ನನ್ನ ಗಮನಕ್ಕೆ ತರದೇ ಖಾತೆ ಬದಲಾಯಿಸಿದ್ದು ಸರಿಯೇ? ಸಿಎಂಗೆ ಶ್ರೀರಾಮುಲು ಪ್ರಶ್ನೆ

sriramulu bsy
Published on

ಬೆಂಗಳೂರು: 'ನನ್ನ ಗಮನಕ್ಕೆ ತರದೇ ನನ್ನ ಬಳಿಯಿದ್ದ ಖಾತೆಗಳನ್ನು ಹಿಂಪಡೆದದ್ದು ಸರಿಯೇ? ಎಂದು ಸಿಎಂ ಬಿ.ಎಸ್​. ಯಡಿಯೂರಪ್ಪ ಅವರನ್ನು ಸಚಿವ ಬಿ.ಶ್ರೀರಾಮುಲು ಪ್ರಶ್ನಿಸಿದ್ದಾರೆ.

ಸಚಿವ ಸಂಪುಟ ವಿಸ್ತರಣೆಗೂ ಮುನ್ನವೇ ಶ್ರೀರಾಮುಲು ಕೈಯಲ್ಲಿದ್ದ ಆರೋಗ್ಯ ಖಾತೆ ಮತ್ತು ಹಿಂದುಳಿದ ವರ್ಗಗಳ ಇಲಾಖೆಯನ್ನು ಸಿಎಂ ವಾಪಸ್​ ಪಡೆದಿದ್ದಾರೆ. ಈ ಖಾತೆ ಬದಲಾವಣೆಯ ಪಟ್ಟಿಗೆ ರಾಜ್ಯಪಾಲರಿಂದ ಅಧಿಕೃತ ಅಂಕಿತ ಬಿದ್ದ ಕೂಡಲೇ ಯಡಿಯೂರಪ್ಪರನ್ನು ಭೇಟಿ ಮಾಡಲು ಸಿಎಂ ನಿವಾಸ ಕಾವೇರಿಗೆ ಇಂದು ಮಧ್ಯಾಹ್ನ ಬಂದಿದ್ದ ಶ್ರೀರಾಮುಲು ಸುಮಾರು ಒಂದೂವರೆ ತಾಸು ಕಾದರು. ಬಳಿಕ ಬಂದ ಸಿಎಂರನ್ನು ದಿಢೀರ್​ ಖಾತೆ ಬದಲಾವಣೆ ಬಗ್ಗೆ ಪ್ರಶ್ನಿಸಿದರು.

ಇದಕ್ಕುತ್ತರಿಸಿದ ಸಿಎಂ, ಆರೋಗ್ಯ ಇಲಾಖೆಯಲ್ಲಿ ಯಾವುದೇ ಸಮಸ್ಯೆ ಆಗುವುದು ಬೇಡ. ಸಮಾಜ ಕಲ್ಯಾಣ ಇಲಾಖೆಯನ್ನು ನೀನು ಈ ಮೊದಲೇ ಕೇಳಿದ್ದೆ. ಹಾಗಾಗಿ ಅದನ್ನು ನಿನಗೆ ಕೊಟ್ಟಿದ್ದೇನೆ ಎಂದರು.

ಖಾತೆ ಬದಲಾವಣೆ ಬಗ್ಗೆ ಯಾವುದೇ ಬೇಸರ ಇಟ್ಟುಕೊಳ್ಳಬೇಡ. ಸಂಜೆ ಬಾ, ಸುಧೀರ್ಘವಾಗಿ ಮಾತನಾಡೋಣ ಎಂದು ಬಿಎಸ್​ವೈ ಹೇಳಿದರು.

ಹಿಂದುಳಿದ ಸಚಿವರ ಖಾತೆ ಬದಲಾಗಿದೆ. ಅದು ನಿಮ್ಮ ಪರಮಾಧಿಕಾರ. ಇದನ್ನು ನಾನು ಪ್ರಶ್ನೆ ಮಾಡಲ್ಲ. ಆದ್ರೆ ನನ್ನ ಗಮನಕ್ಕೂ ತಾರದೆ ಬದಲಾಯಿಸಿದ್ದೇಕೆ ಎಂದ ಶ್ರೀರಾಮುಲು, ಉಪ ಚುನಾವಣಾ ಪ್ರಚಾರಕ್ಕೆ ಬರುವೆ ಎಂದಷ್ಟೇ ಹೇಳಿ ಬೇಸರದಿಂದ ಹೊರಬಂದರು.

ಐದು ನಿಮಿಷ ಮಾತ್ರ ಶ್ರೀರಾಮುಲು ಜತೆ ಮಾತನಾಡಿದ ಸಿಎಂ, ಸಂಜೆ ಭೇಟಿ ಮಾಡುವಂತೆ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net