಡಿರುವ ಆರೋಪಿ ಪತ್ನಿ ಲೀ, ಮದುವೆಯಾದಗಿನಿಂದ ನನ್ನ ಪತಿ ಸಂಶಯ ಪಿಶಾಚಿಯಾಗಿದ್ದಾರೆ. ವಿವಾಹವಾಗಿ ಹತ್ತು ವರ್ಷಗಳು ಕಳೆದಿವೆ. ಆದರೆ, ಮಗನ ಮೇಲೆ ಹೀಗೆಲ್ಲಾ ಹಲ್ಲೆ ಮಾಡುವ ಮಟ್ಟಿಗೆ ಅವರೇಕೆ ನಡೆದುಕೊಳ್ಳುತ್ತಾರೆ ಎಂದು ನನಗಿನ್ನು ಅರ್ಥವಾಗಿಲ್ಲ ಎಂದಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net