

ನವದೆಹಲಿ: ಭಾರತೀಯ ಚಿತ್ರರಂಗದಲ್ಲಿ ಇಂತಹ ಹಲವು ನಿದರ್ಶನಗಳು ಇಂದು ನಮ್ಮ ಕಣ್ಮುಂದಿವೆ. ಹೆಸರಾಂತ ನಟರು, ನಟಿಮಣಿಯರು ಕಥೆ ಕೇಳಿ, ನಂತರ ಇದು ತಮಗೆ ಬೇಡವೆಂದು ರಿಜೆಕ್ಟ್ ಮಾಡಿದ ಸಿನಿಮಾಗಳು ಊಹೆಗೂ ಮೀರಿದಷ್ಟು ಗೆಲುವು ದಾಖಲಿಸಿ, ಭರ್ಜರಿ ಯಶಸ್ವಿಯಾಗಿವೆ. ತಾವು ನಿರಾಕರಿಸಿದ ಚಿತ್ರಗಳು ಇಷ್ಟೊಂದು ಸಕ್ಸಸ್ ಆಯ್ತಾ? ಎಂದು ಭಾರೀ ಮುಖಭಂಗಕ್ಕೆ ಒಳಗಾದ ಪ್ರಸಂಗಗಳು ಉಂಟು.
ಸದ್ಯ ಇದೇ ರೀತಿಯಲ್ಲಿ ಒಂದು ಬಾಲಿವುಡ್‌ನ ಸ್ಟಾರ್ ನಟರು ನಿರಾಕರಿಸಿದ ಸಿನಿಮಾವೊಂದು ಬಾಕ್ಸ್ ಆಫೀಸ್ನಲ್ಲಿ ಅಂದಿನ ಕಾಲಕ್ಕೆ ಮೈಲಿಗಲ್ಲು ಸಾಧಿಸಿದ್ದು, ಭರ್ಜರಿ ಗಳಿಕೆ ಕಾಣುವುದರ ಜತೆಗೆ ಬರೋಬ್ಬರಿ ಮೂರು ರಾಷ್ಟ್ರಪ್ರಶಸ್ತಿಗಳನ್ನು ಸ್ವೀಕರಿಸಿತು. ವಿಲನ್, ಆ್ಯಕ್ಷನ್ ಇಲ್ಲದ ಈ ಸಿನಿಮಾವನ್ನು ಬಾಲಿವುಡ್ ಬಾದ್ಷಾ ಶಾರೂಖ್ ಖಾನ್, ಸೈಫ್ ಅಲಿ ಖಾನ್, ರಣಬೀರ್ ಕಪೂರ್ ಮತ್ತು ಕಾಜೋಲ್ ಅವರಂತಹ ಸೂಪರ್‌ಸ್ಟಾರ್‌ಗಳು ತಿರಸ್ಕರಿಸಿದ ಚಿತ್ರ ಎಂದರೆ ನಂಬ್ತೀರಾ? ಅಸಲಿಗೆ ನಂಬಲೇಬೇಕು.
ಆ್ಯಕ್ಷನ್ ಇಲ್ಲ, ವಿಲನ್ ಇಲ್ಲದ ಸಿನಿಮಾ ಯಾವುದು? ಹಾಗಾದ್ರೆ, ಯಾರೆಲ್ಲಾ ನಟಿಸಿದ್ದಾರೆ ಈ ಚಿತ್ರದಲ್ಲಿ ಎಂಬ ಪ್ರಶ್ನೆಗೆ ಹೀಗಿದೆ ಉತ್ತರ. ಅಸಲಿಗೆ ಈ ಸಿನಿಮಾ ಅಮಿರ್ ಖಾನ್ ನಟಿಸಿದ 3 ಈಡಿಯಟ್ಸ್! ಬಿಡುಗಡೆಯಾದ ಬಳಿಕ ದೊಡ್ಡ ಬ್ಲಾಕ್ಬಸ್ಟರ್ ಚಿತ್ರವಾಗಿ ಹೊರಹೊಮ್ಮಿದ '3 ಈಡಿಯಟ್ಸ್', ಬಾಲಿವುಡ್‌ನ ಅತ್ಯಂತ ಜನಪ್ರಿಯ ಚಿತ್ರಗಳಲ್ಲಿ ಒಂದಾಯಿತು.
ಅಮೀರ್ ಖಾನ್, ಆರ್. ಮಾಧವನ್, ಶರ್ಮನ್ ಜೋಶಿ, ಬೊಮನ್ ಇರಾನಿ ಮತ್ತು ಕರೀನಾ ಕಪೂರ್ ಖಾನ್ ನಟಿಸಿದ ಈ ಚಿತ್ರವನ್ನು ಖ್ಯಾತ ನಿರ್ದೇಶಕ ರಾಜ್‌ಕುಮಾರ್ ಹಿರಾನಿ ನಿರ್ದೇಶಿಸಿದ್ದಾರೆ. ಚಿತ್ರವು ಭಾವನಾತ್ಮಕ ಮತ್ತು ಹಾಸ್ಯಮಯ ದೃಶ್ಯಗಳಿಂದ ಕೂಡಿದ್ದು, ಸಂಪೂರ್ಣ ಕಥೆಯು ಎಂಜಿನಿಯರಿಂಗ್ ಕಾಲೇಜಿನಲ್ಲಿ ಮೂವರು ವಿದ್ಯಾರ್ಥಿಗಳ ಸ್ನೇಹ ಮತ್ತು ಭಾರತೀಯ ಶಿಕ್ಷಣ ವ್ಯವಸ್ಥೆಯ ಅಡಿಯಲ್ಲಿ ಸಾಮಾಜಿಕ ಒತ್ತಡಗಳ ಬಗ್ಗೆ ಸುತ್ತುವರೆದಿದೆ.
ಅಸಲಿಗೆ ರಾಜ್‌ಕುಮಾರ್ ಹಿರಾನಿ ಅವರು ಅಮೀರ್ ಖಾನ್ ನಟಿಸಿದ ರಾಂಚೋದ್ದಾಸ್ ಚಂಚದ್ ಪಾತ್ರಕ್ಕೆ ಶಾರೂಖ್ ಖಾನ್ ಅವರನ್ನು ಮೊದಲಿಗೆ ಸಂಪರ್ಕಿಸಿದ್ದರು. ಆದರೆ, ಕಿಂಗ್ ಖಾನ್ ತಮ್ಮ ಬ್ಯುಸಿ ಶೆಡ್ಯೂಲ್ನಿಂದ ಈ ಚಿತ್ರವನ್ನು ತಿರಸ್ಕರಿಸಿದರು. ತದನಂತರ ರಣಬೀರ್ ಕಪೂರ್ ಜತೆಗೆ ಮಾತನಾಡಿದರು. ಆದರೆ, ರಣಬೀರ್ ರಾಂಚೋ ಪಾತ್ರವನ್ನು ಮಾಡಲು ಒಪಲಿಲ್ಲ.
ಇದಲ್ಲದೆ, ಆರ್. ಮಾಧವನ್ ಪಾತ್ರಕ್ಕೆ ಸೈಫ್ ಅಲಿ ಖಾನ್ ಮತ್ತು ಜಾನ್ ಅಬ್ರಹಾಂಗೆ ಕೇಳಲಾಗಿತ್ತು. ಆದರೆ ಇವರಿಬ್ಬರು ಕೂಡ ದಿನಾಂಕದ ಸಮಸ್ಯೆಗಳಿಂದ ಈ ಚಿತ್ರವನ್ನು ತಿರಸ್ಕರಿಸಿದರು. ಕೆಲವು ಸಮಸ್ಯೆಗಳಿಂದ ಅರ್ಷದ್ ವಾರ್ಸಿ ಕೂಡ ಆ ಪಾತ್ರವನ್ನು ರಿಜೆಕ್ಟ್ ಮಾಡಿದರು. ಬೋಮನ್ ಇರಾನಿ ಅವರ ಪಾತ್ರಕ್ಕೆ ಸಂಜಯ್ ದತ್ ಮೊದಲ ಆಯ್ಕೆಯಾಗಿದ್ದರು. ಆದ್ರೆ, ಆ ಪಾತ್ರವನ್ನು ಮಾಡಲು ಸಾಧ್ಯವಾಗಲಿಲ್ಲ.
ಇನ್ನು ಕರೀನಾ ಕಪೂರ್ ಖಾನ್ ಬದಲಿಗೆ ಕಾಜೋಲ್ ಚಿತ್ರದಲ್ಲಿ ನಟಿಸಬೇಕಿತ್ತು. ಆದರೆ ಆ ಪಾತ್ರ ತಮಗೆ ಖುಷಿ ಕೊಡುವುದಿಲ್ಲ ಎಂದು ಭಾವಿಸಿದ ನಟಿ, ತಮಗೆ ಒಲಿದುಬಂದ ಆಫರ್ ಅನ್ನು ತಿರಸ್ಕರಿಸಿದರು. ತದನಂತರ ನಾಯಕಿಯ ರೋಲ್ಗೆ ಕರೀನಾ ಅವರನ್ನು ಫೈನಲ್ ಮಾಡಲಾಯಿತು. ಚಿತ್ರಮಂದಿರಗಳಲ್ಲಿ ರಿಲೀಸ್ ಕಂಡ '3 ಈಡಿಯಟ್ಸ್' ಹಲವಾರು ಬಾಕ್ಸ್ ಆಫೀಸ್ ದಾಖಲೆಗಳನ್ನು ಉಡೀಸ್ ಮಾಡಿತು.
ಜಾಗತಿಕ ಬಾಕ್ಸ್ ಆಫೀಸ್ನಲ್ಲಿ ಬರೋಬ್ಬರಿ 460 ಕೋಟಿ ರೂ.ಗಳನ್ನು ಸಂಗ್ರಹಿಸುವುದರ ಜತೆಗೆ 3 ರಾಷ್ಟ್ರೀಯ ಪ್ರಶಸ್ತಿಯನ್ನು ಬಾಚಿಕೊಂಡಿತು. ಸಂಪೂರ್ಣ ಮನರಂಜನೆಯನ್ನು ಒದಗಿಸುವ ಅತ್ಯುತ್ತಮ ಜನಪ್ರಿಯ ಚಲನಚಿತ್ರ, ಅತ್ಯುತ್ತಮ ಸಾಹಿತ್ಯ ಮತ್ತು 57 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ ಅತ್ಯುತ್ತಮ ಆಡಿಯೋಗ್ರಫಿಯನ್ನು ಗೆದ್ದಿತು. ಈ ಸಿನಿಮಾ ಇಂದಿಗೂ ಭಾರತದ ಶ್ರೇಷ್ಠ ಚಿತ್ರಗಳಲ್ಲಿ ಒಂದೆಂದು ಪರಿಗಣಿಸಲ್ಪಟ್ಟಿದೆ,(ಏಜೆನ್ಸೀಸ್).