More

    ನಕ್ಕರೆ ಕಣ್ಣೀರೂ ಆನಂದಬಾಷ್ಪ!; ನಗುವಿನಿಂದ ಅಂದ-ಆನಂದ-ಆಹ್ಲಾದ

    ಇಂದು ವಿಶ್ವ ನಗು ದಿನ. ನಕ್ಕರೆ ಏನೆಲ್ಲ ಪ್ರಯೋಜನಗಳಿವೆ, ನಗು ನಮ್ಮ ದೇಹ-ಮನಸ್ಸಿನ ಮೇಲೆ ಬೀರುವ ಸಕಾರಾತ್ಮಕ ಪರಿಣಾಮಗಳೇನು, ಖುಷಿಯಾಗಿದ್ದಾಗ ಮಾತ್ರ ನಗು ಬರುತ್ತದೆಯೇ, ಕೃತಕವಾಗಿ ನಗುವುದರಿಂದಲೂ ಲಾಭವಿದೆಯೇ ಎಂಬೆಲ್ಲ ಸಂಗತಿಗಳತ್ತ ಈ ಸಂದರ್ಭದಲ್ಲಿ ಒಂದು ಸುತ್ತು.

    | ರವಿಕಾಂತ ಕುಂದಾಪುರ

    😄 ಏನಿದು ವಾಕ್ಯದ ಆರಂಭದಲ್ಲೇ ಸ್ಮೈಲಿ ಎಂದು ಅಚ್ಚರಿಯಾಯಿತಾ! ಇಂದು ವಿಶ್ವ ನಗು ದಿನ, ಹೀಗಾಗಿ ಒಂದು ಸ್ಮೈಲಿಯಿಂದಲೇ ಬರಹ ಆರಂಭಿಸೋಣ ಅಂತ. ಏನನ್ನೇ ಆದರೂ ನಗುವಿನಿಂದ ಆರಂಭಿಸಿದರೆ ಅದು ಒಳ್ಳೆಯ ಆರಂಭ ಆಗಿರುತ್ತದೆ. ಆರಂಭ-ಅಂತ್ಯ ಮಾತ್ರವಲ್ಲ, ಒಂದು ಪ್ರಕ್ರಿಯೆಯ ಉದ್ದಕ್ಕೂ ನಗುನಗುತ್ತ ತೊಡಗಿಸಿಕೊಂಡರೆ ಅಂಥ ಕೆಲಸ ಸಲೀಸಾಗಿ ಮುಗಿದಿರುತ್ತದೆ. ನಗುವಿಗೆ ಮನಸು-ಹೃದಯ ಮಾತ್ರವಲ್ಲ ಎಲ್ಲ ಭಾರವನ್ನೂ ಹಗುರವಾಗಿಸುವ ಶಕ್ತಿ ಇದೆ. ನಗುವಿಗೆ ಮುಖದ ಅಂದ, ಮನದ ಆನಂದ, ದೇಹದ ಆಹ್ಲಾದವನ್ನು ಹೆಚ್ಚಿಸುವ ಶಕ್ತಿ ಇದೆ.

    ನಗು-ಮಗು: ‘ಅಷ್ಟಕ್ಕೂ ನಗು ಹುಟ್ಟಿದ್ದು ಎಲ್ಲಿ?’ ಎಂದರೆ ಅದು ನಾವು ಮಗುವಾಗಿದ್ದಾಗಿಂದಲೇ ಎನ್ನಬಹುದು. ತಾಯಿಯ ಗರ್ಭದಲ್ಲಿರುವಾಗಲೇ ಮಗುವಿನ ಮುಖದಲ್ಲಿ ನಗು ಮೂಡಿರುವುದು ಸ್ಕಾ್ಯನ್​ಗಳಲ್ಲಿ ಕಂಡುಬಂದಿದೆ. ಹೀಗಾಗಿ ನಗು ನಮ್ಮ ಜನ್ಮಸಿದ್ಧ ಹಕ್ಕು. ನಗು ಸಹಜ, ಸ್ವಭಾವತಃ ಬರುವಂಥದ್ದು ಎನ್ನಲಾಗಿದೆ. ನಾವು ಯಾರನ್ನೋ ನೋಡಿ ನಗುವುದನ್ನು ಕಲಿಯುವುದಿಲ್ಲ. ಅಂಧ ಮಗು ಕೂಡ ನಗುವುದು ಇದಕ್ಕೆ ನಿದರ್ಶನ ಎನ್ನುತ್ತಾರೆ ತಜ್ಞರು. ವಿಕಾಸವಾದವನ್ನು ಪ್ರತಿಪಾದಿಸಿದ ಚಾರ್ಲ್ಸ್ ಡಾರ್ವಿನ್ ಕೂಡ ನಗುವಿನ ಬಗ್ಗೆ ವಿಷಯ ಮಂಡಿಸಿದ್ದಾನೆ. ಫೇಷಿಯಲ್ ಫೀಡ್​ಬ್ಯಾಕ್ ರೆಸ್ಪಾನ್ಸ್ ಥಿಯರಿಯಲ್ಲಿ ಆತ ಮುಖದ ಮೂಲಕ ಭಾವನೆಗಳನ್ನು ವ್ಯಕ್ತಪಡಿಸುವುದು ಮನುಷ್ಯನ ಜನ್ಮಜಾತ ಸ್ವಭಾವ ಎಂದಿದ್ದಾನೆ. ಸಾಮಾನ್ಯವಾಗಿ ನಾವು ಸಂತಸದಲ್ಲಿದ್ದಾಗಷ್ಟೇ ನಗು ಮೂಡುವುದು ಎಂದಾಗಿ ದ್ದರೂ, ಸುಮ್ಮನೆ ನಕ್ಕರೂ ಅದು ನಮ್ಮಲ್ಲಿ ಸಂತಸವನ್ನು ಮೂಡಿಸುತ್ತದೆ ಎಂದೂ ಈ ಥಿಯರಿಯಲ್ಲಿ ಹೇಳಲಾಗಿದೆ.

    ಮಾನಸಿಕ ಆರೋಗ್ಯ

    ಮನುಷ್ಯನಲ್ಲಿ ಸಂತೋಷ ಉಂಟಾದಾಗ ಸ್ರವಿಸಲ್ಪಡುವ ಹಾರ್ವೇನ್​ಗಳು ನಕ್ಕಾಗಲೂ ಸ್ರವಿಸಲ್ಪಡುತ್ತವೆ. ನಗಲಾರಂಭಿಸಿದಾಗ, ಡೋಪಮೈನ್, ಎಂಡೋಮಾರ್ಫಿನ್, ಸೆರೊಟೊನಿನ್ ಸೇರಿದಂತೆ ನ್ಯೂರೋಕೆಮಿಕಲ್ಸ್ ಬಿಡುಗಡೆ ಆಗುತ್ತವೆ. ಇವು ಮನಸನ್ನು ಹಿತವಾಗಿ ಇರಿಸುತ್ತವೆ ಎನ್ನುತ್ತಾರೆ ಉಡುಪಿಯ ಎ.ವಿ.ಬಾಳಿಗ ಆಸ್ಪತ್ರೆಯ ನಿರ್ದೇಶಕ, ಮನೋವೈದ್ಯ ಡಾ.ಪಿ.ವಿ.ಭಂಡಾರಿ. ಎರಡು ಸಾವಿರ ಚಾಕೋಲೇಟ್ ಬಾರ್​ಗಳನ್ನು ತಿಂದಾಗ ಮಿದುಳಿನಲ್ಲಿ ಉಂಟಾಗುವ ಪ್ರಚೋದನೆಗೆ ಬರೀ ಒಂದು ನಗುವಿನಲ್ಲಿ ಉಂಟಾಗುವ ಪ್ರಚೋದನೆ ಸಮವಾಗಬಲ್ಲದು ಎಂಬುದಾಗಿ ಬ್ರಿಟಿಷ್ ಸಂಶೋಧಕರು ಕಂಡುಕೊಂಡಿದ್ದಾರೆ.

    ಚೆಂದದ ಹಲ್ಲು, ಅಂದದ ನಗು

    ‘ಹಲ್ಲಿದ್ದಾಗ ಕಡಲೆ ಇಲ್ಲ, ಕಡಲೆ ಇದ್ದಾಗ ಹಲ್ಲಿಲ್ಲ’ ಎಂಬ ಮಾತಿದೆ. ನಗುವಿನ ವಿಚಾರದಲ್ಲೂ ಇದು ಹೌದು ಎಂದರೆ ಹೌದು, ಅಲ್ಲ ಎಂದರೂ ಹೌದು. ಏಕೆಂದರೆ ಹಲ್ಲಿಲ್ಲದ ಮಗು, ಹಲ್ಲಿರದ ವೃದ್ಧರ ನಗು ಚಂದವೇ ಕಾಣಿಸುತ್ತದೆ. ಆದರೆ, ನಗುವಿನ ವಿಷಯದಲ್ಲಿ ದಂತಪಂಕ್ತಿ ಮಹತ್ವವಾದುದು ಎಂಬುದೂ ಸತ್ಯ. ‘ದಂತಪಂಕ್ತಿ ಚೆನ್ನಾಗಿದ್ದಾಗ, ಆರೋಗ್ಯಯುತವಾಗಿದ್ದಾಗ ಮನುಷ್ಯ ನಕ್ಕರೆ ಇನ್ನೂ ಚೆನ್ನಾಗಿರುತ್ತದೆ. ಆದರೆ, ದಂತಪಂಕ್ತಿಯಲ್ಲಿ ಲೋಪದೋಷ ಇರುವ ಕೆಲವರು ಅದೇ ಕಾರಣಕ್ಕೆ ನಗಲು ಹಿಂಜರಿಯುತ್ತಾರೆ. ಹೀಗಾಗಿ, ಹಲ್ಲುಗಳ ಆರೋಗ್ಯ ಕೂಡ ನಗುವಿನಲ್ಲಿ ಮಹತ್ವದ ಪಾತ್ರ ವಹಿಸುತ್ತದೆ, ನಗು ಚೆನ್ನಾಗಿರಬೇಕು ಎನ್ನುವವರು ದಂತರಕ್ಷಣೆಗೂ ಗಮನಹರಿಸಬೇಕು’ ಎನ್ನುತ್ತಾರೆ ದಂತತಜ್ಞೆ ಡಾ.ಜೆ.ಶಿಲ್ಪಾ.

    ನಕ್ಕರೆ ಕಣ್ಣೀರೂ ಆನಂದಬಾಷ್ಪ!; ನಗುವಿನಿಂದ ಅಂದ-ಆನಂದ-ಆಹ್ಲಾದನಗು ಒಂದು ಅತ್ಯುತ್ತಮ ಮದ್ದು ಎಂಬ ಮಾತು ವೈದ್ಯಕೀಯ ಕ್ಷೇತ್ರದಲ್ಲಿದೆ. ನಗು ದೈಹಿಕ ಆರೋಗ್ಯಕ್ಕಷ್ಟೆ ಅಲ್ಲದೆ, ಮಾನಸಿಕ ಆರೋಗ್ಯಕ್ಕೂ ಅತಿಮುಖ್ಯ. ನಗುವುದರಿಂದ ನಿರಾಳತೆ ಉಂಟಾಗುತ್ತದೆ, ಮನಸ್ಸು ನಿರುಮ್ಮಳವಾಗುತ್ತದೆ.

    | ಡಾ.ಪಿ.ವಿ.ಭಂಡಾರಿ ನಿರ್ದೇಶಕ, ಡಾ.ಎ.ವಿ.ಬಾಳಿಗ ಆಸ್ಪತ್ರೆ, ಉಡುಪಿ.

    ನಕ್ಕರೆ ಕಣ್ಣೀರೂ ಆನಂದಬಾಷ್ಪ!; ನಗುವಿನಿಂದ ಅಂದ-ಆನಂದ-ಆಹ್ಲಾದನಗು ಆರೋಗ್ಯಕಾರಿ. ಆದರೆ, ಆತ್ಮವಿಶ್ವಾಸದ ನಗುವಿಗೆ ಹಲ್ಲುಗಳ ಆರೋಗ್ಯ ಪೂರಕ. ದಂತಗಳು ಆರೋಗ್ಯಯುತವಾಗಿ ಇದ್ದವರು ಅಂಥ ನಗು ಬೀರಬಲ್ಲರು. ದಂತ ಮುಖದ ಆಕಾರ ಕಾಪಾಡುವ ಜತೆಗೆ ನಗುವನ್ನು ಆಕರ್ಷಕವಾಗಿಸಬಲ್ಲದು. ಆಕರ್ಷಕ ನಗು ಆತ್ಮವಿಶ್ವಾಸವನ್ನೂ ಹೆಚ್ಚಿಸುತ್ತದೆ.

    | ಡಾ.ಜೆ.ಶಿಲ್ಪಾ ದಂತತಜ್ಞೆ

    ಸ್ನಾಯು ಸಂಚಲನ

    ನಗುವಾಗ ಮುಖದ ಎರಡು ಸ್ನಾಯುಗಳು ಮುಖ್ಯವಾಗಿ ಬಳಕೆಯಾಗುತ್ತವೆ ಎಂದು ಫ್ರೆಂಚ್ ವಿಜ್ಞಾನಿ ಗ್ವಿಲೌಮ್ ಡುಷೆನ್ನೆ ಕಂಡುಕೊಂಡಿದ್ದಾರೆ. ಬಾಯಿಯ ಅಂಚನ್ನು ನಿಯಂತ್ರಿಸುವ ಝೈಗೊಮ್ಯಾಟಿಕ್ ಮೇಜರ್ ಎಂಬ ಸ್ನಾಯು ಹಾಗೂ ಕಣ್ಣಿನ ಸುತ್ತಲಿನ ಆರ್ಬಿಕುಲೇರಿಸ್ ಆಕುಲೈ ಸ್ನಾಯು ನಗುವಾಗ ಬಳಕೆ ಆಗುತ್ತದೆ. ಈ ಪೈಕಿ ಝೈಗೊಮ್ಯಾಟಿಕ್ ಮೇಜರ್ ನಮ್ಮ ಇಚ್ಛೆಗೆ ತಕ್ಕಂತೆ ಚಲಿಸಬಹುದಾಗಿದ್ದರೆ ಆರ್ಬಿಕುಲೇರಿಸ್ ಆಕುಲೈ ನಕ್ಕಾಗ ಮಾತ್ರ ಚಲನೆಗೆ ಒಳಗಾಗುತ್ತದೆ ಎಂದು ಈ ವಿಜ್ಞಾನಿ ಹೇಳಿದ್ದಾರೆ.

    ಇದನ್ನೂ ಓದಿ: ಬೆರಳ ತುದಿಯಲ್ಲೇ ಇದೆ ಬದಲಿಸುವ ಶಕ್ತಿ; ಚುನಾವಣೆ ಸುಧಾರಣೆಗೆ ಆಗಲಿ ಬದಲಾವಣೆ..

    ಆಯುರ್ವರ್ಧಕ: ನಗು ಆರೋಗ್ಯವನ್ನಷ್ಟೇ ಅಲ್ಲ ಆಯುಷ್ಯವನ್ನೂ ವರ್ಧಿಸುತ್ತದೆ ಎನ್ನುವುದಕ್ಕೂ ಪೂರಕ ಅಂಶಗಳಿವೆ. 2016ರ ಏಪ್ರಿಲ್​ನಲ್ಲಿ ಪ್ರಕಟಿತ ನಾರ್ವೆಯ ಅಧ್ಯಯನವೊಂದರ ಪ್ರಕಾರ, ಉತ್ತಮ ಹಾಸ್ಯಪ್ರಜ್ಞೆ ಇರುವ ಮಹಿಳೆಯರು ಉಳಿದವರಿಗಿಂತ ಹೆಚ್ಚು ಕಾಲ ಬದುಕಿದ್ದಾರೆ. ಅಂಥವರು ಹೃದಯಾಘಾತದಿಂದ ಸಾವಿಗೀಡಾಗುವ ಸಾಧ್ಯತೆ ಶೇ. 73ರಷ್ಟು ಕಡಿಮೆ ಇರುತ್ತದೆ ಮತ್ತು ಸೋಂಕಿಗೆ ಒಳಗಾಗಿ ಸಾಯುವ ಸಾಧ್ಯತೆ ಶೇ. 83ರಷ್ಟು ಕಡಿಮೆ ಇರುತ್ತದೆ.

    ಮುಂಜಾನೆ ಮಂದಹಾಸ

    ನಗುನಗುತ್ತ ಖುಷಿಯಾಗಿ ದಿನ ಕಳೆಯಬೇಕು ಎಂಬುದು ಆರೋಗ್ಯ ಹಾಗೂ ಅಧ್ಯಾತ್ಮ ಪರಿಣತರ ಸಲಹೆ. ಅದರಲ್ಲೂ ಬೆಳಗ್ಗೆ ಎದ್ದತಕ್ಷಣವೇ ನಗಬೇಕು ಎನ್ನುತ್ತಾರೆ ಈಶ ಫೌಂಡೇಷನ್​ನ ಸದ್ಗುರು. ‘ಜಗತ್ತಿನಲ್ಲಿ ನಿನ್ನೆ ಇದ್ದ ಎಷ್ಟೋ ಜನ ಇಂದಿಲ್ಲ. ಆದರೆ, ಇಂದು ಬೆಳಗ್ಗೆ ನಾವು ಎಚ್ಚರಗೊಂಡು ಎದ್ದಿದ್ದೇವೆ ಎಂದರೆ ಅದಕ್ಕಿಂತ ದೊಡ್ಡ ಅದೃಷ್ಟ, ಖುಷಿ ಬೇರೆ ಇದೆಯೇ? ಇಂಥ ಬೆಳಗು, ಬದುಕಲು ಇನ್ನೊಂದು ದಿನ ಸಿಕ್ಕರುವ ಖುಷಿಗಾದರೂ ಒಮ್ಮೆ ನಗದಿದ್ದರೆ ಹೇಗೆ? ಬೆಳಗ್ಗೆ ಎದ್ದತಕ್ಷಣ ಪಕ್ಕದಲ್ಲಿ/ಎದುರಲ್ಲಿ ಯಾರಾದರೂ ಇದ್ದರೆ ಅವರತ್ತ ಒಂದು ನಗುಬೀರಿ, ಯಾರೂ ಇಲ್ಲದಿದ್ದರೂ ನಿಮ್ಮಷ್ಟಕ್ಕೇ ಒಮ್ಮೆ ನಕ್ಕುಬಿಡಿ. ಇದನ್ನೇ ಅಭ್ಯಾಸ ಮಾಡಿಕೊಂಡು ಬಿಡಿ, ಬದುಕಲ್ಲಿ ಬಹಳಷ್ಟು ಬದಲಾವಣೆ ಆಗುತ್ತದೆ’ ಎನ್ನುತ್ತಾರೆ ಸದ್ಗುರು.

    ಖುಷಿಯಾಗಿದ್ದರಷ್ಟೇ ನಗಬಹುದಾ?

    ನಗು ಸಂತಸದ ಅಭಿವ್ಯಕ್ತಿ. ಅಂದರೆ ಸಾಮಾನ್ಯವಾಗಿ ನಾವು ಸಂತೋಷದಲ್ಲಿದ್ದಾಗಷ್ಟೇ ನಗು ಮೂಡುತ್ತದೆ. ಹಾಗಂತ ಖುಷಿಯಾಗಿದ್ದರಷ್ಟೇ ನಗಬಹುದಾ? ಡಾ.ಹ್ಯಾರಿ ವಿಚೆಲ್ ಎಂಬವರು ಈ ಬಗ್ಗೆ ಅಧ್ಯಯನವನ್ನೇ ಮಾಡಿದ್ದಾರೆ. ಕಂಪ್ಯೂಟರ್ ಮೂಲಕ ಕ್ವಿಜ್ ನಡೆಸಿದ್ದ ಅವರು, ಸ್ಪರ್ಧಿಗಳು ತಪ್ಪು ಉತ್ತರವನ್ನು ನೀಡಿದಾಗಲೇ ಹೆಚ್ಚು ನಗುವಿನ ಪ್ರತಿಕ್ರಿಯೆ ನೀಡಿದ್ದನ್ನು ಕಂಡುಕೊಂಡಿದ್ದರು. ಜತೆಗೆ ನಗುವಿನ ಕುರಿತ ಇತರ ಅಧ್ಯಯನಗಳನ್ನು ತುಲನೆ ಮಾಡಿರುವ ಅವರು, ‘ನಗು ಒಂದು ಸಾಮಾಜಿಕ ಪ್ರತಿಕ್ರಿಯೆ, ನಗಲು ಇಷ್ಟೇ ಸಂತೋಷ ಸಾಕು ಎಂಬುದೂ ಇಲ್ಲ ಅಥವಾ ನಗಲಿಕ್ಕೆ ಸಂತೋಷವೇ ಬೇಕು ಎಂಬುದೂ ಇಲ್ಲ. ಬಲವಂತವಾಗಿ ನಕ್ಕರೂ ಅದು ನಮ್ಮಲ್ಲಿ ಖುಷಿ ಉಂಟಾಗಿಸಬಲ್ಲದು’ ಎಂದು ಅಭಿಪ್ರಾಯಪಟ್ಟಿದ್ದಾರೆ. ಇನ್ನೊಂದು ಬ್ರಿಟಿಷ್ ಅಧ್ಯಯನದ ಪ್ರಕಾರ, ಕೋಪಿಸಿಕೊಳ್ಳಲಾಗದಂತೆ ಮುಖಕ್ಕೆ ಬೊಟಾಕ್ಸ್ ಮಾಡಿಕೊಂಡರೂ ಸಂತೋಷವಾಗಿರಬಹುದು ಎಂದಿದೆ. ಅರ್ಥಾತ್, ಕೃತಕವಾಗಿ ನಕ್ಕರೂ ಕಡೆಗೆ ಅದು ಸಹಜ ಖುಷಿಯಾಗಿಯೇ ಪರಿಣಮಿಸಬಲ್ಲದು.

    ಇದನ್ನೂ ಓದಿ: ಜನಸಂಖ್ಯೆ ಸಂಪತ್ತೋ ಆಪತ್ತೋ?; ಭಾರತ ಈಗ ಅತ್ಯಧಿಕ ಜನಸಂಖ್ಯೆಯ ದೇಶ

    ಕಚೇರಿಗೂ ಕಳೆ

    ನಗು ವೃತ್ತಿಗೆ ಸಂಬಂಧಿಸಿದಂತೆಯೂ ಮಹತ್ವದ್ದು. ‘ಹ್ಯಾಪಿನೆಸ್ ಎಟ್ ವರ್ಕ್’ ಎಂಬ ಕೃತಿಯ ಕರ್ತೃ ಜೆಸ್ಸಿಕಾ ಪ್ರೖೆಸ್ ಜೋನ್ಸ್, ನಗು ಕ್ರಿಯಾಶೀಲತೆಯನ್ನು ಹೆಚ್ಚಿಸುವ ಜತೆಗೆ ಕಚೇರಿಗೂ ಕಳೆ ತಂದುಕೊಡಬಲ್ಲದು ಎಂದು ಅಧ್ಯಯನದಲ್ಲಿ ಪ್ರತಿಪಾದಿಸಿದ್ದಾರೆ. 79 ದೇಶಗಳ 3 ಸಾವಿರ ಜನರನ್ನು ಅಧ್ಯಯನಕ್ಕೆ ಒಳಪಡಿಸಿರುವ ಅವರು, ಸಂತೋಷದಲ್ಲಿರುವ ಉದ್ಯೋಗಿಗಳು ಶೇ.180ರಷ್ಟು ಹೆಚ್ಚು ಶಕ್ತರಾಗಿರುತ್ತಾರೆ, ತಮ್ಮ ಕೆಲಸದ ಬಗ್ಗೆ ಶೇ.155ರಷ್ಟು ಸಂತೋಷ ಹೊಂದಿರುತ್ತಾರೆ. ಮಾತ್ರವಲ್ಲ ಸಂತಸದಿಂದಿರದ ಸಹೋದ್ಯೋಗಿಗಳಿಗೆ ಹೋಲಿಸಿದರೆ ಸಂತಸದಲ್ಲಿರುವವರು ದುಪ್ಪಟ್ಟು ಅಂದರೆ ವಾರದ ಶೇ.80 ಭಾಗವನ್ನು ಉದ್ಯೋಗಕ್ಕೆ ಸಂಬಂಧಿತ ಕಾರ್ಯಗಳಲ್ಲೇ ಸಂತೋಷವಾಗಿ ಕಳೆದಿರುತ್ತಾರೆ ಎಂದಿದ್ದಾರೆ. ಅಲ್ಲದೆ ಕೆಲಸದ ವೇಳೆ ನಗು ಪ್ರಯೋಜನಕಾರಿ ಎಂದೂ ಹೇಳಿದ್ದಾರೆ.

    ನಗುವೇ ಕವಚ, ಗುರಾಣಿ, ಆಯುಧ

    ನಗು ಗೆಲುವಿನ ಆಯುಧ, ಸೋಲನ್ನು ಎದುರಿಸುವ ಗುರಾಣಿ. ಮಾತ್ರವಲ್ಲ, ನೋವನ್ನು ಮುಚ್ಚಿಟ್ಟುಕೊಳ್ಳುವ ಕವಚ ಕೂಡ. ಒಂದು ನಗುವಿನಿಂದ ಯಾರ ಮನಸ್ಸನ್ನು ಕೂಡ ಗೆಲ್ಲಬಹುದು. ಮನಸ್ಸನ್ನು ನೋಯಿಸಿದವರನ್ನೂ ಒಂದು ನಗುವಿನಿಂದ ಕ್ಷಮಿಸಬಹುದು. ಅಷ್ಟೇ ಏಕೆ.. ನಮ್ಮನ್ನು ಸೋಲಿಸಿದವರ ಎದುರೇ ಒಮ್ಮೆ ನಕ್ಕುಬಿಟ್ಟರೆ, ಅವರು ಗೆದ್ದ ಖುಷಿಯನ್ನೇ ಕಳೆದುಕೊಳ್ಳುತ್ತಾರೆ. ಇದು ನಗುವಿಗಿರುವ ತಾಕತ್ತು. ಸೋಲು-ಗೆಲುವಲ್ಲಷ್ಟೇ ಅಲ್ಲ, ನೋವು-ನಲಿವಲ್ಲೂ ನಗುವೇ ನಿರ್ಣಾಯಕ. ಇಡೀ ದೇಹದ ನೋವನ್ನು ತುಟಿಗಳೆರಡೇ ಮರೆಮಾಚಬಲ್ಲವು. ಅರ್ಥಾತ್ ಎಷ್ಟೇ ನೋವಿದ್ದರೂ ಒಂದು ನಗು ಬೀರಿ ಅದನ್ನು ಮರೆಯಾಗಿಸಿಕೊಳ್ಳಬಹುದು. ದುಃಖದಲ್ಲಂತೂ ಬಿಕ್ಕಿಬಿಕ್ಕಿ ಅತ್ತವರೂ ಕೊನೇಲಿ ನಕ್ಕು ಹಗುರಾಗುವುದಿದೆ. ಏಕೆಂದರೆ ಕಣ್ಣೀರನ್ನೂ ಆನಂದಬಾಷ್ಪವಾಗಿಸುವ ಶಕ್ತಿ ಇರುವುದು ನಗುವಿಗೆ ಮಾತ್ರ.

    ಎಲೆಕ್ಟ್ರಿಕ್ ದ್ವಿಚಕ್ರವಾಹನಗಳ ಬೆಲೆಯಲ್ಲಿ ಭಾರಿ ಇಳಿಕೆ; ಕಾರಣ ಇದು..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts