

ಇಂದು ಎಲ್ಲೆಡೆ ಸಕ್ಕರೆ ಆವರಿಸಿಕೊಂಡಿದೆ. ಆದರೆ, ಬಹಳ ಹಿಂದೆ ಬೆಲ್ಲವನ್ನು ಎಥೇಚ್ಛವಾಗಿ ಬಳಸಲಾಗುತ್ತಿತ್ತು. ಇಂದಿಗೂ ಬೆಲ್ಲವನ್ನು ಬಳಸಲಾಗುತ್ತದೆ. ಆದರೆ ಬಳಕೆಯ ಪ್ರಮಾಣ ಕಡಿಮೆ. ಸಕ್ಕರೆಯನ್ನು ಹೆಚ್ಚಾಗಿ ಬಳಸುತ್ತಿದ್ದಾರೆ.
ಸಕ್ಕರೆಗಿಂತ ಬೆಲ್ಲ ಆರೋಗ್ಯಕ್ಕೆ ಉತ್ತಮ. ಅಲ್ಲದೆ, ಸಕ್ಕರೆ ತುಂಬಾ ಅಪಾಯಕಾರಿ ಎಂಬುದನ್ನು ಮರೆಯುವಂತಿಲ್ಲ. ಸಕ್ಕರೆಯಿಂದಲೇ ಇಂದು ಹೆಚ್ಚು ರೋಗಗಳು ಮನುಷ್ಯನನ್ನು ಬಾಧಿಸುತ್ತಿವೆ. ಆದರೆ, ಬೆಲ್ಲವು ಅನೇಕ ಪೋಷಕಾಂಶಗಳಿಂದ ತುಂಬಿದ್ದು, ಆರೋಗ್ಯ ಮತ್ತು ಪೌಷ್ಟಿಕಾಂಶಗಳ ಲಾಭದ ವಿಚಾರದಲ್ಲಿ ಬೆಲ್ಲದೊಂದಿಗೆ ಯಾರೂ ಸ್ಪರ್ಧಿಸಲು ಸಾಧ್ಯವಿಲ್ಲ.
ಬಲ್ಲವನ್ನೇ ಬಲ್ಲ ಬೆಲ್ಲದ ಸವಿಯ ಎನ್ನುವಂತೆ ಅದನ್ನು ಬಳಸಿದವರಿಗೆ ಮಾತ್ರ ಬೆಲ್ಲದ ಆರೋಗ್ಯಕರ ಪ್ರಯೋಜನಗಳನ್ನು ತಿಳಿದಿರುತ್ತಾರೆ. ಬೆಲ್ಲದಲ್ಲಿರುವ ಅನೇಕ ಪೋಷಕಾಂಶಗಳು ಆರೋಗ್ಯಕ್ಕೆ ಅದ್ಭುತವಾಗಿ ಪ್ರಯೋಜನಕಾರಿಯಾಗಿವೆ. ಬೆಲ್ಲವನ್ನು ನಿಯಮಿತವಾಗಿ ಸೇವನೆ ಮಾಡುವುದರಿಂದ ಅನೇಕ ರೋಗಗಳನ್ನು ತಡೆಯಬಹುದು. ಬೆಲ್ಲದಲ್ಲಿ ಕ್ಯಾಲ್ಸಿಯಂ, ಸತು, ರಂಜಕ ಮತ್ತು ತಾಮ್ರದಂತಹ ಜೀವಸತ್ವಗಳು ಮತ್ತು ಖನಿಜಗಳು ಸಮೃದ್ಧವಾಗಿದೆ.
ತ್ವರಿತ ಶಕ್ತಿ: ಬೆಲ್ಲ ತಿನ್ನುವುದರಿಂದ ಆಗುವ ಪ್ರಯೋಜನಗಳನ್ನು ನೋಡೋಣ. ಮುಂಜಾನೆ ಖಾಲಿ ಹೊಟ್ಟೆಯಲ್ಲಿ ಬೆಚ್ಚಗಿನ ನೀರಿನಲ್ಲಿ ಬೆಲ್ಲವನ್ನು ಬೆರೆಸಿ ಕುಡಿಯುವುದರಿಂದ ನಮಗೆ ತ್ವರಿತ ಶಕ್ತಿ ಬರುತ್ತದೆ ಎಂದು ಅನೇಕ ಆರೋಗ್ಯ ತಜ್ಞರು ಹೇಳುತ್ತಾರೆ. ಇದು ಅತ್ಯುತ್ತಮ ಔಷಧೀಯ ಗುಣಗಳನ್ನು ಒದಗಿಸುತ್ತದೆ. ಇದನ್ನು ಬೆಲ್ಲದ ನೀರೆಂದು ಕರೆಯಲಾಗುತ್ತದೆ.
ತೂಕ ನಿಯಂತ್ರಣ: ಬೆಲ್ಲವು ಚಯಾಪಚಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದನ್ನು ಸೇವಿಸುವುದರಿಂದ ತೂಕ ನಿಯಂತ್ರಣಕ್ಕೆ ಸಹಾಯವಾಗುತ್ತದೆ. ಆದರೆ, ಸಕ್ಕರೆ ತೂಕವನ್ನು ಹೆಚ್ಚಿಸುತ್ತದೆ. ಆದರೆ, ಬೆಲ್ಲ ತಿನ್ನುವುದರಿಂದ ದೇಹವು ಫಿಟ್ ಆಗಿರುತ್ತದೆ.
ಮೂಳೆಗಳ ಬಲ: ಬೆಲ್ಲದಲ್ಲಿ ಕ್ಯಾಲ್ಸಿಯಂ ಸಮೃದ್ಧವಾಗಿದೆ. ಇದನ್ನು ಸೇವಿಸುವುದರಿಂದ ಮೂಳೆಗಳು ಬಲಗೊಳ್ಳುತ್ತವೆ. ಬೆಲ್ಲವು ಸ್ನಾಯುವಿನ ಬಲಕ್ಕೆ ಪ್ರಯೋಜನವನ್ನು ನೀಡುತ್ತದೆ ಎಂದು ತಜ್ಞರು ಹೇಳಿದ್ದಾರೆ.
ಬಾಣಲೆಯಲ್ಲಿ ಒಂದು ಲೋಟ ನೀರನ್ನು ಬಿಸಿ ಮಾಡಿ ಅದಕ್ಕೆ 1 ಇಂಚಿನ ಬೆಲ್ಲವನ್ನು ಹಾಕಿ. ಬೆಲವನ್ನು ಬೆರೆಸಿದ ಬಳಿಕ ನೀರಿನಲ್ಲಿ ಕರಗಲು ಬಿಡಿ. ಕರಗಿದ ಬಳಿಕ ಅದನ್ನು ಸ್ವಲ್ಪ ತಣ್ಣಗಾಗಿಸಿಕೊಂಡು ಕುಡಿಯಿರಿ. ಇದಕ್ಕೆ ಪರ್ಯಾಯವಾಗಿ ಪುಡಿ ಮಾಡಿದ ಬೆಲ್ಲವನ್ನು ನೇರವಾಗಿ ಬೆಚ್ಚಗಿನ ನೀರಿನಲ್ಲಿ ಬೆರೆಸಿ ಕುಡಿಯಬಹುದು. (ಏಜೆನ್ಸೀಸ್)