More

    ಬೆರಳ ತುದಿಯಲ್ಲೇ ಇದೆ ಬದಲಿಸುವ ಶಕ್ತಿ; ಚುನಾವಣೆ ಸುಧಾರಣೆಗೆ ಆಗಲಿ ಬದಲಾವಣೆ..

    ‘ಬದಲಾವಣೆಯೇ ಜಗದ ನಿಯಮ’ ಎಂದು ಹೇಳಿದ್ದಾನೆ ಜಗದೋದ್ಧಾರಕ ಶ್ರೀಕೃಷ್ಣ. ಅತ್ಯುತ್ತಮ ರಾಜತಾಂತ್ರಿಕ ಎಂದೂ ಕರೆಯಲ್ಪಡುವ ಭಗವಾನ್ ಕೃಷ್ಣ ಕೆಟ್ಟದ್ದನ್ನು ಸಂಹರಿಸಲು ಬೆರಳ ತುದಿಯಲ್ಲೇ ಸುದರ್ಶನ ಚಕ್ರ ಹೊಂದಿರುವಂತೆ ಕೆಟ್ಟ ವ್ಯವಸ್ಥೆಯನ್ನು ನಿವಾರಿಸಲು ಪ್ರತಿ ಪ್ರಜೆಯ ಬೆರಳ ತುದಿಯಲ್ಲೂ ಅಂಥದ್ದೇ ಒಂದು ಶಕ್ತಿ ಇದೆ. ಅದುವೇ ಮತದಾನ. ಈ ಮತ ಚಲಾವಣೆಯಲ್ಲಿನ ಬದಲಾವಣೆ ಹೇಗೆ ಚುನಾವಣೆ ವ್ಯವಸ್ಥೆಯಲ್ಲಿ ಸುಧಾರಣೆ ತರಬಲ್ಲದು ಎಂಬುದರ ಮೇಲೊಂದು ಬೆಳಕು ಚೆಲ್ಲುವ ಪ್ರಯತ್ನವೇ ಈ ಬರಹ.

    | ರವಿಕಾಂತ ಕುಂದಾಪುರ

    ರಾಜಕಾರಣ-ರಾಜಕಾರಣಿ, ಚುನಾವಣೆಗಳು ಜಗತ್ತಿನಾದ್ಯಂತ ಇರುವುದು ಎಷ್ಟು ನಿಜವೋ ಜಗತ್ತಿನ ಎಲ್ಲ ಕಡೆಯೂ ಇವು ಒಂದೇ ರೀತಿಯಲ್ಲಿ ಇರುವುದಿಲ್ಲ ಎಂಬುದು ಕೂಡ ಅಷ್ಟೇ ನಿಜ. ವಿಶ್ವದ ಎಲ್ಲೆಡೆಯ ರಾಜಕಾರಣ-ರಾಜಕಾರಣಿ ಮತ್ತು ಚುನಾವಣೆಗಳಿಗೆ ಅಲ್ಲಿನದ್ದೇ ಆದ ವೈಶಿಷ್ಟ್ಯ ಇರುತ್ತದೆ. ಅದಾಗ್ಯೂ ರಾಜಕಾರಣದ ಮೂಲಸ್ವರೂಪ ಒಂದೇ ಆಗಿರುತ್ತದೆ. ಎಲ್ಲಿ ಯಾವುದೇ ತೆರನಾದ ರಾಜಕಾರಣವಿದ್ದರೂ ಮೂಲತಃ ಅದು ಜನರು ಜನಪ್ರತಿನಿಧಿಯನ್ನು ಆರಿಸುವುದೇ ಆಗಿರುತ್ತದೆ. ಆದಾಗ್ಯೂ ಈ ಆಯ್ಕೆ ಹೇಗಿರುತ್ತದೆ, ಆಯ್ಕೆ ಮಾಡುವವರು ಎಂಥವರಿರುತ್ತಾರೆ ಮತ್ತು ಆಯ್ಕೆಯಾದವರು ಆ ಬಳಿಕ ಹೇಗಿರುತ್ತಾರೆ ಎಂಬುದರ ಮೇಲೆ ಆಯಾ ಪ್ರದೇಶ ರಾಜಕಾರಣದ ಗುಣಮಟ್ಟ ಅವಲಂಬಿಸಿರುತ್ತದೆ.

    ‘ಯಥಾ ರಾಜ ತಥಾ ಪ್ರಜಾ’ ಎಂಬುದು ರಾಜರ ಕಾಲದ ಹಳೇ ಮಾತು. ಈಗ ರಾಜರೇ ಇರದ ಪ್ರಜಾಪ್ರಭುತ್ವದ ಕಾಲ. ಹೀಗಾಗಿ ‘ಯಥಾ ಪ್ರಜಾ ತಥಾ ರಾಜ’ ಎನ್ನುವುದೇ ಸರಿ. ಏಕೆಂದರೆ ಜನರು ಹೇಗಿರುತ್ತಾರೋ, ಎಂಥವರನ್ನು ಆರಿಸುತ್ತಾರೋ ಅಂಥ ರಾಜಕಾರಣಿ-ರಾಜಕಾರಣ ಜನರಿಗೆ ಸಿಗುತ್ತದೆ. ಹೀಗಾಗಿ ಯಾವುದೇ ರಾಜಕಾರಣದಲ್ಲೂ ಸುಧಾರಣೆ ಕಾಣಬೇಕಿದ್ದರೆ ಅದು ಜನರಿಂದಲೇ ಶುರುವಾಗಬೇಕು. ‘ನೀನು ಬಯಸುವ ಬದಲಾವಣೆ ನೀನೇ ಆಗು’ ಎಂಬ ಮಹಾತ್ಮ ಗಾಂಧಿ ಅವರ ಮಾತಿನಂತೆ ಬದಲಾವಣೆ ಮೊದಲು ನಮ್ಮಿಂದಲೇ ಆಗಬೇಕು. ಅಂದರೆ ಆಳುವ ಪಕ್ಷವನ್ನೇ ಬದಲಿಸುವ ಶಕ್ತಿ ಸಾಮಾನ್ಯ ಜನರ ಬೆರಳಿನ ತುದಿಯಲ್ಲಿರುತ್ತದೆ. ಆದರೆ ಅದು ಈ ಮೂರು ಪ್ರಮುಖ ಸಂಗತಿಗಳ ಮೇಲೆ ಅವಲಂಬಿಸಿರುತ್ತದೆ. ಹಾಗೆ ರಾಜಕೀಯದ ಮೇಲೆ ಪರಿಣಾಮ ಬೀರುವ, ಭಾರಿ ಸುಧಾರಣೆ ತರಬಹುದಾದ ಮೂರು ಮುಖ್ಯ ಸಂಗತಿಗಳೆಂದರೆ ಮತದಾರರ ನೋಂದಣಿ, ಕಡ್ಡಾಯ ಮತದಾನ ಹಾಗೂ ಅತ್ಯಧಿಕ ಮತ ಚಲಾವಣೆ.

    ಇದನ್ನೂ ಓದಿ: ಇದು ಜಗತ್ತಿನಲ್ಲೇ ಅತ್ಯಂತ ಸಂತೋಷಭರಿತ ದೇಶ; ಆರು ವರ್ಷಗಳಿಂದಲೂ ಪ್ರಥಮ ಸ್ಥಾನ!

    ಕಡ್ಡಾಯ ಮತದಾನ

    ಮತದಾನವನ್ನು ಒಂದೊಂದು ರಾಷ್ಟ್ರದಲ್ಲಿ ಒಂದೊಂದು ರೀತಿಯಲ್ಲಿ ಪರಿಗಣಿಸಲಾಗಿದೆ. ಅಂದರೆ ಕೆಲವು ದೇಶಗಳಲ್ಲಿ ಮತದಾನವನ್ನು ನಾಗರಿಕರ ಹಕ್ಕು, ಇನ್ನು ಕೆಲವು ದೇಶಗಳಲ್ಲಿ ಅದನ್ನು ನಾಗರಿಕರ ಹೊಣೆಗಾರಿಕೆ ಎಂದು ಪರಿಗಣಿಸಲಾಗಿದೆ. ಮತ್ತೆ ಕೆಲವು ದೇಶಗಳಲ್ಲಿ ಮತದಾನವನ್ನು ನಾಗರಿಕರ ಕರ್ತವ್ಯ ಎಂದು ಪರಿಗಣಿಸಿ ಕಡ್ಡಾಯಗೊಳಿಸಲಾಗಿದೆ.

    ಜಗತ್ತಿನ ಅಷ್ಟೂ ರಾಷ್ಟ್ರಗಳ ಪೈಕಿ ಶೇ. 85 ದೇಶಗಳಲ್ಲಿ ಮತದಾನ ಕಡ್ಡಾಯ ಮಾಡಿಲ್ಲ ಹಾಗೂ ಶೇ. 13ರಷ್ಟು ರಾಷ್ಟ್ರಗಳಲ್ಲಿ ಮತದಾನ ಕಡ್ಡಾಯಗೊಳಿಸಲಾಗಿದೆ. ಉಳಿದಂತೆ ಶೇ. 2ರಷ್ಟು ದೇಶಗಳಲ್ಲಿ ಮಾತ್ರ ಚುನಾವಣೆಯೇ ಇಲ್ಲ ಎಂಬುದು ಇಂಟರ್‌ನ್ಯಾಷನಲ್ ಇನ್‌ಸ್ಟಿಟ್ಯೂಟ್ ಫಾರ್ ಡೆಮೊಕ್ರಸಿ ಆ್ಯಂಡ್ ಎಲೆಕ್ಟೋರಲ್ ಅಸಿಸ್ಟೆನ್ಸ್ (ಇಂಟರ್‌ನ್ಯಾಷನಲ್ ಐಡಿಯಾ) ಅಂಕಿ-ಅಂಶದಲ್ಲಿ ಕಂಡುಬಂದಿದೆ. ಅಂದರೆ 172 ದೇಶಗಳಲ್ಲಿ ಚುನಾವಣೆ ಇದೆ ಮತ್ತು ನಾಲ್ಕು ದೇಶಗಳಲ್ಲಿ ಚುನಾವಣೆ ಇಲ್ಲ ಹಾಗೂ 27 ದೇಶಗಳಲ್ಲಿ ಚುನಾವಣೆ ಕಡ್ಡಾಯವಿದೆ. ಅರ್ಜೆಂಟೀನಾ, ಆಸ್ಟ್ರೇಲಿಯಾ, ಬ್ರೆಜಿಲ್, ಸಿಂಗಾಪುರ, ಸ್ವಿಜರ್ಲೆಂಡ್ ಮುಂತಾದ ದೇಶಗಳಲ್ಲಿ ಕೆಲವೊಂದು ವಿನಾಯಿತಿಗಳ ಮೇರೆಗೆ ಮತದಾನ ಕಡ್ಡಾಯಗೊಳಿಸಲಾಗಿದೆ.

    ಮತ ಚಲಾವಣೆಯಲ್ಲಿ ಕಡ್ಡಾಯದ ಮಹತ್ವ

    ಕಡ್ಡಾಯ ಮತದಾನದಿಂದ ಒಟ್ಟಾರೆ ಮತ ಚಲಾವಣೆಯ ಪ್ರಮಾಣ ಹೆಚ್ಚಾಗುತ್ತದೆ ಎಂಬುದಕ್ಕೂ ಇಂಟ್-ಐಡಿಯಾ ಅಂಕಿ-ಅಂಶ ಉತ್ತರ ನೀಡುತ್ತದೆ. ಮತದಾನ ಕಡ್ಡಾಯಗೊಳಿಸುವುದರಿಂದ ಒಟ್ಟಾರೆ ಮತ ಚಲಾವಣೆ ಶೇ. 7.37 ಹೆಚ್ಚಿದೆ ಎಂದೂ ಇದು ಹೇಳಿದೆ. ಸುಮಾರು 60 ವರ್ಷಗಳಲ್ಲಿ ನಡೆದ ಚುನಾವಣೆಗಳ ಮತ ಚಲಾವಣೆಯ ಆಧಾರದ ಮೇಲೆ ಕಡ್ಡಾಯ ಮತದಾನದ ಧನಾತ್ಮಕ ಪರಿಣಾಮವನ್ನು ಈ ಅಂಕಿ-ಅಂಶ ಬಹಿರಂಗಗೊಳಿಸಿದೆ.

    ಅತ್ಯಧಿಕ ಮತ ಚಲಾವಣೆ

    ಯಾವ ಚುನಾವಣೆಯಲ್ಲಿ ಗರಿಷ್ಠ ಮತ ಚಲಾವಣೆ ಆಗಿರುತ್ತದೋ ಅದನ್ನಷ್ಟೇ ಸರಿಯಾದ ಚುನಾವಣೆ, ಆ ಫಲಿತಾಂಶವಷ್ಟೇ ಅತ್ಯಂತ ಸಮರ್ಪಕವಾದದ್ದು ಎನ್ನಬಹುದು. 1962ರಲ್ಲಿ ಮೊದಲ ಲೋಕಸಭೆ ಚುನಾವಣೆ ಸಂದರ್ಭ ಭಾರತದಲ್ಲಿ 21.64 ಕೋಟಿ ಮತದಾರರಿದ್ದು ಶೇ. 55.4 ಮತ ಚಲಾವಣೆ ಆಗಿತ್ತು. 2009ರಲ್ಲಿ 71.7 ಕೋಟಿ (ಶೇ. 58.2), 2014ರಲ್ಲಿ 83.41 ಕೋಟಿ (ಶೇ. 66.3) ಮತ್ತು 2019ರಲ್ಲಿ 91.05 ಕೋಟಿ ಮತದಾರರಿದ್ದು ಶೇ. 67.1 ಮತ ಚಲಾವಣೆ ಆಗಿತ್ತು.

    ಇದನ್ನೂ ಓದಿ: ಈ ಸಮಯದಲ್ಲಿ ಮಲಗಿದರೆ ಹೃದಯಾಘಾತ ಸಾಧ್ಯತೆ ಕಡಿಮೆ ಅಂತೆ; ಅಧ್ಯಯನದಲ್ಲಿ ಬಯಲಾಯಿತು ಹೃದಯದ ಆರೋಗ್ಯ ಮಾಹಿತಿ

    ವಿಶೇಷ ಎಂದರೆ ಮತದಾರರ ನೋಂದಣಿ ವಿಚಾರದಲ್ಲಿ ಭಾರತವೇ ನಂಬರ್ ಒನ್. ಅಂದರೆ ಟಾಪ್-10 ಮತದಾರರ ಸಂಖ್ಯೆಯಲ್ಲಿ ಭಾರತ ಮೊದಲ ಸ್ಥಾನದಲ್ಲಿದ್ದರೆ ಅಮೆರಿಕ ಎರಡನೇ ಸ್ಥಾನದಲ್ಲಿದೆ. ನಂತರದ ಸ್ಥಾನಗಳಲ್ಲಿ ಇಂಡೋನೇಷ್ಯಾ, ಬ್ರೆಜಿಲ್, ರಷ್ಯಾ, ಪಾಕಿಸ್ತಾನ, ಜಪಾನ್, ಬಾಂಗ್ಲಾದೇಶ, ಮೆಕ್ಸಿಕೊ, ನೈಜೀರಿಯಾ ಇವೆ. ವಿಪರ್ಯಾಸವೆಂದರೆ, ಇತ್ತೀಚಿನ ಚುನಾವಣೆಯಲ್ಲಿ ಇತರ ದೇಶಗಳಿಗೆ ಹೋಲಿಸಿದರೆ ಭಾರತ ಮತದಾರರ ನೋಂದಣಿಗೆ ತಕ್ಕಂತೆ ಮತ ಚಲಾವಣೆಯಲ್ಲಿ ಮುಂದಿಲ್ಲ. ಮತದಾರರ ನೋಂದಣಿಯ ಟಾಪ್-10ರಲ್ಲಿ ಭಾರತ ಮೊದಲ ಸ್ಥಾನದಲ್ಲಿದ್ದರೂ ಅದೇ ಪಟ್ಟಿಯಲ್ಲಿ 8ನೇ ಸ್ಥಾನದಲ್ಲಿದ್ದ ಬಾಂಗ್ಲಾದೇಶದಲ್ಲಿ ಶೇ. 80 ಮತ ಚಲಾವಣೆಯಾಗಿದೆ, ಭಾರತದಲ್ಲಿ ಆದ ಮತ ಚಲಾವಣೆ ಗರಿಷ್ಠ ಎಂದರೆ ಶೇ. 67.1 ಮಾತ್ರ. ಇನ್ನು ಬ್ರೆಜಿಲ್ ಶೇ. 79.2, ಶ್ರೀಲಂಕಾ ಶೇ. 75, ನೇಪಾಳ ಶೇ. 61, ರಷ್ಯಾ ಶೇ. 51, ಪಾಕಿಸ್ತಾನದಲ್ಲಿ ಶೇ. 50 ಮತ ಚಲಾವಣೆ ಆಗಿದೆ.

    ಕಡ್ಡಾಯ ನೋಂದಣಿ

    ಹಲವೆಡೆ ಮತದಾನ ಕಡ್ಡಾಯಗೊಳಿಸಿರುವಂತೆ ಕೆಲವೆಡೆ ಮತದಾರರ ನೋಂದಣಿಯನ್ನೂ ಕಡ್ಡಾಯಗೊಳಿಸಿದೆ. ಅಂದರೆ ಮತದಾನಕ್ಕೆ ನಿಗದಿಪಡಿಸಲಾದ ವಯಸ್ಸಿನ ಎಲ್ಲರೂ ಮತದಾರರ ಪಟ್ಟಿಯಲ್ಲಿ ಕಡ್ಡಾಯವಾಗಿ ಹೆಸರು ನೋಂದಾಯಿಸಿಕೊಂಡಿರಬೇಕು. ಜಗತ್ತಿನ ಅರ್ಧಕ್ಕಿಂತಲೂ ಹೆಚ್ಚು ರಾಷ್ಟ್ರಗಳಲ್ಲಿ ಮತದಾರರ ನೋಂದಣಿ ಕಡ್ಡಾಯವಾಗಿದ್ದರೂ ಭಾರತದಲ್ಲಿ ಅದೊಂದು ಆಯ್ಕೆ ಆಗಿಯಷ್ಟೇ ಉಳಿದಿದೆ. ಚುನಾವಣಾ ನೀತಿಗಳಲ್ಲಿ ಬದಲಾವಣೆಗಳಿದ್ದರೂ ಸುಮಾರು 122 ದೇಶ/ಕೇಂದ್ರಾಡಳಿತ ಪ್ರದೇಶಗಳಲ್ಲಿ ಮತದಾರರ ನೋಂದಣಿ ಕಡ್ಡಾಯಗೊಳಿಸಲಾಗಿದೆ. ಅದರಲ್ಲೂ ಅರ್ಜೆಂಟೀನಾ, ಚಿಲಿ, ಹಂಗೇರಿ, ಇಸ್ರೇಲ್, ನೆದರ್ಲೆಂಡ್ಸ್ ಮುಂತಾದೆಡೆ ಜನಗಣತಿ ವೇಳೆ ಪಡೆದ ಸರ್ಕಾರಿ ದಾಖಲೆಗಳನ್ನು ಆಧರಿಸಿ ಮತದಾರರ ನೋಂದಣಿ ಆಟೋಮ್ಯಾಟಿಕ್ ಆಗುವಂಥ ವ್ಯವಸ್ಥೆಗಳಿವೆ. ಇನ್ನು ಕೆಲವು ದೇಶಗಳಲ್ಲಿ ಅರ್ಹ ನಾಗರಿಕರು ತಾವೇ ನೋಂದಣಿ ಮಾಡಿಕೊಳ್ಳಬೇಕು. ಅದಕ್ಕೆ ತಪ್ಪಿದಲ್ಲಿ ದಂಡ ಹಾಕುವಂಥ ವ್ಯವಸ್ಥೆ ನ್ಯೂಜಿಲೆಂಡ್, ಟೊಂಗ ಮುಂತಾದ ದೇಶಗಳಲ್ಲಿದೆ. ಆದರೆ ಜಗತ್ತಿನ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಎನಿಸಿಕೊಂಡಿರುವ ಭಾರತದಲ್ಲಿ ಮತದಾರರ ನೋಂದಣಿ ಕಡ್ಡಾಯವಾಗಿಲ್ಲ.

    ಎಐಗಿಂತಲೂ ಉತ್ತಮ ಯುಐಡಿಎಐ

    ಮತದಾರರ ಪಟ್ಟಿಯಲ್ಲಿನ ದೋಷವೇ ಬಹಳಷ್ಟು ಸಲ ಶೇಕಡಾವಾರು ಮತಗಳ ಮೇಲೆ ಪರಿಣಾಮ ಬೀರುತ್ತದೆ. ಅಂದರೆ ಕೆಲವೊಂದು ಕಡೆ ಕೆಲವರು ಎರಡೆರಡು ಕ್ಷೇತ್ರಗಳಲ್ಲಿ ಮತದಾನದ ಹಕ್ಕು ಹೊಂದಿರುತ್ತಾರೆ. ಇನ್ನು ಕೆಲವೆಡೆ ವ್ಯಕ್ತಿ ತೀರಿ ಹೋಗಿದ್ದರೂ ಆತನ ಹೆಸರು ಮತದಾರರ ಪಟ್ಟಿಯಿಂದ ತೆಗೆದು ಹಾಕಿರುವುದಿಲ್ಲ. ಈ ಎಲ್ಲ ಕಾರಣದಿಂದಾಗಿ ಮತದಾರರ ಪಟ್ಟಿಯಲ್ಲಿ ನಿಜವಾಗಿಯೂ ಇರುವ ಮತದಾರರಿಗಿಂತ ಹೆಚ್ಚಿನ ಮತದಾರರ ಹೆಸರು ಇರುತ್ತದೆ. ಇದರಿಂದಾಗಿ ಶೇಕಡಾವಾರು ಮತ ಲೆಕ್ಕಾಚಾರ ಹಾಕಿದಾಗ ಅದೂ ಕಡಿಮೆ ಬರುತ್ತದೆ. ಅಲ್ಲದೆ, ಸತ್ತವರ ಹೆಸರಲ್ಲಿ ಕೆಲವರು ನಕಲಿಯಾಗಿ ಮತ ಚಲಾಯಿಸುವುದೂ ನಡೆಯುತ್ತಿದೆ. ಇವೆಲ್ಲವನ್ನೂ ನಿವಾರಿಸಲು ಈ ಸಲ ಕೆಲವು ವಿಧಾನಸಭಾ ಕ್ಷೇತ್ರಗಳಲ್ಲಿ ಕೃತಕ ಬುದ್ಧಿಮತ್ತೆ (ಆರ್ಟಿಫಿಷಿಯಲ್ ಇಂಟೆಲಿಜೆನ್ಸ್-ಎಐ) ಬಳಸಿಕೊಂಡು ಮತದಾರರ ಪಟ್ಟಿಯನ್ನು ಪರಿಷ್ಕರಿಸುವ ಕೆಲಸವೂ ನಡೆದಿದೆ. ಆದರೆ ಎಐಗಿಂತಲೂ ಯುಐಡಿಎಐ ಅತ್ಯುತ್ತಮ. ಅರ್ಥಾತ್, ಮತದಾರರ ಪಟ್ಟಿಯನ್ನು ಎಐ ಬಳಸಿ ಪರಿಷ್ಕರಿಸುವ ಬದಲು ಮತದಾರರ ಗುರುತಿನ ಚೀಟಿಗೆ ಆಧಾರ್ ನಂಬರ್ ಲಿಂಕ್ ಮಾಡುವುದೇ ಅತ್ಯುತ್ತಮ.

    ಇದನ್ನೂ ಓದಿ: ನಿದ್ರಾಹೀನತೆಯಲ್ಲಿ ಭಾರತಕ್ಕೆ ಎರಡನೇ ಸ್ಥಾನ; ನಿದ್ರಾಹೀನತೆಗೆ ಪ್ರಮುಖ ಕಾರಣವೇ ಇದು!

    ಮತದಾರರ ಪಟ್ಟಿ ಪರಿಷ್ಕರಣೆ ಹಾಗೂ ನಕಲಿ ಮತದಾನ ತಪ್ಪಿಸುವ ನಿಟ್ಟಿನಲ್ಲಿ ಎಐ ಅಷ್ಟೇನೂ ಪರಿಣಾಮಕಾರಿಯಲ್ಲ. ಅಲ್ಲದೆ ಇದು ಇನ್ನೊಂದು ಖರ್ಚಿನ ಸಂಗತಿ. ಇದರಿಂದ ಮತ್ತೊಂದು ರೀತಿಯ ಭ್ರಷ್ಟಾಚಾರವೂ ಆಗಬಹುದು. ಅದರ ಬದಲಿಗೆ ಮತದಾರರು ಆಧಾರ್ ಸಂಖ್ಯೆ ಲಿಂಕ್ ಮಾಡಿಸಬೇಕು ಎಂಬುದನ್ನು ಕಡ್ಡಾಯಗೊಳಿಸಿದಲ್ಲಿ ಅಂಥ ಯಾವುದೇ ಖರ್ಚಿಲ್ಲದೆ ಮತದಾರರ ಪಟ್ಟಿ ತನ್ನಿಂತಾನೇ ಪರಿಷ್ಕರಣೆ ಆಗಿಬಿಡುತ್ತದೆ. ಒಬ್ಬನ ಹೆಸರಲ್ಲಿ ಒಂದು ಕಡೆ ಮಾತ್ರ ಮತದಾನದ ಹಕ್ಕು ಇರುತ್ತದೆ. ಇನ್ನು ಮರಣ ಪ್ರಮಾಣಪತ್ರ ನೀಡುವಾಗಿನ ಆಧಾರ್ ಮಾಹಿತಿ ಆಧರಿಸಿ ಅಂಥ ವ್ಯಕ್ತಿಯ ಹೆಸರನ್ನು ಮತದಾರರ ಪಟ್ಟಿಯಿಂದ ತೆಗೆದು ಹಾಕುವ ವ್ಯವಸ್ಥೆ ಮಾಡಿದಲ್ಲಿ ಜೀವಂತ ಇರದವರ ಹೆಸರು ಕೂಡ ಮತದಾರರ ಪಟ್ಟಿಯಿಂದ ನಿವಾರಣೆ ಆಗುತ್ತದೆ. ಆದರೆ ಸದ್ಯ ಭಾರತದಲ್ಲಿ ಮತದಾರರ ಪಟ್ಟಿಗೆ ಆಧಾರ್ ಜೋಡಣೆ ಕಡ್ಡಾಯ ಮಾಡಿಲ್ಲ.

    ಬ್ಲಾಕ್‌ಚೈನ್ ತಂತ್ರಜ್ಞಾನ, ಕುಳಿತಲ್ಲಿಂದಲೇ ಮತದಾನ

    ಈಗ ಚುನಾವಣೆ ಎಂದರೆ ಕೋಟ್ಯಂತರ ರೂಪಾಯಿ ಖರ್ಚು. ಮಾತ್ರವಲ್ಲ, ಅದಕ್ಕೆಂದೇ ರಜೆ ಕೊಡಬೇಕಾಗುತ್ತದೆ ಹಾಗೂ ಅಪಾರ ಮಾನವಸಂಪನ್ಮೂಲ ಬಳಕೆ ಮಾಡಬೇಕಾಗುತ್ತದೆ. ಆದರೆ ಬ್ಲಾಕ್‌ಚೈನ್ ತಂತ್ರಜ್ಞಾನವನ್ನು ಬಳಸಿಕೊಂಡು ಕುಳಿತಲ್ಲಿಂದಲೇ ಮತದಾನ ಆಗುವಂತೆ ಮಾಡಬೇಕು. ಆಗ ಸಮಯ, ಶ್ರಮ, ಮಾನವಸಂಪನ್ಮೂಲ ಉಳಿಸುವ ಜತೆಗೆ ಕೋಟ್ಯಂತರ ರೂ. ಖರ್ಚು ಕೂಡ ತಪ್ಪಿಸಬಹುದು.

    (2023ರ ವಿಜಯವಾಣಿ ಯುಗಾದಿ ವಿಶೇಷಾಂಕದಲ್ಲಿ ಪ್ರಕಟವಾಗಿರುವ ಲೇಖನ)

    ಬೆರಳ ತುದಿಯಲ್ಲೇ ಇದೆ ಬದಲಿಸುವ ಶಕ್ತಿ; ಚುನಾವಣೆ ಸುಧಾರಣೆಗೆ ಆಗಲಿ ಬದಲಾವಣೆ..

    ಬೆರಳ ತುದಿಯಲ್ಲೇ ಇದೆ ಬದಲಿಸುವ ಶಕ್ತಿ; ಚುನಾವಣೆ ಸುಧಾರಣೆಗೆ ಆಗಲಿ ಬದಲಾವಣೆ..ಬೆರಳ ತುದಿಯಲ್ಲೇ ಇದೆ ಬದಲಿಸುವ ಶಕ್ತಿ; ಚುನಾವಣೆ ಸುಧಾರಣೆಗೆ ಆಗಲಿ ಬದಲಾವಣೆ..

    ಒಬ್ಬರು ಅಥವಾ ಇಬ್ಬರು ಮಕ್ಕಳಿರುವ ದಂಪತಿಗೆ ಭರ್ಜರಿ ಆಫರ್​: ಮೂರನೇ ಮಗುವಿಗೆ ಜನ್ಮನೀಡಿದರೆ 50 ಸಾವಿರ ರೂಪಾಯಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts