Maha Kumbh Mela 2025 : ವಿಶ್ವದ ಅತಿದೊಡ್ಡ ಧಾರ್ಮಿಕ ಉತ್ಸವ “ಮಹಾ ಕುಂಭಮೇಳ” ಉತ್ತರ ಪ್ರದೇಶದ ಪ್ರಯಾಗ್‌ರಾಜ್ ನಗರದ ಪವಿತ್ರ ತ್ರಿವೇಣಿ ಸಂಗಮದಲ್ಲಿ ಇಂದು (ಜ.13) ಬೆಳಗ್ಗೆ ಆರಂಭವಾಗಿದೆ.
ಪುಷ್ಯ ಹುಣ್ಣಿಮೆಯ ದಿನವಾದ ಸೋಮವಾರ ಮುಂಜಾನೆಯಿಂದಲೇ ಲಕ್ಷಾಂತರ ಭಕ್ತರು ತ್ರಿವೇಣಿ ಸಂಗಮಕ್ಕೆ ಆಗಮಿಸಿ ಪವಿತ್ರ ಸ್ನಾನ ಮಾಡುತ್ತಿದ್ದಾರೆ. ಭಕ್ತರ ಪ್ರಾರ್ಥನೆಯಿಂದ ಪ್ರಯಾಗ್‌ರಾಜ್ ನಗರವೂ ಪ್ರಕಾಶಮಾನವಾಗಿ ಬೆಳಗುತ್ತಿದೆ. ಮೊದಲ ದಿನವೇ ಒಂದು ಕೋಟಿಗೂ ಹೆಚ್ಚು ಭಕ್ತರು ಗಂಗೆಯಲ್ಲಿ ಪವಿತ್ರ ಸ್ನಾನ ಮಾಡುತ್ತಾರೆ ಎಂದು ಅಂದಾಜಿಸಲಾಗಿದೆ. ಆದಾಗ್ಯೂ, ಬೆಳಗ್ಗೆ 7.30 ರವರೆಗೆ 35 ಲಕ್ಷ ಜನರು ಪವಿತ್ರ ಸ್ನಾನ ಮಾಡಿದ್ದಾರೆ ಎಂದು ಪ್ರಯಾಗ್‌ರಾಜ್ ಅಧಿಕಾರಿಗಳು ತಿಳಿಸಿದ್ದಾರೆ.
#MahaKumbhMela2025 | Uttar Pradesh: A large number of people arrive in Prayagraj to take a holy dip in Triveni Sangam – a sacred confluence of rivers Ganga, Yamuna and ‘mystical’ Saraswati as today, January 13 – Paush Purnima marks the beginning of the 45-day-long #MahaKumbh2025 pic.twitter.com/pXzeEr4SgF
— ANI (@ANI) January 13, 2025
ಅಂದಹಾಗೆ ಮಹಾ ಕುಂಭಮೇಳವು ಇಂದಿನಿಂದ ಫೆಬ್ರವರಿ 26 ರವರೆಗೆ 45 ದಿನಗಳ ಕಾಲ ನಡೆಯಲಿದೆ. ಈ ವರ್ಷ ಮಹಾ ಕುಂಭಮೇಳಕ್ಕೆ 40 ಕೋಟಿಗೂ ಹೆಚ್ಚು ಜನರು ಬರುವ ನಿರೀಕ್ಷೆ ಇದೆ ಎಂದು ಉತ್ತರ ಪ್ರದೇಶ ಸರ್ಕಾರ ಅಂದಾಜಿಸಿದೆ.
ಈ ಮಹಾ ಕುಂಭಮೇಳವು ಪ್ರತಿ 12 ವರ್ಷಗಳಿಗೊಮ್ಮೆ ನಡೆಯುತ್ತದೆ. ಕುಂಭಮೇಳಕ್ಕೆ ಪ್ರಪಂಚದಾದ್ಯಂತದ ಸಾಧು-ಸಂತರು ಮತ್ತು ಭಕ್ತರು ಬರುತ್ತಿದ್ದಾರೆ. ಹತ್ತು ಸಾವಿರ ಎಕರೆಗಳಲ್ಲಿ ಕುಂಭಮೇಳಕ್ಕಾಗಿ ವಿಶೇಷ ವ್ಯವಸ್ಥೆಯನ್ನು ಮಾಡಲಾಗಿದೆ. ಬರುವ ಯಾತ್ರಿಕರು ಯಾವುದೇ ಅನಾನುಕೂಲತೆಯನ್ನು ಎದುರಿಸದಂತೆ ನೋಡಿಕೊಳ್ಳಲು 1.6 ಲಕ್ಷ ಡೇರೆಗಳು ಮತ್ತು 1.5 ಲಕ್ಷ ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಭದ್ರತೆಗಾಗಿ 55 ಪೊಲೀಸ್ ಠಾಣೆಗಳನ್ನು ಸ್ಥಾಪಿಸಲಾಗಿದೆ ಮತ್ತು 45 ಸಾವಿರ ಪೊಲೀಸರನ್ನು ನಿಯೋಜಿಸಲಾಗಿದೆ. ಕನ್ನಡ ಸೇರಿದಂತೆ ಪ್ರಾದೇಶಿಕ ಮತ್ತು ಅಂತಾರಾಷ್ಟ್ರೀಯ ಭಾಷೆಗಳಲ್ಲಿ ಸೇವೆಗಳನ್ನು ಒದಗಿಸುವ ಕಾಲ್ ಸೆಂಟರ್‌ಗಳನ್ನು ಸಹ ಯುಪಿ ಸರ್ಕಾರ ಸ್ಥಾಪಿಸಿದೆ.
ಗಂಗಾ, ಯಮುನಾ ಮತ್ತು ಸರಸ್ವತಿ ಎಂಬ ಮೂರು ನದಿಗಳ ಸಂಗಮವನ್ನು ತ್ರಿವೇಣಿ ಸಂಗಮ ಎಂದು ಕರೆಯಲಾಗುತ್ತದೆ. ಈ ಮೂರು ನದಿಗಳು ಪ್ರಯಾಗ್‌ರಾಜ್‌ನ ಸಂಗಮದಲ್ಲಿ ಸಂಗಮಿಸುತ್ತವೆ. ಇದು ಪ್ರಯಾಗ್‌ರಾಜ್ ಅನ್ನು ಪ್ರಸಿದ್ಧ ಯಾತ್ರಾ ಸ್ಥಳವನ್ನಾಗಿ ಮಾಡಿದೆ. ಮಹಾ ಕುಂಭಮೇಳದಲ್ಲಿ ಶಾಹಿ ಸ್ನಾನವು ವಿಶೇಷ ಮಹತ್ವವನ್ನು ಹೊಂದಿದೆ. ಇದನ್ನು ಅಮೃತ ಸ್ನಾನವೆಂದು ಸಹ ಕರೆಯುತ್ತಾರೆ. ಶಾಹಿ ಸ್ನಾನದ ಸಮಯದಲ್ಲಿ ಪವಿತ್ರ ನದಿಗಳಲ್ಲಿ ಸ್ನಾನ ಮಾಡುವುದರಿಂದ ಪಾಪಗಳು ತೊಳೆದು ಪುಣ್ಯ ಪ್ರಾಪ್ತಿಯಾಗುತ್ತದೆ ಎಂದು ನಂಬಲಾಗಿದೆ.
ಮಹಾಕುಂಭಮೇಳಕ್ಕಾಗಿ ರೈಲ್ವೆ ಇಲಾಖೆಯು 3,000 ವಿಶೇಷ ರೈಲುಗಳನ್ನು ನಿಯೋಜಿಸಿದೆ. ಈ ರೈಲುಗಳು ಒಟ್ಟು 13,000 ಕ್ಕೂ ಹೆಚ್ಚು ಟ್ರಿಪ್‌ಗಳನ್ನು ಮಾಡುತ್ತವೆ. ಪ್ರಯಾಗ್‌ರಾಜ್ ಜಂಕ್ಷನ್ ಜೊತೆಗೆ ಎಂಟು ಉಪ ನಿಲ್ದಾಣಗಳನ್ನು ಸಹ ನಿರ್ಮಿಸಲಾಗಿದೆ. ಕೇಂದ್ರ ಪ್ರವಾಸೋದ್ಯಮ ಸಚಿವಾಲಯವು ಮಹಾ ಕುಂಭಮೇಳಕ್ಕೆ 1.5 ಮಿಲಿಯನ್‌ಗಿಂತಲೂ ಹೆಚ್ಚು ವಿದೇಶಿ ಪ್ರವಾಸಿಗರು ಭೇಟಿ ನೀಡಲಿದ್ದಾರೆ ಎಂದು ಅಂದಾಜಿಸಿದೆ. ವಿದೇಶಿ ಅತಿಥಿಗಳನ್ನು ಗಮನದಲ್ಲಿಟ್ಟುಕೊಂಡು ಪ್ರವಾಸೋದ್ಯಮ ಸಚಿವಾಲಯವು ಆಯುರ್ವೇದ, ಯೋಗ, ಪಂಚಕರ್ಮದಂತಹ ಸೌಲಭ್ಯಗಳನ್ನು ಹೊಂದಿರುವ ಟೆಂಟ್ ಸಿಟಿಯನ್ನು ಸ್ಥಾಪಿಸಿದೆ. ಭಾರತೀಯ ಸಾಂಸ್ಕೃತಿಕ ಪರಂಪರೆಯನ್ನು ಪ್ರದರ್ಶಿಸಲು ಮಹಾ ಕುಂಭಮೇಳದ ಹತ್ತು ಎಕರೆ ಪ್ರದೇಶದಲ್ಲಿ ‘ಕಲಾಗ್ರಾಮ’ವನ್ನು ಸಹ ನಿರ್ಮಿಸಲಾಗಿದೆ.
ಮಹಾ ಕುಂಭಮೇಳವು ಕೊನೆಯ ದಿನವಾದ ಶಿವರಾತ್ರಿಯೊಂದಿಗೆ ಕೊನೆಗೊಳ್ಳುತ್ತದೆ. ಆ ದಿನ, ಭಕ್ತರು ಸ್ನಾನ ಮಾಡಲು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆಂದು ಅಂದಾಜಿಸಲಾಗಿದೆ. (ಏಜೆನ್ಸೀಸ್)
ಅಯ್ಯೋ ದುರ್ವಿಧಿಯೇ… ಪಿಸ್ತಾ ಸಿಪ್ಪೆ ಗಂಟಲಲ್ಲಿ ಸಿಲುಕಿ 2 ವರ್ಷದ ಮಗು ದುರಂತ ಸಾವು! Pistachio shell
ವಿರಾಟ್ ಕೊಹ್ಲಿ ಕಂಡರೆ ಅಂಬಾಟಿ ರಾಯುಡುಗೇಕೆ ಕೋಪ? ಕೊನೆಗೂ ಸಿಕ್ತು ಅಚ್ಚರಿಯ ಉತ್ತರ! Virat Kohli