

ಮುಂಬೈ: ಬಾಲಿವುಡ್ ಅಂಗಳದಲ್ಲಿ ಸದಾ ಒಬ್ಬರಲ್ಲ ಒಬ್ಬರು ಒಂದಲ್ಲ ಒಂದು ರೀತಿಯಲ್ಲಿ ಸಿಕ್ಕಾಪಟ್ಟೆ ಚರ್ಚೆಗೆ ಗ್ರಾಸವಾಗುತ್ತಾರೆ. ಅದು ಕೇವಲ ನಟ ಅಥವಾ ನಟಿಮಣಿಯರೇ ಆಗಬೇಕು ಅಂತೇನಿಲ್ಲ. ಒಮ್ಮೊಮ್ಮೆ ನಿರ್ದೇಶಕರು, ನಿರ್ಮಾಪಕರು ನೀಡುವ ಹೇಳಿಕೆಗಳು ಕೂಡ ಊಹೆಗೂ ಮೀರಿದ ತಿರುವುಗಳನ್ನು ಪಡೆದುಕೊಳ್ಳುತ್ತದೆ. ಸದ್ಯ ಈ ಸಾಲಿಗೆ ಈಗ ಸೇರ್ಪಡೆಯಾಗಿರುವುದು ಬಾಲಿವುಡ್ನ ಜನಪ್ರಿಯ ನಿರ್ದೇಶಕ ಅನುರಾಗ್ ಕಶ್ಯಪ್!
ತನ್ನನ್ನು ಭೇಟಿ ಆಗಬೇಕೆಂದರೆ ಲಕ್ಷಗಟ್ಟಲೆ ಹಣ ಕೊಡಬೇಕು ಎಂದು ಅನುರಾಗ್ ಕೊಟ್ಟ ಹೇಳಿಕೆ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ. ಇಷ್ಟು ದಿನ ಇದ್ದಿದ್ದು ಸಾಕು! ಇನ್ಮುಂದೆ ಹೊಸಬರು, ಹೊಸ ತಂಡದವರು ನನ್ನನ್ನು ಭೇಟಿಯಾಗಬೇಕು ಎಂದರೆ ನಿಗದಿಪಡಿಸಿದ ಹಣ ಕೊಡಬೇಕು ಎಂಬ ಶಾಕಿಂಗ್ ಹೇಳಿಕೆ ನೀಡಿದ್ದಾರೆ.
ಬಾಲಿವುಡ್ನಲ್ಲಿ ಕೆಲವು ಸಿನಿಮಾಗಳನ್ನು ನಿರ್ದೇಶಿಸಿರುವ ಅನುರಾಗ್, ಹೊಸ ನಟರು, ಸಿನಿಮಾ ಕಲಾವಿದರು ಯಾರಾದರೂ ತನ್ನನ್ನು ಭೇಟಿ ಮಾಡಬೇಕು ಎಂದು ನಿರ್ಧರಿಸಿದರೆ, ಅವರು ಹಣ ಕೊಟ್ಟು ಬರಬೇಕು ಎಂದು ಹೇಳಿದ್ದಾರೆ. ಅಸಲಿಗೆ ಹಣ ಮಾಡುವ ಉದ್ದೇಶದಿಂದ ಹೀಗೆ ಹೇಳಿರಬೇಕು ಎಂದು ಅನೇಕರು ಭಾವಿಸಬಹುದು. ಆದ್ರೆ, ಇದರ ಉದ್ದೇಶ ಅದಲ್ಲ. ಬದಲಿಗೆ ತಮಗೆ ಉಂಟಾಗುತ್ತಿರುವ ಸಮಸ್ಯೆಯಿಂದಾಗಿ ಈ ನಿರ್ಧಾರವನ್ನು ಕೈಗೊಂಡಿದ್ದಾರೆ ಎಂದು ಹೇಳಲಾಗಿದೆ.
‘ಅನೇಕ ನ್ಯೂಕಮರ್ಸ್ಗೆ ನಾನು ಅವಕಾಶ ಕೊಟ್ಟು, ಸ್ಟಾರ್ ನಟರಾಗುವಂತೆ ಮಾಡಿದ್ದೇನೆ. ಆದರೆ ಅದರಲ್ಲಿ ಹಲವರು ಕಳಪೆ ಗುಣಮಟ್ಟದ, ಮಾಮೂಲಿ ಕಮರ್ಶಿಯಲ್ ಸಿನಿಮಾಗಳಿಗೆ ಮಾತ್ರ ಸೀಮಿತರಾಗಿದ್ದಾರೆ. ಇಂಥಹವರಿಗಾಗಿ ತುಂಬ ಸಮಯವನ್ನು ವ್ಯರ್ಥ ಮಾಡಿದ್ದೇನೆ. ಹಾಗಾಗಿ ಇನ್ಮುಂದೆ ನನ್ನನ್ನು ಯಾರೇ ಭೇಟಿ ಆಗಬೇಕು ಎಂದು ಅಂದುಕೊಂಡರೆ. ಅವರು ನಾನು ನಿಗದಿಪಡಿಸಿದ ಹಣ ಕೊಡಬೇಕು’ ಎಂದು ಬರೆದ ಅನುರಾಗ್ ಕಶ್ಯಪ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.
ಅನುರಾಗ್ರನ್ನು ಭೇಟಿಯಾಗುವವರಿಗೆ ನಿಗದಿಪಡಿಸಲಾದ ದರಪಟ್ಟಿ ಹೀಗಿದೆ. 10-15 ನಿಮಿಷಗಳ ಕಾಲ ಭೇಟಿಯಾಗಲು ಬಯಸಿದರೆ 1 ಲಕ್ಷ ರೂ., ಅರ್ಧ ಗಂಟೆಗೆ 2 ಲಕ್ಷ ರೂ. ಮತ್ತು 1 ಗಂಟೆಗೆ 5 ಲಕ್ಷ ಶುಲ್ಕ ವಿಧಿಸುತ್ತೇನೆ. ಇಷ್ಟು ಹಣ ಕೊಡಲು ನಿಮ್ಮಿಂದ ಆದರೆ ಖಂಡಿತವಾಗಿ ನನಗೆ ಕರೆ ಮಾಡಿ ಭೇಟಿಯಾಗಿ, ಇಲ್ಲವಾದಲ್ಲಿ ಸುಮ್ಮನಿರಿ ಎಂದು ತಿಳಿಸಿದ್ದಾರೆ,(ಏಜೆನ್ಸೀಸ್).