

ಲಖನೌ: ಉತ್ತರ ಪ್ರದೇಶದ ರಾಜಧಾನಿ ಲಖನೌನಲ್ಲಿ ಆತಂಕಕಾರಿ ಘಟನೆಯೊಂದು ವರದಿಯಾಗಿದೆ. ಶಾಲಾ ಬಾಲಕಿಗೆ ಪೊಲೀಸ್ ಕಾನ್ಸ್ಟೆಬಲ್ ಓರ್ವ ರಸ್ತೆಯಲ್ಲೇ ಕಿರುಕುಳ ನೀಡಿರುವ ಆಘಾತಕಾರಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಶಾಲಾ ವಿದ್ಯಾರ್ಥಿನಿ ಸೈಕಲ್ ಸವಾರಿಯೊಂದಿಗೆ ಶಾಲೆಗೆ ತೆರಳುವಾಗ ಪೊಲೀಸ್ ಕಾನ್ಸ್ಟೆಬಲ್ ಆಕೆಯನ್ನು ಸ್ಕೂಟರ್ನಲ್ಲಿ ಹಿಂಬಾಲಿಸುತ್ತಿರುವುದು ವಿಡಿಯೋದಲ್ಲಿದೆ. ಇದನ್ನು ದಾರಿಹೋಕರು ರೆಕಾರ್ಡ್ ಮಾಡಿದ್ದಾರೆ. ಪೊಲೀಸ್ ಸಮವಸ್ತ್ರದಲ್ಲೇ ಕಾನ್ಸ್ಟೆಬಲ್ ಈ ಕೃತ್ಯ ಎಸಗಿದ್ದಾನೆ. ಬಾಲಕಿಯನ್ನು ಚುಡಾಯಿಸುವುದನ್ನು ಸಾರ್ವಜನಿಕರು ಪ್ರಶ್ನೆ ಮಾಡಿದಾಗ ಆಕೆ ನನ್ನ ಸ್ನೇಹಿತನ ಮಗಳು ಎಂದು ಸಬೂಬು ಹೇಳಿದ್ದಾರೆ.
ಈ ಘಟನೆ ಕಳೆದ ಮಂಗಳವಾರ ನಡೆದಿದ್ದು, ಬುಧವಾರ ವಿಡಿಯೋ ಜಾಲತಾಣದಲ್ಲಿ ಕಾಣಿಸಿಕೊಂಡ ಬಳಿಕ ಘಟನೆ ಬೆಳಕಿಗೆ ಬಂದಿದೆ. ವಿಡಿಯೋ ಆಧಾರದ ಮೇಲೆ ಕಾಂಟ್ ಪೊಲೀಸ್ ಠಾಣೆಯಲ್ಲಿ ಆರೋಪಿ ಪೊಲೀಸ್ ವಿರುದ್ಧ ಪ್ರಕರಣ ದಾಖಲಾಗಿದ್ದು, ಆತನ ಬಂಧನವೂ ಆಗಿದೆ. ಬಂಧಿತ ಕಾನ್ಸ್ಟೆಬಲ್ ಹೆಸರು ಶಹದತ್ ಅಲಿ. ವಿಡಿಯೋದಲ್ಲಿ ಸ್ಕೂಟರ್ ಮೇಲೆ ನಂಬರ್ ಪ್ಲೇಟ್ ಇಲ್ಲದಿರುವುದು ಕೂಡ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.
ಕಳೆದ ಕೆಲವು ದಿನಗಳಿಂದ ಪೊಲೀಸ್, ಶಾಲಾ ವಿದ್ಯಾರ್ಥಿನಿಯ ಹಿಂದೆ ಬಿದ್ದು, ಕಿರುಕುಳ ನೀಡುತ್ತಿರುವುದು ತಿಳಿದುಬಂದಿದೆ. ಆರೋಪಿಯನ್ನು ಮೋಹನ್ಲಾಲ್ಗಂಜ್ ಪೊಲೀಸ್ ಠಾಣೆಗೆ ಪೋಸ್ಟಿಂಗ್ ಮಾಡಲಾಗಿತ್ತು. ಶಾಲಾ ಬಾಲಕಿಯ ಮೊಬೈಲ್ ನಂಬರ್ಗಾಗಿ ಕಾನ್ಸ್ಟೆಬಲ್ ದುಂಬಾಲು ಬಿದಿದ್ದ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.
ಸದ್ಯ ವಿಡಿಯೋ ವೈರಲ್ ಆಗುತ್ತಿದ್ದು, ಈ ಆಘಾತಕಾರಿ ಘಟನೆಯು ಮತ್ತೊಮ್ಮೆ ಭಾರತದಲ್ಲಿ ಶಾಲಾ ಬಾಲಕಿಯರ ಸುರಕ್ಷತೆಯ ಬಗ್ಗೆ ಕಳವಳವನ್ನು ಹುಟ್ಟುಹಾಕಿದೆ. ನಾಗರಿಕರನ್ನು ರಕ್ಷಿಸಬೇಕಾದ ಪೊಲೀಸ್ ಅಧಿಕಾರಿಯೇ ಇಂತಹ ಕೃತ್ಯ ಎಸಗಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ. (ಏಜೆನ್ಸೀಸ್)