ವರ್ಷಗಳ ನಂತರ ಒಟ್ಟಿಗೆ ಗೋವಾಕ್ಕೆ ಹೊರಟಿದ್ದ ಶಾಲಾ ಗೆಳತಿಯರ ದುರಂತ ಅಂತ್ಯ! ಮನಕಲಕುತ್ತೆ ಕೊನೇ ವಾಟ್ಸ್​ಆ್ಯಪ್​ ಸ್ಟೇಟಸ್

accident
Published on

ದಾವಣಗೆರೆ: ಧಾರವಾಡ ಹೊರವಲಯದ ಇಟ್ಟಿಗಟ್ಟಿ ಬಳಿ ಶುಕ್ರವಾರ ಬೆಳ್ಳಂಬೆಳಗ್ಗೆ ಟೆಂಪೋ ಟ್ರಾವೆಲರ್​ ಮತ್ತು ಲಾರಿ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟವರ ಸಂಖ್ಯೆ 11ಕ್ಕೇರಿದೆ.

ಮೃತರೆಲ್ಲರೂ ದಾವಣಗೆರೆ ಮೂಲದವರು. ದಾವಣಗೆರೆಯ ಸೇಂಟ್‌ ಪಾಲ್ಸ್‌ ಕಾನ್ವಂಟ್‌ ಶಾಲೆಯ ಹಳೇ ವಿದ್ಯಾರ್ಥಿಗಳಾದ ಇವರು ಇತ್ತೀಚಿಗೆ ನಡೆದ ಶಾಲೆಯ ಕಾರ್ಯಕ್ರಮವೊಂದರಲ್ಲಿ ಭೇಟಿಯಾಗಿದ್ದರು. ಹಲವು ವರ್ಷಗಳ ನಂತರ ಭೇಟಿಯಾಗಿದ್ದ ಬಾಲ್ಯ ಸ್ನೇಹಿತೆಯರು ಪಣಜಿಗೆ ಪ್ರವಾಸ ಹೊರಟಿದ್ದರು. ಟೆಂಪೋ ಟ್ರಾವೆಲರ್‌ನಲ್ಲಿ ಮುಂಜಾನೆ 3 ಗಂಟೆಗೆ ದಾವಣಗೆರೆ ಬಿಟ್ಟಿದ್ದರು.

ಧಾರವಾಡದ ಇಟ್ಟಿಗಟ್ಟಿ ಬೈಪಾಸ್‌ ಸಮೀಪ ಬೆಳಗ್ಗೆ 7.30ರ ವೇಳೆಗೆ ಯಮರೂಪಿಯಾಗಿ ಬಂದ ಮರಳು ಸಾಗಣೆ ಟಿಪ್ಪರ್‌ ಲಾರಿಯು ಟೆಂಪೋ ಟ್ರಾವೆಲ್ಲರ್​ಗೆ ಡಿಕ್ಕಿ ಹೊಡೆದಿದೆ. ಟೆಂಪೋ ಟ್ರಾವೆಲರ್‌ನಲ್ಲಿದ್ದ 16 ಮಹಿಳೆಯರ ಪೈಕಿ 10 ಮಂದಿ ದುರ್ಮರಣಕ್ಕೀಡಾಗಿದ್ದಾರೆ. ಇವರ ಜತೆಗೆ ಟಿಟಿ ಚಾಲಕನೂ ಸತ್ತಿದ್ದಾನೆ. ಉಳಿದವರ ಸ್ಥಿತಿ ಗಂಭೀರವಾಗಿದ್ದು, ಹುಬ್ಬಳ್ಳಿಯ ಕಿಮ್ಸ್‌ ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ.

ಟೆಂಪೋ ಟ್ರಾವೆಲ್​ ಸಂಪೂರ್ಣ ನಜ್ಜುಗುಜ್ಜಾಗಿದೆ. ಮೃತಪಟ್ಟ 11 ಜನರ ಪೈಕಿ 7 ಮೃತದೇಹಗಳನ್ನು ಪೊಲೀಸರು ಕಿಮ್ಸ್ ಶವಾಗಾರಕ್ಕೆ ರವಾನಿಸಿದ್ದಾರೆ. ಮೃತದೇಹಗಳು ಗುರುತು ಸಿಗದಂತಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಶವಾಗಾರದ ಬಳಿ ಮೃತರ ಸಂಬಂಧಿಕರು, ಸ್ನೇಹಿತರು ಹಾಗೂ ಪೊಲೀಸ್ ಆಯುಕ್ತ ಲಾಬುರಾಮ ಮೊಕ್ಕಾಂ ಹೂಡಿದ್ದಾರೆ. ಇನ್ನೂ ಕೆಲ ಸಂಬಂಧಿಕರು ದಾವಣಗೆರೆಯಿಂದ ಕಿಮ್ಸ್ ಹಾಗೂ ಧಾರವಾಡಕ್ಕೆ ಆಗಮಿಸುತ್ತಿದ್ದಾರೆ.

ಗೋವಾ ಪ್ರವಾಸಕ್ಕೆಂದು ಟಿಟಿ ವಾಹನ ಹತ್ತುತ್ತಿದ್ದಂತೆ ಬಾಲ್ಯ ಸ್ನೇಹಿತೆಯರೆಲ್ಲರೂ ಮೊಬೈಲ್​ನಲ್ಲಿ ಸೆಲ್ಫಿ ಫೋಟೋ ಕ್ಲಿಕ್ಕಿಸಿಕೊಂಡು ವಾಟ್ಸ್​ಆ್ಯಪ್​ ಸ್ಟೇಟಸ್​ನಲ್ಲಿ ಹಾಕಿಕೊಂಡಿದ್ದರು. ಅವರು ಬದುಕಿದ್ದಾಗ ತೆಗೆದ ಕೊನೇ ಫೋಟೋ ಇದೇ... ಎನ್ನುತ್ತ ಕುಟುಂಬಸ್ಥರು ಗೋಳಾಡುತ್ತಿದ್ದ ದೃಶ್ಯ ಮನಕಲಕುವಂತಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net