More

    ಟಿಕೆಟ್ ಸಮರದಲ್ಲಿ ಆಯನೂರು ಗೆಲುವು

    ಅರವಿಂದ ಅಕ್ಲಾಪುರ ಶಿವಮೊಗ್ಗ
    ಏಳು ತಿಂಗಳ ಹಿಂದೆ ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದ ಮಾಜಿ ಎಂಎಲ್‌ಸಿ ಆಯನೂರು ಮಂಜುನಾಥ್‌ಗೆ ನೈಋತ್ಯ ಪದವೀಧರ ಕ್ಷೇತ್ರದ ಟಿಕೆಟ್ ಘೋಷಣೆಯಾದ ಬೆನ್ನಲ್ಲೇ ಇದೇ ಕ್ಷೇತ್ರದಿಂದ ಸ್ಪರ್ಧಿಸಲು ಬಯಸಿದ್ದ ಎಸ್.ಪಿ.ದಿನೇಶ್ ಮುಂದಿನ ನಡೆಯೇನು ಎಂಬ ಕುತೂಹಲ ಮೂಡಿದೆ.

    ಆಯನೂರು ಮಂಜುನಾಥ್ ಕಾಂಗ್ರೆಸ್ ಸೇರ್ಪಡೆಯಾಗುವ ಮುನ್ನವೇ ಎಸ್.ಪಿ.ದಿನೇಶ್ ಚುನಾವಣೆ ಸಿದ್ಧತೆಯಲ್ಲಿ ತೊಡಗಿದ್ದರು. ಆಯನೂರು ಕೈಹಿಡಿದ ಬಳಿಕ ಇವರಿಬ್ಬರ ನಡುವೆ ಟಿಕೆಟ್‌ಗೆ ಶೀತಲ ಸಮರ ನಡೆದಿತ್ತು. ಇಬ್ಬರೂ ಬಹಿರಂಗವಾಗಿ ಪರಸ್ಪರ ಕಾಲೆಳೆದುಕೊಂಡಿದ್ದರು.
    ಸ್ವತಃ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಲವು ಬಾರಿ ಎಸ್.ಪಿ.ದಿನೇಶ್‌ಗೆ ಟಿಕೆಟ್ ಭರವಸೆ ನೀಡಿದ್ದರು ಎನ್ನುತ್ತವೆ ಕಾಂಗ್ರೆಸ್ ಮೂಲಗಳು. ಅದೇ ಭರವಸೆ ಮೇಲೆ ದಿನೇಶ್ ಮತದಾರರ ನೋಂದಣಿಯಲ್ಲಿ ನಿರತರಾಗಿದ್ದರು. ಎರಡು ಬಾರಿ ಸ್ಪರ್ಧಿಸಿ ಸೋಲುಂಡರೂ ಈ ಬಾರಿ ಗೆಲುವಿನ ವಿಶ್ವಾಸ ಅವರಲ್ಲಿತ್ತು.
    ಅದರಲ್ಲೂ ನೈಋತ್ಯ ಶಿಕ್ಷಕರ ಕ್ಷೇತ್ರಕ್ಕೆ ಕೆಲವು ತಿಂಗಳ ಮುನ್ನವೇ ಅಭ್ಯರ್ಥಿ ಘೋಷಣೆ ಮಾಡಿದ್ದ ಕಾಂಗ್ರೆಸ್ ಹೈಕಮಾಂಡ್ ಪದವೀಧರ ಕ್ಷೇತ್ರದ ವಿಷಯದಲ್ಲಿ ಕಾದುನೋಡುವ ತೀರ್ಮಾನಕ್ಕೆ ಬಂದಿತ್ತು. ಕೆಪಿಸಿಸಿ ಅಧ್ಯಕ್ಷರೇ ಆಶ್ವಾಸನೆ ನೀಡಿದ್ದರಿಂದ ದಿನೇಶ್ ಕೆಲಸ ಆರಂಭಿಸಿದ್ದರು. ಅಭ್ಯರ್ಥಿ ಘೋಷಣೆಗೂ ಮುನ್ನ ತಮ್ಮ ಅನಿಸಿಕೆಯನ್ನು ನಾಯಕರು ಆಲಿಸಬಹುದೆಂಬ ಅವರ ನಿರೀಕ್ಷೆ ಹುಸಿಯಾಗಿದೆ.
    ಆಯನೂರು ಕಾಂಗ್ರೆಸ್ ಸೇರ್ಪಡೆ ಸಂದರ್ಭದಲ್ಲೇ ಟಿಕೆಟ್ ಖಾತ್ರಿ ಮಾಡಿಕೊಂಡಿದ್ದಾರೆಂಬ ಮಾತುಗಳು ಕೇಳಿಬಂದಿದ್ದವು. ಬಹುಶಃ ಅದೀಗ ನಿಜವಾದಂತಿದೆ. ಆದರೆ ಟಿಕೆಟ್ ಘೋಷಣೆಗೂ ಮುನ್ನ ಕಾಂಗ್ರೆಸ್ ನಾಯಕರು ಇಬ್ಬರನ್ನೂ ಕರೆಸಿ ಮಾತನಾಡಿದ್ದರೆ ಗೊಂದಲ ಕಡಿಮೆ ಮಾಡಬಹುದಿತ್ತು.
    ಜಿಲ್ಲೆಯಲ್ಲಿ ಎರಡು ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿರುವ ಸಾದು ಲಿಂಗಾಯತ ಸಮುದಾಯಕ್ಕೆ ಸೇರಿದ ಎಸ್.ಪಿ.ದಿನೇಶ್ ಪಕ್ಷ ಸಂಘಟನೆಯಲ್ಲಿ ಅನೇಕ ವರ್ಷಗಳಿಂದ ತೊಡಗಿಸಿಕೊಂಡವರು. ಆರ್.ಪ್ರಸನ್ನಕುಮಾರ್ ಪರಿಷತ್ ಚುನಾವಣೆಗೆ ಸ್ಪರ್ಧಿಸಿದ್ದಾಗ ಕ್ಷೇತ್ರದ ಲಿಂಗಾಯತ ಮತಗಳನ್ನು ಪಕ್ಷಕ್ಕೆ ತಂದುಕೊಡುವಲ್ಲಿ ನಿರ್ಣಾಯಕರಾಗಿ ಕೆಲಸ ಮಾಡಿದ್ದರು.
    ಆಯನೂರು ಮಂಜುನಾಥ್ ನಾಲ್ಕು ಸದನಗಳನ್ನು ಪ್ರತಿನಿಧಿಸಿದವರು. ಅವರ ರಾಜಕೀಯ ಅನುಭವವನ್ನು ಯಾರೂ ಪ್ರಶ್ನಿಸುವಂತಿಲ್ಲ. ಆದರೆ ಟಿಕೆಟ್ ಹಂಚಿಕೆಗೂ ಮುನ್ನ ಕಾಂಗ್ರೆಸ್ ನಾಯಕರು ಸಂಧಾನ ಸೂತ್ರ ಸಿದ್ಧಪಡಿಸಿದ್ದರೆ ಗೊಂದಲಗಳಿಗೆ ಆಸ್ಪದ ಇರುತ್ತಿರಲಿಲ್ಲ. ಈಗ ದಿನೇಶ್ ಮುನಿಸನ್ನು ತಣಿಸುವ ಹೊಣೆಗಾರಿಕೆ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಚ್.ಎಸ್.ಸುಂದರೇಶ್ ಹೆಗಲೇರಿದೆ.
    ಇನ್ನೂ ಮೂರು ತಿಂಗಳು:ಕಳೆದ ವರ್ಷ ಜೆಡಿಎಸ್‌ನಿಂದ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವ ಮುನ್ನ ರಾಜೀನಾಮೆ ನೀಡಿದ್ದ ಸ್ಥಾನಕ್ಕೆ ಮತ್ತೆ ಆಯನೂರು ಸ್ಪರ್ಧಿಸಲಿದ್ದಾರೆ. ಪಕ್ಷ ಬೇರೆಯಾಗಿದ್ದರೂ ಕ್ಷೇತ್ರ ಅದೇ. ಕಾಂಗ್ರೆಸ್ ಸೇರ್ಪಡೆಯಾದ ಬಳಿಕ ಪ್ರತ್ಯೇಕ ಚುನಾವಣಾ ಕಾರ್ಯಾಲಯವನ್ನು ಆರಂಭಿಸಿ ಹಲವು ಶಾಲೆಗಳಲ್ಲಿ ಪದವೀಧರ ಶಿಕ್ಷಕರ ಸಭೆಗಳ ಮೂಲಕ ಆಯನೂರು ಸಿದ್ಧತೆ ನಡೆಸಿದ್ದರು. ಈಗ ಲೋಕಸಭೆ ಚುನಾವಣೆಯೊಂದಿಗೆ ಪರಿಷತ್ ಪ್ರಚಾರವೂ ಆರಂಭವಾಗಲಿದೆ. ಲೋಕ ಚುನಾವಣೆ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಈ ಕ್ಷೇತ್ರಕ್ಕೆ ಚುನಾವಣೆ ಘೋಷಣೆ ಆಗುವುದರಿಂದ ಅಷ್ಟರೊಳಗೆ ಪಕ್ಷದ ಎಲ್ಲರನ್ನೂ ವಿಶ್ವಾಸಕ್ಕೆ ಪಡೆಯುವುದು ಮಂಜುನಾಥ್‌ಗೆ ಅನಿವಾರ್ಯವಾಗಿದೆ.
    ಬಿಜೆಪಿ ಭದ್ರಕೋಟೆ:ನೈಋತ್ಯ ಪದವೀಧರ ಕ್ಷೇತ್ರ ಅಸ್ತಿತ್ವಕ್ಕೆ ಬಂದಿದ್ದು 1988ರಲ್ಲಿ. ಅಲ್ಲಿಂದ 2012ರವರೆಗೆ ನಡೆದ ಐದು ಚುನಾವಣೆಗಳಲ್ಲೂ ಬಿಜೆಪಿ ಅಭ್ಯರ್ಥಿ ಡಿ.ಎಚ್.ಶಂಕರಮೂರ್ತಿ ಗೆಲುವು ಸಾಧಿಸಿದರು. 2018ರ ಚುನಾವಣೆಯಲ್ಲಿ ಆಯನೂರು ಮಂಜುನಾಥ್ ಅವರನ್ನು ಬಿಜೆಪಿ ಕಣಕ್ಕಿಳಿಸಿತ್ತು. ಅವರೂ ಗೆಲುವು ಸಾಧಿಸಿದ್ದರು. 35 ವರ್ಷಗಳಿಂದಲೂ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಖಾತೆ ತೆರೆಯಲು ಸಾಧ್ಯವಾಗಿಲ್ಲ. ಹೀಗಾಗಿ ಆ ಪಕ್ಷದ ನಾಯಕರು ಆಯನೂರು ಮೇಲೆ ತೀವ್ರ ನಿರೀಕ್ಷೆ ಇರಿಸಿಕೊಂಡಿದ್ದಾರೆ.
    ನೈಋತ್ಯ ಪದವೀಧರ ಕ್ಷೇತ್ರದ ವ್ಯಾಪ್ತಿ
    ಜಿಲ್ಲೆ ವಿಧಾನಸಭೆ ಕ್ಷೇತ್ರಗಳು
    ಶಿವಮೊಗ್ಗ 7
    ದಾವಣಗೆರೆ 3
    ಚಿಕ್ಕಮಗಳೂರು 5
    ಉಡುಪಿ 5
    ದಕ್ಷಿಣ ಕನ್ನಡ 8
    ಕೊಡಗು 2

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts