ಮಾವನ ವರ್ತನೆಗೆ ಬೇಸತ್ತು ಪೊಲೀಸ್​ ಪತಿಗೆ ಪತ್ರ ಬರೆದು ನವವಿವಾಹಿತೆ ಆತ್ಮಹತ್ಯೆಗೆ ಶರಣು!

Police Couple
Published on

ಮೈಸೂರು: ಮಾವನ ಮೇಲಿನ ಮುನಿಸಿಗೆ ಗಂಡನಿಗೆ ಪತ್ರ ಬರೆದು ಮಹಿಳೆಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ಹೆಬ್ಬಾಳ ಪೊಲೀಸ್ ಬಡಾವಣೆಯಲ್ಲಿ ನಡೆದಿದೆ.

ಚೈತ್ರಾ (25) ಆತ್ಮಹತ್ಯೆ ಮಾಡಿಕೊಂಡವರು. 5 ತಿಂಗಳ ಹಿಂದೆ ಮೋಹನ್ ಆರಾಧ್ಯ‌ ಎಂಬವರನ್ನು ಮದುವೆಯಾಗಿದ್ದ ಚೈತ್ರಾ, 3 ತಿಂಗಳ ಗರ್ಭಿಣಿಯಾಗಿದ್ದರು. ಪತಿ ಮೋಹನ್​ ಮೇಟಗಳ್ಳಿ ಪೊಲೀಸ್ ಠಾಣೆಯಲ್ಲಿ ಕಾನ್‌ಸ್ಟೇಬಲ್ ಆಗಿದ್ದಾರೆ.

ಮದುವೆಯಾದ ದಿನದಿಂದ ಮಾವ ಸರಿಯಾಗಿ ಮಾತನಾಡಿಸಿಲ್ಲ ಎಂದು ಆರೋಪಿಸಿರುವ ಚೈತ್ರಾ, ನನ್ನ ಜತೆಗೆ ನನ್ನ ತಂದೆ ಹಾಗೂ ತಾಯಿಗೂ ಮಾವನಿಂದ ಗೌರವ ಸಿಕ್ಕಿಲ್ಲ. ತವರು ಮನೆಗೆ ಹೋಗುವ ವೇಳೆ ಕೂಡ ಅವಮಾನ ಮಾಡಿದ್ದಾರೆ. ನಿಮ್ಮ ಅಪ್ಪನೇ ನನಗೆ ಹೀಗಾಗಲು ಕಾರಣ ಎಂದು ಚೈತ್ರಾ ದೂರಿದ್ದಾರೆ.

ತನ್ನ ಇಷ್ಟದಂತೆ ಮದುವೆ ಮಾಡಿಕೊಟ್ಟಿಲ್ಲ ಎಂದು ನಿಮ್ಮ ತಂದೆ ಹೇಳಿದ್ದರು. ಆದರೆ ನಮ್ಮ ಮನೆಯವರ ಶಕ್ತಿಯಾನುಸಾರ ಮದುವೆ ಮಾಡಿದ್ದಾರೆ. ನನ್ನ ಈ ಸ್ಥಿತಿಗೆ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ನಿಮ್ಮ ತಂದೆಯೇ ಕಾರಣ ಎಂದು ಮಾವ ಮಲ್ಲಾರಾಧ್ಯ ಮೇಲೆ ಆರೋಪಿಸಿ ಪತ್ರ ಬರೆದು ಚೈತ್ರಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಹೆಬ್ಬಾಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿರುವ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net