More

    ತಾಯಿ ಭಾಷೆ ಅಳಿಸಲು ಸಾಧ್ಯವಿಲ್ಲ

    ಬಾಗಲಕೋಟೆ: ಕನ್ನಡ ಭಾಷೆ, ಸಾಹಿತ್ಯಕ್ಕೆ ಎರಡು ಸಾವಿರ ವರ್ಷಗಳ ಭವ್ಯ ಇತಿಹಾಸ, ಗಮ್ಯತೆ ಇದೆ. ಭಾಷೆ ನಶಿಸಿ ಹೋಗುತ್ತದೆ ಎನ್ನುವ ಆತಂಕ, ನೋವು ಅರ್ಥಹೀನ. ಯಾರಿಂದಲೂ ತಾಯಿ ಭಾಷೆ ಕನ್ನಡ ಅಳಿಸಲು ಸಾಧ್ಯವಿಲ್ಲ. ಮಾತೃಭಾಷೆ ತಾಯಿಗೆ ಸಮಾನ ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದರು.

    ತಾಲೂಕಿನ ಶಿರೂರ ಗ್ರಾಮದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಭಾನುವಾರ ಹಮ್ಮಿಕೊಂಡಿದ್ದ ಜಿಲ್ಲಾ 9 ನೇ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.

    ಮಾತೃಭಾಷೆಗೆ ತಾಯಿ ಸ್ಥಾನಮಾನ ನೀಡಿದ್ದೇವೆ. ಆದ್ದರಿಂದ ನಶಿಸಲು ಸಾಧ್ಯವಿಲ್ಲ. ಇತಿಹಾಸ ಪುಟ ತೆರೆದು ನೋಡಿ 600 ವರ್ಷಗಳ ಪರಕೀಯರು ನಮ್ಮನ್ನು ಆಳಿದರು. ತಮ್ಮ ಭಾಷೆ ಹೇರಿದರು. ಆಡಳಿತ ನಡೆಸಿದರು. ಆದರೂ ಕನ್ನಡ ಭಾಷೆ, ಹಿಂದು ಧರ್ಮ ಉಳಿದುಕೊಂಡಿದೆ ಎಂದರೆ ಅದರೊಳಗಿನ ಶಕ್ತಿ ಕಾರಣ. ಪ್ರಪಂಚದ ಮಾರುಕಟ್ಟೆಯಲ್ಲಿ ಸ್ಪರ್ಧೆ ನಡೆಸಲು, ಸಂವಹನ ನಡೆಸಲು ಇಂಗ್ಲಿಷ್ ಭಾಷೆ ಕಲಿಯಬೇಕು. ಅದು ಪೂರ್ಣ ಪ್ರಮಾಣದಲ್ಲಿ ನಮ್ಮ ಆವರಿಸದು ಎಂದರು.

    ಗ್ರಂಥಾಲಯದಲ್ಲಿ ಲಕ್ಷಾಂತರ ಹೊತ್ತಿಗೆಗಳು ಧೂಳು ಆವರಿಸಿ ಗೆದ್ದಲು ತಿನ್ನುತ್ತಿವೆ. ಈ ಬಗ್ಗೆ ಎಚ್ಚರ ವಹಿಸಬೇಕಿದೆ. ಮಕ್ಕಳಿಗೆ ಸಾಹಿತ್ಯ ಓದುವ ಅಭಿರುಚಿ ಬೆಳೆಸಬೇಕು. ಅಂದಾಗ ಭಾಷೆಯ ಮಹತ್ವ, ಅರ್ಥ ಅರಿವಿಗೆ ಬರುತ್ತದೆ. ಕನ್ನಡ ಪುಸ್ತಕ ಪ್ರಾಧಿಕಾರದಲ್ಲಿರುವ ಲಕ್ಷಾಂತರ ಪುಸ್ತಕಗಳನ್ನು ಮಕ್ಕಳಿಗೆ ಓದಲು ನೀಡಬೇಕಾಗಿದೆ ಎಂದ ಅವರು, ಕಲಬುರಗಿ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ನಮ್ಮ ಸರ್ಕಾರ 10 ಕೋಟಿ ರೂ. ನೀಡಿತು. ಬಾಗಲಕೋಟೆ ಜಿಲ್ಲೆಗೂ ಸಾಹಿತ್ಯ ಸಮ್ಮೇಳನ ತಂದಲ್ಲಿ ಸೂಕ್ತ ಅನುದಾನ ಸರ್ಕಾರದಿಂದ ನೀಡುವುದಾಗಿ ಭರವಸೆ ನೀಡಿದರು.

    ಸಾಹಿತಿ ಡಾ.ರಾಜಶೇಖರ ಮಠಪತಿ ಮಾತನಾಡಿ, ನೂರಾರು ಕವಿತೆ, ಶಾಹಿರಿ ರಚಿಸಿದ ಮಿರ್ಜಾ ಗಾಲಿಬಗೆ ಸಾಹಿತ್ಯ ರಚನೆಯಲ್ಲಿ ತೃಪ್ತಿ ತಂದಿರಲಿಲ್ಲ. ಇನ್ನೂ ಎದೆ ತಣ್ಣಗಾಗಿಲ್ಲ ಎಂದು ಹೇಳುತ್ತಿದ್ದರು. ನಮ್ಮ ಜನ ಬಹು ಬೇಗನೆ ಮರೆಯುತ್ತಾರೆ. ಕೊನೆಯವರೆಗೂ ನೆನಪಿಟ್ಟುಕೊಳ್ಳುವ ಮುತ್ತಿನಂತಹ ಸಾಹಿತ್ಯ ರಚಿಸಬೇಕು ಎಂದು ಆಶಯ ಪಡುತ್ತಿದ್ದರು. ಹಾಗೆ ಸಾಮಾನ್ಯವನ್ನು ಅಸಮಾನ್ಯವಾಗಿಸುವ, ಸಣ್ಣ ಅಣು ಬ್ರಹ್ಮಾಂಡವಾಗಿ ಪರಿವರ್ತಿಸುವ ಶಕ್ತಿ ಸಾಹಿತ್ಯಕ್ಕೆ ಇದೆ. ಬಸವಣ್ಣ, ಅಲ್ಲಮಪ್ರಭು, ಅಕ್ಕಮಹಾದೇವಿ, ಸರ್ವಜ್ಞ ಇದನ್ನೆ ಮಾಡಿದರು. ಬಡತನ ಬುದ್ಧಿ ಮತ್ತು ಆತ್ಮವನ್ನು ಆಕ್ರಮಿಸುವುದಿಲ್ಲ. ದಾರಿದ್ರೇ ಎಲ್ಲವನ್ನು ಹಾಳು ಮಾಡುತ್ತದೆ. ಆತ್ಮ ಶ್ರೀಮಂತಿಕೆಯಿಂದ ಸಾಹಿತ್ಯ ಉಳಿಸಲು ಸಾಧ್ಯವಿಲ್ಲ. ಮನುಕುಲ ಬದಲಾಯಿಸುವ ಶಕ್ತಿ ಸಾಹಿತ್ಯಕ್ಕೆ ಇದೆ. ಧರ್ಮ ಮತ್ತು ರಾಜಕೀಯ ನಡೆಸುವರಿಗೆ ಹೊಸ ಅರ್ಥ ಕಲ್ಪಿಸಬೇಕಾದರೆ ಸಾಹಿತ್ಯ ಬೇಕು. ಬಹುತ್ವ ಭಾರತದಲ್ಲಿ ನಿಜವಾದ ಶಕ್ತಿ ಅಡಗಿದೆ. ಸೀಮಾತೀತವಾಗಿ ಬೆಳೆಯವುದೇ ಸಾಹಿತ್ಯ ಎಂದರು.

    ಜಿಪಂ ಅಧ್ಯಕ್ಷೆ ಬಾಯಕ್ಕ ಮೇಟಿ, ಉಪಾಧ್ಯಕ್ಷ ಮುತ್ತಪ್ಪ ಕೋಮಾರ, ಬಾಗಲಕೋಟೆ ತಾಪಂ ಅಧ್ಯಕ್ಷ ಚನ್ನನಗೌಡ ಪರನಗೌಡರ, ಜಿಪಂ ಸದಸ್ಯ ರಂಗನಗೌಡ ಗೌಡರ, ತಾಪಂ ಸದಸ್ಯ ರಾಜಶೇಖರ ಅಂಗಡಿ, ಡಿಸಿಸಿ ಬ್ಯಾಂಕ್ ನಿರ್ದೇಶಕ ರಾಮಣ್ಣ ತಳೇವಾಡ, ಮಾಜಿ ಶಾಸಕ ಎಸ್.ಜಿ.ನಂಜಯ್ಯನಮಠ, ಬಿಟಿಡಿಎ ಮಾಜಿ ಅಧ್ಯಕ್ಷ ಜಿ.ಎನ್.ಪಾಟೀಲ, ಬಿ.ಕೆ.ನಂದನೂರ, ಬಸವರಾಜ ಕಟಗೇರಿ ಇದ್ದರು. ಬಸಮ್ಮ ನರಸಾಪೂರ ವಂದಿಸಿದರು. ಸಂಜಯ ನಡುವಿನಮನಿ, ಎಂ.ಎಸ್.ಕಲಗುಡಿ ನಿರೂಪಿಸಿದರು.

    ಸಾಹಿತ್ಯ, ಸಂಸ್ಕೃತಿಗೆ ಅಪಾರ ಕೊಡುಗೆ
    ಸರ್ವಾಧ್ಯಕ್ಷೆ ಡಾ.ಮಲ್ಲಿಕಾ ಘಂಟಿ ಮಾತನಾಡಿ, ಆಡಳಿತ ಅನುಕೂಲಕ್ಕಾಗಿ ಮಾಡಿಕೊಳ್ಳುವ ವಿಭಜನೆಗಳು ಕೆಲವು ಸಲ ಸಾಂಸ್ಕೃತಿಕ ಲೋಕದ ಪಾಲುಗೋಸ್ಕರ ಮುಂದಾಗುವುದು ನೋಡಿದ್ದೇವೆ. ಇದರಿಂದ ಉತ್ತಮ, ಕೆಟ್ಟ ಪರಿಣಾಮಗಳು ಬೀರುತ್ತವೆ. ಕರ್ನಾಟಕ ಸಾಂಸ್ಕೃತಿಕ, ಸಾಹಿತ್ಯಿಕ ಚರಿತ್ರೆಯಲ್ಲಿ ಬಾಗಲಕೋಟೆ ಜಿಲ್ಲೆಗೆ ವಿಶೇಷ ಸ್ಥಾನಮಾನವಿದೆ. ಕಲೆ, ಸಾಹಿತ್ಯ, ಧರ್ಮ, ವಾಸ್ತುಶಿಲ್ಪಕ್ಕೆ ಭವ್ಯವಾದ ಕೊಡುಗೆ ನೀಡಿದೆ. ಚಾಲುಕ್ಯ ಅರಸರ ಸಮರ್ಥ ಆಡಳಿತ, ಧರ್ಮ ಸಹಿಷ್ಣುತೆ, ಸಮನ್ವಯತೆ ಮಾದರಿಯಾಗಿದೆ. ಬಸವಣ್ಣನ ಕೂಡಲಸಂಗಮ ಈ ನೆಲದ ಸಾಮರಸ್ಯದ ಸಾಂಸ್ಕೃತಿಕ ಪರಂಪರೆ ಸಾಕ್ಷಿಕರಿಸಿದೆ ಎಂದರು.

    ಸಾಹಿತ್ಯ-ಕಲೆ, ಸಾಹಿತಿ-ಕಲಾವಿದರು ಸಮಾಜವನ್ನು ಸಂವೇದನಶೀಲಗೊಳಿಸುವವರು. ನಾವೆಲ್ಲ ಸಂವಿಧಾನದ ಆಶಯಗಳನ್ನು ಈಡೇರಿಸಬೇಕು. ಆಳುವ-ಬಾಳುವ ಕ್ರಿಯೆ ಅರ್ಥ ಮಾಡಿಕೊಳ್ಳಬೇಕು. ವ್ಯಕ್ತಿಯ ಎದುರು ಎರಡು ಆಯ್ಕೆಗಳಿವೆ. ವರ್ತನಮಾನದಲ್ಲಿ ಬದುಕುವುದಕ್ಕಾಗಿ ಭವಿಷ್ಯತ್ತಿನಲ್ಲಿ ಶಾಶ್ವತವಾಗಿ ಸಾಯುವುದು. ಇನ್ನೊಂದು ಭವಿಷ್ಯತ್ತಿನಲ್ಲಿ ಶಾಶ್ವತವಾಗಿ ಬದುಕಲು ವರ್ತಮಾನ ಕಾಲದಲ್ಲಿ ಸಾಯುವುದು. ಇದು ಸಾಹಿತಿಗಳಿಗೆ ಅನ್ವಯಿಸುವ ಮಾತಲ್ಲ. ಎಲ್ಲರಿಗೂ ಅನ್ವಯವಾಗುತ್ತದೆ ಎಂದು ಹೇಳಿದರು.

    ಜಿಲ್ಲೆಯಲ್ಲಿ ಸಾಹಿತ್ಯ, ಸಂಸ್ಕೃತಿ ಕಟ್ಟಿ ಬೆಳೆಸುವ ನಿಟ್ಟಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ ಶ್ರಮಿಸುತ್ತಿದೆ. ಹೊಸ ಸಾಹಿತಿಗಳಿಗೆ ಪ್ರೋತ್ಸಾಹ ನೀಡುತ್ತಿದೆ. ಜಿಲ್ಲೆಯ ಪರಂಪರೆ, ಸಂಸ್ಕೃತಿ ಉಳಿಸುವುದು ನೆಮ್ಮೆಲ್ಲರ ಜವಾಬ್ದಾರಿ.
    ಶ್ರೀಶೈಲ ಕರಿಶಂಕರಿ ಕಸಾಪ ಜಿಲ್ಲಾ ಘಟಕ ಅಧ್ಯಕ್ಷ



    ತಾಯಿ ಭಾಷೆ ಅಳಿಸಲು ಸಾಧ್ಯವಿಲ್ಲ



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts