More

  ಯಾರ್ಯಾರಿಗೆ ಒಲಿಯಲಿದೆ ಸಿಂಹಾಸನ?: ದೇವೇಗೌಡರ ಕೋಟೆ ಭೇದಿಸಲು ಕೈ-ಕಮಲ ಯತ್ನ

  | ರಮೇಶ್ ಹಂಡ್ರಂಗಿ ಹಾಸನ

  ಹಾಸನ ವಿಧಾನಸಭಾ ಕ್ಷೇತ್ರ ಈ ಬಾರಿ ರಾಜ್ಯದಲ್ಲಿ ಭಾರೀ ಸದ್ದು ಮಾಡುತ್ತಿರುವ ಕ್ಷೇತ್ರವಾಗಿದೆ. ಹಲವು ರಾಜಕೀಯ ವಿದ್ಯಮಾನಗಳು, ಹೈಡ್ರಾಮಾಗಳಿಗೆ ಕ್ಷೇತ್ರ ಸಾಕ್ಷಿಯಾಗಿದೆ. ಬಿಜೆಪಿಯ ಹಾಲಿ ಶಾಸಕ ಪ್ರೀತಂ ಜೆ.ಗೌಡ ಕಳೆದ ಆರು ತಿಂಗಳ ಹಿಂದೆ ನೀಡಿದ್ದ ‘ಆ ಒಂದು ಹೇಳಿಕೆ’ ಹಾಸನದ ರಾಜಕೀಯ ಚಿತ್ರಣವನ್ನೇ ಈಗ ಅದಲು-ಬದಲು ಮಾಡುತ್ತಿದೆ.

  ‘ರೇವಣ್ಣ ಅವರೇ ಹಾಸನದಿಂದ ಸ್ಪರ್ಧೆ ಮಾಡಿದರೆ ಅವರ ವಿರುದ್ಧ 50 ಸಾವಿರ ಮತಗಳ ಅಂತರದಿಂದ ಗೆಲುವು ದಾಖಲಿಸುತ್ತೇನೆ. ಇದರಲ್ಲಿ ಒಂದು ಮತ ಕಡಿಮೆಯಾದರೂ ರಾಜೀನಾಮೆ ನೀಡುತ್ತೇನೆ’ ಎಂದು ಪ್ರೀತಂ ಹೇಳಿದ್ದು ರೇವಣ್ಣ ಕುಟುಂಬದ ರಾಜಕೀಯ ಅಸ್ಮಿತೆಯನ್ನೇ ಪ್ರಶ್ನೆ ಮಾಡುವಂತಿತ್ತು. ಇದರಿಂದ ಹಠಕ್ಕೆ ಬಿದ್ದ ರೇವಣ್ಣ ಪತ್ನಿ ಭವಾನಿ ಪ್ರೀತಂ ಗೌಡ ವಿರುದ್ಧ ಕಣಕ್ಕೆ ಇಳಿಯಲು ಸಿದ್ಧರಾದರು. ಈಗಾಗಲೆ ಜೆಡಿಎಸ್ ‘ಕುಟುಂಬ ರಾಜಕೀಯ ಪಕ್ಷ’ ಎಂಬ ಹಣೆಪಟ್ಟಿ ಹೊತ್ತಿದ್ದು, ಈಗ ಕುಟುಂಬದ ಮತ್ತೊಬ್ಬ ಸದಸ್ಯರಿಗೆ ಟಿಕೆಟ್ ನೀಡಿದರೆ ತಪ್ಪು ಸಂದೇಶ ಹೋಗುತ್ತದೆ. ಎದುರಾಳಿಗಳಿಗೆ ತಾವೇ ಅಸ್ತ್ರ ಕೊಟ್ಟಂತಾಗುತ್ತದೆ ಎಂಬುದು ದೇವೇಗೌಡ, ಕುಮಾರಸ್ವಾಮಿ ಅವರಿಗೆ ಚೆನ್ನಾಗಿ ಗೊತ್ತು. ಹೀಗಾಗಿ ಭವಾನಿ ಅವರ ಮನವೊಲಿಸಿ ಮಾಜಿ ಶಾಸಕ ಎಚ್.ಎಸ್. ಪ್ರಕಾಶ್ ಮಗ ಎಚ್.ಪಿ. ಸ್ವರೂಪ್​ಗೆ ಟಿಕೆಟ್ ನೀಡಿದರು.

  ಈಗ ಇಡೀ ದೇವೇಗೌಡ ಕುಟುಂಬವೇ ಸ್ವರೂಪ್ ಪರವಾಗಿ ಹಾಸನ ಚುನಾವಣಾ ಅಖಾಡಕ್ಕೆ ಇಳಿದಿದೆ. ಭವಾನಿ ಅವರು ‘ಸ್ವರೂಪ್ ನನ್ನ ಮೂರನೇ ಮಗ ಇದ್ದ ಹಾಗೆ. ಅವನನ್ನು ನೀವು ಗೆಲ್ಲಿಸಿದರೆ ನನ್ನನ್ನೇ ಗೆಲ್ಲಿಸಿದಂತೆ,’ ಎಂದು ನೀಡಿದ ಹೇಳಿಕೆ ಹಾಗೂ ಎಚ್.ಡಿ. ದೇವೇಗೌಡ ಅವರು ಎರಡು ಬಾರಿ ಸ್ವರೂಪ್ ಪರ ಪ್ರಚಾರ ಮಾಡಿದ್ದು ಕ್ಷೇತ್ರದ ರಾಜಕೀಯ ಚಿತ್ರಣವನ್ನೇ ಬದಲಿಸಿದೆ.

  ಸ್ವರೂಪ್ ತಂದೆ ಪ್ರಕಾಶ್ ನಾಲ್ಕು ಬಾರಿ ಜೆಡಿಎಸ್​ನಿಂದ ಶಾಸಕರಾದವರು. ಪ್ರಾಮಾಣಿಕ ಹಾಗೂ ಪಕ್ಷದ ನಿಷ್ಠಾವಂತ ಕಾರ್ಯಕರ್ತರು ಎಂಬ ಹೆಸರು ಪಡೆದ ಇವರು ಯಾವುದೇ ರೀತಿಯಲ್ಲೂ ಅಕ್ರಮದಿಂದ ಹಣ ಮಾಡಿದವರಲ್ಲ ಎಂಬ ಮಾತು ಕ್ಷೇತ್ರದ ಜನರಲ್ಲಿದೆ. ಇದೇ ಅಂಶ ಸ್ವರೂಪ್ ಅವರಿಗೆ ಈಗ ವರವಾಗಿ ಪರಿಣಮಿಸಿದೆ. ಸ್ವರೂಪ್ ಚುನಾವಣಾ ಖರ್ಚು-ವೆಚ್ಚಗಳಿಗೆ ಸ್ನೇಹಿತರೇ ಹಣ ನೀಡುವುದರ ಜತೆಗೆ ಜನರೇ ದೇಣಿಗೆ ನೀಡುತ್ತಿರುವುದು ಅವರ ಮೇಲಿನ ಅಭಿಮಾನ, ಅನುಕಂಪವನ್ನು ಹೆಚ್ಚಿಸಿದೆ. ಈ ಅನುಕಂಪ ಮತವಾಗಿ ಪರಿಣಮಿಸಿದರೆ ಸ್ವರೂಪ್ ಗೆಲುವು ನಿಶ್ಚಿತ ಎಂದು ಹೇಳಲಾಗುತ್ತಿದೆ.

  ಆದರೆ ಕಳೆದ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಯಾರಿಗೂ ಪರಿಚಯವೇ ಇಲ್ಲದ ಪ್ರೀತಂ ಗೌಡ ಹೆಸರು ಈಗ ಜಿಲ್ಲೆಯಲ್ಲಷ್ಟೇ ಅಲ್ಲದೇ ರಾಜ್ಯದ ಜನರಿಗೆ ಗೊತ್ತು. ಜೆಡಿಎಸ್ ಭದ್ರಕೋಟೆಯಲ್ಲಿ ಎಚ್.ಎಸ್. ಪ್ರಕಾಶ್ ಅವರನ್ನು ಸೋಲಿಸಿ ಬೆಳೆದಿದ್ದು ಸೋಜಿಗವೇ ಸರಿ. ಕಳೆದ ಐದು ವರ್ಷಗಳಲ್ಲಿ ಪ್ರೀತಂ ಗೌಡ ಕ್ಷೇತ್ರದಲ್ಲಿ ಇಂತಹ ಅಭಿವೃದ್ಧಿ ಕೆಲಸ ಮಾಡಿಸಿಲ್ಲ ಎಂದು ಹೇಳುವಂತಿಲ್ಲ. ಅಭಿವೃದ್ಧಿಯೇ ಅಜೀರ್ಣವಾಗುವಂತೆ ಕೆಲಸ ಮಾಡಿಸಿದ್ದಾರೆ. ರಸ್ತೆಗಳು, ಚರಂಡಿ, ಬಸ್ ಶೆಲ್ಟರ್, ಪಾರ್ಕ್​ಗಳ ಅಭಿವೃದ್ಧಿ, ಫುಡ್ ಕೋರ್ಟ್​ಗಳು, ಹಕ್ಕು ಪತ್ರ ವಿತರಣೆ ಸೇರಿ ಹತ್ತಾರು ಕೆಲಸ, ಕಾಮಗಾರಿಗಳನ್ನು ಮಾಡಿಸಿದ್ದಾರೆ. ಇದೇ ಅಭಿವೃದ್ಧಿ ವಿಷಯವನ್ನು ಇಟ್ಟುಕೊಂಡು ಮತ ಕೇಳುತ್ತಿದ್ದಾರೆ. ಕ್ಷೇತ್ರದ ಅಭಿವೃದ್ಧಿಗೆ ಸಾವಿರಾರು ಕೋಟಿ ರೂ. ಅನುದಾನ ತಂದು ಕಾಮಗಾರಿಗಳನ್ನು ಮಾಡಿಸಿದ್ದಾರೆ. ಆದರೆ, ಈ ಎಲ್ಲ ಅಭಿವೃದ್ಧಿ ಕಾಮಗಾರಿಗಳಲ್ಲಿ ಅಕ್ರಮದ ಘಮಲಿನ ಆರೋಪ ಕೂಡ ಎಲ್ಲೆಡೆ ಪಸರಿಸಿದೆ. ಕಳೆದ ಐದು ವರ್ಷದಿಂದ ಪ್ರೀತಂ ನೀಡಿದ ಕೆಲವೊಂದು ಹೇಳಿಕೆಗಳು ಈಗ ಅವರಿಗೆ ತಿರುಗುಬಾಣವಾಗಿರುವುದು ಸುಳ್ಳಲ್ಲ.

  ಇನ್ನು ಕಾಂಗ್ರೆಸ್​ನಿಂದ ಸ್ಪರ್ಧೆ ಮಾಡಿರುವ ಬನವಾಸೆ ರಂಗಸ್ವಾಮಿ ಮೊದಲ ಬಾರಿಗೆ ಅಖಾಡಕ್ಕೆ ಇಳಿದು ಹುರುಪಿನಿಂದ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೆ ಹಾಸನ ಕ್ಷೇತ್ರದಲ್ಲಿ ಕಾಂಗ್ರೆಸ್ ಸಂಘಟನೆ ಈವರೆಗೂ ಪ್ರಬಲವಾಗಿ ಕಂಡುಬಂದಿಲ್ಲ. ಆರಂಭದಿಂದಲೂ ಪಕ್ಷ ಸಂಘಟನೆ, ತಳಮಟ್ಟದಲ್ಲಿ ಜನರನ್ನು ತಲುಪಲು ಸಾಧ್ಯವಾಗಿಲ್ಲ.

  ಯಾರ್ಯಾರಿಗೆ ಒಲಿಯಲಿದೆ ಸಿಂಹಾಸನ?: ದೇವೇಗೌಡರ ಕೋಟೆ ಭೇದಿಸಲು ಕೈ-ಕಮಲ ಯತ್ನಬೇಲೂರಿನಲ್ಲಿ ಕೈ-ಕಮಲ ಫೈಟ್

  ಬೇಲೂರು ವಿಧಾನಸಭಾ ಕ್ಷೇತ್ರದಲ್ಲಿ ಹಾಲಿ ಜೆಡಿಎಸ್ ಶಾಸಕರಾಗಿರುವ ಕೆ.ಎಸ್.ಲಿಂಗೇಶ್ ಅವರಿಗೆ ಟಕ್ಕರ್ ನೀಡಲು ಕಾಂಗ್ರೆಸ್ ಹಾಗೂ ಬಿಜೆಪಿ ಅಭ್ಯರ್ಥಿಗಳು ಮುಂದಾಗಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಬಿ. ಶಿವರಾಂ ಅವರಿಗೆ ಅಹಿಂದ ಮತಗಳ ಬೆಂಬಲದ ಜತೆಗೆ ಅನುಭವಿ ರಾಜಕಾರಣಿ ಎಂಬ ಹಣೆಪಟ್ಟಿ ಇದೆ. ಇನ್ನು ಬಿಜೆಪಿಯಿಂದ ಸ್ಪರ್ಧೆ ಮಾಡಿರುವ ಎಚ್.ಕೆ. ಸುರೇಶ್ ಅವರಿಗೆ ಬಿಜೆಪಿ ಸಾಂಪ್ರದಾಯಿಕ ಮತಗಳು ಹಾಗೂ ಪ್ರಧಾನಿ ಮೋದಿ ಅವರೇ ಕ್ಷೇತ್ರಕ್ಕೆ ಬಂದು ಪ್ರಚಾರ ಮಾಡಿರುವುದು ವರದಾನವಾಗಲಿದೆ ಎಂದು ಹೇಳಲಾಗುತ್ತಿದೆ. ಕಳೆದ ಬಾರಿ ಸೋತಿರುವ ಅನುಕಂಪ ಮತ್ತು ಕಳೆದ ಐದು ವರ್ಷಗಳಿಂದ ಕ್ಷೇತ್ರದ ಜನರೊಂದಿಗೆ ಹೊಂದಿರುವ ಒಡನಾಟ ಸುರೇಶ್​ಗೆ ಧನಾತ್ಮಕವಾಗಲಿದೆ ಎನ್ನಲಾಗುತ್ತಿದೆ.

  ಶಿವಲಿಂಗೇಗೌಡರಿಗೆ ಸಂತೋಷ ವಿಘ್ನ!

  ಅರಸೀಕೆರೆ ಕ್ಷೇತ್ರದಲ್ಲಿ ಕಳೆದ ಮೂರು ಚುನಾವಣೆಯಲ್ಲಿ ಜೆಡಿಎಸ್​ನಿಂದ ಗೆಲುವು ಸಾಧಿಸಿದ್ದ ಕೆ.ಎಂ.ಶಿವಲಿಂಗೇಗೌಡ ಈ ಬಾರಿ ಕಾಂಗ್ರೆಸ್ ಪಕ್ಷದಿಂದ ಅಭ್ಯರ್ಥಿಯಾಗಿದ್ದಾರೆ. ಇವರಿಗೆ ಜೆಡಿಎಸ್ ಅಭ್ಯರ್ಥಿಯಾಗಿರುವ ಎನ್.ಆರ್.ಸಂತೋಷ್ ಪ್ರಬಲ ಸ್ಪರ್ಧೆ ಒಡ್ಡಿದ್ದಾರೆ. ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಸಂತೋಷ್​ಗೆ ಕೊನೇ ಘಳಿಗೆಯಲ್ಲಿ ಟಿಕೆಟ್ ಸಿಗಲಿಲ್ಲ. ಆಗ ಜೆಡಿಎಸ್ ಸಂತೋಷ್ ಅವರನ್ನು ಸೆಳೆದು ತಮ್ಮ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕೆ ಇಳಿಸಿದೆ. ಕಳೆದ ಮೂರು ವರ್ಷಗಳಿಂದ ಕ್ಷೇತ್ರದಲ್ಲಿ ಬಿಜೆಪಿ ಸಂಘಟನೆ ಮಾಡಿದ್ದ ಸಂತೋಷ್​ಗೆ ಟಿಕೆಟ್ ತಪ್ಪಿದ್ದು ಬಿಜೆಪಿಯಲ್ಲೇ ಅಸಮಾಧಾನದ ಕೂಗು ಕೇಳಿಬರುತ್ತಿದೆ. ಈಗ ಜೆಡಿಎಸ್ ಸೇರ್ಪಡೆಯಾಗಿರುವುದರಿಂದ ಜೆಡಿಎಸ್ ಸಾಂಪ್ರದಾಯಿಕ ಮತಗಳು ಹಾಗೂ ಲಿಂಗಾಯತರೇ ಅಧಿಕವಾಗಿರುವ ಕ್ಷೇತ್ರದಲ್ಲಿ ಅದೇ ಸಮುದಾಯಕ್ಕೆ ಸೇರಿರುವ ಸಂತೋಷ್​ಗೆ ವರದಾನವಾಗಲಿದೆ ಎಂದು ಹೇಳಲಾಗುತ್ತಿದೆ. ಬಿಜೆಪಿಯಿಂದ ಜಿ.ವಿ.ಬಸವರಾಜು ಕಣದಲ್ಲಿದ್ದಾರೆ.

  ಯಾರ್ಯಾರಿಗೆ ಒಲಿಯಲಿದೆ ಸಿಂಹಾಸನ?: ದೇವೇಗೌಡರ ಕೋಟೆ ಭೇದಿಸಲು ಕೈ-ಕಮಲ ಯತ್ನಸಕಲೇಶಪುರದಲ್ಲಿ ತ್ರಿಕೋನ ಸ್ಪರ್ಧೆ

  ಆಲೂರು-ಸಕಲೇಶಪುರ ಮೀಸಲು ಕ್ಷೇತ್ರದಲ್ಲಿ ಈ ಬಾರಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಹ್ಯಾಟ್ರಿಕ್ ಗೆಲುವು ಸಾಧಿಸಿರುವ ಜೆಡಿಎಸ್ ಅಭ್ಯರ್ಥಿ ಎಚ್.ಕೆ. ಕುಮಾರಸ್ವಾಮಿ ಅವರಿಗೆ ಈ ಸಲ ಕಾಂಗ್ರೆಸ್ ಪಕ್ಷದಿಂದ ಮುರಳಿಮೋಹನ್ ಹಾಗೂ ಬಿಜೆಪಿಯಿಂದ ಸಿಮೆಂಟ್ ಮಂಜು ಪ್ರಬಲ ಸ್ಪರ್ಧೆ ಒಡ್ಡಿದ್ದಾರೆ. ಕ್ಷೇತ್ರದ ಸಮಗ್ರ ಅಭಿವೃದ್ಧಿ ಸಾಧಿಸುವಲ್ಲಿ ಹಾಲಿ ಶಾಸಕರು ವಿಫಲರಾಗಿದ್ದಾರೆ ಎಂಬ ಮಾತುಗಳು ಕ್ಷೇತ್ರದಲ್ಲಿ ಕೇಳಿಬರುತ್ತಿದ್ದು, ಕಾಂಗ್ರೆಸ್-ಬಿಜೆಪಿ ಅಭ್ಯರ್ಥಿಗಳು ಇದರ ಉಪಯೋಗ ಪಡೆದುಕೊಳ್ಳಲು ಮುಂದಾಗಿದ್ದಾರೆ.

  ಅರಕಲಗೂಡಿನಲ್ಲಿ ಚತುಷ್ಕೋನ ಸ್ಪರ್ಧೆ

  ಅರಕಲಗೂಡು ವಿಧಾನಸಭಾ ಕ್ಷೇತ್ರ ಈ ಬಾರಿ ಭಿನ್ನ ಚುನಾವಣೆಗೆ ಸಾಕ್ಷಿಯಾಗಿದೆ. ಜೆಡಿಎಸ್​ನಿಂದ ಎ.ಮಂಜು, ಬಿಜೆಪಿಯಿಂದ ಯೋಗಾ ರಮೇಶ್, ಕಾಂಗ್ರೆಸ್​ನಿಂದ ಎಚ್.ಪಿ. ಶ್ರೀಧರ್​ಗೌಡ ಹಾಗೂ ಪಕ್ಷೇತರವಾಗಿ ಎಂ.ಟಿ. ಕೃಷ್ಣೇಗೌಡ ಸ್ಪರ್ಧೆ ಮಾಡಿದ್ದು, ಇಲ್ಲಿ ಚತುಷ್ಕೋನ ಸ್ಪರ್ಧೆ ಏರ್ಪಟ್ಟಿದೆ. ಕಾಂಗ್ರೆಸ್​ನಿಂದ ಬಂಡಾಯವೆದ್ದು ಪಕ್ಷೇತರವಾಗಿ ಸ್ಪರ್ಧೆ ಮಾಡಿರುವ ಎಂ.ಟಿ. ಕೃಷ್ಣೇಗೌಡ ಅಬ್ಬರದ ಪ್ರಚಾರ ಹಾಗೂ ಕ್ಷೇತ್ರದಲ್ಲಿ ನಿರ್ಣಾಯಕ ಎನಿಸಿರುವ ಕುರುಬ ಸಮುದಾಯದ ಮುಖಂಡರು ಸೇರಿ ಇತರ ನಾಯಕರ ಬೆಂಬಲ ಎದುರಾಳಿಗಳನ್ನು ಕಂಗೆಡಿಸಿದೆ.

  ರೇವಣ್ಣ ವಿರುದ್ಧ ಕೈ ಗೆಲುವು ಸಾಧ್ಯವೇ?

  ಹೊಳೆನರಸೀಪುರವನ್ನು ಕಬ್ಜ ಮಾಡಿಕೊಂಡಿರುವ ಎಚ್. ಡಿ.ರೇವಣ್ಣ ಅವರನ್ನು ಸೋಲಿಸಲು ಕಾಂಗ್ರೆಸ್ ಪುಟ್ಟಸ್ವಾಮಿಗೌಡ ಅವರ ಮೊಮ್ಮಗನನ್ನು ಕಣಕ್ಕೆ ಇಳಿಸಿದೆ. ಐದು ಬಾರಿ ಈ ಕ್ಷೇತ್ರದಿಂದ ಗೆಲುವು ಸಾಧಿಸಿ ಸಂಪೂರ್ಣವಾಗಿ ಹಿಡಿತದಲ್ಲಿ ಇಟ್ಟುಕೊಂಡಿರುವ ಕ್ಷೇತ್ರವನ್ನು ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಶ್ರೇಯಸ್ ಪಟೇಲ್ ಕಸಿದುಕೊಳ್ಳಲು ಸಕಲ ರೀತಿಯಲ್ಲೂ ಪ್ರಯತ್ನಿಸುತ್ತಿದ್ದಾರೆ. ಆದರೆ, ಇದು ಎಷ್ಟರ ಮಟ್ಟಿಗೆ ಸಫಲವಾಗಲಿದೆ ಎಂಬುದನ್ನು ಮೇ 13ರಂದೇ ತಿಳಿದುಕೊಳ್ಳಬೇಕು.

  ಶ್ರವಣಬೆಳಗೊಳದಲ್ಲಿ ಕೈ ಒಗ್ಗಟ್ಟಿನ ಹೋರಾಟ

  ಶ್ರವಣಬೆಳಗೊಳ ಜೆಡಿಎಸ್​ನ ಭದ್ರಕೋಟೆ. ಕಳೆದ ಚುನಾವಣೆಯಲ್ಲಿ ಬರೋಬ್ಬರಿ 53 ಸಾವಿರ ಮತಗಳ ಅಂತರದಿಂದ ಗೆಲುವು ದಾಖಲಿಸಿದ್ದ ಸಿ.ಎನ್. ಬಾಲಕೃಷ್ಣ ಈ ಬಾರಿ ಚುನಾವಣೆಯಲ್ಲಿ ಎಷ್ಟು ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆ ಎಂದು ಈ ಮೊದಲು ಕ್ಷೇತ್ರದ ಜನರು ಮಾತನಾಡಿಕೊಳ್ಳುತ್ತಿದ್ದರು. ಆದರೆ, ಕಾಂಗ್ರೆಸ್​ನ ಎಂ.ಎ. ಗೋಪಾಲಸ್ವಾಮಿ ಅವರ ವ್ಯವಸ್ಥಿತ ಹಾಗೂ ಸಂಘಟನಾತ್ಮಕ ಪೈಪೋಟಿಯಿಂದ ಬಾಲಕೃಷ್ಣ ಅವರು ಅವಾಕ್ಕಾಗಿರುವುದು ಸುಳ್ಳಲ್ಲ.

  ಎಲೆಕ್ಟ್ರಿಕ್ ದ್ವಿಚಕ್ರವಾಹನಗಳ ಬೆಲೆಯಲ್ಲಿ ಭಾರಿ ಇಳಿಕೆ; ಕಾರಣ ಇದು..

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts