More

    ಒಂದೇ ಜಿಲ್ಲೆಯಲ್ಲಿ 3 ವರ್ಷವಿದ್ದ ಪೊಲೀಸರ ವರ್ಗ; ಚುನಾವಣಾ ಕರ್ತವ್ಯ ನಿಯೋಜನೆಗೆ ಮಾರ್ಗಸೂಚಿ

    ಬೆಂಗಳೂರು: ಚುನಾವಣೆ ವೇಳೆ ಕ್ಷೇತ್ರದ ಮತದಾರರ ಮೇಲೆ ಪ್ರಭಾವ ಬೀರುವ ಸಂಭಾವ್ಯತೆ ಹಿನ್ನೆಲೆಯಲ್ಲಿ ಒಂದೇ ಜಿಲ್ಲೆಯಲ್ಲಿ 3 ವರ್ಷದಿಂದ ಸೇವೆ ಸಲ್ಲಿಸುತ್ತಿರುವ ಅಥವಾ ಸ್ವಂತ ಜಿಲ್ಲೆಯಲ್ಲಿರುವ ಪೊಲೀಸ್ ಅಧಿಕಾರಿಗಳನ್ನು ಎತ್ತಂಗಡಿ ಮಾಡಲಾಗುತ್ತಿದೆ. ಕೇಂದ್ರ ಚುನಾವಣಾ ಆಯೋಗದ ಸೂಚನೆ ಮೇರೆಗೆ ಪೊಲೀಸ್ ಇಲಾಖೆ, ಈಗಾಗಲೇ ಕೆಲ ಅಧಿಕಾರಿಗಳನ್ನು ಬೇರೆಡೆಗೆ ವರ್ಗಾಯಿಸಿದೆ. ಇನ್ನೂ ಕೆಲವರು ನಿಯಮಾವಳಿಗೆ ವಿರುದ್ಧವಾಗಿ ಉಳಿದುಕೊಂಡಿರುವ ಹಿನ್ನೆಲೆಯಲ್ಲಿ ಅವರ ಬದಲಾವಣೆಗೂ ಆದೇಶಿಸಿದೆ.

    ಚುನಾವಣಾ ಕರ್ತವ್ಯಕ್ಕೆ ಪೊಲೀಸ್ ಅಧಿಕಾರಿಗಳನ್ನು ನಿಯೋಜಿಸುವ ಸಂಬಂಧ ಕಡ್ಡಾಯವಾಗಿ ಪಾಲಿಸಬೇಕಾಗಿರುವ ಮಾರ್ಗಸೂಚಿಗಳನ್ನು ಆಯೋಗವು ಪೊಲೀಸ್ ಇಲಾಖೆಗೆ ಕಳುಹಿಸಿಕೊಟ್ಟಿದೆ. ಮಾರ್ಗಸೂಚಿ ಅನ್ವಯ ಡಿವೈಎಸ್ಪಿ, ಇನ್​ಸ್ಪೆಕ್ಟರ್ ಹಾಗೂ ಸಬ್ ಇನ್​ಸ್ಪೆಕ್ಟರ್​ಗಳನ್ನು ವಲಯ ವ್ಯಾಪ್ತಿಯಲ್ಲೇ ಬೇರೆಡೆಗೆ ಸ್ಥಳ ನಿಯೋಜಿಸುವ ಅಧಿಕಾರವನ್ನು ಆಯಾ ವಲಯಗಳ ಐಜಿಪಿಗಳಿಗೆ ನೀಡಲಾಗಿದೆ. ಒಂದು ವೇಳೆ ಪೊಲೀಸ್ ಕಮಿಷನರ್ ವ್ಯಾಪ್ತಿಯಲ್ಲಿ ನಿಯೋಜನೆಗೊಂಡಿದ್ದರೆ ಅಂಥವರನ್ನು ಐಜಿಪಿಗಳೇ ಬೇರೆಡೆಗೆ ನಿಯೋಜಿಸುವಂತೆ ಸೂಚಿಸಲಾಗಿದೆ. ಚುನಾವಣಾ ಆಯೋಗ ಕಳುಹಿಸಿರುವ ಮಾರ್ಗಸೂಚಿ ಪಾಲಿಸುವಂತೆ ಎಲ್ಲ ವಲಯಗಳ ಐಜಿಪಿಗಳಿಗೆ ರವಾನೆ ಮಾಡಿದ್ದು, ಈ ಕುರಿತು ಕೈಗೊಂಡಿರುವ ಕ್ರಮಗಳ ಕುರಿತು ಮಾಹಿತಿ ನೀಡುವಂತೆಯೂ ಡಿಜಿಪಿ ತಿಳಿಸಿದ್ದಾರೆ.

    ಪೊಲೀಸರ ರಾತ್ರಿ ಪ್ರಯಾಣಕ್ಕೆ ನಿರ್ಬಂಧ: ಚುನಾವಣಾ ಕರ್ತವ್ಯಕ್ಕೆ ನೇಮಕಗೊಂಡಿರುವ ಪೊಲೀಸ್ ಅಧಿಕಾರಿ ಅಥವಾ ಸಿಬ್ಬಂದಿ ತುರ್ತು ಸಂದರ್ಭವನ್ನು ಹೊರತುಪಡಿಸಿ ಯಾವುದೇ ಕಾರಣಕ್ಕೂ ರಾತ್ರಿ 11 ಗಂಟೆಯಿಂದ ಬೆಳಗ್ಗೆ 5 ಗಂಟೆಯವರೆಗೆ ಪ್ರಯಾಣ ಬೆಳೆಸಬಾರದು ಎಂದು ಸೂಚನೆ ನೀಡಲಾಗಿದೆ.

    ಭತ್ಯೆ ಬೇಸರ: ಚುನಾವಣಾ ಕೆಲಸಕ್ಕೆ ನಿಯೋಜನೆಗೊಳ್ಳುವ ಪೊಲೀಸರು, ಭತ್ಯೆ ಹೆಚ್ಚಳ ವಿಚಾರದಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ. ಐಪಿಎಸ್ ಅಧಿಕಾರಿಗಳು ಹಾಗೂ ಮೇಲಧಿಕಾರಿಗಳ ಭತ್ಯೆಯಲ್ಲಿ ಮಾತ್ರ ಹೆಚ್ಚಳ ಆಗಿದೆ. ಕೆಳ ಹಂತದ ಅಧಿಕಾರಿ ಮತ್ತು ಸಿಬ್ಬಂದಿ ಭತ್ಯೆ ಏರಿಕೆಯಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಎಸ್ಪಿಗಳಿಗೆ 5,000 ರಿಂದ 7,000 ಸಾವಿರ ರೂ.ಗೆ ಹೆಚ್ಚಾಗಿದೆ. ಇನ್​ಸ್ಪೆಕ್ಟರ್​ಗೆ 700, ಸಬ್ ಇನ್ಸ್ ಪೆಕ್ಟರ್ ಹಂತದ ಅಧಿಕಾರಿಗಳಿಗೆ 500 ರೂ. ಹಾಗೂ ಎಎಸ್​ಐ, ಹೆಡ್ ಕಾನ್​ಸ್ಟೆಬಲ್, ಕಾನ್​ಸ್ಟೆಬಲ್​ಗೆ ದಿನಕ್ಕೆ 500 ರೂ. ಭತ್ಯೆ ಸಿಗಲಿದೆ.

    ಅಭ್ಯರ್ಥಿ ಪರ ಕೆಲಸ ಆರೋಪ: ಅಭ್ಯರ್ಥಿಯ ಪರ ಕೆಲಸ ಮಾಡಿದ ಆರೋಪದಲ್ಲಿ ಬೆಂಗಳೂರು ಸೇರಿ ಕೆಲ ಜಿಲ್ಲೆಗಳಲ್ಲಿದ್ದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯನ್ನು ಚುನಾವಣಾ ನೀತಿಸಂಹಿತೆ ಜಾರಿಯಾದ ಸಂದರ್ಭದಲ್ಲೇ ಚುನಾವಣಾ ಆಯೋಗ ಬೇರೆಡೆಗೆ ವರ್ಗಾವಣೆಗೊಳಿಸಿದೆ. ಮತ್ತೆ ಕೆಲ ಅಧಿಕಾರಿಗಳನ್ನು ಸಚಿವರು ಹಾಗೂ ಶಾಸಕರೇ ತಮ್ಮ ಜಿಲ್ಲೆಗೆ ವರ್ಗಾವಣೆ ಮಾಡಿಸಿಕೊಂಡಿದ್ದ ಮಾಹಿತಿ ಹಿನ್ನೆಲೆಯಲ್ಲಿ ಡಿಸಿಪಿ, ಎಸಿಪಿ ಹಾಗೂ ಇನ್​ಸ್ಪೆಕ್ಟರ್​ಗಳನ್ನು ಆಯೋಗವೇ ಎತ್ತಂಗಡಿ ಮಾಡಿತ್ತು.

    ಮಾರ್ಗಸೂಚಿ ಏನು?

    • ಚುನಾವಣೆ ಕರ್ತವ್ಯಕ್ಕೆ ನೇಮಿಸಲಾದ ಸ್ಥಳವು ನಿಯೋಜಿಸಲಾದ ಪೊಲೀಸ್ ಅಧಿಕಾರಿಯ ಸ್ವಂತ ಜಿಲ್ಲೆಯಾಗಿರಬಾರದು.
    • ನಿಯೋಜಿತ ಅಧಿಕಾರಿಯು (ಡಿವೈಎಸ್ಪಿ, ಇನ್​ಸ್ಪೆಕ್ಟರ್) ಕಳೆದ 4 ವರ್ಷಗಳಲ್ಲಿ ಒಂದೇ ಜಿಲ್ಲೆಯಲ್ಲಿ ಸತತ 3 ವರ್ಷ ಸೇವೆ ಸಲ್ಲಿಸಿರಬಾರದು.
    • ಸಬ್ ಇನ್​ಸ್ಪೆಕ್ಟರ್ ಹುದ್ದೆಯ ಅಧಿಕಾರಿಗಳು ಕಳೆದ 4 ವರ್ಷಗಳಲ್ಲಿ ಒಂದೇ ಪೊಲೀಸ್ ವಿಭಾಗದಲ್ಲಿ ಸತತ 3 ವರ್ಷ ಸೇವೆ ಸಲ್ಲಿಸಿರಬಾರದು.
    • ನಿಯೋಜನೆಗೊಂಡಿರುವ ಸ್ಥಳವು ಈ ಹಿಂದೆ ಕರ್ತವ್ಯ ನಿರ್ವಹಿಸಿದ ಅದೇ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಟ್ಟಿರಬಾರದು.
    • ಹೆಚ್ಚುವರಿಯಾಗಿ ನಿಯೋಜನೆಗೊಂಡಿರುವ ಅಧಿಕಾರಿಗಳು ಮಾರ್ಗಸೂಚಿಯ ಷರತ್ತಿಗೆ ಒಳಪಟ್ಟಿದ್ದಲ್ಲಿ ಅಂತಹವರನ್ನು ವರ್ಗಾಯಿಸಬೇಕು.

    ಎಲೆಕ್ಟ್ರಿಕ್ ದ್ವಿಚಕ್ರವಾಹನಗಳ ಬೆಲೆಯಲ್ಲಿ ಭಾರಿ ಇಳಿಕೆ; ಕಾರಣ ಇದು..

    ಬಿ.ಎಲ್. ಸಂತೋಷ್ ವಿರುದ್ಧ ಸುಳ್ಳು ಸುದ್ದಿ ಸೃಷ್ಟಿಸಿದ್ದ ಯುವಕನ ಬಂಧನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts