More

    ಶಿಕ್ಷಕರು ಮೌಲ್ಯಯುತ ಪ್ರಜೆಗಳನ್ನು ತಯಾರು ಮಾಡಲಿ

    ರಬಕವಿ/ಬನಹಟ್ಟಿ: ಶಿಕ್ಷಕರು ಮೌಲ್ಯಯುತ ಪ್ರಜೆಗಳನ್ನು ತಯಾರು ಮಾಡಬೇಕೆಂದು ರಬಕವಿಯ ಗುರುದೇವ ಬ್ರಹ್ಮಾನಂದ ಆಶ್ರಮದ ಗುರುಸಿದ್ಧೇಶ್ವರ ಶ್ರೀಗಳು ಹೇಳಿದರು.

    ಬನಹಟ್ಟಿಯ ಬಂಗಾರೆವ್ವ ತಟ್ಟಿಮನಿ ಸಮುದಾಯ ಭವನದಲ್ಲಿ ಭಾನುವಾರ ಶ್ರೀ ಎಂ.ಎಸ್. ಮುನ್ನೋಳ್ಳಿ ಅಭಿಮಾನಿ ಬಳಗದಿಂದ ಹಮ್ಮಿಕೊಂಡಿದ್ದ ಉತ್ತಮ ಶಿಕ್ಷಕರಿಗೆ ಕಾಯಕಶ್ರೀ ಪ್ರಶಸ್ತಿ ಪ್ರದಾನ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

    ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ’ ಎಂದು ದಾರ್ಶನಿಕರೊಬ್ಬರು ಹೇಳಿದ್ದಾರೆ. ಅಂದರೆ ಏನೂ ತಿಳಿಯದ ಒಬ್ಬ ಸಾಮಾನ್ಯ ಮನುಷ್ಯನನ್ನು ಜೀವನದ ಮೌಲ್ಯಗಳು, ಜೀವನದ ಅರ್ಥ, ಗುರಿ ಆ ಗುರಿ ಸಾಧಿಸಲು ಇರುವ ಮಾರ್ಗ ಮುಂತಾದವುಗಳನ್ನು ಗುರುವಿನ ಮಾರ್ಗದರ್ಶನವಿಲ್ಲದೆ ತಿಳಿಯಲು ಸಾಧ್ಯವಿಲ್ಲ. ಪ್ರಪಂಚದ ಮಹಾನ್ ವ್ಯಕ್ತಿಗಳು, ದಾರ್ಶನಿಕರು, ಸಂತರು, ರಾಜಕೀಯ ಮುತ್ಸದ್ದಿಗಳ ಜೀವನದ ವಿವಿಧ ಹಂತಗಳನ್ನು ಗಮನಿಸಿದಾಗ ಅವರ ಜೀವನದ ಪ್ರತಿ ಹಂತದಲ್ಲಿ ಮಾರ್ಗದರ್ಶಕರಾಗಿ ಒಬ್ಬ ಗುರು ಜತೆಗಿದ್ದನೆಂದು ತಿಳಿಯುತ್ತದೆ. ಮನಸ್ಸು ಎಲ್ಲ ಕಡೆಗೂ ಓಡುತ್ತಿರುತ್ತದೆ. ಆದರೆ, ಅಂತಹ ಮನಸ್ಸಿಗೆ ಸರಿಯಾದ ದಾರಿ ತೋರುವ, ಬುದ್ಧಿಯನ್ನು ಉಪಯೋಗಿಸಿ ಸಮಾಜಕ್ಕೆ ಒಳಿತು ಮಾಡುವ ಮಾರ್ಗದರ್ಶನ ತೋರಿಸುವ ಶಕ್ತಿಯಿರುವುದು ಕೇವಲ ಗುರುವಿನಲ್ಲಿ ಮಾತ್ರ ಎಂದು ಶ್ರೀಗಳು ಹೇಳಿದರು.

    ಹಾರುಗೇರಿಯ ಐ. ಆರ್. ಮಠಪತಿ ಮಾತನಾಡಿ, ಶಿಕ್ಷಕರ ಸ್ಥಾನಮಾನಗಳು ಪಲ್ಲಟವಾಗುತ್ತಿವೆ. ಗುರುಗಳ ಮೇಲಿನ ಗೌರವ ಮೊದಲಿಂತಿಲ್ಲ. ಇದಕ್ಕೆ ಕೇವಲ ವಿದ್ಯಾರ್ಥಿಗಳಷ್ಟೇ ಕಾರಣರಲ್ಲ. ಅವರ ಪೋಷಕರು, ನಮ್ಮ ಸಾಮಾಜಿಕ ವ್ಯವಸ್ಥೆ, ಮಾದ್ಯಮಗಳೂ ಕಾರಣ. ಅಲ್ಲದೆ, ಶಿಕ್ಷಕರೂ ಹಲವೆಡೆ ಹಾದಿ ತಪ್ಪುತ್ತಿದ್ದಾರೆ. ಅವರ ವರ್ತನೆ ನಡುವಳಿಕೆಗಳು ಅನುಕರಣೀಯವಾಗಿ ಎಲ್ಲ ಸಂದರ್ಭದಲ್ಲೂ ಇರುವುದಿಲ್ಲ. ಇದರಿಂದ ನಮ್ಮ ಸಾಮಾಜಿಕ ತಳಹದಿಯೇ ಅಲುಗಾಡುತ್ತಿದೆ. ಸಮಾಜದಲ್ಲಿ ಅತ್ಯಾಚಾರ ಮೋಸ, ವಂಚನೆ ಭ್ರಷ್ಟಾಚಾರದಂತ ಘಟನೆಗಳು ಇಂದು ಹೆಚ್ಚಾಗುತ್ತಿವೆ. ಇದಕ್ಕೆಲ್ಲ ಸರಿಯಾದ ಗುರುವಿನ ಮಾರ್ಗದರ್ಶನ ಇಲ್ಲದಿರುವುದೇ ಕಾರಣ ಎಂದರು.

    ಬೆಂಗಳೂರಿನ ನೃಪತುಂಗ ವಿವಿ ಕುಲಪತಿ ಡಾ. ಶ್ರೀನಿವಾಸ ಬಳ್ಳಿ ಮಾತನಾಡಿ, ಸಾವಿರಾರು ವಿದ್ಯಾರ್ಥಿಗಳಿಗೆ ಶಿಕ್ಷಣ ಕಲಿಸಿ ನುಡಿದಂತೆ ನಡೆದು ಹೇಳಿದಂತೆ ಬದುಕು ಸಾಗಿಸಿ ತಮ್ಮ ಜೀವಿತ ಅವಧಿಯವರೆಗೂ ಉತ್ತಮ ಆರೋಗ್ಯ ಹೊಂದಿ ಸಹಜ ವಯೋವೃದ್ಧತೆಯಿಂದ ಅಸುನೀಗಿ ಅವರ ಜೀವನಶೈಲಿ ಇಂದಿನ ಯುವಕರಿಗೆ ಮಾದರಿಯಾಗಿ ಮರೆಯಾದವರು ದಿ. ಎಂ. ಎಸ್. ಮುನ್ನೋಳ್ಳಿಯವರು ಎಂದರು.

    ಶಿಕ್ಷಣ ಕ್ಷೇತ್ರದಲ್ಲಿ ಸಾಧನೆಗೈದ ಭುವನೇಶ್ವರಿ ಖವಾಸಿ, ಬನಹಟ್ಟಿಯ ಎ. ಬಿ. ಭುಜಂಗ, ಮುಗಳಖೋಡದ ಜಿ.ಎಂ. ಅಂಗಡಿ, ಹೊಸೂರಿನ ಸಿ.ಪಿ. ಕರಲಟ್ಟಿ, ಮೈಗೂರಿನ ವಿ. ಜಿ. ಸವದಿ ಅವರಿಗೆ ಕಾಯಕಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಎಂ. ಎಸ್. ಮುನ್ನೋಳಿ ಅಭಿಮಾನಿ ಬಳಗದ ಅಧ್ಯಕ್ಷ ಶ್ರೀಶೈಲ್ ದಬಾಡಿ ಅಧ್ಯಕ್ಷತೆ ವಹಿಸಿದ್ದರು. ಬಸವರಾಜ ಭದ್ರನ್ನವರ, ಸುರೇಶ ಕೋಲಾರ, ಎಸ್. ಬಿ. ಹಾವಿನಾಳ, ಪ್ರೊ. ವೈ. ಬಿ. ಕೊರಡೂರ, ಬೋರಮ್ಮ ಬಾಗಲಕೋಟ, ಶಿವಕುಮಾರ ಜುಂಜಪ್ಪನವರ, ಸಿದ್ದನಗೌಡ ಪಾಟೀಲ, ಡಾ. ಪಂಡಿತ ಪಟ್ಟಣ, ಶ್ರೀಪಾದ ಬಾಣಕಾರ, ಬಸಪ್ಪ ಕೊಣ್ಣೂರ, ದಾನಪ್ಪ ಹುಲಜತ್ತಿ, ಲಕ್ಷ್ಮಣ ಗುಂಡಿ, ಸಂಜಯ ವಸದ, ಶಿವಪ್ಪ ಹಕಲದಡ್ಡಿ, ಶೇಖರ ಜವಳಗಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts