

ಬೆಂಗಳೂರು: ತನ್ನ ಬಳಿಯಿದ್ದ ಆರೋಗ್ಯ ಖಾತೆಯನ್ನು ಹಿಂಪಡೆದಿದ್ದಕ್ಕೆ ತೀವ್ರ ಅಸಮಾಧಾನಗೊಂಡಿರುವ ಶ್ರೀರಾಮುಲು ನಡೆ ಕುತೂಹಲ ಮೂಡಿಸಿದೆ.
ಖಾತೆ ಬದಲಾವಣೆಯ ಪಟ್ಟಿಗೆ ರಾಜ್ಯಪಾಲರಿಂದ ಅಧಿಕೃತ ಅಂಕಿತ ಬಿದ್ದ ಕಲವೇ ಕ್ಷಣದಲ್ಲಿ ಯಡಿಯೂರಪ್ಪರನ್ನು ಭೇಟಿ ಮಾಡಲು ಸಿಎಂ ನಿವಾಸ ಕಾವೇರಿಗೆ ಶ್ರೀರಾಮುಲು ಆಗಮಿಸಿದರು. ಅದೂ ಸರ್ಕಾರಿ ವಾಹನ ಬಿಟ್ಟು ಫಾರ್ಚೂನರ್ ಕಾರಿನಲ್ಲಿ! ಆರೋಗ್ಯ ಖಾತೆ ಕಿತ್ತುಕೊಂಡ ಬೆನ್ನಲ್ಲೇ ಸರ್ಕಾರಿ ವಾಹನ ಬಿಟ್ಟು ಖಾಸಗಿ ಕಾರಿನಲ್ಲಿ ಸಿಎಂ ನಿವಾಸಕ್ಕೆ ಶ್ರೀರಾಮುಲು ಬಂದದ್ದು ಕುತೂಹಲ ಮೂಡಿಸಿದೆ.
ಇಂದು(ಸೋಮವಾರ) ಮಧ್ಯಾಹ್ನ ಸುಮಾರು 12.50ಕ್ಕೆ ಕಾವೇರಿ ನಿವಾಸಕ್ಕೆ ಬಂದ ಶ್ರೀರಾಮುಲು, ಸಿಎಂಗಾಗಿ ಕಾಯುತ್ತ ಒಬ್ಬರೇ ಕುಳಿತಿದ್ದರು. ಮಧ್ಯಾಹ್ನ 2.30ರ ಬಳಿಕ ಸಿಎಂ ಸಿಗುವ ಸಾಧ್ಯತೆ ಇದೆ.
ಖಾತೆ ಬದಲಾವಣೆ ಕುರಿತು ಶ್ರೀರಾಮುಲು ಹೊರ ಹಾಕಿರುವ ಅಸಮಾಧಾನದ ಬಗ್ಗೆ ಮೈಸೂರಿನಲ್ಲಿ ಪ್ರತಿಕ್ರಿಯಿಸಿರುವ ಸಚಿವ ಡಾ.ಕೆ.ಸುದಾಕರ್, 'ಶ್ರೀರಾಮುಲು ಮೇಲೆ ಯಾವ ಕಳಂಕವೂ ಇಲ್ಲ. ಎಲ್ಲರೂ ಕ್ರಿಯಾಶೀಲವಾಗಿ ಕೆಲಸ ಮಾಡಿದ್ದಾರೆ. ನಾವೆಲ್ಲ ಟಾಸ್ಕ್ ಪೋರ್ಸ್‌ನಲ್ಲಿ ಇದ್ದೆವು. ಅವರು ಪರಿಶ್ರಮ ಹಾಕಿದ್ದಾರೆ. ಇಲ್ಲಿ ವೈಯಕ್ತಿಕ ಪ್ರತಿಷ್ಠೆ ಇಲ್ಲ. ಆ ರೀತಿಯ ಭಾವನೆ ಇದ್ದರೆ ಬಿಟ್ಟುಬಿಡಿ ಎಂದು ಹೇಳಿದ್ದಾರೆ.