Glenn Maxwell : ಬಿಗ್ ಬ್ಯಾಷ್ ಲೀಗ್ ( BBL ) ಭಾಗವಾಗಿ ಜನವರಿ 12ರಂದು ನಡೆದ ಪಂದ್ಯದಲ್ಲಿ ಗ್ಲೇನ್ ಮ್ಯಾಕ್ಸ್‌ವೆಲ್ ಸ್ಫೋಟಕ ಆಟವಾಡುವ ಮೂಲಕ ಮತ್ತೊಮ್ಮೆ ಕ್ರಿಕೆಟ್ ಜಗತ್ತಿನ ಗಮನ ಸೆಳೆದಿದ್ದಾರೆ. ಅಲ್ಲದೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡದ ಅಭಿಮಾನಿಗಳು ಚಿಂತಿಸುವಂತೆ ಮಾಡಿದ್ದಾರೆ.
ಮೆಲ್ಬೋರ್ನ್ ಸ್ಟಾರ್ಸ್ ತಂಡದ ಪರ ಆಡುತ್ತಿರುವ ಮ್ಯಾಕ್ಸ್‌ವೆಲ್, ಮೆಲ್ಬೋರ್ನ್ ರೆನೆಗೇಡ್ಸ್ ವಿರುದ್ಧದ ಪಂದ್ಯದಲ್ಲಿ ಅಬ್ಬರಿಸಿ ಬೊಬ್ಬಿರಿದರು. ತಮ್ಮ ತಂಡವು ಸಂಕಷ್ಟದಲ್ಲಿದ್ದಾಗ (45/4) ಆರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಬಂದ ಮ್ಯಾಕ್ಸ್‌ವೆಲ್ ಕೇವಲ 52 ಎಸೆತಗಳಲ್ಲಿ 10 ಸಿಕ್ಸರ್‌ಗಳು ಮತ್ತು 4 ಬೌಂಡರಿಗಳ ಸಹಾಯದಿಂದ 90 ರನ್ ಗಳಿಸಿದರು.
ನಿಧಾನವಾಗಿ ಇನ್ನಿಂಗ್ಸ್ ಆರಂಭಿಸಿದ ಮ್ಯಾಕ್ಸಿ, ಇನ್ನಿಂಗ್ಸ್‌ನ 16ನೇ ಓವರ್ನಿಂದ ತಮ್ಮ ಗೇರ್ ಬದಲಾಯಿಸಿದರು. ಆಡಂ ಜಂಪಾ ಎಸೆದ 16ನೇ ಓವರ್‌ನಲ್ಲಿ ಒಂದು ಸಿಕ್ಸರ್ ಮತ್ತು ಬೌಂಡರಿ ಬಾರಿಸಿದ ಮ್ಯಾಕ್ಸ್‌ವೆಲ್, ಕೇನ್ ರಿಚರ್ಡ್ಸನ್ ಎಸೆದ ಮುಂದಿನ ಓವರ್‌ನಲ್ಲಿ ಇನ್ನಷ್ಟು ಉದ್ರಿಕ್ತರಾದರು. ಈ ಓವರ್‌ನಲ್ಲಿ ಮ್ಯಾಕ್ಸಿ ಒಂದು ಬೌಂಡರಿ ಮತ್ತು ಎರಡು ಬೃಹತ್ ಸಿಕ್ಸರ್ಗಳನ್ನು ಸಿಡಿಸಿದರು. ಈ ಓವರ್‌ನ ಮೊದಲ ಸಿಕ್ಸರ್ (ಎರಡನೇ ಎಸೆತ) ಬಿಗ್ ಬ್ಯಾಷ್ ಲೀಗ್ ಇತಿಹಾಸದಲ್ಲಿ ಅತಿ ದೊಡ್ಡ ಸಿಕ್ಸರ್ ಎಂದು ದಾಖಲಾಗಿದೆ. ಈ ಸಿಕ್ಸರ್ 122 ಮೀಟರ್ ಪ್ರಯಾಣಿಸಿತು. ಮ್ಯಾಕ್ಸಿಗೂ ಮೊದಲು ಬಿಬಿಎಲ್‌ನಲ್ಲಿ ಅತಿ ದೊಡ್ಡ ಸಿಕ್ಸರ್‌ನ ದಾಖಲೆಯನ್ನು ತಂಡದ ಸಹ ಆಟಗಾರ ಹಿಲ್ಟನ್ ಕಾರ್ಟ್‌ರೈಟ್ ಹೊಂದಿದ್ದರು.
GLENN MAXWELL HITS 122 METER SIX IN BBL. 🤯
– Glenn Maxwell, The Big Show..!!! 🔥pic.twitter.com/zcwV3b28Hd
— Tanuj Singh (@ImTanujSingh) January 12, 2025
ಸದರ್ಲ್ಯಾಂಡ್ ಎಸೆದ ಇನ್ನಿಂಗ್ಸ್‌ನ 18ನೇ ಓವರ್‌ನಲ್ಲಿ ಮ್ಯಾಕ್ಸ್‌ವೆಲ್, ಮೂರು ಬೃಹತ್ ಸಿಕ್ಸರ್‌ಗಳು ಮತ್ತು ಒಂದು ಬೌಂಡರಿಯನ್ನು ಬಾರಿಸಿದರು. ಈ ಓವರ್‌ನಲ್ಲಿ, ಮ್ಯಾಕ್ಸಿ ಮೊದಲ ಮೂರು ಎಸೆತಗಳಲ್ಲಿ ಸಿಕ್ಸರ್ ಸಿಡಿಸಿದರು. 20ನೇ ಓವರ್‌ನ ಮೊದಲ ಎಸೆತದಲ್ಲೇ ಮ್ಯಾಕ್ಸಿ ಔಟಾದರು. 10 ರನ್‌ಗಳ ಕೊರತೆಯಿಂದ ಶತಕ ವಂಚಿತರಾದರು. ಕೇನ್ ರಿಚರ್ಡ್‌ಸನ್ ಮ್ಯಾಕ್ಸಿಯನ್ನು ಕ್ಲೀನ್ ಬೌಲ್ಡ್ ಮಾಡಿದರು.
ಇದನ್ನೂ ಓದಿ: ಪೋಷಕರೇ ಹುಷಾರ್! ಯಾವುದೇ ಕಾರಣಕ್ಕೂ ಮಕ್ಕಳ ಮುಂದೆ ಈ 5 ವಿಚಾರ ಮಾತನಾಡಲೇಬೇಡಿ… Parents Tips
ಮ್ಯಾಕ್ಸಿಯ ಈ ಆರ್ಭಟ ನೋಡಿದ ಆರ್ಸಿಬಿ ಅಭಿಮಾನಿಗಳು ಭಾರಿ ಚರ್ಚೆಗೆ ಇಳಿದಿದ್ದಾರೆ. ಅದೇನೆಂದರೆ, ಆರ್ಸಿಬಿ ತಂಡ ಈ ಬಾರಿಯ ಐಪಿಎಲ್ ಮೆಗಾ ಹರಾಜಿಗೂ ಮುನ್ನ ಮ್ಯಾಕ್ಸ್‌ವೆಲ್ ಅವರನ್ನು ತಂಡದಿಂದ ಕೈಬಿಟ್ಟಿತು. ಅಲ್ಲದೆ, ಹರಾಜಿನಲ್ಲೂ ಕೂಡ ಮ್ಯಾಕ್ಸಿಯನ್ನು ಖರೀದಿ ಮಾಡಲು ಆಸಕ್ತಿ ತೋರಲಿಲ್ಲ. ಏಕೆಂದರೆ, 2024ರ ಐಪಿಎಲ್ನಲ್ಲಿ ಮ್ಯಾಕ್ಸಿ ತುಂಬಾ ಕಳಪೆ ಪ್ರದರ್ಶನ ತೋರಿದ್ದರು. ಆದರೆ, ಈಗ ಬಿಬಿಎಲ್‌ನಲ್ಲಿ ಅಬ್ಬರಿಸಿದ್ದನ್ನು ನೋಡಿ ಅಯ್ಯೋ ಮ್ಯಾಕ್ಸಿಯನ್ನು ಕೈಬಿಟ್ಟು ಆರ್ಸಿಬಿ ತಂಡ ತಪ್ಪು ಮಾಡಿತಾ ಎಂದು ಮಾತನಾಡಿಕೊಳ್ಳುತ್ತಿದ್ದಾರೆ.
ಪಂದ್ಯದ ವಿಚಾರಕ್ಕೆ ಬರುವುದಾದರೆ, ಅಂತಿಮವಾಗಿ ಮೆಲ್ಬೋರ್ನ್ ಸ್ಟಾರ್ಸ್ ತಂಡ 20 ಓವರ್ಗಳಲ್ಲಿ 10 ವಿಕೆಟ್ ನಷ್ಟಕ್ಕೆ 165 ರನ್ ಕಲೆಹಾಕಿತು. ಗುರಿ ಬೆನ್ನತ್ತಿದ ರೆನೆಗೇಡ್ಸ್ ತಂಡ 19.5 ಓವರ್ಗಳಲ್ಲಿ 123 ರನ್ಗೆ ಆಲೌಟ್ ಆಗುವ ಮೂಲಕ ಸೋಲಿಗೆ ಶರಣಾಯಿತು. ರೆನೆಗೇಡ್ಸ್ ಪರ ಜೇಕ್ ಫ್ರೇಸರ್ ಮೆಕ್‌ಗುರ್ಕ್ (19), ವಿಲ್ ಸದರ್ಲ್ಯಾಂಡ್ (15), ಹ್ಯಾರಿ ಡಿಕ್ಸನ್ (13) ಮತ್ತು ಟಿಮ್ ಸೀಫರ್ಟ್ (26) ಬಿಟ್ಟರೆ ಉಳಿದು ಯಾರೊಬ್ಬರು ಕೂಡ ಎರಡಂಕಿ ದಾಟಲಿಲ್ಲ. (ಏಜೆನ್ಸೀಸ್)
ಮಹಿಳೆಯರಲ್ಲಿನ ಕುಡಿತದ ಚಟದ ಹಿಂದಿನ ರಹಸ್ಯ ಕೊನೆಗೂ ಬಹಿರಂಗ! ಎಲ್ಲದಕ್ಕೂ ಆ ಹಾರ್ಮೋನ್ ಕಾರಣ | Alcohol