ಪತ್ರಕರ್ತ ಸಿದ್ಧಿಕ್ ಬಂಧನ ಅಕ್ರಮವೆಂದ ಕೆಯುಡಬ್ಲ್ಯುಜೆ; ಪಿಎಫ್​ಐ ನಂಟಿನ ಸಿದ್ಧಿಕ್ ಇರೋದು ಎಂದ ಪೊಲೀಸರು

siddique-kappan and supreme court
Published on

ನವದೆಹಲಿ: ಹಾಥರಸ್​ ಕೇಸ್​ನ ಸಂತ್ರಸ್ತೆಯ ಮನೆಗೆ ಹೊರಟಿದ್ದ ಕೇರಳದ ಪತ್ರಕರ್ತ ಸಿದ್ಧಿಕ್ ಕಪ್ಪನ್​ ಮಥುರಾ ಪೊಲೀಸರಿಂದ ಬಂಧಿಸಲ್ಪಟ್ಟಿದ್ದಾರೆ. ಆದರೆ ಎಲ್ಲಿದ್ದಾರೆ ಎಂದು ತಿಳಿಯದೆಂದು ಕೇರಳ ಕಾರ್ಯನಿರತ ಪತ್ರಕರ್ತರ ಸಂಘ ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿ ವಿಚಾರಣೆಗೆ ಎತ್ತಿಕೊಂಡ ಸುಪ್ರೀಂ ಕೋರ್ಟ್​ ನ್ಯಾಯಪೀಠ, ನಾಲ್ಕು ವಾರದ ನಂತರ ವಿಚಾರಣೆ ನಡೆಸುವುದಾಗಿ ತಿಳಿಸಿದೆ.

ಸಿದ್ದಿಕ್​ ಗೂ ಪಿಎಫ್​ಐಗೂ ನಂಟು? ಉತ್ತರ ಪ್ರದೇಶ ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್​ಐ) ಮತ್ತು ಮಥುರಾದಲ್ಲಿ ಅದರ ಸಹಸಂಘಟನೆಗಳ ಜತೆಗೆ ಸಂಪರ್ಕ, ಸಂಬಂಧ ಹೊಂದಿರುವ ನಾಲ್ವರನ್ನು ಬಂಧಿಸಲಾಗಿದೆ. ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ದೇಶಾದ್ಯಂತ ಪ್ರತಿಭಟನೆ ಆಯೋಜಿಸಿದ್ದ ಸಂಘಟನೆ ಇದು. ಇದನ್ನು ನಿಷೇಧಿಸಬೇಕು ಎಂದು ಉತ್ತರ ಪ್ರದೇಶ ಪೊಲೀಸರು ಶಿಫಾರಸು ಮಾಡಿದ್ದರು. ಬಂಧಿತ ನಾಲ್ವರನ್ನು ಅವರು, ಕೇರಳದ ಮಲಪ್ಪುರಂ ನಿವಾಸಿ ಸಿದ್ಧಿಕ್​ ​, ಮುಜಾಫರ್​ನಗರದ ಅತೀಕ್​ ಉರ್ ರೆಹಮಾನ್​, ಬಹರೈಚ್​ನ ಮಸೂದ್​ ಅಹ್ಮದ್, ರಾಮಪುರದ ಆಲಂ ಎಂದು ಗುರುತಿಸಿರುವುದಾಗಿ ತಿಳಿಸಿದ್ದಾರೆ.

ಮುಖ್ಯನ್ಯಾಯಮೂರ್ತಿ ಎಸ್​.ಎ.ಬೊಬ್ಡೆ, ನ್ಯಾಯಮೂರ್ತಿಗಳಾದ ಎ.ಎಸ್.ಬೋಪಣ್ಣ, ವಿ.ರಾಮಸುಬ್ರಹ್ಮಣಿಯನ್​ ಅವರನ್ನು ಒಳಗೊಂಡ ನ್ಯಾಯಪೀಠ ಈ ದಾವೆಯನ್ನು ವಿಚಾರಣೆಗೆ ಎತ್ತಿಕೊಂಡಿದ್ದರು. ದಾವೆಯನ್ನು ಪರಿಷ್ಕರಿಸಿ ಅಲಹಾಬಾದ್ ಹೈಕೋರ್ಟ್​ಗೆ ಸಲ್ಲಿಸುವುದು ಸರಿಯಾದ ಕ್ರಮ ಎಂದು ನ್ಯಾಯಪೀಠ ಹೇಳಿತು.

ಇದಕ್ಕೆ ಪ್ರತಿಯಾಗಿ ದಾವೆದಾರರ ಪರ ಹಿರಿಯ ನ್ಯಾಯವಾದಿ ಕಪಿಲ್ ಸಿಬಲ್​, ಈ ಪ್ರಕರಣದಲ್ಲಿ ಅನ್​ಲಾಫುಲ್​ ಆ್ಯಕ್ಟಿವಿಟೀಸ್​ (ಪ್ರಿವೆನ್ಶನ್​) ಆ್ಯಕ್ಟ್ ನ ಅಂಶಗಳನ್ನೂ ಸೇರಿಸಿರುವ ಕಾರಣ ಹೈಕೋರ್ಟ್​​ನಲ್ಲಿ ಕಕ್ಷಿದಾರರಿಗೆ ಪರಿಹಾರ ಸಿಗದು. ಕೆಳ ಹಂತದ ಯಾವ ಕೋರ್ಟ್​​ಗಳಲ್ಲೂ ಜಾಮೀನು ಸಿಗಲ್ಲ. ಅಲ್ಲದೆ, ಕೇಸ್​ ವರ್ಷಾನುಗಟ್ಟಲೆ ಮುಂದಕ್ಕೆ ಹೋಗುವ ಸಾಧ್ಯತೆ ಇದೆ. ಈಗ ಸಲ್ಲಿಸಿರುವುದು ಹೇಬಿಯಸ್ ಕಾರ್ಪಸ್​ ಅರ್ಜಿಯಾಗಿದೆ. ಆದರೆ, ಸಂವಿಧಾನದ ಅನುಚ್ಚೇಧ 32ರ ಪ್ರಕಾರ ಹೊಸ ಅರ್ಜಿ ಸಲ್ಲಿಸುವುದಕ್ಕೆ ಅವಕಾಶವಿದೆ ಎಂದು ನ್ಯಾಯಪೀಠಕ್ಕೆ ಮನವರಿಕೆ ಮಾಡಲು ಮುಂದಾದರು.

ಕೂಡಲೆ ನ್ಯಾಯಪೀಠವು, ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಕೆಯನ್ನು ಕುಟುಂಬ ಸದಸ್ಯರಷ್ಟೇ ಮಾಡಬಹುದು. ಬೇರಾರೂ ಅದನ್ನು ಬಳಸುವುದಕ್ಕಾಗದು ಎಂದು ಸ್ಪಷ್ಟಪಡಿಸಿತು. ಇಷ್ಟಾದ ಬಳಿಕ, ದಾವೆ ಅರ್ಜಿ ಪರಿಷ್ಕರಿಸುವುದಕ್ಕೆ ಸಮಯಾವಕಾಶ ಬೇಕು ಎಂದು ಸಿಬಲ್ ಕೇಳಿಕೊಂಡರು. ನಂತರ ಕೋರ್ಟ್​ ಕಲಾಪ ಮುಂದೂಡಲ್ಪಟ್ಟಿತು.

ದಾವೆಯಲ್ಲಿರುವ ಅಂಶ

ಪೊಲೀಸರು ಗುರುತಿಸಿರುವ ಸಿದ್ಧಿಕ್​, ದೆಹಲಿ ಮೂಲದ ಹಿರಿಯ ಪತ್ರಕರ್ತರಾಗಿದ್ದು ಸಿದ್ಧಿಕ್ ಕಪ್ಪನ್ ಎಂಬುದು ಅವರ ಪೂರ್ಣ ಹೆಸರು. ಪತ್ರಕರ್ತನ ಕರ್ತವ್ಯ ನಡೆಸದಂತೆ ಪೊಲೀಸರು ತಡೆ ಒಡ್ಡಿದ್ದಾರೆ. ಸುಪ್ರೀಂ ಕೋರ್ಟ್ ಸೂಚಿಸಿರುವ ಬಂಧನ ಮಾರ್ಗದರ್ಶಿ ಸೂತ್ರವನ್ನು ಪೊಲೀಸರು ಪಾಲಿಸಿಲ್ಲ. ಅವರ ಬಂಧನ ವಿಚಾರವನ್ನು ಪೊಲೀಸರು ಅವರ ಮನೆಯವರಿಗೆ ಅಥವಾ ಸಹೋದ್ಯೋಗಿಗಳಿಗೆ ತಿಳಿಸಿಲ್ಲ. ಆ ಮೂಲಕ ನಿಯಮ ಉಲ್ಲಂಘಿಸಿದ್ದಾರೆ ಎಂಬ ಅಂಶ ದಾವೆಯಲ್ಲಿತ್ತು. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net