More

    ಮರಾಠಿ ನೆಲದಲ್ಲಿ ಕನ್ನಡಿಗನ ಸಾಧನೆ

    ರಬಕವಿ/ಬನಹಟ್ಟಿ: ಕನ್ನಡ ಮಾಧ್ಯಮದಲ್ಲೇ ಪಿಯುವರೆಗೆ ಅಭ್ಯಸಿಸಿ ನೆರೆಯ ಮಹಾರಾಷ್ಟ್ರದ ನಾಗಪುರ ಪಶು ವೈದ್ಯಕೀಯ ವಿಶ್ವವಿದ್ಯಾಲಯದ ಇತಿಹಾಸದಲ್ಲೇ ವಿವಿಯ ಎಲ್ಲ ವಿಭಾಗಗಳೂ ಸೇರಿ ಸರ್ಜರಿಯಲ್ಲಿ ಗರಿಷ್ಠ ಅಂಕಗಳನ್ನು ಗಳಿಸಿ ದಾಖಲೆ ಸೃಷ್ಟಿಸುವ ಜತೆಗೆ ವಿವಿಗೆ ಪ್ರಥಮ ರ‌್ಯಾಂಕ್ ಪಡೆದ ಬನಹಟ್ಟಿಯ ಸುಪ್ರೀತ್‌ಕುಮಾರ ಸಾಗರ ಕನ್ನಡಿಗರಿಗೆ ಹೆಮ್ಮೆ ಮೂಡಿಸಿದ್ದಾರೆ.

    ರಬಕವಿ ಬಾಲಕಿಯರ ಪ್ರೌಢಶಾಲೆಯ ಪ್ರಾಥಮಿಕ ವಿಭಾಗದ ಸಹ ಶಿಕ್ಷಕಿ ಸುಲೋಚನಾ ಗೋಪಾಲ ಸರಿಕರ ಎಂಬುವರ ಪುತ್ರ ಸುಪ್ರೀತ್ ತನ್ನ ಬಾಲ್ಯದ ಶಿಕ್ಷಣವನ್ನು ಬನಹಟ್ಟಿಯಲ್ಲೇ ಪೂರೈಸಿದ್ದಾರೆ. ಮಲ್ಲಿಕಾರ್ಜುನ ಶಿಕ್ಷಣ ಸಂಸ್ಥೆಯಲ್ಲಿ ಪ್ರಾಥಮಿಕ, ಎಸ್.ಆರ್.ಎ. ಹೈಸ್ಕೂಲ್‌ದಲ್ಲಿ ಮಾಧ್ಯಮಿಕ, ಯಲ್ಲಟ್ಟಿಯ ಕೊಣ್ಣೂರ ವಿಜ್ಞಾನ ಪಿಯು ಕಾಲೇಜಿನಲ್ಲಿ ಪಿಯುಸಿ ವಿಜ್ಞಾನ ಶಿಕ್ಷಣ ಹಾಗೂ ಬೆಂಗಳೂರಿನ ಹೆಬ್ಬಾಳದ ಪಶುವೈದ್ಯಕೀಯ ಮಹಾವಿದ್ಯಾಲಯದಲ್ಲಿ ಬಿವಿಎಸ್‌ಸಿ ಪದವಿಯನ್ನು ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ಸ್ನಾತಕೋತ್ತರ ಪದವಿ ಪ್ರವೇಶಕ್ಕಾಗಿ ರಾಷ್ಟ್ರೀಯ ಅರ್ಹತಾ ಪರೀಕ್ಷೆ ಬರೆದು ಮಹಾರಾಷ್ಟ್ರ ರಾಜ್ಯದ ಲಾತೂರ ಜಿಲ್ಲೆಯ ಉದ್ಗೀರ್ ಪಶು ವೈದ್ಯಕೀಯ ವಿಶ್ವವಿದ್ಯಾಲಯದ ಸ್ನಾತಕೋತ್ತರ ಸರ್ಜರಿ ವಿಭಾಗದಲ್ಲಿ ಪ್ರವೇಶಾತಿ ಪಡೆದರು.

    ಕರ್ನಾಟಕ ಮೂಲದ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದ ಸುಪ್ರೀತ್‌ಗೆ ವಿವಿಯ ಸ್ನಾತಕೋತ್ತರ ಸರ್ಜರಿ ವಿಭಾಗದ ಮುಖ್ಯಸ್ಥರು ಪ್ರೋತ್ಸಾಹಿಸಿದರು. ಪಶು ಚಿಕಿತ್ಸೆ ಸೇರಿ ಶಸ ಚಿಕಿತ್ಸೆಗಳಲ್ಲಿ ಪ್ರಾಶಸ್ತ್ಯ ನೀಡಿದರು. ಎರಡೂವರೆ ವರ್ಷಗಳ ಕಲಿಕೆಯಲ್ಲಿ ಇಡಿ ಸರ್ಜರಿ ವಿಭಾಗವನ್ನು ನಿಭಾಯಿಸುವ ಕೆಲಸ ಸೇರಿ ದೇಶೀಯ ಹೋರಿಗಳ ವೀರ್ಯ ವೃದ್ಧಿ, ಚಿಕಿತ್ಸೆ, ವೀರ್ಯ ಸಂಗ್ರಹಿಸಿದ ದಾಖಲೆಯ ಕಾರ್ಯಕ್ಕೆ ವಿಶ್ವವಿದ್ಯಾಲಯ ಕಲಿಕಾ ದಿನಗಳಲ್ಲೇ ಪ್ರಶಂಸಾ ಪತ್ರ ನೀಡಿ ಗೌರವಿಸಲಾಗಿದೆ. ಇದೇ ಅವಧಿಯಲ್ಲಿ ಸಮಯದ ಹೊಂದಾಣಿಕೆ ಮಾಡಿಕೊಂಡು ಎನ್‌ಇಟಿ ಪರೀಕ್ಷೆಯನ್ನೂ ಸುಪ್ರೀತ್ ಪೂರೈಸಿದ್ದಾರೆ. ಪಶು ಸೇವೆ ಜತೆಗೆ ಬೋಧಕರಾಗುವ ಆಸೆಯಿರಿಸಿಕೊಂಡಿದ್ದಾರೆ.

    ಶೇ.94.2 ಗರಿಷ್ಠ ಅಂಕ ಗಳಿಕೆ
    ನಾಗಪುರ ಪಶು ವೈದ್ಯಕೀಯ ವಿಶ್ವವಿದ್ಯಾಲಯ ತನ್ನ ಅಧೀನ ಮಹಾವಿದ್ಯಾಲಯಗಳ ಲಿತಾಂಶ ಪ್ರಕಟಿಸಿದ್ದು, ಸುಪ್ರೀತ್‌ಕುಮಾರ ಇಡಿ ವಿಶ್ವವಿದ್ಯಾಲಯ ವ್ಯಾಪ್ತಿಯ ಎಲ್ಲ ವಿಭಾಗಗಳಲ್ಲೂ ಗರಿಷ್ಠ ಶೇ.94.2 ಅಂಕ ಗಳಿಸಿ ದಾಖಲೆ ಸೃಷ್ಟಿಸಿ ವಿಶ್ವವಿದ್ಯಾಲಯಕ್ಕೆ ಪ್ರಥಮ ರ‌್ಯಾಂಕ್ ಪಡೆದಿದ್ದಾರೆ ಎಂದು ಘೋಷಿಸಿ ವಿವಿಯಲ್ಲಿ ನಡೆದ ಘಟಿಕೋತ್ಸವದಲ್ಲಿ ಸೋಮವಾರ ಪದವಿ ಪ್ರದಾನ ಮಾಡಿ ಗೌರವಿಸಲಾಗಿದೆ.
    ಬಾಲ್ಯದಿಂದಲೂ ಅಂದಿನ ಪಾಠ ಅಂದೇ ಮುಗಿಸುವ, ಪುನರಾವರ್ತಿಸುವ ಪರಿಪಾಠವಿತ್ತು. ಪ್ರಾಥಮಿಕ- ಪ್ರೌಢಶಾಲಾ ಹಂತದಲ್ಲಿ ಅತ್ಯುತ್ತಮ ಶಿಕ್ಷಕರ ಬೋಧನೆ ಹಾಗೂ ಪಾಲಕರ ಸಹಕಾರ ದೊರಕಿದೆ. ಪಿಯು ಬಳಿಕ ನನಗೆ ಎಂಬಿಬಿಎಸ್ ಸೀಟು ಮೊದಲ ಪ್ರಾಶಸ್ತ್ಯದಲ್ಲೇ ಅಗ್ರಗಣ್ಯ ಕಾಲೇಜುಗಳಲ್ಲಿ ದೊರೆಯುತ್ತಿತ್ತಾದರೂ ನನ್ನ ತಂದೆಯ ಆಶಯದಂತೆ ನಾನು ಪಶು ವೈದ್ಯ ವಿಜ್ಞಾನದಲ್ಲಿ ಅಧ್ಯಯನ ಮಾಡಲು ನಿರ್ಧರಿಸಿದೆ. ಉತ್ತಮ ಬೋಧಕ ವರ್ಗ, ಶಿಕ್ಷಕರ ಪ್ರೋತ್ಸಾಹ, ಸಾಧನೆಯ ತುಡಿತವಿದ್ದರೆ ಯಶಸ್ಸು ಸುಲಭ ಎಂಬುದು ನಾನು ಕಂಡುಕೊಂಡ ಸತ್ಯವಾಗಿದೆ.
    ಡಾ.ಸುಪ್ರೀತ್‌ಕುಮಾರ ಸಾಗರ, ಬನಹಟ್ಟಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts