More

    ಭಾರತ ಮಾತೆಯ ಮುಖದಲ್ಲಿ ಮಂದಹಾಸ ಮೂಡಿಸಿದ ಮೋದಿ, ಚಿಂತಕ ಚಕ್ರವರ್ತಿ ಸೂಲಿಬೆಲೆ

    ಹುಬ್ಬಳ್ಳಿ: ನರೇಂದ್ರ ಮೋದಿ ಅವರು ಪ್ರಧಾನಿಯಾದ ನಂತರ ಸರ್ವಾಂಗೀಣ ಅಭಿವೃದ್ಧಿಗೆ ಹೆಚ್ಚಿನ ವೇಗ ನೀಡುವ ಮೂಲಕ ಜಾಗತಿಕ ಮಟ್ಟದಲ್ಲಿ ದೇಶದ ಗೌರವ ಹೆಚ್ಚಿಸಿದ್ದಾರೆ. ಭಾರತ ಮಾತೆಯ ಮುಖದಲ್ಲಿ ಮಂದಹಾಸ ಮೂಡಿಸಿದ್ದಾರೆ. ಕಳೆದ 10 ವರ್ಷದಲ್ಲಿ ಭಾರತದ ವೈಭವವು ತುತ್ತ ತುದಿಗೆ ಬಂದು ನಿಂತಿದೆ. ಇಂತಹ ವಿಕಾಸ ಮುಂದುವರಿಯಬೇಕಾದರೆ ಇದಕ್ಕೆ ಕಾರಣರಾದ ಮೋದಿ ಅವರನ್ನು ನಾವೆಲ್ಲ ಮತ್ತೆ ಬೆಂಬಲಿಸಬೇಕಾಗಿದೆ ಎಂದು ಖ್ಯಾತ ವಾಗ್ಮಿ, ಚಿಂತಕ ಚಕ್ರವರ್ತಿ ಸೂಲಿಬೆಲೆ ಮನವಿ ಮಾಡಿದರು.

    ನಗರದ ಡೆನಿಸನ್ಸ್ ಹೋಟೆಲ್ನಲ್ಲಿ ಭಾನುವಾರ ಸಿಟಿಜನ್ಸ್ ಫೋರಂ ಫಾರ್ ಡೆವಲಪ್ಮೆಂಟ್ ವತಿಯಿಂದ ಏರ್ಪಡಿಸಿದ್ದ ಪ್ರಬುದ್ಧರ ಸಭೆಯಲ್ಲಿ ಅವರು ಮಾತನಾಡಿದರು.

    ಉಚಿತ ಕೊಡುಗೆಗಳ ಬೆನ್ನು ಹತ್ತಿ ಹೋದರೆ ಮುಂದೆ ಇಂತಹ ಅಭಿವೃದ್ಧಿಯನ್ನು ಕಾಣಲು ಸಾಧ್ಯವಿಲ್ಲ. ಭಾರತದ ಸಂಪತ್ತನ್ನು ಅಭಿವೃದ್ಧಿ ಮಾಡುವ ಕೆಲಸಕ್ಕೆ ಮೋದಿ ಕೈ ಹಾಕಿದ್ದಾರೆ. ದುಡಿದು ತಿನ್ನಬಲ್ಲ ಸಾಮರ್ಥ್ಯವನ್ನು ದೇಶಕ್ಕೆ ಕೊಟ್ಟಿದ್ದಾರೆ ಎಂದು ನರೇಂದ್ರ ಮೋದಿ ಅವರ ಕಳೆದ 10 ವರ್ಷಗಳ ಸಾಧನೆಗಳ ಪಟ್ಟಿ ಮಾಡಿದರು.

    ಡಿಜಿಟಲ್ ಸೌಲಭ್ಯ, ಸಾಮಾಜಿಕ ಭದ್ರತೆ ವ್ಯವಸ್ಥೆ, ದೇಶದಲ್ಲಿ ಭೌತಿಕ ಅಭಿವೃದ್ಧಿ ಹೀಗೆ ಎಲ್ಲ ಕ್ಷೇತ್ರದಲ್ಲಿ ಹೇಗೆಲ್ಲ ಬದಲಾವಣೆಯಾಗಿದೆ. ಯುಪಿಎ ಕಾಲದಲ್ಲಿ ಹೇಗಿತ್ತು. ಈಗ ಎಷ್ಟೊಂದು ಬದಲಾಗಿದೆ ಎಂಬುದನ್ನು ದಾಖಲೆ ಹಾಗೂ ಅಂಕಿಅಂಶಗಳ ಸಮೇತ ವಿವರಿಸಿದರು.

    ಫಾಸ್ಟ್ ಟ್ಯಾಗ್ ವ್ಯವಸ್ಥೆ ಜಾರಿಗೆ ಬಂದ ಮೇಲೆ ಟೋಲ್ ಗೇಟ್ ಗಳಲ್ಲಿ ಪ್ರತಿ ವಾಹನವು ಸರಾಸರಿ ಕಾಯುವ ಸಮಯ 12 ಸೆಕೆಂಡ್ಗಳಿಗೆ ಇಳಿದಿದೆ. ಇದಕ್ಕೂ ಮೊದಲು ಪ್ರತಿ ವಾಹನವು ಸರಾಸರಿ 40 ನಿಮಿಷ ಕಾಯಬೇಕಾಗಿತ್ತು.

    ಇಂದು ಫಾಸ್ಟ್ ಟ್ಯಾಗ್ ವ್ಯವಸ್ಥೆಯಿಂದ ಟೋಲ್ ಗೇಟ್ಗಳಲ್ಲಿ ಕಾಯುವ ಸಮಯ ಕಡಿಮೆಯಾಗಿ ಇಂಧನ ಉಳಿತಾಯವಾಗುತ್ತಿದೆ. ಅದರಿಂದ ನಿತ್ಯ 17 ಸಾವಿರ ಕೋಟಿ ರೂ. ನಷ್ಟ ತಪ್ಪುತ್ತಿದೆ.

    ಹೊಸ ರೈಲು ಮಾರ್ಗ: ಮೋದಿ ಅವರ 10 ವರ್ಷಗಳ ಅವಧಿಯಲ್ಲಿ ದೇಶದಲ್ಲಿ ಹೊಸದಾಗಿ 31 ಸಾವಿರ ಕಿಲೋ ಮೀಟರ್ನಷ್ಟು ರೈಲು ಹಳಿ ಹಾಕಲಾಗಿದೆ. ಬಹುತೇಕ ಏಕಪಥ ಮಾರ್ಗಗಳು ದ್ವಿಪಥವಾಗಿವೆ. ಶೇ. 90ರಷ್ಟು ರೈಲು ಮಾರ್ಗಗಳು ವಿದ್ಯುದಿಕರಣಗೊಂಡಿವೆ. ಇದರಿಂದ ಇಂದು ಭಾರತವು ಜಗತ್ತಿನಲ್ಲೇ ಅತಿ ಹೆಚ್ಚು ವಿದ್ಯುದಿಕರಣಗೊಂಡ ರೈಲು ಮಾರ್ಗ ಹೊಂದಿದ ರಾಷ್ಟ್ರವಾಗಿದೆ ಎಂದು ಸೂಲಿಬೆಲೆ ಹೇಳಿದರು.

    ಮುಂದಿನ ದಿನಗಳಲ್ಲಿ ಪ್ರತಿ ವರ್ಷ 5ಸಾವಿರ ಕಿಲೋ ಮೀಟರ್ ಹೊಸ ರೈಲು ಮಾರ್ಗ ಅಳವಡಿಸುವ ಗುರಿಯನ್ನು ಪ್ರಧಾನಿ ನರೇಂದ್ರ ಮೋದಿ ಹೊಂದಿದ್ದಾರೆ. 2030ರ ವೇಳೆಗೆ ರೈಲು ಪ್ರಯಾಣದ ವ್ಯವಸ್ಥೆಯನ್ನು ವೇಟಿಂಗ್ ಲಿಸ್ಟ್ನಿಂದ ಮುಕ್ತಗೊಳಿಸುವ ಉದ್ದೇಶ ಹೊಂದಿದ್ದಾರೆ. ನರೇಂದ್ರ ಮೋದಿ ಪ್ರಧಾನಿಯಾಗುವ ಪೂರ್ವದಲ್ಲಿ ಕೇವಲ 214 ಕಿಲೋ ಮೀಟರ್ನಷ್ಟು ಮೆಟ್ರೋ ರೈಲು ಮಾರ್ಗ ಇತ್ತು. ಇಂದು 714 ಕಿಲೋ ಮೀಟರ್ಗೆ ಹೆಚ್ಚಿಸಿದ್ದಾರೆ.

    ಈ ಹಿಂದೆ ದೇಶದಲ್ಲಿ ರೈಲಿನ ವೇಗ ಗಂಟೆಗೆ ಕೇವಲ 60-ರಿಂದ 80 ಕಿಲೋಮೀಟರ್ ಇತ್ತು. ಪ್ರಧಾನಿ ನರೇಂದ್ರ ಮೋದಿ ಅವರು ರೈಲಿನ ವೇಗ ಹೆಚ್ಚಿಸಲು ವಿವಿಧ ದೇಶಗಳ ತಜ್ಞರನ್ನು ಕರೆಯಿಸಿ ಸಮಾಲೋಚನೆ ನಡೆಸಿದ್ದರು. ಕೊನೆಯಲ್ಲಿ ಚೆನೈ ಮೂಲದ ಇಂಜಿನಿಯರ್ ಒಬ್ಬರು ಈ ವಿಷಯದಲ್ಲಿ ಕೆಲಸ ಮಾಡಿದರು. ಗಂಟೆಗೆ 130ರಿಂದ 160 ಕಿಮೀ ವೇಗದಲ್ಲಿ ಸಂಚರಿಸುವ ಸ್ವದೇಶಿ ನಿಮಿರ್ತ ವಂದೇ ಭಾರತ ರೈಲು ಪರಿಚಯಿಸಿದರು. ಯಾರೆಲ್ಲಾ ವಂದೇ ಮಾತರಂ ಹೇಳಲು ಹಿಂಜರಿಯುತ್ತಿದ್ದರೋ ಅವರೆಲ್ಲ ಇಂದು ಸ್ಪೀಡ್ ಬೇಕಾದರೆ ವಂದೇ ಭಾರತ ಎಂದು ಹೇಳಲೇಬೇಕಾಗಿದೆ. ಇದು ಮೋದಿ ಅವರ ಶಕ್ತಿ. ದೇಶದ ರೈಲಿನ ವೇಗ ಮೂರು ಪಟ್ಟು ಹೆಚ್ಚಳವಾಗಿದೆ ಎಂದರು.

    ರಸ್ತೆ ನಿರ್ಮಾಣದಲ್ಲೂ ದಾಖಲೆ: ದೇಶದಲ್ಲಿ 1947ರಿಂದ 2014ರವರೆಗೆ ರಸ್ತೆ ನಿರ್ಮಾಣಕ್ಕೆ 7ಲಕ್ಷ ಕೋಟಿ ರೂ. ವ್ಯಯಿಸಲಾಗಿತ್ತು. ಆದರೆ, ಪ್ರಧಾನಿ ನರೇಂದ್ರ ಮೋದಿ ಅವರು 2014ರಿಂದ 2024ರ ವರೆಗೆ 7 ಲಕ್ಷ ಕೋಟಿ ರೂ. ಖರ್ಚು ಮಾಡಿದ್ದಾರೆ. ಇದರಿಂದ ದೇಶದಲ್ಲಿ ಬಹುದೊಡ್ಡ ಬದಲಾವಣೆ ಬಂದಿದ್ದು, ರಸ್ತೆ ಸಂಚಾರಕ್ಕೆ ವೇಗ ಸಿಕ್ಕಿದೆ. ಜನರು ವಸ್ತುಗಳ ಸಾಗಾಟಕ್ಕೆ ಮಾಡುತ್ತಿದ್ದ ಖರ್ಚು ತಗ್ಗಿದೆ. ಜಗತ್ತಿನಲ್ಲಿ ಅಮೆರಿಕ ಬಿಟ್ಟರೆ ಅತಿ ದೊಡ್ಡ ರಸ್ತೆ ಜಾಲ ಹೊಂದಿದ ದೇಶ ಭಾರತವಾಗಿ ಹೊರಹೊಮ್ಮಿದೆ. ಈ ವರೆಗೆ ಇದ್ದ 91 ಸಾವಿರ ಕಿ.ಮೀ. ರಸ್ತೆಗೆ ಪ್ರಧಾನಿ ಮೋದಿ ಒಬ್ಬರೇ ಭಾರತಮಾಲಾ ಯೋಜನೆ ಮೂಲಕ 55 ಸಾವಿರ ಕಿ.ಮೀ. ಸೇರ್ಪಡೆ ಮಾಡಿದ್ದಾರೆ. ಸಾಗರಮಾಲಾ ಯೋಜನೆ ಮೂಲಕ ದೇಶದ ಬಂದರು ಅಭಿವೃದ್ಧಿಗೆ ಮುನ್ನುಡಿ ಬರೆದಿದ್ದಾರೆ. ಈ ಕಾರ್ಯಗಳಿಗೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಸಮರ್ಥವಾಗಿ ಸಾಥ್ ನೀಡುತ್ತಿದ್ದಾರೆ ಎಂದು ಬಣ್ಣಿಸಿದರು.

    ಅಪರೂಪದ ಪ್ರಧಾನಿ: ನರೇಂದ್ರ ಮೋದಿ ಗುಜರಾತಿ ಆಗಿದ್ದರಿಂದಲೇ ಭಾರತದ ಸಂಪತ್ತು ವೃದ್ಧಿಸುವ ಕೆಲಸ ಮಾಡುತ್ತಿದ್ದಾರೆ. ದೇಶದ ಪ್ರತಿಯೊಂದು ಆಗುಹೋಗುಗಳ ಬಗ್ಗೆ ಗಮನ ಹರಿಸುತ್ತಾರೆ. ಕೇಂದ್ರ ಸರ್ಕಾರದಲ್ಲಿ ಕೆಲಸ ಮಾಡುತ್ತಿರುವ ಸಚಿವರು ಪ್ರಧಾನಿ ಬಳಿ ಹೋಗಬೇಕಿದ್ದರೆ ಸಾಕಷ್ಟು ಪೂರ್ವ ತಯಾರಿ ಮಾಡಿಕೊಂಡೇ ಹೋಗಬೇಕು. ಇಲಾಖೆಯ ಮಾಹಿತಿಯನ್ನು ಸ್ವತಃ ಅವರೇ ಕೇಳಿ ತಿಳಿದುಕೊಳ್ಳುತ್ತಾರೆ. ಹಾಗಾಗಿ ಮೋದಿ ಅವರ ಬಳಿ ಹೋಗಬೇಕಾದರೆ ಪೂರ್ವ ಸಿದ್ಧತೆ ಇಲ್ಲದಿದ್ದರೆ ಪೆಚ್ಚಾಗುತ್ತೇವೆ ಎಂದು ಅನೇಕ ಸಚಿವರು ಹೇಳುತ್ತಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts