More

    ಜನಸಂಖ್ಯೆ ಸಂಪತ್ತೋ ಆಪತ್ತೋ?; ಭಾರತ ಈಗ ಅತ್ಯಧಿಕ ಜನಸಂಖ್ಯೆಯ ದೇಶ

    ಇತ್ತೀಚೆಗೆ ವಿಶ್ವದಲ್ಲೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶ ಎಂಬ ಪಟ್ಟವನ್ನು ಭಾರತ ಪಡೆಯಿತು. ಇದರ ಕುರಿತು ಸಾಕಷ್ಟು ವಿಶ್ಲೇಷಣೆಗಳು ನಡೆಯುತ್ತಿವೆ. ಜನಸಂಖ್ಯೆ ದೇಶದ ಅಭಿವೃದ್ಧಿಗೆ ಸಹಕಾರಿ ಎಂದು ಕೆಲವರು ಹೇಳಿದರೆ, ತೊಂದರೆಗಳೇ ಹೆಚ್ಚು ಎಂಬುದು ಇನ್ನು ಕೆಲವರ ವಾದ. ಆದರೆ ನಿಜವಾಗಿಯೂ ದೇಶದ ಜನಸಂಖ್ಯೆ ಅಭಿವೃದ್ಧಿಗೆ ವರವೋ ಅಥವಾ ಶಾಪವೋ ಎಂದು ರ್ಚಚಿಸುವುದೇ ಈ ಕಿರುಬರಹದ ಮುಖ್ಯ ಉದ್ದೇಶ.

    | ಎನ್. ಗುರುನಾಗನಂದನ

    ವಿಶ್ವದಲ್ಲೇ ಅತಿ ಹೆಚ್ಚು ಜನರಿರುವ ದೇಶ ನಮ್ಮದು. ಅದಾಗ್ಯೂ ಸಾಕಷ್ಟು ಬಾರಿ ನಮ್ಮ ಕೆಲಸ-ಕಾರ್ಯಗಳಿಗೆ ಜನರಿಲ್ಲ ಎಂದು ಒದ್ದಾಡುತ್ತೇವೆ. ಜನ್ಮಪ್ರಮಾಣ ಕುಗ್ಗಿಸಲು ಸಾಕಷ್ಟು ಕ್ರಮಗಳನ್ನು ತೆಗೆದುಕೊಂಡರೂ ಅವು ಪೂರ್ಣ ಫಲ ನೀಡಲಿಲ್ಲ. ಆದರೆ ಜನಸಂಖ್ಯೆ ಹೆಚ್ಚಳ ಒಂದು ಸಮಸ್ಯೆ ಎಂದು ಭಾವಿಸದೆ, ಅದರ ಪ್ರಯೋಜನಗಳ ಕಡೆ, ಅದನ್ನು ಸದ್ಬಳಕೆ ಮಾಡಿಕೊಳ್ಳುವತ್ತ ಹೆಚ್ಚು ಗಮನ ನೀಡದೆ ಇದ್ದಿದ್ದು ವಿಷಾದಕರ. ನಮನ್ನು ಹೆಚ್ಚು ಜನರು ಇಷ್ಟ ಪಡಬೇಕು, ನಮ್ಮ ಪೋಸ್ಟ್​ಗೆ ಜಾಸ್ತಿ ಲೈಕ್-ಕಮೆಂಟ್ ಬರಬೇಕು, ನಮ್ಮ ಉತ್ಪನ್ನಕ್ಕೆ ಜಾಸ್ತಿ ಗ್ರಾಹಕರು ಇರಬೇಕು ಎಂದೆಲ್ಲ ಬಯಸುತ್ತಿರುತ್ತೇವೆ. ಆದರೆ ಹೆಚ್ಚು ಜನರಿದ್ದಾಗ ಮಾತ್ರ ಇವೆಲ್ಲ ಸಾಧ್ಯವಲ್ಲವೇ? ಹಾಗಂತ ಜನಸಂಖ್ಯೆ ಸಮಸ್ಯೆಯೇ ಅಲ್ಲವೆಂದು ಹೇಳುತ್ತಿಲ್ಲ, ಆದರೂ ಅದನ್ನು ಕೇವಲ ತೊಂದರೆ ಎಂದೂ ಪರಿಗಣಿಸಬಾರದು. ಒಂದು ಅಸ್ತ್ರವೆಂದು ಭಾವಿಸಬೇಕು, ಅದನ್ನು ಸರಿಯಾಗಿ ಬಳಸಿಕೊಂಡರೆ ಬೇರೆಲ್ಲ ದೇಶಗಳನ್ನು ಎಲ್ಲ ರೀತಿಯಿಂದಲೂ ಹಿಂದಿಕ್ಕಲು ಸಾಧ್ಯವಾಗುತ್ತದೆ. ಜನಸಂಖ್ಯೆಯನ್ನು ರಚನಾತ್ಮಕವಾಗಿ ಬಳಸಿಕೊಂಡಾಗ ಮಾತ್ರ ಸಮಸ್ಯೆಗಳನ್ನು ದೂರಗೊಳಿಸಿ ದೇಶವನ್ನು ಸದೃಢಗೊಳಿಸಲು ಸಾಧ್ಯ.

    ವಿಶ್ವ ಮಾರುಕಟ್ಟೆ ಸ್ಥಾಪನೆಗೆ ಜನಸಂಖ್ಯೆ ಸಾಥ್

    ಬೇರೆ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಉತ್ಪಾದನಾ ವೆಚ್ಚ ಕಡಿಮೆ. ಇದಕ್ಕೆ ಪ್ರಮುಖ ಕಾರಣವೆಂದರೆ ಅಗ್ಗವಾಗಿ ಮತ್ತು ಹೆಚ್ಚಾಗಿ ಉದ್ಯೋಗಿಗಳು ದೊರೆಯುತ್ತಾರೆ. ಇದನ್ನು ಬಳಸಿಕೊಂಡು ಭಾರತ ಉತ್ಪಾದನೆಯ ಮತ್ತು ಬಳಕೆಯ ಮಾರುಕಟ್ಟೆಯನ್ನು ವಿಶ್ವಾದ್ಯಂತ ತೆರೆಯಬಹುದು. ಇದಕ್ಕೆ ಒಳ್ಳೆಯ ಉದಾಹರಣೆ ಎಂದರೆ ಮಾಹಿತಿ ತಂತ್ರಜ್ಞಾನ ಕ್ಷೇತ್ರ. ವಿದೇಶಿ ಕಂಪನಿಗಳನ್ನು ಭಾರತದಲ್ಲಿ ಸ್ಥಾಪನೆ ಮಾಡಲು ಇದು ಕೂಡ ಪ್ರಮುಖ ಅಂಶ. ಕಡಿಮೆ ಹೂಡಿಕೆಯಲ್ಲಿ ಹೆಚ್ಚು ಲಾಭ ಪಡೆಯಲು ಇದು ಸದವಕಾಶ. ಜಾಗತಿಕ ಹೂಡಿಕೆಗಳನ್ನು ಆಕರ್ಷಿಸಲು ಒಳ್ಳೆಯ ಸಮಯ. ಅಧ್ಯಯನಗಳ ಪ್ರಕಾರ, 2061ರ ವೇಳೆಗೆ ತಲಾ ಜಿಡಿಪಿಯನ್ನು ಶೇ. 43ರಷ್ಟು ಹೆಚ್ಚಿಸುವ ಸಾಮರ್ಥ್ಯವನ್ನು ಭಾರತದ ಜನಸಂಖ್ಯೆ ಹೊಂದಿದೆ.

    ಯುವಕರೇ ದೇಶದ ಎಂಜಿನ್!

    ನಮ್ಮ ದೇಶದ ದೊಡ್ಡ ಸಂಪನ್ಮೂಲವೆಂದರೆ ಅದು ಜನಸಂಖ್ಯೆ. ಅದನ್ನು ಸಮರ್ಥವಾಗಿ ಬಳಸಿಕೊಳ್ಳಬೇಕು. ಸುಮಾರು ಶೇ.65ರಷ್ಟು ಯುವಜನರನ್ನು ಭಾರತ ಹೊಂದಿದೆ. ನೂತನ ಮತ್ತು ಅಪೂರ್ವ ಆಲೋಚನೆಗಳಿಗೆ ಯಾವುದೇ ಬರವಿಲ್ಲ. ಈ ಯುವಕರ ಸಂಖ್ಯೆ ಜಿಡಿಪಿಯನ್ನು ಹೆಚ್ಚಿಸಲು ಎಂಜಿನ್​ನಂತೆ ಕೆಲಸ ಮಾಡುತ್ತದೆ. ಆದರೆ ಯುವ ಪೀಳಿಗೆಗೆ ಕಾಡುತ್ತಿರುವ ಬಹುದೊಡ್ಡ ಸಮಸ್ಯೆ ಎಂದರೆ ನಿರುದ್ಯೋಗ. ಬಹಳಷ್ಟು ಜನ ಪ್ರತಿಭಾವಂತ ಯುವಕರು ಕೆಲಸವಿಲ್ಲದೆ ಅಲೆಯುವಂತಾಗಿದೆ. ಇದರೊಂದಿಗೆ ಕರೊನಾದ ನಂತರ ಬಹಳಷ್ಟು ಜನರು ಕೆಲಸ ಕಳೆದುಕೊಂಡಿದ್ದಾರೆ. ಇದಕ್ಕೆ ಇರುವ ಪರಿಹಾರವೆಂದರೆ, ನೂತನ ಮತ್ತು ಗುಣಮಟ್ಟದ ಉದ್ಯೋಗಗಳನ್ನು ಸೃಷ್ಟಿಸುವುದು. ಅದರಿಂದ ಯುವಕರಲ್ಲಿ ಕ್ರಿಯಾಶೀಲತೆ ಹೆಚ್ಚಾಗುತ್ತದೆ. ಭಾರತದಲ್ಲಿ 140 ಕೋಟಿಗೂ ಹೆಚ್ಚು ಜನರಿದ್ದಾರೆ ಎಂದರೆ ಅಷ್ಟು ವಿಭಿನ್ನ ವಿನೂತನ ಐಡಿಯಾಗಳು ದೇಶದಲ್ಲಿದೆ ಎಂದರ್ಥ. ಒಬ್ಬೊಬ್ಬರ ಆಲೋಚನೆಗಳೂ ವಿಶೇಷವಾಗಿರುತ್ತವೆ, ಅದರ ಲಾಭ ಪಡೆಯಬೇಕು, ಅದಕ್ಕೆ ತಕ್ಕ ವೇದಿಕೆ ಸೃಷ್ಟಿಯಾಗಬೇಕು, ಅಷ್ಟೇ. ವಿಶೇಷವಾಗಿ ಹೊಸ ಉದ್ಯಮಗಳ ಕುರಿತು ಗ್ರಾಮೀಣ ಭಾಗದ ಜನರಿಗೆ ತಿಳಿಯುವಂತೆ ಪ್ರಚಾರ ಮಾಡಬೇಕು. ಭಾರತದ ಜಿಡಿಪಿಯಲ್ಲಿ ಶೇ.53ರಷ್ಟು ಸೇವಾ ಕ್ಷೇತ್ರದ ಕೊಡುಗೆ ಇದೆ. ಆದರೆ ಸೇವಾ ಕ್ಷೇತ್ರ ಕೇವಲ ಶೇ.25 ಕಾರ್ವಿುಕ ಬಲವನ್ನು ಹೊಂದಿದೆ. ಇದರೊಂದಿಗೆ ಕಾರ್ವಿುಕರ ಮಾರುಕಟ್ಟೆಯಲ್ಲಿ ಶೇ. 50ರಷ್ಟು ಯುವಕರು ಮಾತ್ರ ಕೆಲಸ ಮಾಡುತ್ತಿದ್ದಾರೆ. ವಿಶೇಷವಾಗಿ ಮಹಿಳೆಯರ ಸಂಖ್ಯೆ ಕೇವಲ ಶೇ.20ರಷ್ಟಿದೆ ಮತ್ತು ಕ್ರಮೇಣ ಕಡಿಮೆಯಾಗುತ್ತಿದ್ದು, ಇದನ್ನು ಹೆಚ್ಚಿಸುವುದು ಅಗತ್ಯ. ಉದ್ಯೋಗಗಳು ಸೃಷ್ಟಿಯಾದಾಗ ಮಾತ್ರ ದೇಶದ ಆರ್ಥಿಕತೆ ಬಲವಾಗುತ್ತದೆ. ವಿಮೆ, ಶಿಕ್ಷಣ, ಬ್ಯಾಂಕಿಂಗ್, ಪ್ರವಾಸೋದ್ಯಮ, ರಿಟೇಲ್ ಮೊದಲಾದ ಉದ್ಯಮಗಳಲ್ಲಿ ಹೆಚ್ಚು ಜನರು ತೊಡಗುವಂತೆ ಅವಕಾಶ ಕಲ್ಪಿಸಿ, ಕೆಲಸಗಾರರ ಸಂಖ್ಯೆ ಹೆಚ್ಚಿಸಬೇಕು. ಹೆಚ್ಚು ಜನರಿರುವುದು ಮಾನವ ಸಂಪನ್ಮೂಲಕ್ಕೆ ದೊಡ್ಡ ಆಸ್ತಿ. ಇದರ ಸಲುವಾಗಿ ಸರ್ಕಾರ ಹಲವಾರು ಯೋಜನೆಗಳನ್ನು ರೂಪಿಸಿದೆ. ಅದರ ಪ್ರಯೋಜನವನ್ನು ಸರಿಯಾಗಿ ಬಳಸಿಕೊಳ್ಳುವಂತೆ ಜನರಿಗೆ ತಲುಪಿಸಿ ಜಾಗೃತಿ ಮೂಡಿಸಬೇಕು. ಉದ್ಯೋಗ ಸೃಷ್ಟಿಸುವುದರ ಜತೆಗೆ ಶಿಕ್ಷಣ ಕ್ಷೇತ್ರದಲ್ಲಿ ಕೂಡ ಕೆಲವು ಬದಲಾವಣೆಗಳು ಅಗತ್ಯ. ನೂತನ ಉದ್ಯೋಗ ಸೃಷ್ಟಿಯಾದಾಗ ಅದಕ್ಕೆ ಪೂರಕವಾದ ಕೋರ್ಸ್​ಗಳನ್ನು ಪರಿಚಯಿಸಬೇಕು. ವೃತ್ತಿಪರ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು. ಶಿಕ್ಷಣ ಮತ್ತು ತರಬೇತಿಯನ್ನು ಸಮರ್ಪಕವಾಗಿ ನೀಡಿದಾಗ ನೂತನ ತಾಂತ್ರಿಕ ಆವಿಷ್ಕಾರಗಳಾಗುವವು. ಇದರಿಂದ ದೇಶದ ಜಿಡಿಪಿ ಹೆಚ್ಚಾಗಲು ಸಾಧ್ಯ.

    ಜಗತ್ತನ್ನು ಆಕರ್ಷಿಸಲು ಸಹಕಾರಿ

    ಜನಸಂಖ್ಯೆ ಹೆಚ್ಚಿರುವುದರಿಂದ ಉತ್ಪನ್ನಗಳು ಮತ್ತು ಸೇವೆಗಳಿಗೆ ಬೇಡಿಕೆ ಹೆಚ್ಚು. ಆದ್ದರಿಂದ ಪ್ರತಿ ವ್ಯಕ್ತಿಯೂ ಒಂದು ಉತ್ಪಾದನೆ/ಸೇವೆ ನೀಡಲು ಪ್ರಾರಂಭಿಸುತ್ತಾನೆ. ಪ್ರತಿಯೊಬ್ಬರೂ ತಮ್ಮದೇ ಆದ ವಿಭಿನ್ನ ಸಾಮರ್ಥ್ಯ ಮತ್ತು ಕೌಶಲ್ಯಗಳಿಂದ ಉತ್ಪಾದಿಸಲು ಪ್ರಾರಂಭಿಸಿದಾಗ, ಹಾಗೇ ಅದಕ್ಕೆ ತಕ್ಕಂತೆ ಗ್ರಾಹಕ-ಬಳಕೆದಾರರ ಸಂಖ್ಯೆ ಕೂಡ ಏರಿಕೆಯಾಗಿ ಆದಾಯ ಹೆಚ್ಚಾಗುತ್ತದೆ. ಇದರಿಂದ ಜಾಗತಿಕ ಮಾರುಕಟ್ಟೆಯಲ್ಲಿ ನಮ್ಮದೇ ಆದ ಛಾಪನ್ನು ಮೂಡಿಸಲು ಅನುಕೂವಾಗುತ್ತದೆ. ದೇಶೀಯ ಸೇವೆ ಮತ್ತು ಉತ್ಪಾದನೆಗೆ ಹೆಚ್ಚಿನ ಪೋ›ತ್ಸಾಹ ನೀಡಬೇಕು. ಆಗ ನಿರುದ್ಯೋಗ ಸಮಸ್ಯೆಯನ್ನು ಕೂಡ ನೀಗಿಸಬಹುದು. ಜನಸಂಖ್ಯೆ ಹೆಚ್ಚಿರುವುದರಿಂದ ಮತ್ತೊಂದು ಲಾಭವಿದೆ. ಹೆಚ್ಚು ಜನ ಎಂದರೆ ವಿವಿಧ ಸಂಸ್ಕೃತಿಗಳ ತಾಣ. ಈ ಕಾರಣಕ್ಕಾಗಿಯೇ ಭಾರತಕ್ಕೆ ವಿದೇಶಿ ಪ್ರವಾಸಿಗರು ಹೆಚ್ಚಾಗಿ ಭೇಟಿ ನೀಡುವುದು. ಪ್ರವಾಸೋದ್ಯಮದ ಮೂಲಕ ಆರ್ಥಿಕವಾಗಿ ಇದು ಲಾಭದಾಯಕ ಮತ್ತು ವಿದೇಶಿ ಕಂಪನಿಗಳನ್ನು ಆಕರ್ಷಿಸಲು ಒಳ್ಳೆಯ ಸಾಧನ. ಪ್ರವಾಸೋದ್ಯಮದ ಅಭಿವೃದ್ಧಿ ಬಡತನದ ನಿಮೂಲನೆ ಮಾಡಲು ಸಹಾಯಕಾರಿ. ಇದೆಲ್ಲದರ ಜತೆಗೆ ಸಂಸ್ಕೃತಿ ಮನುಷ್ಯನ ಯೋಚನಾ ಶಕ್ತಿಯನ್ನು ರೂಪಿಸುತ್ತದೆ. ವೈವಿಧ್ಯಮಯ ಸಂಸ್ಕೃತಿ, ವಿವಿಧ ಆಲೋಚನೆಗಳು ಹೊಸ ಆವಿಷ್ಕಾರಗಳಿಗೆ ದಾರಿಯಾಗುತ್ತವೆ. ಇದಕ್ಕಾಗಿಯೇ ನಮ್ಮ ಸಂಸ್ಕೃತಿ-ಆಚರಣೆಗಳನ್ನು ಪಾಲಿಸಬೇಕು. ಇದರಿಂದ ವೈಯಕ್ತಿಕ ಲಾಭವಾಗುತ್ತದೆ. ಅದು ದೇಶದ ಅಭಿವೃದ್ಧಿಗೆ ಕೈ ಜೋಡಿಸಲು ಪ್ರೇರೇಪಿಸುತ್ತದೆ.

    ಜನನ ಪ್ರಮಾಣ ಹೆಚ್ಚಿಸುವ ಪ್ರಯತ್ನ!

    ಚೀನಾದಲ್ಲಿ 2035ರ ಹೊತ್ತಿಗೆ ಶೇ.30ರಷ್ಟು 65 ವರ್ಷ ಮೇಲ್ಪಟ್ಟವರೇ ಇರುತ್ತಾರೆ ಎಂದು ಅದ್ಯಯನಗಳು ಹೇಳುತ್ತಿವೆ. ಈ ಸಮಸ್ಯೆ ಭಾರತಕ್ಕೂ ಎದುರಾಗಬಹುದು. 1950ರಿಂದ 2021ರವರೆಗೆ ಫರ್ಟಿಲಿಟಿ ಪ್ರಮಾಣ 5.9ರಿಂದ 2ಕ್ಕೆ ಇಳಿದಿದೆ. ದೇಶದ ಜನಸಂಖ್ಯೆ ಹೆಚ್ಚಾಗುವ ವೇಗ ಕುಸಿಯಲು ಪ್ರಾರಂಭವಾಗಿದೆ. ಮುಂದೊಂದು ದಿನ ಇದು ದೇಶಕ್ಕೆ ಕುತ್ತಾಗಬಹುದು. ಪ್ರಸ್ತುತ ದೇಶದಲ್ಲಿ ಶೇ. 6.8ರಷ್ಟು ಮಂದಿ 65 ವರ್ಷ ಮೇಲ್ಪಟ್ಟವರಿದ್ದಾರೆ. ಶೇ. 67.51ರಷ್ಟು ಜನ 15-64 ವರ್ಷದೊಳಗಿದ್ದಾರೆ. ಇದರೊಂದಿಗೆ ಒಟ್ಟು ಜನಸಂಖ್ಯೆಯಲ್ಲಿ 15 ವರ್ಷಕ್ಕಿಂತ ಕೆಳಗಿರುವ ವಯಸ್ಸಿನ ಮಕ್ಕಳ ಪ್ರಮಾಣ ವೇಗವಾಗಿ ಕುಸಿಯುತ್ತಿದೆ. ಈ ವಯೋಮಾನದೊಳಗಿನ ಮಕ್ಕಳ ಸಂಖ್ಯೆ 1993ರಲ್ಲಿ ಶೇ.38ರಷ್ಟಿತ್ತು, ಈಗ ಶೇ.25.69ಕ್ಕೆ ಇಳಿದಿದೆ ಎಂದು ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ ಹೇಳುತ್ತದೆ. ಮುಂದಿನ ದಿನಗಳಲ್ಲಿ ಭಾರತದ ಜನಸಂಖ್ಯೆ ಇಳಿಮುಖವಾಗುವ ಲಕ್ಷಣಗಳು ಕಾಣಿಸುತ್ತಿವೆ. ಆಗ ದೇಶದ ಕೆಲಸಗಾರರ ಸಂಖ್ಯೆ ಕ್ಷೀಣಿಸುತ್ತದೆ. ದೇಶದ ಆರ್ಥಿಕ ಮತ್ತು ಸಾಮಾಜಿಕ ರಚನೆಯ ಮೇಲೆ ಆಳವಾದ ಪರಿಣಾಮ ಬೀರುತ್ತದೆ. ಇದರಿಂದ ಅಭಿವೃದ್ಧಿ ಕುಂಠಿತವಾಗುತ್ತದೆ. ಈ ಪರಿಸ್ಥಿತಿಯನ್ನು ಇತರೆ ದೇಶಗಳು ಈಗಾಗಲೇ ಎದುರಿಸುತ್ತಿವೆ. ಚೀನಾ ಮತ್ತು ಜಪಾನ್ ದೇಶದಲ್ಲಿ ಜನಸಂಖ್ಯೆ ಕುಸಿಯುತ್ತಿರುವ ಹಿನ್ನೆಲೆಯಲ್ಲಿ ಜನ್ಮಪ್ರಮಾಣವನ್ನು ಹೆಚ್ಚಿಸಲು ಹಲವಾರು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಒಂದು ಮಗುವಿಗೆ ಜನ್ಮ ನೀಡಿದರೆ ಜಪಾನ್ ಸರ್ಕಾರ ಹೆಚ್ಚವರಿ ಹಣ ನೀಡುತ್ತಿದೆ. ಪ್ರಪಂಚದಲ್ಲೇ ಎರಡನೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವಾದ ಚೀನಾದ ಸ್ಪಮ್ರ್ ಬ್ಯಾಂಕ್​ಗಳು ವೀರ್ಯಾಣು ದಾನ ಮಾಡಿ ಎಂದು ಕಾಲೇಜು ವಿದ್ಯಾರ್ಥಿಗಳಿಗೆ ಮನವಿ ಮಾಡಿಕೊಂಡಿವೆ. ಇಷ್ಟೇ ಅಲ್ಲ ನಮ್ಮ ಭಾರತ ದೇಶದಲ್ಲಿ ಕೂಡ ಜನ್ಮಪ್ರಮಾಣ ಹೆಚ್ಚಿಸಲು ಪ್ರಯತ್ನ ನಡೆಯುತ್ತಿದೆ. ರಾಜಸ್ಥಾನದ ಮಹೇಶ್ವರಿ ಸಮುದಾಯ ತಮ್ಮ ಜನಾಂಗದವರ ಸಂಖ್ಯೆ ಕ್ಷೀಣಿಸುತ್ತಿದೆ ಎಂದು ಜನ್ಮಪ್ರಮಾಣ ಹೆಚ್ಚಿಸಲು ಮುಂದಾಗಿದ್ದಾರೆ. ಮೂರನೇ ಮಗುವಿಗೆ ಜನ್ಮನೀಡುವ ಮಹೇಶ್ವರಿ ಸಮುದಾಯದ ದಂಪತಿಗೆ 50 ಸಾವಿರ ರೂ. ಫಿಕ್ಸೆಡ್ ಡೆಪಾಸಿಟ್ ಮಾಡಿಸುವುದಾಗಿ ಘೊಷಿಸಿದೆ. ಜನಸಂಖ್ಯೆ ಸಮಸ್ಯೆ ಆಗಿದ್ದಿದ್ದರೆ ಇತರೆ ದೇಶಗಳಲ್ಲಿ ಆತಂಕಗೊಳ್ಳುತ್ತಿರಲಿಲ್ಲ, ಜನ್ಮಪ್ರಮಾಣ ಹೆಚ್ಚಿಸುವ ಪ್ರಯತ್ನ ಮಾಡುತ್ತಿರಲಿಲ್ಲ. ಹೆಚ್ಚು ಜನ ನಮ್ಮ ಸಿನಿಮಾ ನೊಡಬೇಕು, ನಮ್ಮ ಪೋಸ್ಟ್ ಹೆಚ್ಚು ಜನರು ಲೈಕ್ ಮಾಡಬೇಕು ಎಂದು ಬಯಸುವವರು ನಾವು. ಅಂಥದ್ದರಲ್ಲಿ ದೇಶದಲ್ಲಿ ಜನಸಂಖ್ಯೆ ಹೆಚ್ಚಾದರೆ ಚಿಂತಿಸಬೇಕೇ? ದೇಶದ ಸಂಪನ್ಮೂಲವಾಗಿರುವ ಜನಸಂಖ್ಯೆಯನ್ನು ಯಾವ ರೀತಿಯಲ್ಲಿ ಬಳಸಿಕೊಳ್ಳುತ್ತೇವೆ ಎಂಬುದರ ಮೇಲೆ ಜನಸಂಖ್ಯೆ ಸಂಪತ್ತಾಗುತ್ತದೋ ಇಲ್ಲವೇ ಆಪತ್ತಾಗುತ್ತದೋ ಎಂಬುದು ನಿರ್ಧಾರವಾಗುತ್ತದೆ.

    ಇದು ಡೈವೋರ್ಸ್ ಫೋಟೋಶೂಟ್​: ನನಗೆ 99 ಸಮಸ್ಯೆಗಳಿವೆ, ಆದರೆ ಪತಿ ಇಲ್ಲ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts