More

    ನಸಿಸುತ್ತಿರುವ ಜನಪದ ಸಾಹಿತ್ಯ

    ಸಕಲೇಶಪುರ: ಜನಪದ ಸಾಹಿತ್ಯ ಉಳಿದಾಗ ಮಾತ್ರ ಇಂದಿನ ಶಿಷ್ಟ ಸಾಹಿತ್ಯ ಉಳಿಯಲು ಸಾಧ್ಯ ಎಂದು ಜಾನಪದ ತಜ್ಞ ಪಿಚ್ಚಳ್ಳಿ ಶ್ರೀನಿವಾಸ್ ಹೇಳಿದರು.

    ಹೆತ್ತೂರು ಗ್ರಾಮದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹಮ್ಮಿಕೊಂಡಿದ್ದ 22ನೇ ಜಿಲ್ಲಾ ಸಾಹಿತ್ಯ ಸಮ್ಮೇಳನದ ಜನಪದ ಗಾಯನ ಹಾಗೂ ವಿಶ್ಲೇಷಣೆ ಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

    ಜನಪದ ಇಂದು ಆಳುವವನ ನಿರ್ಲಕ್ಷ್ಯಕ್ಕೆ ಸಿಲುಕಿ ನಾಶದ ಅಂಚಿಗೆ ತಳ್ಳಲ್ಪಟ್ಟಿದೆ. ಇದರಿಂದಾಗಿ ಹೊಸ ಜನಪದಕಾರರ ಕೊರತೆ ತೀವ್ರವಾಗಿ ಕಾಡುತ್ತಿದೆ. ಇದರಿಂದಾಗಿ ಅತ್ಯಮೂಲ್ಯ ಸಾಹಿತ್ಯ ಪ್ರಕಾರ ನಶಿಸುವ ಹಂತಕ್ಕೆ ತಲುಪಿದೆ. ಈ ಬೆಳವಣಿಗೆ ಶಿಷ್ಟ ಸಾಹಿತ್ಯಕ್ಕೆ ದೊಡ್ಡ ಪೆಟ್ಟು ನೀಡಲಿದೆ ಎಂದು ಕಳವಳ ವ್ಯಕ್ತಪಡಿಸಿದರು.

    ಜನಪದದಲ್ಲಿ 158 ಕಲಾ ಪ್ರಕಾರಗಳಿವೆ. ಇದರಲ್ಲಿ 18 ರಿಂದ 20 ಆಚರಣ ಪ್ರಧಾನ ಪ್ರಕಾರಗಳಿವೆ. ಆಧುನಿಕ ಪ್ರಪಂಚದಲ್ಲಿ ಬದುಕುತಿರುವ ನಮಗೆ ಚರ್ಚೆ-ಸಂವಾದಗಳೆಂದರೆ ದಿಗಿಲು. ನಮಗೆ ಯಾವುದೇ ವಿಚಾರಗಳ ಬಗ್ಗೆ ಪರಿಪೂರ್ಣತೆ ಹೊಂದಿಲ್ಲದಿರುವುದು ಇದಕ್ಕೆ ಕಾರಣ. ಸೊಬಾನೆ ಪದದ ಪಾರುಪತ್ಯ ಮೆರೆಯುತ್ತಿರುವುದು ಮಹಿಳೆಯರಲ್ಲ, ಪುರುಷರು. ಜನಪದದ ಎಲ್ಲ ಪ್ರಕಾರಗಳ ಮೂಲ ಮಹಿಳೆಯರು. ಜನಪದರು ಅವಿದ್ಯಾವಂತರಾದರೂ ಇಂದಿನ ವಿದ್ಯಾವಂತರಿಗಿಂತ ಹತ್ತು ಪಟ್ಟು ಹೆಚ್ಚಿನ ವಿಚಾರವಂತರಾಗಿರುತ್ತಿದ್ದರು. ಜನಪದರ ಪರಮ ಶತ್ರು ಬಡತನ. ಜನಪದದ ಅತಿರಥ ಮಹರಾಥರು ಬಡತನದಲ್ಲಿ ಹುಟ್ಟಿ ಗುಡಿಸಲಿನಲ್ಲೇ ಅಸುನೀಗಿದ್ದಾರೆ. ಆದರೆ, ಇವರ ನೆರವು ಪಡೆದವರೂ ಸಹ ಜನಪದವನ್ನು ವೃತ್ತಿಯಾಗಿ ತೆಗೆದುಕೊಳ್ಳಲು ಹಿಂಜರಿಕೆ ಇಂದಿನ ಯುವಜನರಿಗೆ ಇದೆ ಎಂದು ಬೇಸರಿಸಿದರು.

    ಜನಪದ ಸಾಹಿತ್ಯ ವಿಶ್ಲೇಷಣೆ ಮಾಡಿ ಮಾತನಾಡಿದ ಸಾಹಿತಿ ಹುಲ್ಲಹಳ್ಳಿ ರಾಜೇಶ್ವರಿ, ಜನಪದ ಸಾಹಿತ್ಯದ ಮೂಲ. ಸಾಹಿತ್ಯ ಸೃಷ್ಟಿಸುವ ಮುನ್ನ ನಡೆ-ನುಡಿ, ಕಂಡಿದ್ದು-ಕೇಳಿದ್ದೆನ್ನಲ್ಲ ಹಾಡುಗಳನ್ನಾಗಿ ಬಾಯಿಮೂಲಕ ಹಾಡಿದವರು ಜನಪದರು. ಹತ್ತು ಪದಗಳಲ್ಲಿ ಹೇಳುವ ಪದವನ್ನು ಒಂದು ಪದದಲ್ಲಿ ಹೇಳು ಶಕ್ತಿ ಜನಪದಕ್ಕಿದೆ. ಇಂತಹ ಅನರ್ಘ್ಯ ಪದಗಳನ್ನು ಪರಿಚಯಿಸಿದ ಹಿಂದಿನ ತಲೆಮಾರಿನ ಜನರು ನಮಗೆ ಅತ್ಯಮೂಲ್ಯ ನಿಧಿಯನ್ನು ಬಿಟ್ಟುಹೋಗಿದ್ದಾರೆ ಎಂದರು.
    ಅವರೇಕಾಡು ವಿಜಯಕುಮಾರ್, ಮಂಟೆಸ್ವಾಮಿ ಹಾಡಿನ ಕುರಿತು ವಿಶ್ಲೇಷಣೆ ಮಾಡಿ, ಈ ಹಾಡು ಕತ್ತಲೆ ರಾಜ್ಯದ ಜನಪದ ಸುಪ್ರಭಾತ ಎಂದರೇ ತಪ್ಪಾಗದು. ಮನುಷ್ಯ ಮೇಲುಕೀಳುಗಳನ್ನು ದಾಟಿ ಏಕತೆ ಸಾಧಿಸುವುದು ಸಾಹಿತ್ಯದ ಉದ್ದೇಶವಾಗಿದೆ. ಮಂಟೆಸ್ವಾಮಿ ಪದ್ಯಗಳನ್ನು ಮುಂದುವರಿಸಿಕೊಂಡು ವಿಶೇಷ ಧರಸಿನಲ್ಲಿ ಕಂಡು ಬರುವ ಮಂಟೇಸ್ವಾಮಿ ಪದಗಾರರನ್ನು ನೀಲುಗಾರರು ಎಂದು ಕರೆಯಲಾಗುತ್ತದೆ. ಇವರು ಒಂದು ಬಗೆಯ ಸಾಹಿತ್ಯ ಪ್ರಚಾರಕರು ಹಾಗೂ ಇತಿಹಾಸವನ್ನು ಮುಂದಿನ ತಲೆಮಾರಿಗೆ ಕೊಂಡೊಯ್ಯವ ರೂವಾರಿಗಳು ಎಂದರು.

    ಶ್ರೀಸಾಮಾನ್ಯರು ಜೀವನ, ಕಷ್ಟ ಕಾರ್ಪಣ್ಯಗಳನ್ನು ಹೊರ ಪ್ರಪಂಚಕ್ಕೆ ಭಿತ್ತಿರಿಸುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಿದ ಮಂಟೇಸ್ವಾಮಿ ಅವರನ್ನು ‘ ಜನಪದ ಕಾವ್ಯಗಳ ಪಿತಾಮಹ’ ಎಂದರೆ ತಪ್ಪಾಗದು. ಮಂಟೇಸ್ವಾಮಿ ಕಾಲಜ್ಞಾನಿಯಾಗಿದ್ದು, ಅವರು ಹೇಳಿದ ಪ್ರತಿಯೊಂದು ಮಾತುಗಳು ಇಂದು ಸತ್ಯವಾಗುತ್ತಿವೆ. ಮಂಟೆಸ್ವಾಮಿ ಪದಗಳು ಸಂಬಂಧಗಳ ಎಳೆಯನ್ನು ಬಿಚ್ಚಿಡುತ್ತವೆ ಎಂದರು.

    ಬನುಮ ಗುರುದತ್ತ ಅವರು ಹಾಡಿದ ‘ಎಂಥವನಿರ ಬೇಕಾ’ ಎಂಬ ಹಾಡಿನ ವಿಶ್ಲೇಷಣೆ ಮಾಡಿದ ಶಂಕರೇಗೌಡ, ಅಕ್ಷರ ರಹಿತ ಒಂದು ಸಾಹಿತ್ಯವೇ ಜನಪದ ಸಾಹಿತ್ಯ. ಶಿಷ್ಟ ಸಾಹಿತ್ಯ ಹೊಟ್ಟೆ ತುಂಬಿದವರ ತೇಗು. ಬೇಕಾದ್ದನ್ನು ಬರೆಯಬಹುದಾಗಿದೆ. ಆದರೆ ಜನಪದ ಸಾಹಿತ್ಯ ಅನುಭವದ ಮೂಲಕ ರಚನೆಗೊಂಡ ಸಾಹಿತ್ಯ. ಶಿಷ್ಟ ಸಾಹಿತ್ಯದಲ್ಲಿ ಗಂಡಸರು-ಹೆಂಗಸರನ್ನು ವರ್ಣಿಸಿರುವ ಹಲವು ಪದಗಳು ದೊರೆಯುತ್ತವೆ. ಆದರೆ, ಹೆಣ್ಣೊಬ್ಬಳು ಗಂಡನ್ನು ವರ್ಣಿಸುವುದು ಜನಪದದಲ್ಲಿ ದೊರೆಯುವುದು ಸಾಧ್ಯವಾಗಿದೆ ಎಂದರು.

    ಲಕ್ಷ್ಮಣ್ ತಟ್ಟೆಕೆರೆ ಹಾಡಿದ ಉತ್ತರಾಜಮ್ಮನ ಕಥಾಪ್ರಸಂಗ ವಿಶ್ಲೇಷಣೆ ಮಾಡಿದ ಪ್ರೊ.ಮಲ್ಲೇಶ್‌ಗೌಡ, ದೇವರ ಮೇಲೆ ಕೋಪ, ಸಲುಗೆ, ಭಕ್ತಿ ಎಲ್ಲವೂ ಜನಪದರಿಗೆ ಇದೆ. ಬಯಸಿದ್ದು ಸಿಗದಿದ್ದಾಗ ದೇವರನ್ನು ಕೆಟ್ಟದ್ದಾಗಿ ಬೈಯುವ ಸಲುಗೆ ಜನಪದರಿಗಿದೆ. ಭಗವಂತನನ್ನು ಎಷ್ಟು ಅಪ್ಯಾಯಮಾನವಾಗಿ ಆರಾಧಿಸುವ ಜನಪದರು ಅಷ್ಟೇ ನಿಷ್ಕೃಷ್ಟವಾಗಿ ಬೈಯುವ ಶಕ್ತಿ ಹೊಂದಿದ್ದರು. ಮನುಷ್ಯ ತನ್ನಲ್ಲಿರುವ ಎಲ್ಲ ಗುಣಗಳನ್ನು ಭಗವಂತನಲ್ಲಿ ಇಟ್ಟು ನೋಡಿ ಆನಂದಿಸುತ್ತಾನೆ. ಇದನ್ನೆಲ್ಲ ಅಚ್ಚುಕಟ್ಟಾಗಿ ಜನಪದದಲ್ಲಿ ಕಟ್ಟಿಕೊಟ್ಟಿದ್ದಾರೆ ಜನಪದರು ಎಂದರು.
    ಗೋಷ್ಟಿಯಲ್ಲಿ ಪೂರ್ಣಿಮಾ, ದೊಡ್ಡಮನೆ ಆನಂದ್, ಕಟ್ಟಾಯ ಶಿವಕುಮಾರ್, ಕೆಂಚೇಗೌಡ ಮುಂತಾದವರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts