ವರ್ಚುವಲ್ ನ್ಯಾಯಾಂಗ ವ್ಯವಸ್ಥೆ ಅನಿವಾರ್ಯ: ಸಜ್ಜನ್ ಪೂವಯ್ಯ ಅವರ ಲಾ & ಆರ್ಡರ್ ಅಂಕಣ

virtual-court 2nd Article
Published on

‘ಸವಾಲುಗಳೇ ಅವಕಾಶಗಳ ಬಾಗಿಲು ತೆರೆಯುತ್ತವೆ’ ಎಂಬ ನಾಣ್ಣುಡಿಯಿದೆ. ಕರೊನಾ ಜಗತ್ತನ್ನು ಕಾಡತೊಡಗಿ ಅರ್ಧ ವರ್ಷ ಕಳೆದಿದ್ದು ಅದರೊಂದಿಗೇ ಜೀವನ ನಡೆಸುವುದು ಅನಿವಾರ್ಯ ಎಂಬ ಪರಿಸ್ಥಿತಿ ಬಂದೊದಗಿದೆ. ಅದು ಈ ನಾಣ್ಣುಡಿಗೆ ಪುಷ್ಟಿ ನೀಡುವಂತಿದೆ. ಈ ಅವಧಿಯುದ್ದಕ್ಕೂ ಕೆಲಸ, ಸಂವಹನ, ಮನರಂಜನೆ ಹೀಗೆ ಜೀವನದ ಪ್ರತಿಯೊಂದು ರಂಗದಲ್ಲಿ ಮಹತ್ವದ

ಬದಲಾವಣೆ ಆಗಿರುವುದನ್ನು ಗಮನಿಸಿದ್ದೇವೆ. ಕೆಲವರು ಬದಲಾವಣೆಗೆ ಸುಲಭವಾಗಿ ಒಗ್ಗಿಕೊಂಡಿದ್ದಾರೆ. ಬಹಳ ಜನರು ಅದನ್ನು ಸಂಪೂರ್ಣವಾಗಿ ಅಳವಡಿಸಿಕೊಳ್ಳಲು ಒದ್ದಾಡುತ್ತಿದ್ದಾರೆ. ಕೋವಿಡ್-19 ಪರಿಸ್ಥಿತಿಯಿಂದಾಗಿ ಅನೇಕ ಸರ್ಕಾರಿ ಚಟುವಟಿಕೆಗಳಿಗೆ ಅಡ್ಡಿಯುಂಟಾಗಿದೆ. ಸಾರ್ವಜನಿಕ ಸಾರಿಗೆ ವ್ಯವಸ್ಥೆ, ಸ್ಥಳೀಯಾಡಳಿತಗಳಿಂದ ಸಮಸ್ಯೆಗೆ ಪರಿಹಾರ ಕಲ್ಪಿಸುವುದು, ಆರ್​ಟಿಒ ಕಚೇರಿಗಳ ಸೇವೆ ಹೀಗೆ ಅನೇಕಾನೇಕ ಸೇವೆಗಳು ಅಸ್ತವ್ಯಸ್ತಗೊಂಡಿವೆ. ವಿಶೇಷವಾಗಿ, ರಾಷ್ಟ್ರವ್ಯಾಪಿ ಲಾಕ್​ಡೌನ್ ಅವಧಿಯಲ್ಲಿ ದೊಡ್ಡ ಪ್ರಮಾಣದಲ್ಲಿ ತೊಂದರೆಗೀಡಾದ ಇನ್ನೊಂದು ಮುಖ್ಯ ಕ್ಷೇತ್ರ ನ್ಯಾಯಾಂಗ.

ತನ್ನ ಚಟುವಟಿಕೆಗಳನ್ನು ಕಡಿತಗೊಳಿಸಲಾಗುತ್ತದೆ ಹಾಗೂ ‘ತೀರಾ ತುರ್ತ’ ಪ್ರಕರಣಗಳನ್ನು ಮಾತ್ರ ಕೈಗೆತ್ತಿಕೊಳ್ಳಲಾಗುತ್ತದೆ ಎಂದು ಲಾಕ್​ಡೌನ್ ವೇಳೆ ಸುಪ್ರೀಂ ಕೋರ್ಟ್ ಘೋಷಿಸಿತು. ತುರ್ತು ವಿಚಾರಗಳನ್ನು ಕೂಡ ‘ವಿಡಿಯೋ ಕಾನ್ಪರೆನ್ಸ್ ವಿಧಾನ’ ಮೂಲಕ ಮಾತ್ರವೇ ವಿಚಾರಣೆ ನಡೆಸಲಾಗುತ್ತದೆ ಎಂದೂ ಅದು ಸ್ಪಷ್ಟಪಡಿಸಿತು.

ಹೊಸ ಯುಗಕ್ಕೆ ನಾಂದಿ: ಸುಪ್ರೀಂ ಕೋರ್ಟ್​ನ ಈ ನಿರ್ದೇಶನ ಭಾರತದಲ್ಲಿ ಆನ್​ಲೈನ್/ವರ್ಚುವಲ್ ಕೋರ್ಟ್ ವಿಚಾರಣೆಗಳ ಯುಗಕ್ಕೆ ನಾಂದಿ ಹಾಡಿದೆ. ಸಾಂಕ್ರಾಮಿಕತೆಗಿಂತ ಮುಂಚಿನ ಖುದ್ದು/ದೈಹಿಕ ಹಾಜರಿಯ (ಫಿಸಿಕಲ್) ಕೋರ್ಟ್ ವಿಚಾರಣೆ ಒಂದು ದುರಂತದಂತಿದ್ದವು. ಸಾಮಾನ್ಯ ದಿನದಂದೇ ಸಣ್ಣ ಕೋರ್ಟ್ ಹಾಲ್​ನಲ್ಲಿ ಹತ್ತಾರು ವಕೀಲರು, ನ್ಯಾಯಾಂಗ ಅಧಿಕಾರಿ-ಸಿಬ್ಬಂದಿ, ನ್ಯಾಯಾಧೀಶರು, ಕಕ್ಷಿದಾರರು ಆದಿಯಾಗಿ ಬಹಳಷ್ಟು ಜನರು ಕಿಕ್ಕಿರಿದು ಸೇರಿ ನ್ಯಾಯದ ನಿರೀಕ್ಷೆಯಲ್ಲಿ ಇರುತ್ತಿದ್ದರು. ಒಂದೇ ದಿನ ಹಲವು ಪ್ರಕರಣಗಳನ್ನು ಪಟ್ಟಿ ಮಾಡಲಾಗುತ್ತಿತ್ತು. ಆದರೆ ಸಮಯ ನಿಗದಿಪಡಿಸದಿರುವುದರಿಂದ ಎಲ್ಲರೂ ಬೆಳಗ್ಗೆಯೇ ಕೋರ್ಟ್ ಹಾಲ್​ಗೆ ಹಾಜರಾಗಿ ತಮ್ಮ ಸರದಿಗಾಗಿ ಚಾತಕಪಕ್ಷಿಯಂತೆ ಕಾಯುತ್ತಿದ್ದರು. ಸಾಮಾಜಿಕ ಅಂತರ ನಿಯಮ ಕಾಯ್ದುಕೊಳ್ಳಲು ಬೇಕಾದಷ್ಟು ಜಾಗ ಬಿಡಿ, ಜನರು ನಿಂತು ಕೊಳ್ಳಲೂ ಸ್ಥಳಾವಕಾಶ ಇರದೆ ಪರದಾಡುವುದು ಸಾಮಾನ್ಯ ದೃಶ್ಯ.

ಕೋರ್ಟ್ ರೂಮ್ಳು ಮಾತ್ರವಲ್ಲದೆ ಎಲ್ಲರೂ ಬಳಸುವಂಥ ಕ್ಯಾಂಟೀನ್, ಲೈಬ್ರರಿ ಮತ್ತು ಸ್ಟೇಷನರಿ ಮಾರಾಟ ಪ್ರದೇಶ ಮುಂತಾದ ಎಲ್ಲ ಕಡೆಗಳಲ್ಲಿ ಪ್ರತಿ ದಿನ ಇದೇ ರೀತಿಯ ಸಮಸ್ಯೆ ಇರುವುದರಿಂದ ಯಾವುದೇ ನ್ಯಾಯಾಲಯ ಕೋವಿಡ್-19 ಹರಡುವ ಅಪಾಯವನ್ನು ನಿಭಾಯಿಸುವುದು ಕಷ್ಟದ ಕೆಲಸವೇ. ಕೋವಿಡ್-19 ಪಾಸಿಟಿವ್ ಇರುವಂಥ ಒಬ್ಬ ವ್ಯಕ್ತಿ ಇಂಥ ಜನನಿಬಿಡ ಸ್ಥಳಗಳಲ್ಲಿ ತಕ್ಷಣವೇ ದೊಡ್ಡ ಸಂಖ್ಯೆಯ ಜನರಲ್ಲಿ ವೈರಸ್ ಹರಡುವ ಸಾಧ್ಯತೆ ಹೆಚ್ಚೇ ಇರುತ್ತದೆ.

ಹೀಗಾಗಿ, ಫಿಸಿಕಲ್ ವಿಚಾರಣೆ ನಿವಾರಿಸಿ ಪರ್ಯಾಯ ಕಂಡುಕೊಳ್ಳುವುದು ನ್ಯಾಯಾಂಗಕ್ಕೆ ಅನಿವಾರ್ಯ. ಎಲ್ಲ ಪ್ರಕರಣಗಳ ಆನ್​ಲೈನ್ ವಿಚಾರಣೆ ಅದರದ್ದೇ ಆದ ಸಮಸ್ಯೆ ಹೊಂದಿರುತ್ತಾದರೂ ಅದನ್ನು ಸಾಧ್ಯಗೊಳಿಸಿದ ಶ್ರೇಯಸ್ಸು ನ್ಯಾಯಾಂಗಕ್ಕೆ ಸಲ್ಲುತ್ತದೆ.

ಬಲು ನಿಧಾನ: ನ್ಯಾಯಾಂಗ ಸಾಮಾನ್ಯವಾಗಿ ಹೊಸ ಬದಲಾವಣೆಗಳಿಗೆ ಹೊಂದಿಕೊಳ್ಳುವಲ್ಲಿ ನಿಧಾನಗತಿ ತೋರುತ್ತದೆ. ಕೋರ್ಟ್ ದಾಖಲೆಗಳ ಡಿಜಿಟಲೀಕರಣ ಪ್ರಕ್ರಿಯೆ ಇನ್ನೂ ಪೂರ್ಣಗೊಂಡಿಲ್ಲ. ಇತರ ಸರ್ಕಾರಿ ದಾಖಲೆಗಳ ಸಲ್ಲಿಕೆ (ಫೈಲಿಂಗ್) ಮತ್ತು ಅರ್ಜಿಗಳನ್ನು ಸಂಪೂರ್ಣವಾಗಿ ಆನ್​ಲೈನ್ ಮಾಡಲಾಗಿದೆ. ಆದರೆ, ಕರೊನಾ ಸಾಂಕ್ರಾಮಿಕತೆಗೂ ಮುನ್ನ ಕೋರ್ಟ್ ಮುಂದೆ ಎಲ್ಲವನ್ನೂ ದೈಹಿಕವಾಗಿಯೇ ಮಾಡಲಾಗುತ್ತಿತ್ತು. ಈಗ ಪರಿಸ್ಥಿತಿ ಬದಲಾಗಿದೆ. ಕೋರ್ಟ್​ಗಳ ಕಂಪ್ಯೂಟರೀಕರಣ ಪ್ರಕ್ರಿಯೆ ಮತ್ತು ಆನ್​ಲೈನ್ ಫೈಲಿಂಗ್ ಹಾಗೂ ಅಂಗೀಕಾರ ವ್ಯವಸ್ಥೆ ಕರೊನಾ ಸಾಂಕ್ರಾಮಿಕತೆಯಿಂದಾಗಿ ಬಹಳ ವೇಗ ಪಡೆದುಕೊಂಡಿದೆ. ಉಳಿವಿಗಾಗಿ ತಾಂತ್ರಿಕ ಪರಿಹಾರವೇ ಮಾರ್ಗ ಎಂಬುದನ್ನು ಒಪ್ಪಿಕೊಳ್ಳುವುದು ಅನಿವಾರ್ಯವೆನಿಸಿದೆ.

ಈ ಯಾವುದೇ ಆನ್​ಲೈನ್ ವೇದಿಕೆಗಳು ಸರ್ಕಾರ ರೂಪಿಸಿದ್ದಲ್ಲ. ಎಲ್ಲವೂ ಖಾಸಗಿ ಸಂಸ್ಥೆಗಳ ಉತ್ಪನ್ನಗಳು. ಉದಾಹರಣೆಗೆ, ಸುಪ್ರೀಂ ಕೋರ್ಟ್ ಆನ್​ಲೈನ್ ವಿಚಾರಣೆಗೆ ‘ವಿಡ್ಯೊ’ ಎಂಬ ವೇದಿಕೆ ಬಳಸುತ್ತದೆ. ಕರ್ನಾಟಕ ಹೈಕೋರ್ಟ್ ಜಿತ್ಸಿ ಅಥವಾ ಜೂಮ್ ಬಳಸುತ್ತದೆ. ದೆಹಲಿ ಹೈಕೋರ್ಟ್ ಅವಲಂಬಿಸಿರುವುದು ಸಿಸ್ಕೊ ವೆಬೆಕ್ಸ್ ಮೇಲೆ. ಆಂಧ್ರಪ್ರದೇಶ ಹೈಕೋರ್ಟ್ ‘ಬ್ಲೂ ಜೀನ್ಸ್’ ಬಳಸುತ್ತದೆ. ಪ್ರತಿಯೊಂದು ಹೈಕೋರ್ಟ್ ಭಿನ್ನ ಆನ್​ಲೈನ್ ವೇದಿಕೆ ಬಳಸುತ್ತಿರುವುದು ನಿಜವಾಗಿಯೂ ಸುರಕ್ಷಿತವೇ ಆಗಿದೆ. ಹಲವು ಬಹುರಾಷ್ಟ್ರೀಯ ಕಂಪನಿಗಳು ಅಭಿವೃದ್ಧಿಪಡಿಸಿರುವ ಈ ಸಾಫ್ಟ್​ವೇರ್​ಗಳು ಸ್ಥಿರವೂ ಹಲವು ದೋಷಗಳಿಂದ ಮುಕ್ತವೂ ಆಗಿವೆ. ಸುಧಾರಿತ ಮಾಹಿತಿ-ತಂತ್ರಜ್ಞಾನದ ಅಳವಡಿಕೆಯ ಪರಿಣಾಮವಾಗಿ ಈಗೀಗ ನ್ಯಾಯಾಧೀಶರು ಬಂದು ಕಲಾಪ ಆರಂಭಿಸುವ ಮುನ್ನವೇ ವಕೀಲರು ಲಾಗ್​ಇನ್ ಆಗಿ ತಮ್ಮ ಕೇಸ್ ನಿಭಾಯಿಸಲು ಸನ್ನದ್ಧರಾಗಿ ಕುಳಿತಿರುತ್ತಾರೆ.

ಕಲಾಪ ಆರಂಭವಾದಾಗ ಯಾವುದೇ ತಾಂತ್ರಿಕ ತೊಂದರೆ ಆಗದಿರಲೆಂದು ಕೋರ್ಟ್ ಮಾಸ್ಟರ್​ರೊಂದಿಗೆ ವಕೀಲರು ತಮ್ಮ ವಿಡಿಯೋ ಮತ್ತು ಆಡಿಯೋ ತಪಾಸಣೆ ಮಾಡಬೇಕಾಗುತ್ತದೆ. ಈ ಪ್ರಮಾಣಿತ ಕಾರ್ಯಾಚರಣೆ ನಿಯಮ (ಎಸ್​ಒಪಿ) ಪ್ರತಿದಿನದ ಸುಗಮ ಕಾರ್ಯನಿರ್ವಹಣೆಗೆ ಮತ್ತು ನ್ಯಾಯಾಂಗದ ಅಮೂಲ್ಯ ಸಮಯ ಸುಮ್ಮನೆ ಹಾಳಾಗುವುದನ್ನು ತಪ್ಪಿಸಲು ನೆರವಾಗಿದೆ. ಯಾವ ವಕೀಲರಿಗೆ ಸಂಬಂಧಿಸಿದ ಕೇಸ್ ಕರೆಯಲಾಗುತ್ತದೋ ಆಗ ಆ ವಕೀಲರು ಪರದೆ ಮೇಲೆ ಹಾಜರಾಗುತ್ತಾರೆ.

ಬಹುತೇಕ ನ್ಯಾಯಾಲಯಗಳಲ್ಲಿ ನ್ಯಾಯಾಧೀಶರು, ನ್ಯಾಯಮೂರ್ತಿಗಳ ಪರಿಶೀಲನೆಗಾಗಿ ನ್ಯಾಯಾಂಗ ಅಧಿಕಾರಿಗಳು ಪ್ರತಿ ಪ್ರಕರಣದ ಕಡತಗಳ ಫಿಸಿಕಲ್ ಪ್ರತಿಯನ್ನು ತಮ್ಮ ಬಳಿ ಇಟ್ಟುಕೊಂಡಿರುತ್ತಾರೆ. ಅವುಗಳನ್ನು ಜಡ್ಜ್​ಗಳು ನೋಡುವಂತೆ ವಕೀಲರು ಅವಕಾಶ ಕಲ್ಪಿಸುತ್ತಾರೆ. ಅಂದರೆ ಫಿಸಿಕಲ್ ಕಲಾಪಗಳ ವೇಳೆ ನಡೆಯುವಂತೆಯೇ ಈ ಪ್ರಕ್ರಿಯೆ ಇರುತ್ತದೆ. ಕೆಲವು ಕೋರ್ಟ್​ಗಳಲ್ಲಿ ವಕೀಲರ ಕಡತಗಳ ಸಾಫ್ಟ್​ಕಾಪಿಗಳನ್ನು ಕೂಡ ಜಡ್ಜ್​ಗಳು ಪರಿಶೀಲಿಸಲು ಅವಕಾಶವಿದೆ. ಇದು ಆಯಾ ವಕೀಲರು ತಾವು ಹೇಳಬೇಕಾದ್ದನ್ನು ನಿರ್ದಿಷ್ಟವಾಗಿ ಪ್ರತಿಪಾದಿಸಬೇಕೆಂಬ ಹೊಣೆ ಎದುರಿಸುವಂತೆ ಮಾಡಿದೆ. ಫಿಸಿಕಲ್ ವಿಚಾರಣೆಯಂತೆ ಯಾವುದೇ ನೆಪ ಒಡ್ಡುವಂತಿಲ್ಲ.

ವೇಳೆ ಉಳಿತಾಯ: ಕೋರ್ಟ್​ನ ಸೀಮಿತ ವೇಳೆಯನ್ನು ಹಾಳು ಮಾಡಬಾರದೆಂಬ ಪ್ರಜ್ಞೆಯಿಂದಾಗಿ ವಕೀಲರ ಸಬ್​ವಿುಶನ್​ಗಳಲ್ಲಿ ಸ್ವಲ್ಪ ಮಟ್ಟಿನ ನಿಖರತೆ ಬಂದಿದೆ. ಆನ್​ಲೈನ್ ವ್ಯವಸ್ಥೆ ವಕೀಲರ ಸಮಯವನ್ನೂ ಉಳಿಸುತ್ತದೆ.

ಟ್ರಿಬ್ಯುನಲ್​ಗಳು: ನ್ಯಾಯಮಂಡಳಿಗಳು (ಟ್ರಿಬ್ಯುನಲ್) ವರ್ಚುವಲ್ ನ್ಯಾಯ ವ್ಯವಸ್ಥೆ ಅಂಗೀಕರಿಸಿರುವ ನ್ಯಾಯಾಂಗದ ಒಂದು ಪ್ರಮುಖ ವಿಭಾಗವಾಗಿದೆ. ವಿದ್ಯುಚ್ಛಕ್ತಿ ಕುರಿತ ಮೇಲ್ಮನವಿ ಪ್ರಾಧಿಕಾರ (ಎಪಿಟಿಇಎಲ್) ಈ ಕ್ಷೇತ್ರದಲ್ಲಿ ಉತ್ತಮ ಸಾಧನೆ ತೋರಿದೆ. ಕರೊನಾ ಸಂಕಟದ ಸಮಯದಲ್ಲೂ ಅನೇಕ ಪ್ರಕರಣಗಳನ್ನು ವರ್ಚುವಲ್ ವ್ಯವಸ್ಥೆಯಲ್ಲಿ ವಿಚಾರಣೆ ನಡೆಸಿ ತೀರ್ಪುಗಳನ್ನು ನೀಡಿದೆ.

ಸಮಸ್ಯೆಗಳು: ವರ್ಚುವಲ್ ನ್ಯಾಯಾಂಗ ಒಳ್ಳೆಯದೇನೋ ಹೌದು. ಆದರೆ ಅದರ ಸಂಪೂರ್ಣ ಸಾಕಾರದ ಹಾದಿಯಲ್ಲಿ ಹಲವು ಅಡ್ಡಿ ಆತಂಕಗಳಿವೆ. ಭಾರತದ ಒಟ್ಟು ಜನಸಂಖ್ಯೆಯಲ್ಲಿ ಈಗಲೂ ಇಂಟರ್​ನೆಟ್ ಲಭ್ಯತೆ ಇರುವವರು ಶೇಕಡ 50ರಷ್ಟು ಜನರು ಮಾತ್ರ. ಆನ್​ಲೈನ್ ವಿಚಾರಣೆ ವ್ಯವಸ್ಥೆಯ ವೆಚ್ಚ ಭರಿಸಲು ಎಲ್ಲ ವಕೀಲರಿಗೆ ಸಾಧ್ಯವಾಗದಿರಬಹುದು. ಹೀಗಾಗಿ ಆನ್​ಲೈನ್ ವ್ಯವಸ್ಥೆ ವಕೀಲರ ನಡುವೆಯೇ ಅಸಮಾನತೆ ಸೃಷ್ಟಿಸುವ ಸಾಧ್ಯತೆಯಿದೆ. ಆರ್ಥಿಕವಾಗಿ ಬಲಾಢ್ಯ ವಕೀಲರು ಎಲ್ಲ ಉತ್ತಮ ಸಾಧನ-ಸಲಕರಣೆ ಹೊಂದಬಹುದು. ಆದರೆ ಅದು ಎಲ್ಲರಿಗೂ ಕೈಗೆಟಕುವಂಥದ್ದಲ್ಲ.

ಎಲ್ಲ ಕೋರ್ಟ್​ಗಳು ಕೂಡ ತಾಂತ್ರಿಕ ಮೂಲಸೌಲಭ್ಯಗಳನ್ನು ಹೊಂದಿಲ್ಲ. ಸ್ಥಿರವಾದ ಇಂಟರ್​ನೆಟ್ ಸಂಪರ್ಕ ಸೌಲಭ್ಯ ಕೊರತೆ, ಸಮಸ್ಯೆ ಬಂದಾಗ ಪರಿಹರಿಸಲು ಅಗತ್ಯವಾದ ತಾಂತ್ರಿಕ ಸಂಪನ್ಮೂಲ ವ್ಯಕ್ತಿಗಳ ಕೊರತೆ, ನ್ಯಾಯಾಧೀಶರ ಕೆಲಸ ಸುಗಮವಾಗಿ ಸಾಗವಂತೆ ಮಾಡಬಲ್ಲ ಅತ್ಯಾಧುನಿಕ ಕಂಪ್ಯೂಟರ್​ಗಳ ಕೊರತೆ ಮೊದಲಾದವು ಕಾಡುತ್ತಿರುವ ಸಮಸ್ಯೆಯಾಗಿವೆ. ಎಲ್ಲ ನ್ಯಾಯಾಲಯಗಳಿಗೆ ಇಂಥ ಸೌಕರ್ಯಗಳು ದೊರೆತಾಗಲಷ್ಟೆ ಹಾಗೂ ಎಲ್ಲ ವಕೀಲರೂ ಆರ್ಥಿಕ ಸದೃಢತೆ ಸಾಧಿಸಿದಾಗಲಷ್ಟೆ ವರ್ಚುವಲ್ ನ್ಯಾಯಾಲಯದ ಕನಸು ಸಂಪೂರ್ಣವಾಗಿ ನನಸಾಗಬಹುದು. ಆ ನಿಟ್ಟಿನಲ್ಲಿ ಸರ್ಕಾರಗಳು ಸೂಕ್ತ ಕ್ರಮಗಳನ್ನು ಕೈಗೊಳ್ಳುವುದು ಅಗತ್ಯ.

(ಲೇಖಕರು ಖ್ಯಾತ ಹಿರಿಯ ನ್ಯಾಯವಾದಿ, ಮಾಜಿ ಹೆಚ್ಚುವರಿ ಅಡ್ವೋಕೇಟ್ ಜನರಲ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net