ಧಾರವಾಡದಲ್ಲಿ ಭೀಕರ ಅಪಘಾತ! 11ಕ್ಕೇರಿದ ಸಾವಿನ ಸಂಖ್ಯೆ, ಮಾಜಿ ಶಾಸಕರ ಸೊಸೆಯೂ ದುರ್ಮರಣ

Accident Victim
Published on

ಧಾರವಾಡ: ಶುಕ್ರವಾರ ಬೆಳ್ಳಂಬೆಳಗ್ಗೆ ಸಂಭವಿಸಿದ ಟೆಂಪೋ ಟ್ರಾವೆಲರ್​-ಲಾರಿ ನಡುವಿನ ಭೀಕರ ಅಪಘಾತದಲ್ಲಿ ಮಾಜಿ ಶಾಸಕ, ಬಿಜೆಪಿ ಮುಖಂಡ ಗುರುಸಿದ್ದನಗೌಡರ ಸೊಸೆ ದಾರುಣವಾಗಿ ಮೃತಪಟ್ಟಿದ್ದಾರೆ.

ಗುರುಸಿದ್ದನಗೌಡರ ಪುತ್ರ ಡಾ. ರವಿಕುಮಾರ್​ ಅವರ ಪತ್ನಿ ಪ್ರೀತಿ ರವಿಕುಮಾರ್​ ಮೃತ ದುರ್ದೈವಿ. ಇವರೊಂದಿಗೆ ಡಾ. ಪ್ರಕಾಶ್​ ಮತ್ತಿಹಳ್ಳಿ ಅವರ ಪತ್ನಿ ಡಾ. ವೀಣಾ ಪ್ರಕಾಶ್​ ಸಹ ಮೃತಪಟ್ಟಿದ್ದಾರೆ.​ ಅಪಘಾತದಲ್ಲಿ ಒಟ್ಟು 11 ಮಂದಿ ಮೃತಪಟ್ಟಿದ್ದು, ಎಲ್ಲರೂ ಸಹ ದಾವಣಗೆರೆಯ ವಿದ್ಯಾನಗರ, ಎಂಸಿಸಿ ಎ-ಬ್ಲಾಕ್ ಮತ್ತು ಎಂಸಿಸಿ-ಬಿ ಬ್ಲಾಕ್ ನಿವಾಸಿಗಳು.

ಬೆಳಗ್ಗೆ 7.30ರ ಸುಮಾರಿಗೆ ಧಾರವಾಡ ಹೊರವಲಯದ ಇಟ್ಟಿಗಟ್ಟಿ ಬಳಿ ಟೆಂಪೋ ಟ್ರಾವೆಲರ್​ ಹಾಗೂ ಲಾರಿ ನಡುವೆ ಅಪಘಾತ ಸಂಭವಿಸಿತು. ಟಿಟಿ ದಾವಣಗೆರೆಯಿಂದ ಗೋವಾಗೆ ತೆರಳುತ್ತಿತ್ತು. ಲಾರಿ ಬೆಳಗಾವಿ ಕಡೆಯಿಂದು ಬರುತ್ತಿತ್ತು. ಆರಂಭದಲ್ಲಿ 9 ಮಂದಿ ಸಾವಿಗೀಡಾಗಿದ್ದರು. ಬಳಿಕ ಚಿಕಿತ್ಸೆ ಫಲಕಾರಿಯಾಗದೇ ಕೆಲವರು ಹುಬ್ಬಳ್ಳಿಯ ಕಿಮ್ಸ್​ ಆಸ್ಪತ್ರೆಯಲ್ಲಿ ಅಸುನೀಗಿದ್ದಾರೆ.

ಇದುವರೆಗೂ ಬಂದಿರುವ ಮಾಹಿತಿಯ ಪ್ರಕಾರ ಮೃತ 11 ಮಂದಿಯಲ್ಲಿ 10 ಮಂದಿ ಬಾಲ್ಯ ಸ್ನೇಹಿತೆಯರಾಗಿದ್ದು, ಓರ್ವ ಟೆಂಪೋ ಟ್ರಾವೆಲರ್​ ಚಾಲಕನೆಂದು ತಿಳಿದುಬಂದಿದೆ.

ಮೃತರೆಲ್ಲರೂ ದಾವಣಗೆರೆ ಮೂಲದವರು. ದಾವಣಗೆರೆಯ ಸೇಂಟ್‌ ಪಾಲ್ಸ್‌ ಕಾನ್ವಂಟ್‌ ಶಾಲೆಯ ಹಳೇ ವಿದ್ಯಾರ್ಥಿಗಳಾದ ಇವರು ಇತ್ತೀಚಿಗೆ ನಡೆದ ಶಾಲೆಯ ಕಾರ್ಯಕ್ರಮವೊಂದರಲ್ಲಿ ಭೇಟಿಯಾಗಿದ್ದರು. ಹಲವು ವರ್ಷಗಳ ನಂತರ ಭೇಟಿಯಾಗಿದ್ದ ಬಾಲ್ಯ ಸ್ನೇಹಿತೆಯರು ಪಣಜಿಗೆ ಪ್ರವಾಸ ಹೊರಟಿದ್ದರು. ಟೆಂಪೋ ಟ್ರಾವೆಲರ್‌ನಲ್ಲಿ ಮುಂಜಾನೆ 3 ಗಂಟೆಗೆ ದಾವಣಗೆರೆ ಬಿಟ್ಟಿದ್ದರು.

ಧಾರವಾಡದ ಇಟ್ಟಿಗಟ್ಟಿ ಬೈಪಾಸ್‌ ಸಮೀಪ ಬೆಳಗ್ಗೆ 7.30ರ ವೇಳೆಗೆ ಯಮರೂಪಿಯಾಗಿ ಬಂದ ಮರಳು ಸಾಗಣೆ ಟಿಪ್ಪರ್‌ ಲಾರಿಯು ಟೆಂಪೋ ಟ್ರಾವೆಲ್ಲರ್​ಗೆ ಡಿಕ್ಕಿ ಹೊಡೆದಿದೆ. ಟೆಂಪೋ ಟ್ರಾವೆಲರ್‌ನಲ್ಲಿದ್ದ 16 ಮಹಿಳೆಯರ ಪೈಕಿ 10 ಮಂದಿ ದುರ್ಮರಣಕ್ಕೀಡಾಗಿದ್ದಾರೆ. ಇವರ ಜತೆಗೆ ಟಿಟಿ ಚಾಲಕನೂ ಸತ್ತಿದ್ದಾನೆ. ಉಳಿದವರ ಸ್ಥಿತಿ ಗಂಭೀರವಾಗಿದ್ದು, ಹುಬ್ಬಳ್ಳಿಯ ಕಿಮ್ಸ್‌ ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net