

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ಭವಿಷ್ಯದ ರೈಲು ನಿಲ್ದಾಣದ ಚಿತ್ರಣವನ್ನು ಕೇಂದ್ರ ರೈಲ್ವೆ ಸಚಿವ ಪಿಯೂಷ್ ಗೋಯೆಲ್ ಅವರು ಬಹಿರಂಗಪಡಿಸಿದ್ದು, ರೈಲು ನಿಲ್ದಾಣ ಹೊಸ ವಿನ್ಯಾಸ ನೋಡಿದವರು ಹುಬ್ಬೇರಿಸುವಷ್ಟು ಅದ್ಭುತವಾಗಿದೆ.
ರಾಷ್ಟ್ರದ ರಾಜಧಾನಿಯ ಪ್ರತಿಷ್ಠೆಯಾಗಿ, ಭವಿಷ್ಯದ ಹೊಸ ಹೆಗ್ಗುರುತಾಗಿ ಇಂದಿನ ಜನದಟ್ಟಣೆ ಹಾಗೂ ಧೂಳಿನಿಂದ ಕೂಡಿದ ಪ್ರಪಂಚದಿಂದ ರೈಲು ನಿಲ್ದಾಣ ದೂರವಿರಲಿದೆ. 95 ವರ್ಷ ಹಳೆಯ ರೈಲು ನಿಲ್ದಾಣದ ಮರು ಅಭಿವೃದ್ಧಿ ಕುರಿತಾದ ವರ್ಚುವಲ್ ರೋಡ್ಶೋ ನಡೆಸಲು ರೈಲು ಭೂ ಅಭಿವೃದ್ಧಿ ಪ್ರಾಧಿಕಾರ (ಆರ್ಎಲ್ಡಿಎ) ತಯಾರಿ ಮಾಡಿಕೊಂಡಿದ್ದು, ಜಗತ್ತಿನಾದ್ಯಂತ ಬಂಡವಾಳಗಾರರು ಮತ್ತು ಅಭಿವೃದ್ಧಿಗಾರರ ಭಾಗವಹಿಸುವಿಕೆಯನ್ನು ಎದುರು ನೋಡುತ್ತಿದೆ.
ರೈಲು ನಿಲ್ದಾಣಕ್ಕೆ ಸುಮಾರು 680 ಮಿಲಿಯನ್ ಡಾಲರ್ ವೆಚ್ಚ ಅಂದಾಜಿಸಲಾಗಿದ್ದು, ಬಂಡವಾಳಗಾರರನ್ನು ಆಕರ್ಷಿಸಲು ಜನವರಿ 14 ಮತ್ತು 19ರ ನಡುವೆ ಆನ್ಲೈನ್ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಇಂತಹ 61 ಇತರ ಯೋಜನೆಗಳಿಗೂ ಸಹ ಬಿಡ್ ನಡೆಯಲಿದೆ.
ಹೀಗಾಗಿ ಗೋಯೆಲ್ ಅವರು ಗುರುವಾರ ಕೆಲವು ಫೋಟೋಗಳನ್ನು ಟ್ವೀಟ್ ಮೂಲಕ ಶೇರ್ ಮಾಡಿದ್ದು, ಕಲಾವಿದನ ಕೈಚಳಕ ಅದ್ಭುತವಾಗಿ ಮೂಡಿಬಂದಿದೆ. ಭವಿಷ್ಯದ ರೈಲು ನಿಲ್ದಾಣದ ವಿನ್ಯಾಸ ಜಗತ್ತಿನ ಅದ್ಭುತಗಳಲ್ಲಿ ಒಂದು ಎಂಬಂತೆ ಬಹಳ ವೈಭಯುತವಾಗಿ ಕಣ್ಣಿಗೆ ಕುಕ್ಕುವಂತಿದೆ.
ವಿವಿಧ ಸಾರಿಗೆಗಳ ಸಂಪೂರ್ಣ ಏಕೀಕರಣದೊಂದಿಗೆ ಸಮೃದ್ಧ ಪ್ರಯಾಣಿಕರ ಅನುಭವವನ್ನು ರೂಪಿಸೋಣ ಎಂದು ಟ್ವೀಟ್ ಮಾಡಿರುವ ಗೋಯೆಲ್ ಅವರು ನವದೆಹಲಿಯ ರೈಲ್ವೆ ನಿಲ್ದಾಣದ ಭವಿಷ್ಯವನ್ನು ನೋಡೋಣ ಎಂದಿದ್ದಾರೆ.
ಆರ್ಎಲ್ಡಿಎ ನಡೆಸಲಿರುವ ರೋಡ್ಶೋ, ಸಿಂಗಾಪೋರ್, ಆಸ್ಟ್ರೇಲಿಯಾ, ದುಬೈ ಮತ್ತು ಸ್ಪೇನ್ ಮೂಲದ ಬಂಡವಾಳಗಾರರು ಮತ್ತು ಅಭಿವೃದ್ಧಿಗಾರರ ಆಸಕ್ತಿಯನ್ನು ಯೋಜನೆಯೆಡೆಗೆ ಸೆಳೆಯುವ ನಿರೀಕ್ಷೆಯಿದ್ದು, ಯೋಜನೆಯ ಪರಿಕಲ್ಪನೆ ಮತ್ತು ಉದ್ದೇಶಿತ ವಹಿವಾಟು ರಚನೆ ಕುರಿತು ಚರ್ಚೆ ನಡೆಯಲಿದೆ ಎಂದು ಬುಧವಾರ ಆರ್ಎಲ್ಡಿಎ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಯೋಜನೆಯು ವಿವಿಧ ಪಾಲುದಾರರಿಂದ ಬಂಡವಾಳವನ್ನು ಆಕರ್ಷಿಸಲಿದೆ ಮತ್ತು ವರ್ಚುವಲ್ ರೋಡ್ ಶೋಗಳ ಮೂಲಕ ಆವೇಗವನ್ನು ಉಳಿಸಿಕೊಳ್ಳಲು ನಾವು ಉದ್ದೇಶಿಸಿದ್ದೇವೆ ಎಂದು ಆರ್ಎಲ್ಡಿಎ ಉಪಾಧ್ಯಕ್ಷ ವೇದ್ ಪ್ರಕಾಶ್ ದುಡೆಜಾ ಅವರು ಪ್ರಕಟಣೆಯಲ್ಲಿ ಹೇಳಿದ್ದಾರೆ. (ಏಜೆನ್ಸೀಸ್)