"ಜಸ್ಟ್​ ಮ್ಯಾರೀಡ್​" ಕಾರಿನ ಹಿಂದೆ ಬಿದ್ದ ಅಧಿಕಾರಿಗಳು: ಮಾಲೀಕನ ಪತ್ತೆಗೆ ಪರದಾಟ!

Just Married
Published on

ಪಲಕ್ಕಾಡ್ (ಕೇರಳ)​: ನಂಬರ್​ ಪ್ಲೇಟ್​ ಬದಲಾಗಿ "ಜಸ್ಟ್​ ಮ್ಯಾರೀಡ್​" ಬೋರ್ಡ್​ ಇರುವ ಐಷಾರಾಮಿ ಕಾರಿನ ಮೇಲೆ ಇದೀಗ ಮೋಟಾರು ವಾಹನ ಇಲಾಖೆಯ ಕಣ್ಣು ಬಿದ್ದಿದೆ. ಆನ್​ಲೈನ್​ನಲ್ಲಿ ಬಂದ ದೂರಿನ ಬಳಿಕ ಕಾರು ಎಲ್ಲರ ಗಮನವನ್ನು ತನ್ನತ್ತ ಸೆಳೆದಿದೆ.

ಕಾರಿನ ವಿಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ದೂರಿನ ಪ್ರಕಾರ ದೃಶ್ಯವನ್ನು ಯಕ್ಕಾರಾ ವಲಯದಲ್ಲಿ ಸೆರೆಹಿಡಿಯಲಾಗಿದೆ. ವಧು-ವರ ಪ್ರಯಾಣಿಸಿರುವ ಕಾರಿನ ಹಿಂಭಾಗದ ವಿಂಡ್​ಶೀಲ್ಡ್​ ಮೇಲೆ ಫೋನ್​ ನಂಬರ್​ ಸಹ ಬರೆಯಲಾಗಿದೆ. ಆದರೆ, ಕಾರಿನ ಮಾಲೀಕ ಯಾರೆಂಬುದನ್ನು ಇನ್ನೂ ಪತ್ತೆಹಚ್ಚಿಲ್ಲ. ಅದರ ಕೆಲಸವೂ ಮುಂದುವರಿದಿದೆ.

ಇನ್ನು ಕೇರಳದ ಪಲಕ್ಕಾಡ್​ ಜಿಲ್ಲೆಯಲ್ಲಿ ಈ ರೀತಿಯ ಐಷಾರಾಮಿ ಕಾರು ತುಂಬಾ ವಿರಳವಾಗಿವೆ. ವಾಹನ ಸಂಬಂಧ ದಾಖಲೆಗಳನ್ನು ಕಲೆಹಾಕುವಲ್ಲಿ ಅಧಿಕಾರಿಗಳು ನಿರತರಾಗಿದ್ದಾರೆ. ತೀವ್ರ ಕುತೂಹಲ ಕೆರಳಿಸಿರುವ ಕಾರಿ ಮೇಲೆ ಇದೀಗ ಎಲ್ಲರ ಕಣ್ಣು ನೆಟ್ಟಿದೆ. ಕಾರು ಆ ಸ್ಥಳದಲ್ಲಿ ಯಾಕೆ ಬಂತು? ಯಾರದಿರಬಹುದು? ಎಂಬ ಪ್ರಶ್ನೆಗಳು ಉದ್ಭವಿಸಿದ್ದು, ತನಿಖೆ ನಡೆಯುತ್ತಿದೆ.

ಕೆಲವು ತಿಂಗಳ ಹಿಂದೆ ಇದೇ ಐಷಾರಾಮಿ ಕಾರೊಂದನ್ನು ಸೆರೆಹಿಡಿಯಲಾಗಿತ್ತು. ತೆರಿಗೆ ಪಾವತಿಸದ ಹಿನ್ನೆಲೆಯನ್ನು ಕಾರನ್ನು ವಶಕ್ಕೆ ಪಡೆದು, ಮಾಲೀಕನ ಬಳಿ ತೆರಿಗೆ ವಸೂಲಿ ಮಾಡಿದ್ದರು. ಅದೇ ಕಾರು ಇದಾಗಿರಬಹುದಾ ಎಂಬ ಸಂಶಯ ಇದೀಗ ಪೊಲೀಸರಿಗೆ ವ್ಯಕ್ತವಾಗಿದ್ದು, ತನಿಖೆ ಮುಂದುವರಿದಿದೆ. ಸದ್ಯ ಕೇರಳದಲ್ಲಿ ಜಸ್ಟ್​ ಮಾರೀಡ್​ ಕಾರು ಭಾರಿ ಸದ್ದು ಮಾಡುತ್ತಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net