ಭಾರತ 2047ಕ್ಕೆ ವಿಶ್ವಗುರು: ಐದು ವರ್ಷಗಳಲ್ಲಿ ಜಾಗತಿಕ ಆರ್ಥಿಕ ವ್ಯವಸ್ಥೆಯಲ್ಲಿ ಮೂರನೇ ಸ್ಥಾನಕ್ಕೆ

Modi (16)
ದೆಹಲಿಯ ಐತಿಹಾಸಿಕ ಕೆಂಪು ಕೋಟೆಯಲ್ಲಿ ಮಂಗಳವಾರ 10ನೇ ಬಾರಿ ಧ್ವಜಾರೋಹಣ ನೆರವೇರಿಸಿದ ಪ್ರಧಾನಿ ನರೇಂದ್ರ ಮೋದಿ ಸೆಲ್ಯೂಟ್.
Published on

ನವದೆಹಲಿ: ಭಾರತ 100ನೇ ಸ್ವಾತಂತ್ರೊ್ಯೕತ್ಸವ ಸಂಭ್ರಮದ ಸಮಯಕ್ಕೆ (2047) ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಿ ಹೊರಹೊಮ್ಮಿರುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಆತ್ಮವಿಶ್ವಾಸದಿಂದ ನುಡಿದಿದ್ದಾರೆ.

ಸ್ವಾತಂತ್ರ್ಯೋತ್ಸವ ಪ್ರಯುಕ್ತ ಕೆಂಪು ಕೋಟೆಯಲ್ಲಿ ಪ್ರಧಾನಿಯಾಗಿ 10ನೇ ಬಾರಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, 2014ರಲ್ಲಿ ನಾವು ಅಧಿಕಾರಕ್ಕೆ ಬಂದಾಗ ಜಾಗತಿಕ ಆರ್ಥಿಕ ವ್ಯವಸ್ಥೆಯಲ್ಲಿ 10ನೇ ಸ್ಥಾನದಲ್ಲಿದ್ದೆವು. ಇಂದು ಐದನೇ ಸ್ಥಾನ ತಲುಪಿದ್ದೇವೆ. ಇದೇ ಹಾದಿಯಲ್ಲಿ ಸಾಗಿ ಮುಂದಿನ ಐದು ವರ್ಷಗಳಲ್ಲಿ ಮೂರನೇ ಸ್ಥಾನಕ್ಕೇರಲಿದ್ದೇವೆ ಎಂದು ಹೇಳಿದರು. ಇಂದಿನ ಸಾಧನೆ ಏಕಾಏಕಿ ಸಾಧ್ಯವಾಗಿದ್ದಲ್ಲ. ದೇಶವನ್ನು ತನ್ನ ಕಪಿಮುಷ್ಠಿಯಲ್ಲಿ ಹಿಡಿದಿದ್ದ ಭ್ರಷ್ಟಾಚಾರವನ್ನು ತೊಲಗಿಸಿದ್ದೇವೆ. ಸೋರಿಕೆ ತಡೆಗಟ್ಟಿದ್ದೇವೆ. ಬಲವಾದ ಆರ್ಥಿಕತೆ ನೀತಿ ರೂಪಿಸಿದ್ದೇವೆ. ಈ ನಮ್ಮ ಪ್ರಯತ್ನಕ್ಕೆ ಫಲ ದೊರೆತಿದೆ ಎಂದರು. ಇಂದಿನ ಮೋದಿ ಭಾಷಣ ಶೈಲಿ ಇದುವರೆಗಿಂತಲೂ ಭಿನ್ನವಾಗಿತ್ತು. 140 ಕೋಟಿ ಭಾರತೀಯ ನಾಗರಿಕರನ್ನು ತಮ್ಮ ‘ಪರಿವಾರ ಜನ’ (ಕುಟುಂಬ ಸದಸ್ಯರು) ಎಂದು ಭಾಷಣದುದ್ದಕ್ಕೂ ಸಂಬೋಧಿಸಿದರು.

ವಿಪಕ್ಷಗಳು ನಮ್ಮ ವಿರುದ್ಧ ಎಷ್ಟೇ ಅಪಪ್ರಚಾರ ಮಾಡಿದರೂ ದೇಶದ ಜನತೆಯ ಆಶೀರ್ವಾದ ಇದ್ದರೆ ಮತ್ತೆ ಮುಂದಿನ ಬಾರಿಯೂ ಕೆಂಪುಕೋಟೆ ಮೇಲೆ ತ್ರಿವರ್ಣ ಧ್ವಜ ಹಾರಿಸುವೆ ಎಂದು ಹೇಳಿದರು.

ಮಣಿಪುರ ಪ್ರಕರಣವನ್ನು ಪ್ರಸ್ತಾಪಿಸಿದ ಮೋದಿ, ನಮ್ಮ ತಾಯಿ ಮತ್ತು ಸಹೋದರಿಯರಿಗೆ ಅಪಮಾನ ಮಾಡಲಾಯಿತು. ಹಿಂಸಾಚಾರದಲ್ಲಿ ಹಲವರು ಪ್ರಾಣ ಕಳೆದುಕೊಂಡರು. ಆದರೆ, ನಿಧಾನವಾಗಿ ಅಲ್ಲಿ ಶಾಂತಿ ನೆಲೆಸುತ್ತಿದೆ. ಭಾರತ ಮಣಿಪುರದೊಂದಿಗೆ ಇದೆ ಎಂದು ಹೇಳಿದರು.

ದುರದೃಷ್ಟಕರ: ಜಗತ್ತು ಇನ್ನೂ ಕರೊನಾದಿಂದ ಚೇತರಿಸಿಕೊಂಡಿಲ್ಲ. ಯುದ್ಧ ಮತ್ತೊಂದು ಬಿಕ್ಕಟ್ಟು ಸೃಷ್ಟಿಸಿದೆ. ವಿಶ್ವ ಹಣದುಬ್ಬರ ಸಮಸ್ಯೆ ಎದುರಿಸುತ್ತಿದೆ. ಹಣದುಬ್ಬರ ಇಡೀ ಜಾಗತಿಕ ಆರ್ಥಿಕತೆಯನ್ನು ತನ್ನ ಕಪಿಮುಷ್ಠಿಯಲ್ಲಿಟ್ಟುಕೊಂಡಿರುವುದು ದುರದೃಷ್ಟಕರ. ನಮ್ಮ ಅಗತ್ಯದ ಸರಕು ಆಮದು ಮಾಡಿಕೊಳ್ಳುವಾಗ, ಹಣದುಬ್ಬರವನ್ನೂ ಆಮದು ಮಾಡಿಕೊಳ್ಳುತ್ತೇವೆ. ಆದರೆ, ಭಾರತ ಹಣದುಬ್ಬರ ನಿಯಂತ್ರಿಸಲು ಎಲ್ಲ ಪ್ರಯತ್ನ ಮಾಡಿದೆ ಎಂದು ಹೇಳಿದರು. ಇತರ ದೇಶಗಳಿಗಿಂತ ಭಾರತ ಉತ್ತಮ ಸ್ಥಿತಿಯಲ್ಲಿದೆ ಎಂದು ಸುಮ್ಮನಿರಲು ಸಾಧ್ಯವಿಲ್ಲ. ಇನ್ನೂ ಹೆಚ್ಚಿನ ಕ್ರಮಗಳ ಕಡೆ ಗಮನ ಹರಿಸಬೇಕಿದೆ. ಹಣದುಬ್ಬರ ಜನರ ಮೇಲೆ ಮತ್ತಷ್ಟು ಪ್ರಭಾವ ಬೀರುವುದನ್ನು ತಡೆಯಲು ಕ್ರಮ ಕೈಗೊಳ್ಳಲಿದ್ದೇವೆ ಎಂದು ಭರವಸೆ ನೀಡಿದರು.

ಪ್ರಕೃತಿ ವಿಕೋಪ: ಸ್ವಾತಂತ್ರ್ಯ ಸಂಭ್ರಮದ ಸಂದರ್ಭದಲ್ಲೇ ಹಿಮಾಚಲಪ್ರದೇಶ, ಉತ್ತರಾಖಂಡ ಸೇರಿದಂತೆ ಹಲವೆಡೆ ಪ್ರಕೃತಿ ವಿಕೋಪದಿಂದ ಸಾವು-ನೋವು ಸಂಭವಿಸಿದ್ದು, ನೈಸರ್ಗಿಕ ವಿಕೋಪದ ದುರಂತಗಳನ್ನು ಮೋದಿ ಪ್ರಸ್ತಾಪಿಸಿದರು. ಅಪಾರ ಜನಸಂಖ್ಯೆ, ಪ್ರಜಾಪ್ರಭುತ್ವ ಮತ್ತು ವೈವಿಧ್ಯತೆಯನ್ನು ಹೊಂದಿದ್ದೇವೆ. ಈ ಮೂರೂ ಒಟ್ಟಾದರೆ ರಾಷ್ಟ್ರದ ಕನಸುಗಳನ್ನು ನನಸಾಗಿಸುವುದರಲ್ಲಿ ಸಂದೇಹ ಇಲ್ಲ ಎಂದರು. ನಮ್ಮಲ್ಲಿ ಅವಕಾಶಗಳಿಗೆ ಕೊರತೆ ಇಲ್ಲ. ದೇಶಕ್ಕೆ ಅವಕಾಶಗಳನ್ನು ಒದಗಿಸುವ ಸಾಮರ್ಥ್ಯವಿದೆ. ಭಾರತದ ಉದಯ ಮತ್ತು ಅಭಿವೃದ್ಧಿ ಜಾಗತಿಕ ಮಟ್ಟದಲ್ಲಿ ವಿಶ್ವಾಸಕ್ಕೆ ಕಾರಣವಾಗಿದೆ. ಜಗತ್ತು ತಂತ್ರಜ್ಞಾನದ ಮೇಲೆ ಅವಲಂಬನೆಯಾಗಿದ್ದು, ತಂತ್ರಜ್ಞಾನದಲ್ಲಿನ ತನ್ನ ಪ್ರತಿಭೆಯೊಂದಿಗೆ ಭಾರತ ಜಾಗತಿಕ ವೇದಿಕೆಯಲ್ಲಿ ಹೊಸ ಪಾತ್ರ ಮತ್ತು ಪ್ರಭಾವ ಹೊಂದಿದೆ ಎಂದು ಬಣ್ಣಿಸಿದರು.

ಮೋದಿ ಭಾಷಣದ ಮುಖ್ಯಾಂಶ

  • ಭಾರತದ ಅತಿ ದೊಡ್ಡ ಸಾಮರ್ಥ್ಯ ಎಂದರೆ ದೇಶದ ಉಜ್ವಲ ಭವಿಷ್ಯದೆಡೆಗಿನ ನಂಬಿಕೆ ಹಾಗೂ ದೇಶದ ಮೇಲಿನ ಜನರ ನಂಬಿಕೆ.
  • ಭ್ರಷ್ಟಾಚಾರ, ವಂಶಾಡಳಿತ ಮತ್ತು ಓಲೈಕೆ ರಾಜಕಾರಣವೇ ಮುಖ್ಯ ಸಮಸ್ಯೆಗಳು. ಪಕ್ಷವೊಂದು ಒಂದು ಕುಟುಂಬದ ನಿಯಂತ್ರಣದಲ್ಲಿರಲು ಹೇಗೆ ಸಾಧ್ಯ? ಕುಟುಂಬದಿಂದ, ಕುಟುಂಬಕ್ಕಾಗಿ, ಕುಟುಂಬಕ್ಕೋಸ್ಕರ ಎಂಬುದೇ ಅವರ ನೀತಿ.
  • ಸರಣಿ ಸ್ಪೋಟಗಳ ಕಾಲ ಮುಗಿಯಿತು. ಭಯೋತ್ಪಾದನಾ ಕೃತ್ಯಗಳು ಇಳಿದಿವೆ. ನಕ್ಸಲ್​ಪಿಡಿತ ಪ್ರದೇಶಗಳು ಗಣನೀಯ ಬದಲಾವಣೆ ಕಾಣುತ್ತಿವೆ.
  • ಟೈರ್- 2 ಮತ್ತು ಟೈರ್- 3 ನಗರಗಳಿಂದ ಬರುತ್ತಿರುವ ಯುವಕರು ಸ್ಟಾರ್ಟ್ ಅಪ್ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಪ್ರಭಾವ ಬೀರುತ್ತಿದ್ದಾರೆ. ಜಗತ್ತು ತಂತ್ರಜ್ಞಾನ ಚಾಲಿತ. ತಂತ್ರಜ್ಞಾನದ ಪ್ರತಿಭೆಯೊಂದಿಗೆ ಭಾರತವು ಜಾಗತಿಕ ವೇದಿಕೆಯಲ್ಲಿ ಹೊಸ ಪಾತ್ರ ಮತ್ತು ಪ್ರಭಾವ ಬೀರಲಿದೆ.
  • ಅತಿ ವೇಗದ 5ಜಿ ಆರಂಭಿಸಿದ್ದು, 6ಜಿಗೆ ಸಿದ್ಧರಾಗುತ್ತಿದ್ದೇವೆ. ನವೀಕೃತ ಇಂಧನದ ಗುರಿ ಸಾಧಿಸಿದ್ದೇವೆ. ಗಡುವಿಗೂ ಮುನ್ನ ಸರ್ಕಾರ ತನ್ನೆಲ್ಲ ಗುರಿ ಪೂರ್ಣಗೊಳಿಸಲಿದೆ.
  • ಬಾಹ್ಯಾಕಾಶ ತಂತ್ರಜ್ಞಾನದಲ್ಲಿನ ಭಾರತದ ಸಾಮರ್ಥ್ಯಗಳು ವೃದ್ಧಿಸಿವೆ. ಆಳ ಸಮುದ್ರದ ಯೋಜನೆಗಳು, ರೈಲ್ವೆ ಆಧುನೀಕರಣ- ವಂದೇ ಭಾರತ್, ಬುಲೆಟ್ ಟ್ರೖೆನ್​ಗಳು ಸರ್ಕಾರದ ಸಾಧನೆ ಬಿಂಬಿಸುತ್ತಿವೆ. ಹಳ್ಳಿ-ಹಳ್ಳಿಗಳಲ್ಲೂ ಇಂಟರ್ನೆಟ್ ಸೌಕರ್ಯ ಇದೆ.
  • ಭಾರತವು ಇಷ್ಟಕ್ಕೆ ನಿಲ್ಲುವುದಿಲ್ಲ ಎಂದು ವಿಶ್ವ ಪರಿಣತರು ಹೇಳು ತ್ತಿದ್ದಾರೆ. ಎಲ್ಲ ರೇಟಿಂಗ್ ಸಂಸ್ಥೆಗಳೂ ಭಾರತವನ್ನು ಶ್ಲಾಘಿಸುತ್ತಿವೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net