More

    ಈ ವರ್ಷವೂ ಯುಗಾದಿಗೆ ಶ್ರೀಶೈಲ ಲಿಂಗ ಸ್ಪರ್ಶವಿಲ್ಲ

    ರಬಕವಿ/ಬನಹಟ್ಟಿ: ಹಿಂದು ಸಂಪ್ರದಾಯದ ಮಹತ್ತರ 12 ಜ್ಯೋತಿರ್ಲಿಂಗಗಳಲ್ಲಿ ಒಂದಾಗಿರುವ ಆಂಧ್ರ ಪ್ರದೇಶದ ಸುಕ್ಷೇತ್ರ ಶ್ರೀಶೈಲ ಮಲ್ಲಿಕಾರ್ಜುನ ದೇವಾಲಯದಲ್ಲಿ ಯುಗಾದಿ ಪ್ರಯುಕ್ತ ಈ ವರ್ಷವೂ ಲಿಂಗಸ್ವರ್ಶ ದರ್ಶನವನ್ನು ಸಂಪೂರ್ಣ ನಿಷೇಧಿಸಲಾಗಿದೆ ಎಂದು ಶ್ರೀಶೈಲ ಜಗದ್ಗುರು ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯರು ಹೇಳಿದರು.

    ಅವಳಿ ನಗರದ ರಾಂಪುರ ದಾನೇಶ್ವರಿ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಜರುಗಿದ ಪಾದಯಾತ್ರಿಕರ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿ, ಮುಂಬರುವ ಮಾ.6 ರಿಂದ ಏ.10 ರವರೆಗೆ ಸಂಪೂರ್ಣವಾಗಿ ಲಿಂಗ ಸ್ಪರ್ಶ ದರ್ಶನವನ್ನು ನಿಷೇಧಿಸಿ, ಅಲಂಕಾರ ದರ್ಶನಕ್ಕೆ ಮಾತ್ರ ಅವಕಾಶ ಮಾಡಲಾಗಿದ್ದು, ಭಕ್ತರು ಸಹರಿಸಬೇಕು. ಆದರೆ ಮಾ.27 ರಿಂದ ಏ.5 ವರೆಗೆ ನಿರ್ದಿಷ್ಟ ಸಮಯದಲ್ಲಿ 2 ಗಂಟೆ ಸ್ಪರ್ಶಲಿಂಗ ದರ್ಶನ ನಂತರ 2 ಗಂಟೆ ಅಲಂಕಾರ ದರ್ಶನಕ್ಕೆ ಅವಕಾಶ ಕಲ್ಪಿಸಿದೆ. ಮುಂಬರುವ ಏ.9 ರಂದು ಯುಗಾದಿ ಪ್ರಯುಕ್ತ ಯಾವುದೇ ಅಡೆತಡೆಗಳಿಲ್ಲದೆ ಸುಗಮವಾಗಿ ಜಾತ್ರೆ ನಡೆಸಲು ಆಡಳಿತ ಮಂಡಳಿ ತಯಾರಿ ಮಾಡುತ್ತಿದೆ ಎಂದರು.

    ಶ್ರೀಶೈಲದ ಪ್ರಧಾನ ಅರ್ಚಕ ಶಿವಶಂಕರಯ್ಯ ಮಾತನಾಡಿ, ಭಕ್ತರ ಆಶಯದಂತೆ ಮಾ.27 ರಿಂದ ಏಪ್ರಿಲ್ 5 ರವರೆಗೆ ನಿರ್ದಿಷ್ಟ ಸಮಯದಲ್ಲಿ ಜ್ಯೋತಿರ್ಲಿಂಗ ಸ್ಪರ್ಶಲಿಂಗ ದರ್ಶನಕ್ಕೆ ಅವಕಾಶ ನೀಡಲಾಗಿದೆ. ಪ್ರತಿ ದಿನ ಪಾದಯಾತ್ರಿಕರಿಗೆ 2 ಗಂಟೆ, ಇತರ ಭಕ್ತರಿಗೆ 2 ಗಂಟೆ ಸೇರಿದಂತೆ ದೇವಸ್ಥಾನದ ಸುಪ್ರಭಾತ, ಆರತಿ, ದೇವಸ್ಥಾನ ಕಾರ್ಯಕ್ರಮ ಹಾಗೂ ಬ್ರಹ್ಮೋತ್ಸವ ಉತ್ಸವಗಳ ಬಿಡುವಿನ ಸಮಯಗಳಲ್ಲಿ ಭಕ್ತರಿಗೆ ಮುಕ್ತ ಅವಕಾಶ ಕಲ್ಪಿಸಲಾಗುವುದು ಎಂದರು.

    ಸಾವಿರಾರು ಕಿ.ಮೀ.ದಿಂದ ಪಾದಯಾತ್ರೆ ಮೂಲಕ ಬರುವ ಭಕ್ತರಿಗೆ ಎಂದಿನಂತೆ ಮಾರ್ಗ ಮಧ್ಯ ಭಾಗದಲ್ಲಿ ದಾಸೋಹ ಸೇವೆ ಮಾಡುವ ಭಕ್ತರು ಸೇವೆ ಮಾಡಲು ಯಾವುದೇ ಅಡ್ಡಿ ಆತಂಕಗಳಿಲ್ಲ. ದೇವಸ್ಥಾನದ ಆವರಣದಲ್ಲಿ ಗದ್ದಲ ಮಾಡದೆ ಶಾಂತತೆ ಕಾಯ್ದುಕೊಳ್ಳಬೇಕು ಎಂದರು.
    ಬನಹಟ್ಟಿ ಹಿರೇಮಠದ ಶರಣಬಸವ ಶಿವಾಚಾರ್ಯರು, ಮುತ್ತುಸ್ವಾಮಿ ಹಿರೇಮಠ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts